ಕೊರೊನಾ ರೋಗವನ್ನ ಆಯುರ್ವೇದದ ಮೂಲಕ ಗುಣಪಡಿಸಬಲ್ಲೆ : ಡಾ. ಗಿರಿಧರ ಕಜೆ

ಆದ್ಯೋತ್ ನ್ಯೂಸ್ ಡೆಸ್ಕ್ : ನಾಡಿನ ಖ್ಯಾತ ಆಯುರ್ವೇದ ತಜ್ಞರಾದ ಡಾ. ಗಿರಿಧರ ಕಜೆ ಅವರು ಕರ್ನಾಟಕ ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರನ್ನು ವಿಧಾನಸೌಧದಲ್ಲಿ ಭೇಟಿಯಾಗಿ ಪತ್ರ ಹಾಗೂ ದಾಖಲೆಗಳನ್ನು ಸಲ್ಲಿಸಿ, ಮಹಾಮಾರಿ ಕೊರೋನಾವನ್ನು ಆಯುರ್ವೇದ ಔಷಧದಿಂದ ಗುಣಪಡಿಸಬಹುದಾಗಿದ್ದು, ನಾನು ಸಂಶೋಧಿಸಿರುವ ಔಷಧದಿಂದ ಕೊರೋನಾ ಗುಣಪಡಿಸಬಲ್ಲೆ ಎಂದು ದಾಖಲೆಗಳ ಸಮೇತ ಪತ್ರದಲ್ಲಿ ಉಲ್ಲೇಖಿಸಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಕಳೆದ 23 ವರ್ಷಗಳಿಂದ ಆಯುರ್ವೇದ ವೈದ್ಯನಾಗಿ ಸೇವೆಸಲ್ಲಿಸುತ್ತಿದ್ದು, 2 ಲಕ್ಷಕ್ಕೂ ಅಧಿಕ ರೋಗಿಗಳನ್ನು ಗುಣಪಡಿಸಿದ ಅನುಭವ ಹೊಂದಿರುವುದಾಗಿ ತಿಳಿಸಿರುವ ಅವರು, ಡೆಂಗ್ಯು, ಚಿಕುನ್ ಗುನ್ಯಾ, ಹೆಚ್1 ಎನ್ 1, ಹೆಪಟೈಟಿಸ್ ಬಿ ಸೇರಿದಂತೆ ಅನೇಕ ವೈರಲ್ ರೋಗಗಳಿಗೆ ಆಯುರ್ವೇದ ಔಷಧ ಮಾತ್ರದಿಂದ ಸಹಸ್ರಾರು ರೋಗಿಗಳನ್ನು ಗುಣಪಡಿಸಿರುವುದನ್ನು ಉಲ್ಲೇಖಿಸಿದ್ದಾರೆ. ವೈರಾಣು ರೋಗಗಳ ಚಿಕಿತ್ಸೆಯಲ್ಲಿ ಆಯುರ್ವೇದಕ್ಕೆ ಪರಮಾಧಿಕಾರವಿದೆ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ. ಸಾಂಕ್ರಾಮಿಕ ರೋಗಗಳ ನಿರ್ವಹಣೆಯ ಕುರಿತಾಗಿ ಆಯುರ್ವೇದದಲ್ಲಿ ಹಲವಾರು ಉಲ್ಲೇಖಗಳಿದ್ದು, ಆಯುರ್ವೇದ ಪದ್ಧತಿಯ ಆಧಾರದಲ್ಲಿ ನಾನು ಸಂಶೋಧಿಸಿರುವ ‘ಭೌಮ್ಯ’ ಹಾಗೂ ‘ಸಾತ್ಮ್ಯ’ ಎಂಬ ಔಷಧಗಳು ‘ಕೋವಿಡ್ 19’ ಅನ್ನು ಗುಣಪಡಿಸಲು ಶಕ್ತವಾಗಿವೆ. ಇವು ವೈರಾಣುನಾಶಕ ಗುಣಮಾತ್ರವನ್ನು ಹೊಂದಿರದೆ ಜ್ವರ, ಸೀನು, ಉಸಿರಾಟದ ತೊಂದರೆ ಗುಣಪಡಿಸುತ್ತವೆ, ಯಕೃತ್ ಗೆ ಬಲ ನೀಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂಬುದಕ್ಕೆ ಸಾಕ್ಷಿಯಾಗಿ 32 ಸಂಶೋಧನೆಗಳ 239 ಪುಟಗಳ ದಾಖಲೆಗಳನ್ನೂ ನೀಡಿದ್ದಾರೆ. ಈ ಔಷಧಗಳಲ್ಲಿ ಇರುವ ಪ್ರತಿ ಘಟಕ ದ್ರವ್ಯಗಳಿಗೂ ಇವೆಲ್ಲ ಗುಣಧರ್ಮಗಳಿರುವುದನ್ನು ಸಂಶೋಧನಾ ವರದಿಗಳು ದೃಢಪಡಿಸುತ್ತವೆ.

