ಶ್ರೀರಾಮ ಕ್ಷೇತ್ರ ಉಜಿರೆ : ಧರ್ಮಸ್ಥಳ ಎಂದೊಡನೆ ನೆನಪಿಗೆ ಬರುವುದು ಮಂಜುನಾಥಸ್ವಾಮಿ ಹಾಗೂ ವೀರೇಂದ್ರ ಹೆಗ್ಗಡೆ. ಅದೇ ರೀತಿ ಧರ್ಮಸ್ಥಳ ಸಮೀಪದ ಉಜಿರೆಯ ನಿತ್ಯಾನಂದ ನಗರದ ಶ್ರೀ ರಾಮಕ್ಷೇತ್ರ ದಕ್ಷಿಣದ ಅಯೋಧ್ಯೆ ಎಂದು ಹೆಸರುಗಳಿಸಿದೆ.
ಇತಿಹಾಸ : 1927ರಲ್ಲಿ ಮುಂಬೈನ ವಜ್ರೇಶ್ವರಿಯ ಭಗವಾನ್ ನಿತ್ಯಾನಂದರು ಇಲ್ಲಿ ತಂಗಿದ್ದ ಕಾರಣ ಈ ವಿಶಾಲ ಪ್ರದೇಶವನ್ನು ನಿತ್ಯಾನಂದ ನಗರ ಎಂದೇ ಕರೆಯುತ್ತಾರೆ. ಈ ಕ್ಷೇತ್ರದ ನಿರ್ಮಾಣಕ್ಕೆ ಕಾರಣರಾದವರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು. ಇವರು ಮಹಾನ್ ಕರ್ಮಯೋಗಿಗಳು ಹಾಗೂ ದಾರ್ಶನಿಕರು. ಗುರುಗಳ ಸಾಧನೆಯಿಂದ ಆಕರ್ಷಿತರಾದ ರಾಜ್ಯದ ಬೇರೆ ಬೇರೆ ಭಾಗದಲ್ಲಿರುವ ಬಿಲ್ಲವರು, ಈಡಿಗರು, ನಾಮಧಾರಿ ಜನಾಂಗದವರು ಇವರನ್ನು ಕುಲಗುರುಗಳನ್ನಾಗಿ ಸ್ವೀಕರಿಸಿದರು. 2008ರಲ್ಲಿ ಶ್ರೀ ನಾರಾಯಣ ಗುರು ಪೀಠದ ಪ್ರಕಾಶಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಸುಮಾರು 30ಕ್ಕೂ ಹೆಚ್ಚು ಸಾಧು-ಸಂತರು, ಹಿರಿಯ ನಾಯಕರ ಸಮ್ಮುಖದಲ್ಲಿ ಜಗದ್ಗುರುಗಳಾಗಿ ಪೀಠಾರೋಹಣ ಮಾಡಿದರು.
ಶ್ರೀ ಆತ್ಮಾನಂದ ಸರಸ್ವತಿಯವರ ಸಮಾಧಿಯ ನಂತರ ಪೀಠಾರೋಹಣ ಮಾಡಿದವರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು. ಎಂಎ, ಎಲ್.ಎಲ್.ಬಿ ಶಿಕ್ಷಣದ ಜೊತೆಗೆ ಆಧ್ಯಾತ್ಮ ಹಾಗೂ ವೇದಾಂತ ಜ್ಞಾನವನ್ನು ಪಡೆದವರು. ಶಿಕ್ಷಣ ಪಡೆದಾಗ ಮಾತ್ರ ಸಮಾಜ ಮುಂದುವರೆಯಲು ಸಾಧ್ಯ ಎಂದು ನಂಬಿ ಆಧುನಿಕ ಶಿಕ್ಷಣದ ಜೊತೆಗೆ ನಮ್ಮ ಪರಂಪರೆಯ ಶಿಕ್ಷಣವನ್ನು ನೀಡುವ ಸಲುವಾಗಿ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿ ಅಲ್ಲಿ ಆಧುನಿಕ ಶಿಕ್ಷಣದ ಜೊತೆಗೆ ಯೋಗ, ಧ್ಯಾನ, ಭಜನೆ, ಸತ್ಸಂಗ, ವಾಸ್ತು, ಜ್ಯೋತಿಷ್ಯ ಹೀಗೆ ವಿವಿಧ ಜ್ಞಾನ ವೃದ್ಧಿಯ ಶಿಕ್ಷಣವನ್ನು ಉಚಿತ ಊಟ ಮತ್ತು ವಸತಿ ಸೌಲಭ್ಯಗಳೊಂದಿಗೆ ನೀಡುತ್ತಿದ್ದಾರೆ.
ಭಾರತದಾದ್ಯಂತ 9 ಶಾಖಾ ಮಠಗಳನ್ನು ತೆರೆಯಲಾಗಿದೆ. ಉಡುಪಿ ಜಿಲ್ಲೆಯ ಬಾರ್ಕೂರಿನ ಬಿಲ್ಲಾಡಿಯಲ್ಲಿ 15 ಎಕರೆ ಜಮೀನನ್ನು ಖರೀದಿಸಲಾಗಿದ್ದು ಅಲ್ಲಿ ಸುಸಜ್ಜಿತವಾದ ವಸತಿ ಸಹಿತ ಐಟಿಐ ಕಾಲೇಜ್ ನ್ನು ಪ್ರಾರಂಭಿಸಿದ್ದಾರೆ. ಭಟ್ಕಳ ಪಟ್ಟಣದ ಕರಿಕಲ್ ಎಂಬ ಸಮುದ್ರ ಕಿನಾರೆಯಲ್ಲಿ ಸುಂದರವಾದ ಶ್ರೀ ರಾಮ ಧ್ಯಾನ ಮಂದಿರ ನಿರ್ಮಾಣ ಮಾಡಲಾಗಿದೆ. ಹರಿದ್ವಾರದಲ್ಲಿ ಶಾಖಾಮಠ ಪ್ರಾರಂಭವಾಗಿದೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಶಾಖಾಮಠ ಪ್ರಾರಂಭಮಾಡಲು ಸಿದ್ದತೆ ನಡೆಸಲಾಗುತ್ತಿದೆ.
ಹೋಗೋದು ಹೇಗೆ? – ರಸ್ತೆ ಮಾರ್ಗದಲ್ಲಿ ಹೋಗೋದಾದ್ರೆ ಮಂಗಳೂರಿನಿಂದ ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 72 ಕಿಲೋಮೀಟರ್ ಸಾಗಬೇಕು. ರೈಲು ಮೂಲಕ ಬರೋದಾದ್ರೆ ಸಮೀಪದ ರೈಲು ನಿಲ್ದಾಣ ಕಂಕನಾಡಿಯಲ್ಲಿ ಇಳಿದು ಬರಬೇಕು. ವಿಮಾನದಲ್ಲಿ ಬರೋದಾದ್ರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು ರಸ್ತೆ ಮೂಲಕ ಸಾಗಬಹುದು.
ಕರಿಕಲ್ ಧ್ಯಾನ ಮಂದಿರ – ರಸ್ತೆ ಮೂಲಕ ಹೋಗೋದಾದ್ರೆ ಭಟ್ಕಳದಿಂದ ಕೇವಲ 2 ಕಿಲೋಮೀಟರ್ ಸಾಗಬೇಕು. ರೈಲು ಮೂಲಕ ಭಟ್ಕಳ ರೈಲು ನಿಲ್ದಾಣದಲ್ಲಿ ಇಳಿದು ರಸ್ತೆ ಮೂಲಕ ಸಾಗಬೇಕು.