ಆದ್ಯೋತ ನ್ಯೂಸ್ ಡೆಸ್ಕ್ : ಕೊಳ್ಳೆಗಾಲ ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ತಿರುಪತಿ ತಿಮ್ಮಪ್ಪನ ಆದಾಯವನ್ನೂ ಮೀರಿ ಆದಾಯಗಳಿಸಿರುವುದು ಸುದ್ದಿಯಾಗಿ ಹರಿದಾಡುತ್ತಿದೆ. ಇತ್ತೀಚಿಗೆ ನಡೆದ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಜನರು ಭೇಟಿ ನೀಡಿದ್ದರಿಂದ ಈ ಆದಾಯ ಹರಿದು ಬಂದಿದ್ದು, ಈ ಆದಾಯದ ಜೊತೆಗೆ ಅದರ ಎರಡು ಪಟ್ಟು ಕಸಗಳು ಈ ಪ್ರದೇಶದಲ್ಲಿ ತುಂಬಿದ್ದು ಜನರ ನಿರ್ಲಕ್ಷ್ಯ ತಿಳುವಳಿಕೆಯ ಕೊರತೆ ಮತ್ತು ಅಜಾಗರೂಕತೆಯಿಂದ ಸುತ್ತಮುತ್ತಲಿನ ಪರಿಸರ ಮಲಿನವಾಗಿದೆ. ಅದರ ಸುರಕ್ಷತೆ ಮತ್ತು ಉಳಿವಿಗಾಗಿ ಮೈಸೂರಿನ ಮಹಾರಾಜ ಕಾಲೇಜಿನ ರೆಡ್ ಕ್ರಾಸ್ ವಿದ್ಯಾರ್ಥಿಗಳು ಅರಣ್ಯಇಲಾಖೆಯ ಸಹಯೋಗದೊಂದಿಗೆ ಸ್ವಚ್ಚತಾ ಕಾರ್ಯವನ್ನು ಮಾಡಿದರು.
ಮಹಾರಾಜ ಕಾಲೇಜನ ವಿದ್ಯಾರ್ಥಿಗಳ ಹಾಗೆಯೆ ಬೇರೆ ಬೇರೆ ಸ್ಥಳದಿಂದ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಮಾರು 20 ಜನ ಮಹರಾಜ ಕಾಲೇಜಿನ ವಿದ್ಯಾರ್ಥಿಗಳು ಸರಿಸುಮಾರು 8-10 ಕಿಲೋಮೀಟರ್ ಸ್ವಚ್ಛತೆಯನ್ನು ಮಾಡಿದ್ದು ಪರಿಸರಕ್ಕೆ ಹಾನಿಕಾರಕವಾದ 2 ಲಕ್ಷಕ್ಕೂ ಹೆಚ್ಚು ಪ್ಲಾಸ್ಟಿಕ್ ಬಾಟಲ್ ಹಾಗು ಇನ್ನಿತರ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಅರಣ್ಯ ಇಲಾಖೆ ಸುಪರ್ದಿಗೆ ವಹಿಸಿದರು. ಇದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ಸಿಬ್ಬಂದಿಯ ಜೊತೆಗೆ ತಾವೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡರು.
ಅಭಿಯಾನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅರಣ್ಯ ಇಲಾಖೆಯ ಕನ್ಸರವೇಟರ್ ವೇಲುಕೊಂಡಲಮ್, ಮುಂಬರುವ ದಿನಗಳಲ್ಲಿ ಪರಿಸರ ಸಂರಕ್ಷಣಾ ಹಾಗು ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ಮಾಡಲು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಮಹರಾಜ ಕಾಲೇಜಿನ ಪ್ರೋ.ಅನಿಲ್ ಕುಮಾರ, ಸರಕಾರ ಪರಿಸರ ಸಂರಕ್ಷಣೆ ಮತ್ತು ಸ್ವಚ್ಚತಾ ಕಾರ್ಯಕ್ರಮಕ್ಕೆ ಪೂರ್ಣ ಪ್ರಮಾಣದ ಸಹಕಾರ ನೀಡಿದ್ದು ಶ್ಲಾಘನೀಯ. ಇದು ಕೇವಲ ಸರಕಾರದ ಕೆಲಸ ಎಂದು ಭಾವಿಸದೆ ಜನರು ಕೂಡ ಆಸಕ್ತಿ ವಹಿಸಬೇಕು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡಬೇಕು ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ಹೇಳಿದರು.
ಒಳ್ಳೆಯ ಕೆಲಸ ಅಭಿನಂದನೆಗಳು ಎಲ್ಲಾ ವಿದ್ಯಾರ್ಥಿಗಳಿಗೂ