ಆದ್ಯೋತ್ ಸುದ್ದಿನಿಧಿ:
ನವಕರ್ನಾಟಕ ಚಲನಚಿತ್ರ ಅಕಾಡೆಮಿ(ರಿ) ಧಾರವಾಡ ವತಿಯಿಂದ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಮೇ 21 ರಿಂದ ಮೇ 23ರ ವರೆಗೆ ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2021 ನಡೆಯಲಿದೆ.
ಹುಬ್ಬಳ್ಳಿಯ ಖಾಸಗಿ ಹೋಟಲನಲ್ಲಿ ಈ ಕುರಿತು ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಹುಬ್ಬಳ್ಳಿ -ಧಾರವಾಡದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಕಿರುಚಿತ್ರ ಪ್ರದರ್ಶನ ಮತ್ತು ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದ್ದು ಮೂರು ದಿನಗಳ ಕಾಲ ಅವಳಿ ನಗರದಲ್ಲಿ ಪ್ರಥಮವಾಗಿ ನಡೆಸುತ್ತಿರುವದು ಹೆಮ್ಮೆಯ ವಿಷಯವಾಗಿದೆ ಇದರನ್ವಯ ಹುಬ್ಬಳ್ಳಿಯಲ್ಲಿ ಐನಾಕ್ಸ್ ಚಿತ್ರ ಮಂದಿರದ ನಾಲ್ಕು ಸ್ಕ್ರೀನ್,ಧಾರವಾಡದಲ್ಲಿ ಸೃಜನಾ, ಕಲಾಮಂದಿರ, ,ಕಲಾಭವನ,ನೌಕರರ ಭವನ, ರಂಗಾಯಣದಲ್ಲಿ ಸಿನೇಮಾಗಳು ಪ್ರದರ್ಶನವಾಗಲಿವೆ.ಇದರಲ್ಲಿ ಭಾರತ, ಮಾಲ್ಡೀವ್ ಮತ್ತು ಲ್ಯಾಟಿನ್ ಅಮೇರಿಕ ದೇಶಗಳ ಸಿನಿಮಾಗಳು ಪಾಲ್ಗೊಳ್ಳಲಿವೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಬಹುಭಾಷಾ ಖ್ಯಾತ ನಟ ಸುಮನ್ ತಲ್ವಾರ್ ಮಾತನಾಡಿ, ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಚಲನಚಿತ್ರೋತ್ಸವ ಆಯೋಜಿಸುತ್ತಿರುವ ಸುದ್ದಿ ಖುಷಿ ತಂದಿದೆ. ಈ ಭಾಗದಲ್ಲಿ ಸಿನಿಮಾ ರಂಗದ ಜೊತೆಗೆ ಕಲಾವಿದರೂ ಕೂಡ ಬೆಳೆಯಲು ಸಾಧ್ಯವಾಗುತ್ತದೆ. ಡಾ. ಮಮ್ಮಿಗಟ್ಟಿ ಅವರು ಚಿತ್ರೋತ್ಸವ ಉಸ್ತುವಾರಿ ವಹಿಸಿಕೊಂಡಿದ್ದು ಈ ಚಿತ್ರೋತ್ಸವಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು.
ಚಿತ್ರೋತ್ಸವ ಕುರಿತು ಅಲ್ತಾಪ ಜಹಾಂಗೀರ ಮಾತನಾಡಿ 14-18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗುವದು. ಮಾ.21ರಿಂದ ಟ್ಯಾಲೆಂಟ್ ಹಂಟ್ ಕಾರ್ಯಕ್ರಮ ನಡೆಸಲಾಗುತ್ತದೆ ಇದರಿಂದ ಈ ಭಾಗದ ಕಲಾವಿದರು,ತಂತ್ರಜ್ಞರಿಗೆ ಹೆಚ್ಚಿನ ಅವಕಾಶ ಸಿಗಲಿದೆ ಎಂದರು ಭಾರತ ಸಿನಿಮಾ ಫೆಡರೇಷನ್ ಉಪಾಧ್ಯಕ್ಷ ಎನ್.ಎಂ.ಸುರೇಶ ಚಿತ್ರೋತ್ಸವ ಕುರಿತು ಮಾತನಾಡಿದರು. ನವದೆಹಲಿ ಇಂಡೋಲ್ಯಾಟಿನ್ ಅಮೆರಿಕ ವಾಣಿಜ್ಯ ಮಂಡಳಿ ಪಿ.ವೈ ಮೂರ್ತಿ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಡಿ.ಕೆ.ರಾಮಕೃಷ್ಣ,ಬಾಪೂಜಿ, ಪ್ರವಿಣಕುಮಾರ್, ಆರ್. ಧನರಾಜ್,ಲತಾ, ಚಲನಚಿತ್ರ ವಿತರಕರು, ಉದ್ಯಮಿಗಳು, ಚಲನಚಿತ್ರದ ಪ್ರಮುಖರು ಪಾಲ್ಗೊಂಡಿದ್ದರು.
ಚಲನಚಿತ್ರೋತ್ಸವದಲ್ಲಿ ಸಿನಿಮಾಗಳನ್ನು ನೋಡಲು ಮೂರುದಿನ ಸೇರಿ ರೂ.1100 ನಿಗದಿ ಮಾಡಲಾಗಿದ್ದು 60 ಕಿರುಚಿತ್ರಗಳು ಪ್ರದರ್ಶಿತವಾಗಲಿವೆ. ಉತ್ತಮ ಕಿರುಚಿತ್ರಕ್ಕೆ ಬಹುಮಾನ ನೀಡಲಾಗುವದು.ವಿವಿಧ ವಿಭಾಗಗಳಲ್ಲಿ ‘ಗೋಲ್ಡನ್ ಬಟರ್ ಪ್ಲೈ’ ಪ್ರಶಸ್ತಿ ನೀಡಲಾಗುತ್ತದೆ. ಮಾ.21 ರಿಂದ ಆನ್ ಲೈನ್ ಮೂಲಕ ನೋಂದಣಿ ಆರಂಭವಾಗಲಿದೆ ಎಲ್ಲರೂ ನಮ್ಮ ಈ ಕಾರ್ಯಕ್ಕೆ ಬೆಂಬಲಿಸಿ ಯಶಸ್ವಿಯಾಗಲು ಸಹಕಾರ ನೀಡಬೇಕು ಎಂದು ಆಯೋಜಕರಾದ ಡಾ.ಎಂ.ಎ.ಮಮ್ಮಿಗಟ್ಟಿ ಹೇಳಿದರು.
ಇದೆ ಸಂದರ್ಭದಲ್ಲಿ ಚಲನಚಿತ್ರೋತ್ಸವದ ಕರ್ಟನ್ ರೈಸರ್ ಬಿಡುಗಡೆ, ಲೋಗೋ, ವೆಬ್ ಸೈಟ್ ಗಳ ಲೋಕಾರ್ಪಣೆ ನೆರವೇರಿತು. ಕಾರ್ಯಕ್ರದಲ್ಲಿ ಎಲ್ಲ ಗಣ್ಯರನ್ನು ನವಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.