ಆದ್ಯೋತ್ ನ್ಯೂಸ್ ಡೆಸ್ಕ್: ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಮೊಗಟ ಗ್ರಾಮಪಂಚಾಯತ ವ್ಯಾಪ್ತಿಯ ಮೊರಳ್ಳಿಯ ಪರಮೇಶ್ವರ ನಾಯ್ಕ ಎನ್ನುವವರಿಗೆ ಸೇರಿದ ಜಮೀನಿನಲ್ಲಿರುವ ಕೆರೆಯಲ್ಲಿ ರವಿವಾರ ಚಿರತೆಯ ಕಳೆಬರಹ ಪತ್ತೆಯಾಗಿದೆ.
ಸುಮಾರು ಮೂರರಿಂದ ನಾಲ್ಕು ವರ್ಷ ಪ್ರಾಯದ ಚಿರತೆಯ ತಲೆ ಮತ್ತು ಕಾಲನ್ನು ಕತ್ತರಿಸಲಾಗಿದ್ದು ಚಿರತೆಯ ದೇಹಕ್ಕೆ ಕಲ್ಲನ್ನು ಕಟ್ಟಿ ಕೆರೆಯಲ್ಲಿ ಮುಳುಗಿಸಲಾಗಿದೆ. ಕೆರೆಯ ನೀರು ಕಡಿಮೆಯಾದಾಗ ಚಿರತೆಯ ಕಳೆಬರಹ ಜಮೀನು ಮಾಲಕರಿಗೆ ಗೋಚರಿಸಿದೆ. ತಕ್ಷಣ ಹಿರೇಗುತ್ತಿ ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದ್ದಾರೆ. ವಲಯ ಅರಣ್ಯಾಧಿಕಾರಿ ನರೇಶ ಜಿ.ವಿ ಪ್ರಕರಣ ದಾಖಲಿಸಕೊಂಡು ತನಿಖೆ ನಡೆಸುತ್ತಿದ್ದಾರೆ.
ಸುಮಾರು ಮೂರರಿಂದ ನಾಲ್ಕು ವರ್ಷ ಪ್ರಾಯದ ಚಿರತೆ ಇದಾಗಿದ್ದು ಬಹಳ ಬೇಡಿಕೆಯುಳ್ಳ ಚಿರತೆಯ ಹಲ್ಲು ಮತ್ತು ಉಗುರುಗಳಿಗಾಗಿ ಚಿರತೆಯ ಹತ್ಯೆ ನಡೆದಿರುವ ಸಾಧ್ಯತೆ ಇದೆ. ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಆದ್ಯೋತ ನ್ಯೂಸ್ ಗೆ ನರೇಶ ಜಿ.ವಿ ತಿಳಿಸಿದ್ದಾರೆ.