ಆದ್ಯೋತ್ ಸುದ್ದಿ ನಿಧಿ : ಬಹಳ ದಿನಗಳಿಂದ ಕಾಯುತ್ತಿದ್ದ ಗ್ರಾಮ ಪಂಚಾಯತ್ ಚುನಾವಣೆಗೆ ಅಂತೂ ಮುಹೂರ್ತ ಫಿಕ್ಸ್ ಆಗಿದೆ. ಕೊರೊನಾ ಕಾರಣದಿಂದ ಚುನಾವಣೆಗೆ ವಿಘ್ನ ಎದುರಾಗಿತ್ತು. ಆದ್ರೆ ಇದೀಗ ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯತ್ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿದೆ.
ರಾಜ್ಯದಲ್ಲಿ 2 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 22 ಹಾಗೂ 27 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಚುನಾವಣೆಗಳು ನಡೆಯಲಿದೆ. ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳಗಳ 105 ಗ್ರಾಮ ಪಂಚಾಯತ್ ಗಳಿಗೆ 22 ರಂದು ಒಂದನೇ ಹಂತದಲ್ಲಿ ಹಾಗೂ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡು, ಹಳಿಯಾಳ, ದಾಂಡೇಲಿ, ಜೋಯಿಡಾ ಗಳ 126 ಗ್ರಾಮ ಪಂಚಾಯತ್ ಗಳಿಗೆ ಡಿಸೆಂಬರ್ 27 ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ಒಂದನೇ ಹಂತಕ್ಕೆ ಡಿಸೆಂಬರ್ 7 ಹಾಗೂ ಎರಡನೇ ಹಂತಕ್ಕೆ ಡಿಸೆಂಬರ್ 11 ರಂದು ಜಿಲ್ಲಾಧಿಕಾರಿಗಳ ಅಧಿಸೂಚನೆ ಪ್ರಕಟವಾಗಲಿದೆ. ಒಂದನೇ ಹಂತದಲ್ಲಿ ಡಿಸೆಂಬರ್ 11 ಹಾಗೂ ಎರಡನೇ ಹಂತದಲ್ಲಿ ಡಿಸೆಂಬರ್ 16 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಡಿಸೆಂಬರ್ 12 ಹಾಗೂ ಡಿಸೆಂಬರ್ 17 ಕ್ರಮವಾಗಿ ನಾಮಪತ್ರ ಪರಿಶೀಲನೆ ನಡೆಯಲಿದೆ. ಡಿಸೆಂಬರ್ 14 ಹಾಗೂ ಡಿಸೆಂಬರ್ 19 ಕ್ರಮವಾಗಿ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಡಿಸೆಂಬರ್ 30 ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಘೋಷಣೆಯಾಗಲಿದೆ.
ಬೀದರ್ ಹೊರತುಪಡಿಸಿ ಇತರೆ ಎಲ್ಲಾ ಜಿಲ್ಲೆಗಳಲ್ಲೂ ಮತಪೆಟ್ಟಿಗೆ ಮುಖಾಂತರ ಚುನಾವಣೆ ನಡೆಯುತ್ತದೆ. ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಇಂದಿನಿಂದ ಡಿಸೆಂಬರ್ 31 ರ ಸಂಜೆ 5 ಗಂಟೆಯವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಅಂತ ಚುನಾವಣಾ ಆಯೋಗ ತಿಳಿಸಿದೆ.