ಜರ್ಮನಿಯಲ್ಲಿ ಸೈಕಲ್ ಸವಾರಿ

ಜರ್ಮನಿಯಲ್ಲಿ ಸೈಕಲ್ ಸವಾರಿ

ಸೈಕಲ್ ಸವಾರಿ ಅಂದ್ರೆ ಅದರ ಮಜಾನೇ ಬೇರೇ. ನಮ್ಮ ದೇಶದಲ್ಲಿ ಸೈಕಲ್ ಸವಾರಿ ಮಾಡೋರು ತೀರ ವಿರಳ. ಅದ್ರಲ್ಲಂತೂ ಕಂಪನಿಗಳಿಗೆ ಕೆಲಸಕ್ಕೆ ಹೋಗೋ ಯಾರೂ ಕೂಡ ಸೈಕಲ್ ನಲ್ಲಿ ಹೋಗಲ್ಲ. ಸೈಕಲ್ ತುಳಿಯೋರು ಅಂದ್ರೆ ಅವ್ರು ಬಡವರು ಅನ್ನೋ ಭಾವನೆ. ಸೈಕಲ್ ಸವಾರಿ ನಮ್ಮ ದೇಶದಲ್ಲಿ ಒಂದರ್ಥದಲ್ಲಿ ನಮ್ಮ ಬಡತನದ ಸಂಕೇತ ಆನ್ನೋ ಕಾಲ ಇದೆ. ಈಗಲೂ ಸಹ ಕಾರಿನಲ್ಲಿ ಓಡಾಡುವ ಒಬ್ಬಾತ ಯಾವುದೊ ಕಾರಣಕ್ಕೆ ಒಂದು ದಿನ ಸೈಕಲ್ ತುಳಿದಾ ಎಂದಾದರೆ, ಪಾಪ ಇವನ ಸಿರಿತನ ಕರಗಿ ಹೋಯಿತೇ ಎಂದು ಯೋಚಿಸುವವರೇ ಹೆಚ್ಚೆನೊ? ಇನ್ನು, ವಿಶೇಷವಾಗಿ ದೊಡ್ಡ ದೊಡ್ಡ ನಗರಗಳಲ್ಲಿ ಸೈಕಲ್ ಸವಾರಿ ಮಾಡಬೇಕು ಎನ್ನುವ ಮನಸ್ಸು ಇರುವವರು ನಮ್ಮಲ್ಲೂ ಸಾಕಷ್ಟು ಜನರಿದ್ದಾರೆ, ಆದರೆ ಅವರಿಗೆ ಅನುಕೂಲವಾಗುವ ರಸ್ತೆಯಾಗಲಿ, ಸೌಕರ್ಯವಾಗಲಿ, ಅವರ ಸುರಕ್ಷೆಯನ್ನು ಚಿಂತಿಸುವ ಇತರೆ ವಾಹನ ಚಾಲಕರಾಗಲಿ, ಅವರ ಪರಿಸರ ಅಥವಾ ಆರೋಗ್ಯ ಕಾಳಜಿ ಗೌರವಿಸುವ ಮನಃಸ್ಥಿತಿ ನಮ್ಮವರಲ್ಲಿ ತುಂಬಾ ಕಡಿಮೆ ಎನ್ನುವುದು ವಿಷಾದದ ಸ೦ಗತಿ. ಅದೆನೇ ಇರಲಿ, ಜರ್ಮನಿಯಲ್ಲಿ ಸೈಕಲ್ ಸವಾರಿ ಹೇಗೆ ?

ಜರ್ಮನಿಯಲ್ಲಿ ಬಡತನಕ್ಕೊ, ಪರಿಸರ ಕಾಳಜಿಗೊ, ಆರೋಗ್ಯದ ದೃಷ್ಟಿಯಿಂದಲೋ ಅಥವಾ ಇನ್ನ್ಯಾವ ಕಾರಣಕ್ಕೊ ಸೈಕಲ್ ಸವಾರಿ ಮಾಡುತ್ತಾರೆ ಎನ್ನುವುದು ಅಷ್ಟೇನೂ ಮುಖ್ಯವಲ್ಲವೆನೊ, ಸೈಕಲ್ ಸವಾರಿ ಮಾಡುವಾತನನ್ನು ಜರ್ಮನ್ನರು ಗೌರವಿಸುತ್ತಾರೆ ಎನ್ನುವುದೆ ಬಹಳ ಮುಖ್ಯ. ಯಾವುದೇ ರಸ್ತೆಯಾಗಲಿ ಪಾದಚಾರಿಗಳಿಗೆ ಮೊದಲ ಪ್ರಾಶಸ್ತ್ಯವಾದರೇ, ಸೈಕಲ್ ಸವಾರನಿಗೆ ಎರಡನೆ ಪ್ರಾಶಸ್ತ್ಯ. ಕಾರು ಚಾಲಕರೊ ಅಥವಾ ಬೇರೆ ಯಾವುದೇ ವಾಹನ ಚಾಲಕರೋ ರಸ್ತೆಯಲ್ಲಿ ಸೈಕಲ್ ಸವಾರನಿಗೆ ಅಭಿಮುಖವಾಗಿ ಚಲಿಸುತ್ತಿದ್ದರೆ, ಸೈಕಲ್ ಸವಾರ ನಿರ್ಭಯವಾಗಿ ತನ್ನ ಸವಾರಿ ಮುಂದುವರಿಸಬಹುದು, ಕಾರು ಚಾಲಕನಿಗೆ ಸೈಕಲ್ ಸವಾರನ ಸುರಕ್ಷೆಯೇ ಪ್ರಾಮುಖ್ಯ, ಅದಕ್ಕಾಗಿ ಅವನು ತನ್ನ ವಾಹನವನ್ನು ಪಕ್ಕಕ್ಕೆ ನಿಲ್ಲಿಸುವುದರ ಮುಖೇನ ಸೈಕಲ್ ಸವಾರನಿಗೆ ರಸ್ತೆ ಬಿಟ್ಟುಕೊಡುತ್ತಾನೆ ಎಂದರೆ ಸದ್ಯದ ಪರಿಸ್ಥಿತಿಯಲ್ಲಿ ನೀವು ಜರ್ಮನಿಯಲ್ಲಿದ್ದೀರಿ ಎಂದೇ ಅರ್ಥ!

