ಆದ್ಯೋತ್ ಸಿನೇಮಾ ಸುದ್ದಿ
ಎವಿಆರ್ ಕ್ರಿಯೇಶನ್ಸ್ ಬೆಂಗಳೂರ ಇವರ ‘ಪಾರಿ’ ಬಂಜಾರ ಚಲನಚಿತ್ರ ಮುಹೂರ್ತ ಸಮಾರಂಭ ಬೆಂಗಳೂರಿನ ಮಲ್ಲೇಶ್ವರದ ಮಂಜುನಾಥ ದೇವಾಲಯದಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಿಯಲ್ಲಿ ಸರಳವಾಗಿ ನೆರವೇರಿತು.
ಡಾ.ಸಂಜೀವ ಚವ್ಹಾಣ ಕ್ಲಾಪ್ ಮಾಡುವ ಮೂಲಕ ಚಲನಚಿತ್ರ ಮನೋಜ್ಞವಾಗಿ ಮೂಡಿಬರಲಿ, ಬಂಜಾರ ಜನಾಂಗದ ಕುರಿತು ಬೆಳಕು ಚಲ್ಲುವಂತಾಗಲಿ ಎಂದು ಚಿತ್ರ ತಂಡಕ್ಕೆ ಶುಭ ಹಾರೈಸಿದರು .
ಈ ಸಂದರ್ಭದಲ್ಲಿ ವಿಜಯ ಹಾಸನ್, ಸಂತೋಷ ರಾಠೋಡ, ಶ್ರೀಮತಿ ಲತಾ, ಶ್ರೀಮತಿ ರಂಜಿತಾ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರದ ಕುರಿತು ವಿವರ ನೀಡಿದ ನಿರ್ದೇಶಕ ಹೇಮಂತಕುಮಾರ್ ಈ ಚಿತ್ರವು ಹಾವೇರಿ ಸುತ್ತಮುತ್ತಲಿನ ತಾಂಡೆಗಳು ಮತ್ತು ರಾಜಸ್ಥಾನದಲ್ಲಿ ಸಂಪೂರ್ಣ ಚಿತ್ರೀಕರಣ ಮಾಡಲಾಗುತ್ತದೆ . ಕೆಲವು ದೃಶ್ಯಗಳನ್ನು ಮಾತ್ರ ಕಾಶ್ಮೀರದಲ್ಲಿ ಚಿತ್ರೀಕರಿಸಲಾಗುವದು ಎಂದರು.
ಬಡತನದಲ್ಲಿ ಹುಟ್ಟಿ ಬೆಳೆದ ಪಾರಿ ಹುಟ್ಟಿದ ತಕ್ಷಣ ತಂದೆ-ತಾಯಿಯನ್ನು ಕಳೆದುಕೊಳ್ಳುವದು,ಇದೆಲ್ಲ ಆಕೆಯ ಹುಟ್ಟಿದ ಸಮಯ, ಕಾಲ್ಗುಣ ಸರಿ ಇಲ್ಲ ಎಂದು ಹಳ್ಳಿಯವರು ದೂರುವದು, ಹಿಯಾಳಿಸಿ ಆಕೆಗೆ ಮಾತನಾಡುತ್ತಾರೆ. ಯಾರೂ ಆಕೆಯನ್ನು ಮದುವೆಯಾಗದಿದ್ದಾಗ ಪಾರಿ ಅಜ್ಜ ಅವಳನ್ನು ರಾಜಸ್ಥಾನಕ್ಕೆ ಮದುವೆ ಮಾಡಿ ಕಳಿಸಿ ಕೊಡುತ್ತಾನೆ. ಅಲ್ಲಿ ಗೊತ್ತಿಲ್ಲದ ಊರಿನಲ್ಲಿ ಪರಿಚಯವಿರದವರ ನಡುವೆ ಕೆಲವರ್ಷ ಜೀವನ ಸಾಗಿಸುವ ಅವಳ ಸ್ಥಿತಿ ದುಸ್ಥರವಾಗುತ್ತದೆ. ಅಲ್ಲಿಂದ ಮರಳಿ ತನ್ನೂರಿನ ತಾಂಡೆಗೆ ಹೇಗೋ ಬಂದು ಸೇರುವ ಅವಳನ್ನು ತಾಂಡೆಯ ಜನ ಬಹಿಷ್ಕಾರ ಹಾಕುತ್ತಾರೆ. ಸೈನ್ಯ ಸೇರಿದ್ದ ಮಗ ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿಗಳ ಜೊತೆ ಹೋರಾಡಿ ಜೀವ ಕಳೆದುಕೊಳ್ಳುತ್ತಾನೆ. ಮರಣೋತ್ತರ ಪರಮವೀರ ಪ್ರಶಸ್ತಿಯನ್ನು ಪಡೆದಾಗ ಇಡೀ ದೇಶವೇ ಅವಳನ್ನು ಆಕೆಯ ಮಗನನ್ನು ಕೊಂಡಾಡುತ್ತದೆ.ಆಗ ಊರ ಜನರ ನಿರ್ಧಾರ ಏನು ? ಎಂಬುದೇ ಕಥೆಯ ತಿರುಳು.ಇಲ್ಲಿ ಬಂಜಾರ ಹೆಣ್ಣುಮಕ್ಕಳ ಬದುಕು,ಅವರು ಪಡುವ ಕಷ್ಟದ ಜೀವನ ಚಿತ್ರಣ ಇದೆ ಎಂದು ಹೇಮಂತಕುಮಾರ ವಿವರಿಸಿದರು
ಇದೀಗ ಚಿತ್ರೀಕರಣ ಭರದಿಂದ ಸಾಗಿದ್ದು ಮುಂದಿನ ತಿಂಗಳು ರಾಜಸ್ಥಾನ, ಕಾಶ್ಮೀರದ ಕಡೆ ಚಿತ್ರತಂಡ ಸಾಗಲಿದೆ ಎಂದು ನಿರ್ಮಾಪಕ ಚವ್ಹಾಣ ತಿಳಿಸಿದ್ದಾರೆ.
ಪಾರಿ ಪಾತ್ರವನ್ನು ದಾವಣಗೇರಿಯ ಭೂಮಿಕಾ ಮಾಡುತ್ತಿದ್ದು ಕೆಜಿಎಫ್ ಕೃಷ್ಣಪ್ಪ,ಸಂತೋಷ ರಾಠೋಡ,ಅಖಿಲೇಶ ಅಭಿನಯಿಸುತ್ತಿದ್ದಾರೆ ಸಂಗೀತ ರಾಜ್ ಭಾಸ್ಕರ್, ಸಂಕಲನ ಗ್ರಾಫಿಕ್ಸ್ ವಿಶಾಲ್ ಚವ್ಹಾಣ,ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ್ ಹಂಡಿಗಿ ಅವರದಿದ್ದು ಎಸ್.ಎಚ್.ಚವ್ಹಾಣ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.