ಮಂಗನಖಾಯಿಲೆ ಕುರಿತು ಜಿಲ್ಲಾಧಿಕಾರಿ ಸಭೆ

ಸಿದ್ದಾಪುರ : ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಮಂಗನಖಾಯಿಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಶುಕ್ರವಾರ ವಾಜಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ವ್ಯಕ್ತಿಯೊಬ್ಬರು ಮರಣ ಹೊಂದಿದ್ದು ಜನರಲ್ಲಿ ಆತಂತಕ ಮೂಡಿಸಿದ್ದರಿಂದ ಈ ಬಗ್ಗೆ ಸಮಾಲೊಚಿಸಲು ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ರವಿವಾರ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಅಧಿಕಾರಿಗಳ ಸಭೆಯನ್ನು ನಡೆಸಿದರು.


ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ, ಕಳೆದ ವರ್ಷ ತಾಲೂಕಿನ ಜನತೆ ಮಂಗನಖಾಯಿಲೆಯಿಂದ ಸಾಕಷ್ಟು ಬಾಧಿತರಾಗಿದ್ದರು. ಈ ವರ್ಷ ಇಲಾಖೆ ಸಾಕಷ್ಟು ಜಾಗೃತಿ ಕಾರ್ಯಕ್ರಮವನ್ನು ನಡೆಸುತ್ತಿದ್ದರೂ, ಲಸಿಕೆಯನ್ನು ನೀಡುತ್ತಿದ್ದರೂ ವ್ಯಕ್ತಿಯೊಬ್ಬರು ಮರಣ ಹೊಂದಿರುವುದು ಆಶ್ಚರ್ಯಕರವಾಗಿದೆ. ಜನರು ಖಾಯಿಲೆಯಾದಾಗ ಅವರಿಗೆ ಅನುಕೂಲವಾಗುವ ಕಡೆಗೆ ಚಿಕಿತ್ಸೆಗೆ ಹೋಗುತ್ತಾರೆ. ಇದು ಸಹಜವೂ ಹೌದು, ಆದರೆ ಆರೋಗ್ಯ ಇಲಾಖೆಯವರು ಸೂಕ್ಷ್ಮ ಸ್ಥಳದಲ್ಲಿ ಇಂತಹ ಪ್ರಕಣಗಳು ನಡೆಯುತ್ತಿದ್ದಾಗ ಇದರ ಬಗ್ಗೆ ಗಮನಹರಿಸಬೇಕು. ಒಬ್ಬ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದರೆ ಅವನ ಬಗ್ಗೆ ಸಂಪೂರ್ಣ ಮಾಹಿತಿ ಇಲಾಖೆಗೆ ತಿಳಿದಿರಬೇಕು. ಹೀಗೆ ಮಾಡಿದಲ್ಲಿ ಇಂತಹ ಮಾರಣಾಂತಿಕ ಖಾಯಿಲೆಯಿಂದ ಸಾಯುವುದನ್ನು ತಡೆಗಟ್ಟಬಹುದು. ತಾಲೂಕಿನಲ್ಲಿ ಮಂಗನಖಾಯಿಲೆಗೆ ಸಂಬಂದಿಸಿದಂತೆ ಇರುವ ಸಮಸ್ಯೆ ಏನು? ಯಾವ ಸೌಲಭ್ಯದ ಕೊರತೆ ಇದೆ? ಏನು ಅವಶ್ಯಕವಿದೆ ಇವೆಲ್ಲವನ್ನು ತಿಳಿಸಿದರೆ ಅದನ್ನು ನೀಡುವ ಬಗ್ಗೆ ಗಮನಹರಿಸಲಾಗುವುದು ಎಂದರು.

ಆರೋಗ್ಯ ಇಲಾಖೆಯಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಹಾಗು ಪುರುಷ ಸಹಾಯಕರ ಹುದ್ದೆ ಖಾಲಿ ಇದೆ. ಲಸಿಕೆ ಪಡೆದರೂ ಕಾಯಿಲೆ ಕಾಣಿಸಿಕೊಂಡಿರುವುದರಿಂದ ಜನರಲ್ಲಿ ಲಸಿಕೆ ಪಡೆಯುವ ಬಗ್ಗೆ ನಿರಾಸಕ್ತಿ ಇದೆ. ನಮ್ಮ ನೆರೆಯ ತಾಲೂಕಿನಲ್ಲಿ ಮಂಗನಖಾಯಿಲೆಯಿಂದ ಮರಣ ಹೊಂದಿದವರಿಗೆ ಸರಕಾರದ ವತಿಯಿಂದ ಪರಿಹಾರ ನೀಡಲಾಗಿದೆ. ಆದರೆ ನಮ್ಮ ತಾಲೂಕಿನಲ್ಲಿ ಕಳೆದ ವರ್ಷ ಮರಣ ಹೊಂದಿದವರಿಗೆ ಪರಿಹಾರ ನೀಡಿಲ್ಲ. ಆರೋಗ್ಯ ಇಲಾಖೆಯವರು ಏನನ್ನೋ ಮುಚ್ಚಿಡುತ್ತಿದ್ದಾರೆ ಎಂಬ ಗುಮಾನಿ ಸಾರ್ವಜನಿಕರಲ್ಲಿ ಇದೆ ಎಂದು ಪತ್ರಕರ್ತರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಆರೋಗ್ಯ ಸಂಬಂಧಿ ಕಾಯಿಲೆಯಿಂದ ಮರಣ ಹೊಂದಿದವರಿಗೆ ಪರಿಹಾರ ನೀಡುವುದಕ್ಕೆ ಸರಕಾರದಲ್ಲಿ ನಿಯಮಾವಳಿ ಇಲ್ಲ. ಆದರೆ ಮಂಗನಖಾಯಿಲೆ ಪ್ರಾಣಿಗಳಿಂದ ಹರಡುತ್ತಿರುವುದರಿಂದ ಪರಿಹಾರ ನೀಡುವ ಬಗ್ಗೆ ವಿಧಾನಸಭಾಧ್ಯಕ್ಷರು ಅಧಿವೇಶನದ ಸಮಯದಲ್ಲಿ ಸರಕಾರದ ಗಮನ ಸೆಳೆಯಲಿದ್ದಾರೆ.ಈ ಬಗ್ಗೆ ಅವರು ನಮಗೆ ಭರವಸೆ ನೀಡಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಯನ್ನು ಆದ್ಯತೆಯ ಮೇರೆಗೆ ಒಂದೆರಡು ದಿನದಲ್ಲಿ ತುಂಬುವ ವ್ಯವಸ್ಥೆ ಮಾಡಲಾಗುವುದು ಎಂದರು.


ಸಭೆಯಲ್ಲಿ ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ, ತಹಸೀಲ್ದಾರ ಮಂಜುಳಾ ಭಜಂತ್ರಿ, ತಾಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ, ಕೆ.ಎಫ್.ಡಿ ವೈದ್ಯಾಧಿಕಾರಿ ಡಾ.ಸತೀಶ ಶೇಟ್, ಡಾ.ವಿನೋದ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಂದಕುಮಾರ ಪೈ, ಅರಣ್ಯಾಧಿಕಾರಿ ಕಿರಣಕುಮಾರ ಮುಂತಾದವರು ಉಪಸ್ಥಿತರಿದ್ದರು.

About the author

Adyot

Leave a Comment