ಸೂಟುಬೂಟು ಧರಿಸಿದ ಜರ್ಮನ್ನರು ಸೈಕಲ್ ಏರಿ ಆಫೀಸಿಗೆ ಹೋಗುವುದು ಆಗ್ಗಾಗೆ ಕಣ್ಣಿಗೆ ಕಾಣಸಿಗುತ್ತದೆ, ಭಾರಿ ಚಳಿಯಲ್ಲೂ ಸೈಕಲ್ ಓಡಿಸುವವರು ವಿರಳವೇನಲ್ಲ. ಬಸ್ಸು, ರೈಲುಗಳಲ್ಲೂ ಸಹ ಸೈಕಲ್ ಸಮೇತ ಪ್ರಯಾಣಿಸಬಹುದು ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಅಚ್ಚುಕಟ್ಟಾಗಿರುವ ಸೈಕಲ್ ಸ್ಟ್ಯಾಂಡುಗಳು. ಜರ್ಮನಿಯ ರೈಲ್ವೆ ಇಲಾಖೆ ತನ್ನದೆ ಆದ ಸೈಕಲ್ ಗಳನ್ನು ಹೊಂದಿದೆ, ಬೇರೆ ಊರಿಗೆ ರೈಲಿನಲ್ಲಿ ಸಾಗುವ ಪ್ರಯಾಣಿಕರು ರೈಲ್ವೆ ಇಲಾಖೆಯ ಸೈಕಲ್ ಗಳನ್ನು ಬಾಡಿಗೆಗೆ ಪಡೆಯಬಹುದು. ಸಾಮಾನ್ಯವಾಗಿ ಎಲ್ಲಾ ರಸ್ತೆಗಳಲ್ಲೂ ಸೈಕಲ್ ಸವಾರರಿಗೆ ಪ್ರತ್ಯೇಕ ಮಾರ್ಗ ಮಾತ್ರವಲ್ಲ, ಪ್ರತ್ಯೇಕ ಸಿಗ್ನಲ್ ಲೈಟುಗಳಿರುತ್ತವೆ. ಕೆಂಪು ಸಿಗ್ನಲ್ ಲೈಟುಗಳಲ್ಲಿ ಸೈಕಲ್ ಸವಾರ ಎಲ್ಲಾ ಇತರೆ ವಾಹನಗಳಿಗಿಂತ ಮುಂದೆ ನಿಲ್ಲುವ ವ್ಯವಸ್ಥೆ ಶ್ಲಾಘನೀಯ . ಜರ್ಮನ್ನರು ಇದೊಂದು ಕಟ್ಟುಪಾಡು ಎಂದು ತಿಳಿಯದೇ, ಸೈಕಲ್ ಸವಾರಿಗೆ ಪ್ರಾಮುಖ್ಯತೆ ಕೊಡಬೇಕು ಎನ್ನುವ ಮನಃಸ್ಥಿತಿ ನಮಗೆ ಪಾಠವೇನೊ ಅನ್ನಿಸುತ್ತೆ.

ಹಾಗಿದ್ರೆ ಜರ್ಮನಿಯಲ್ಲಿ ಈ ಸೈಕಲ್ ಸವಾರಿ ಏಕೆ? ಸೈಕಲ್ ಸವಾರರ ಮುಂದಿರುವ ಸವಾಲುಗಳೇನು ಅನ್ನೋದನ್ನ ನೋಡೋಣ ಮುಂದಿನ ಸಂಚಿಕೆಯಲ್ಲಿ.. ನಿರೀಕ್ಷಿಸಿ…

About the author

Adyot

1 Comment

Leave a Comment