ಈ ಔಷಧಗಳ ಬಳಕೆಯಿಂದ ಈ ಕೆಳಗಿನ ಪ್ರಯೋಜನಗಳನ್ನು ಕಾಣಬಹುದು:

* ಕೋವಿಡ್ 19 ರೋಗಿಗಳನ್ನು ಗುಣಮುಖವಾಗಿಸಬಲ್ಲದು.

* ರೋಗಿಗಳ ಔಷದೋಪಚಾರದ ಸಮಯವನ್ನು ಕಡಿತಗೊಳಿಸಬಹುದು.

* ರೋಗಿಗಳು ತೀವ್ರ ಅಸ್ವಸ್ಥತರಾಗುವುದನ್ನು ತಡೆಯಬಹುದು.

* ರೋಗಿಗಳ ಮರಣ ಪ್ರಮಾಣವನ್ನು ತಗ್ಗಿಸಬಹುದು.

* ರೋಗಿಗಳ ಮೇಲೆ ಯಾವುದೇ ಅಡ್ಡಪರಿಣಾಮ ಇರುವುದಿಲ್ಲ.

* ಆರೋಗ್ಯ ಸುಧಾರಣೆಗೆ ಸಹಕರಿಸುತ್ತದೆ.

ಕ್ಲಿನಿಕಲ್ ಅಧ್ಯಯನಕ್ಕೆ ಈ ಔಷಧವನ್ನು ಉಚಿತವಾಗಿ ಕೊಡಲು ಸಿದ್ಧನಿದ್ದೇನೆ. ಭಾರತದಲ್ಲಿ ಇರುವ 5 ಸಾವಿರಕ್ಕೂ ಹೆಚ್ಚು ಕೋವಿಡ್ 19 ಪಾಸಿಟಿವ್ ರೋಗಿಗಳಿಗೂ ಔಷಧವನ್ನು ಉಚಿತವಾಗಿ ನೀಡುತ್ತೇನೆ. ಅಂತೆಯೇ ನಾನು ಸಂಶೋಧಿಸಿರುವ ‘ಭೌಮ್ಯ’ ಹಾಗೂ ‘ಸಾತ್ಮ್ಯ’ ಮಾತ್ರೆಗಳ ಫಾರ್ಮುಲಾ ಹಾಗೂ ಸಂಪೂರ್ಣ ಸ್ವಾಮ್ಯವನ್ನು ಕೊವಿಡ್ 19 ವಿರುದ್ಧ ಹೋರಾಡಲು ಹಾಗೂ ಜೀವಜಗತ್ತಿನ ಒಳಿತಿಗಾಗಿ ರಾಜ್ಯ ಅಥವಾ ಕೇಂದ್ರ ಸರ್ಕಾರಕ್ಕೆ ಉಚಿತವಾಗಿ ನೀಡಲು ಬದ್ಧನಾಗಿದ್ದೇನೆ ಎಂದು ತಮ್ಮ ಪತ್ರದಲ್ಲಿ ಡಾ. ಗಿರಿಧರ್ ಕಜೆ ಉಲ್ಲೇಖಿಸಿದ್ದಾರೆ.

About the author

Adyot

1 Comment

  • ನಿಮ್ಮ ಮೆಡಿಸಿನ್ ಜನಗಳಿಗೆ ಉಪಯೋಗವಾದಲಿ

Leave a Comment