ಆದ್ಯೋತ್ ಸುದ್ದಿನಿಧಿ
ದೂರದೃಷ್ಟಿಯುಳ್ಳ ನಾಯಕರಾಗಿ ಮಾನವೀಯ ತುಡಿತವಿರುವ ಆಡಳಿತಗಾರರಾಗಿದ್ದ ದಿ.ಮಾಜಿಮುಖ್ಯಮಂತ್ರಿ ಡಿ.ದೇವರಾಜು ಅರಸು ಅವರ 38ನೇ ಪುಣ್ಯ ಸ್ಮರಣೆ ಇಂದು.
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅರಸು ಹೆಸರು ಚಿರಸ್ಥಾಯಿ ಅಧಿಕಾರ ಹಿಡಿಯುವುದು ಕೇವಲ ಹಣಗಳಿಕೆಗೆ ಹಾಗೂ ಉಳ್ಳವರಿಗೆ ಸಹಾಯ ಮಾಡಲು ಎಂದು ಭಾವಿಸುತ್ತಿರುವ ಇಂದಿನ ರಾಜಕಾರಣಿಗಳು ದೇವರಾಜು ಅರಸುರವರಿಂದ ಗಟ್ಟಿನಿರ್ಧಾರ ಹೇಗೆ ತೆಗೆದುಕೋಳ್ಳಬೇಕು ಎಂಬುದನ್ನು ಕಲಿಯಬೇಕಾಗಿದೆ.
ಇಂದು ರಾಜ್ಯದ ಲಕ್ಷಾಂತರ ಮಂದಿ ಜೀತಮುಕ್ತರಾಗಿ,ಒಂದಿಷ್ಟು ಭೂಮಿಯನ್ನು ಹೊಂದಿ ವ್ಯವಸಾಯ ಮಾಡುತ್ತಿದ್ದರೆ ಅದಕ್ಕೆ ಕಾರಣ ದೇವರಾಜು ಅರಸು
ಅರಸು ಜಾರಿಗೊಳಿಸಿದ ಭೂ ಸುಧಾರಣಾ ಕಾಯ್ದೆ, ಜೀತಮುಕ್ತಿ ಕಾಯ್ದೆ, ಋಣಪರಿಹಾರ ಕಾಯ್ದೆಯಂತಹ ಕ್ರಾಂತಿಕಾರಿ ನಿರ್ಧಾರಗಳು ಬಡವರು, ತಳಸಮುದಾಯದವರು, ಕೃಷಿ ಕಾರ್ಮಿಕರು ಸ್ವಾಭಿಮಾನದ ಬದುಕು ಸಾಧಿಸಲು ನೆರವಾದವು. ಸಾಮಾಜಿಕ ನ್ಯಾಯದ ಹರಿಕಾರ ಎಂಬ ಖ್ಯಾತಿಗೆ ಪಾತ್ರರಾದ ಅರಸು ಅವರು, ರಾಜ್ಯದ ಅಸಂಖ್ಯಾತ ಧ್ವನಿ ಇಲ್ಲದ ಜನಾಂಗಗಳನ್ನು ಗುರುತಿಸಿ ಮುಖ್ಯವಾಹಿನಿಗೆ ತಂದರು. ಹಾವನೂರು ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯ ದೊರಕಿಸಿಕೊಟ್ಟ ದೇವರಾಜು ಅರಸು ಅವರ ಸಾಧನೆಗೆ ಸಾಟಿಯಿಲ್ಲ
ದಿ. ಇಂದಿರಾ ಗಾಂಧಿಯವರು ಜಾರಿಗೊಳಿಸಿದ್ದ 20 ಅಂಶಗಳ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಕರ್ನಾಟಕದಲ್ಲಿ ಜಾರಿಗೊಳಿಸಿದರು. ಶೋಷಿತರು ಮತ್ತು ಹಿಂದುಳಿದ ಜನಾಂಗಕ್ಕೆ ಶಕ್ತಿ ತುಂಬುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ ಕೀರ್ತಿ ದೇವರಾಜು ಅರಸು ಅವರಿಗೆ ಸಲ್ಲಬೇಕು. ಹಿಂದುಳಿದ ವರ್ಗಗಳಿಗೆ ಉದ್ಯೋಗದಲ್ಲಿ ಮೀಸಲಾತಿ, ಸಮಾಜದ ದುರ್ಬಲ ವರ್ಗಕ್ಕೆ ಮಾಸಾಶನ ಮೂಲಕ ಬದುಕಿಗೆ ಭದ್ರತೆ, ನಿರುದ್ಯೋಗ ಭತ್ಯೆಯ ಮೂಲಕ ನಿರುದ್ಯೋಗಿ ಯುವಕರಿಗೆ ಬದುಕಿನ ಭರವಸೆಯನ್ನು ಮೂಡಿಸಿದ ಕಾರ್ಯಕ್ರಮ ದೇಶದಲ್ಲಿಯೇ ವಿನೂತನವಾಗಿದೆ
ಮೈಸೂರು ಎಂದಿದ್ದ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಅಧಿಕೃತವಾಗಿ ಘೋಷಿಸಿ, ಕನ್ನಡವನ್ನು ಆಡಳಿತ ಭಾಷೆಯಾಗಿ ಅಂಗೀಕರಿಸಿ ಗಟ್ಟಿನಿರ್ಧಾರ ತೆಗೆದುಕೊಂಡವರು ದೇವರಾಜ ಅರಸುರವರು.
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ದಿ. ಡಿ.ದೇವರಾಜ ಅರಸುರವರ 38 ನೇ ಪುಣ್ಯಸ್ಮರಣೆಯ ದಿನವಾದ ಶನಿವಾರ ವಿಧಾನಸೌಧದಲ್ಲಿ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.