ಆದ್ಯೋತ್ ಸುದ್ದಿನಿಧಿ:
ಈ ವರ್ಷದ ಮೊದಲ ಚಂಡಮಾರುತ ರಾಜ್ಯಕ್ಕೆ ಅಪ್ಪಳಿಸುತ್ತಿದ್ದು ಶನಿವಾರದಿಂದಲೇ ಮಳೆ- ಗಾಳಿ ಪ್ರಾರಂಭವಾಗಿದೆ.
ಉತ್ತರಕನ್ನಡ,ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡದಲ್ಲಿ ಮಳೆಯಾಗಲಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ತೌಕ್ತೆ ಚಂಡಮಾರುತ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೂ ಅಪ್ಪಳಿಸಲಿದ್ದು ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಮಲೆನಾಡು ಭಾಗಗಳಲ್ಲಿ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಕೆಲವು ಕಡೆಗಳಲ್ಲಿ 20 ಸೆಂಟಿ ಮೀಟರ್ ಗಳಿಗೂ ಅಧಿಕ ಮಳೆಯಾಗುವ ಸಾಧ್ಯತೆಯಿದೆ ಗಂಟೆಗೆ 150-160 ಕಿ.ಮಿ.ವೇಗದಲ್ಲಿ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶನಿವಾರ ರಾಜ್ಯದ ಹಲವು ಭಾಗದಲ್ಲಿ ಮಳೆ ಸುರಿಯಲು ಪ್ರಾರಂಭವಾಗಿದೆ. ಕರಾವಳಿ ಭಾಗದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿದ್ದು ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ.
ಚಂಡಮಾರುತದ ಪರಿಣಾಮವಾಗಿ ಭಾರೀ ಮಳೆ ಮಂಗಳೂರಿನಾದ್ಯಂತ ಸುರಿಯುತ್ತಿದೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಮುರಡೇಶ್ವರ, ಬೈಲೂರು, ಹೊನ್ನಾವರ, ಕುಮಟಾ, ಗೋಕರ್ಣ,ಅಂಕೋಲಾ,ಕಾರವಾರದಲ್ಲಿ ಚಂಡ ಮಾರುತದ ಪ್ರಭಾವದಿಂದ ಸಮುದ್ರದ ಅಬ್ಬರ ಹೆಚ್ಚಾಗುತ್ತಿದೆ.
ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಶನಿವಾರ ಬೆಳಿಗ್ಗೆಯಿಂದಲೆ ಜಿಟಿ ಜಿಟಿ ಮಳೆ ಪ್ರಾರಂಭವಾಗಿದೆ.
ಭಟ್ಕಳದ ಜಾಲಿಕೋಡಿಯಲ್ಲಿ ಲಕ್ಷ್ಮಣ ಈರಪ್ಪ ನಾಯ್ಕ(60) ಎನ್ನುವವರು,ದಡದಲ್ಲಿ ಲಂಗರು ಹಾಕಿದ್ದ ದೋಣಿಯೊಂದು ಅಲೆಗಳ ಹೊಡೆಕ್ಕೆ ನೀರು ಪಾಲಾಗುತ್ತಿದದ್ದನ್ನು ತಡೆಯಲು ನೀರಿಗೆ ಇಳಿದಿದ್ದರು. ಆಗ ಅಪ್ಪಳಿಸಿದ ಅಲೆಗೆ ಮತ್ತೊಂದು ದೋಣಿಯ ನಡುವೆ ಬಿದ್ದು ಎರಡೂ ದೊಣಿಗಳ ನಡುವೆ ಸಿಲುಕಿ
ಮೃತಪಟ್ಟಿದ್ದಾರೆ.
ಕುಮಟಾದಲ್ಲಿ ಚಂಡಮಾರುತದ ಪ್ರಭಾವದಿಂದ ಸಮುದ್ರದ ಮಟ್ಟ ಹೆಚ್ಚುತ್ತಿದ್ದು,ಮೀನುಮಾರುಕಟ್ಟೆಯಲ್ಲಿ ನೀರು ತುಂಬಿಕೊಂಡಿದ್ದು ರಸ್ತೆ ಮತ್ತು ಸೇತುವೆಯ ಮೇಲೆ ಹರಿಯುತ್ತಿದೆ. ಮಳೆಯ ಪ್ರಮಾಣ ಹೆಚ್ಚಾದರೆ ಹೆಗಡೆ, ಮಿರ್ಜಾನ್, ಐಗಕಳಕುರ್ವೆ, ಕೋಡ್ಕಣಿ, ಕೋನಳ್ಳಿ, ಕೂಜಳ್ಳಿ, ಊರಕೇರಿ, ತಾಡುಕಟ್ಟಾ, ಉಪ್ಪಿನಪಟ್ಟಣ, ಗೋಕರ್ಣದ ಮೊರಬಾ ನುಶಿಕೋಟೆ, ಮೂಡಂಗಿ, ದುಬ್ಬನಸಶಿ ಮುಂತಾದ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ.