ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ಕೊವಿಡ್ ವ್ಯವಸ್ಥೆ ಪರಿಶೀಲನೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭೀಮಣ್ಣ ನಾಯ್ಕ,ರಾಜ್ಯ ಕಾಂಗ್ರೆಸ್ ಸಮಿತಿಯ ನಿರ್ದೇಶನದನುಸಾರವಾಗಿ ಶುಕ್ರವಾರದಿಂದ ಉ.ಕ.ಜಿಲ್ಲಾಕಾಂಗ್ರೆಸ್ ಕೊವಿಡ್-19 ಸಹಾಯ ಹಸ್ತ ಪ್ರಾರಂಭಿಸಲಾಗುವುದು. ಜಿಲ್ಲೆಯ ಎಲ್ಲಾ 14 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಕೊವಿಡ್ ಸಂತ್ರಸ್ತರ ನೆರವಿಗೆ ಧಾವಿಸಲಿದ್ದಾರೆ.ಕೊವಿಡ್ ಸಂತ್ರಸ್ತರಿಗೆ ಅವಶ್ಯಕವಾದ ಅಂಬ್ಯುಲೆನ್ಸ್,ಔಷಧ,ಊಟೋಪಚಾರ,ಲಸಿಕೆ,ಹೀಗೆ ಬೇಕಾದ ಅವಶ್ಯಕತೆಗಳ ಬಗ್ಗೆ ಕಾಂಗ್ರೆಸ್ ಸಹಾಯವಾಣಿಗೆ ತಿಳಿಸಿದರೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಸಿದ್ದಾಪುರ ತಾಲೂಕು ಗ್ರಾಮೀಣ ಪ್ರದೇಶದಿಂದ ಕೂಡಿದೆ ಇಲ್ಲಿ ಲಸಿಕೆ ಪಡೆಯಲು ಓಡಾಡುವುದು ಕಷ್ದ ಕೆಲಸ. ಅಲ್ಲದೆ ಲಾಕ್ಡೌನ್ ಇರುವುದರಿಂದ ಸಾರಿಗೆ ವ್ಯವಸ್ಥೆಯೂ ಇಲ್ಲ ಆದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಲಸಿಕೆ ಪಡೆಯಲು ಬಯಸುವವರಿಗೆ ಸೂಕ್ತ ವಾಹನ ವ್ಯವಸ್ಥೆ ಮಾಡುತ್ತಾರೆ ಇಲ್ಲಿ ಯಾವುದೇ ರಾಜಕೀಯವಿಲ್ಲ ಪಕ್ಷಾತೀತವಾಗಿ ಈ ಕೆಲಸ ಮಾಡಲಾಗುವುದು ಎಂದು ಹೇಳಿದ ಭೀಮಣ್ಣ,
ನಮ್ಮಜಿಲ್ಲೆಯ ಜಿಲ್ಲಾಡಳಿತ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ತಾಲೂಕಿನಲ್ಲಿ ತಹಸೀಲ್ದಾರರು, ಆಸ್ಪತ್ರೆಯ ವೈದ್ಯರು ಕೊವಿಡ್ ಎದುರಿಸುವಲ್ಲಿ ಸಾಕಷ್ಟು ಪರಿಶ್ರಮದಿಂದ ಕೆಲಸ ಮಾಡುತ್ತಿದ್ದಾರೆ ಆದರೂ ಶುಕ್ರವಾರದಿಂದ ಜಿಲ್ಲೆಯ ಎಲ್ಲಾ ತಾಲೂಕಿಗೂ ಭೇಟಿ ನೀಡಿ ಅಲ್ಲಿಯ ಆಸ್ಪತ್ರೆಯ ಸ್ಥಿತಿ-ಗತಿಯನ್ನು ಪರೀಕ್ಷಿಸಲಾಗುವುದು. ಕೆಲವು ಕಡೆಯಲ್ಲಿ ಲಸಿಕೆಯ ಕೊರತೆ ಇದೆ ಎಂದು ಕೇಳಿದ್ದೇನೆ ಜಿಲ್ಲಾವೈದ್ಯಾಧಿಕಾರಿಗಳನ್ನ ಭೇಟಿ ಮಾಡಲಿದ್ದು ಇದನ್ನು ಸರಿಪಡಿಸುವಂತೆ ಕೇಳಿಕೊಳ್ಳುತ್ತೇನೆ ಅಲ್ಲದೆ ಉಸ್ತುವಾರಿ ಸಚೀವರ ಜೊತೆಗೂ ಚರ್ಚಿಸುತ್ತೇನೆ ಕಾಂಗ್ರೆಸ್ ಪಕ್ಷದಿಂದ ಎಲ್ಲಾ ರೀತಿಯ ಸಹಕಾರವನ್ನು ಜಿಲ್ಲಾಡಳಿತಕ್ಕೆ ನೀಡಲಾಗುವುದು ಎಂದು ಹೇಳಿದರು.
ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪ್ರಕಾಶ ಪುರಾಣಿಕ,ತಾಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಜರಿದ್ದು ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ ಇರುವ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಸೇವಾದಳದ ಅಧ್ಯಕ್ಷ ಗಾಂಧೀಜಿ ನಾಯ್ಕ ಯುವಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ನಾಯ್ಕ, ಹಿರಿಯ ಮುಖಂಡರಾದ ವಿ.ಎನ್.ನಾಯ್ಕ,ಸಾವೇರ್ ಡಿಸಿಲ್ವಾ, ಮುನಾವರ್ ಗುರುಕಾರ್,ಲಂಬೋದರ ಹೆಗಡೆ,ರಾಮಕೃಷ್ಣ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಮಂತ್ರಿಯನ್ನು ಕೈ ಬಿಡಲು ಆಗ್ರಹ
ಕೊವಿಡ್ ನಿರ್ವಹಣೆಯಲ್ಲಿ ರಾಜ್ಯಸರಕಾರ ವಿಫಲವಾಗಿದೆ ಕಾಂಗ್ರೆಸ್ ಸರಕಾರದಲ್ಲಿ 10 ಕೆ.ಜಿ.ಅಕ್ಕಿ ನೀಡಲಾಗುತ್ತಿತ್ತು ಆದರೆ ಈಗ ಎರಡು ಕೆ.ಜಿ.ಗೆ ಇಳಿಸಲಾಗಿದೆ ಈ ಬಗ್ಗೆ ಪ್ರಶ್ನೆ ಮಾಡಿದ ರೈತನಿಗೆ ಆಹಾರ ಮಂತ್ರಿ ಸಾಯಲು ಸೂಚಿಸುತ್ತಾರೆ ಇದನ್ನು ಜಿಲ್ಲಾ ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ ಅಲ್ಲದೆ ಕೂಡಲೆ ಇಂತಹ ಉಡಾಫೆ ಮಂತ್ರಿಯನ್ನು ಸಂಪುಟದಿಂದ ಕೈಬಿಡಬೇಕು ಎಂದು ಭೀಮಣ್ಣ ನಾಯ್ಕ ಆಗ್ರಹಿಸಿದ್ದಾರೆ.
ಲಸಿಕೆ ಪಡೆಯಲು ಹಿಂಜರಿಕೆ ಬೇಡ
ಕೊವಿಡ್ ಲಸಿಕೆ ಪಡೆಯಲು ಯಾರೂ ಹಿಂಜರಿಯಬಾರದು ಇದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ನಾನು ಎರಡು ಹಂತದ ಲಸಿಕೆ ಪಡೆದಿದ್ದೇನೆ ಯಾವುದೇ ತೊಂದರೆಯೂ ಆಗಿಲ್ಲ ಜನರು ಧೈರ್ಯವಾಗಿ ಲಸಿಕೆ ಪಡೆಯುವ ಮೂಲಕ ಕೊವಿಡ್ ನಿರ್ಮೂಲನೆ ಮಾಡಬೇಕು ಎಂದು ಭೀಮಣ್ಣ ಹೇಳಿದರು