ಆದ್ಯೋತ್ ಸುದ್ದಿನಿಧಿ:
ರೈತರು ಮತ್ತೆ ಬೀದಿಗೆ ಬಂದಿದ್ದಾರೆ. ಅದರರ್ಥ ಸಿಡಿದೆದ್ದಿದ್ದಾರೆ. ಕೇಂದ್ರ ಸರಕಾರದ ಕೃಷಿ ಕಾಯಿದೆಗಳ ಬಗ್ಗೆ ಅವರಿಗೆ ವಿಶ್ವಾಸವಿಲ್ಲ. ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿ ಕಾಪಾಡುವುದರ ಜತೆಗೆ ಈ ಕಾಯಿದೆಗಳು ತಮ್ಮ ಪಾಲಿಗೆ ಮರಣಶಾಸನ ಎಂಬ ಆತಂಕ ಅವರದ್ದಾಗಿದೆ. ಇದರ ಜತೆ ಜತೆಗೆ ಕನಿಷ್ಠ ಬೆಂಬಲ ಬೆಲೆಗೆ ಪಟ್ಟು ಹಿಡಿದಿದ್ದಾರೆ.ಬಹುದಿನಗಳ ನಂತರ ಅನ್ನದಾತರ ಆಕ್ರೋಶ ಭುಗಿಲೆದ್ದಿದೆ. ಇದಕ್ಕೆ ಪ್ರತಿಪಕ್ಷಗಳೂ ಸಾಥ್ ನೀಡಿದ ಪರಿಣಾಮ ಬಂದ್ ಬಲ ಪಡೆಯಲಿದೆ. ಹೋರಾಟದ ಕಾವಿನ ತೀವ್ರತೆ ಕೂಡ ಹೆಚ್ಚಿದೆ. ಇದು ಕೇಂದ್ರಕ್ಕೂ ಬಿಸಿತುಪ್ಪವಾಗಿದೆ.
ಕೇಂದ್ರದ ಮೂರು ಕೃಷಿ ಕಾಯಿದೆಗಳ ರದ್ದತಿಗೆ ರೈತರು ಪಟ್ಟು ಹಿಡಿಯಲು ಕಾರಣಗಳು ಅನೇಕ. ಮಂಡಿ ಪದ್ಧತಿ ಮತ್ತು ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಹೊಸ ಕಾಯಿದೆಗಳಿಂದ ಅಂತ್ಯ ಕಾಣವುದು ಖಚಿತ ಎಂದರಿತಿರುವ ರೈತರು ಈ ಬಾರಿ ಉಗ್ರ ಹೋರಾಟದ ಹಾದಿ ಹಿಡಿದಿದ್ದಾರೆ. ಉತ್ತರ ಭಾರತದ ರೈತರು ಸಂಯುಕ್ತ ಕಿಸಾನ್ ಮೋರ್ಚಾ ಹೆಸರಿನಡಿ ಪಂಜಾಬ್, ಹರಿಯಾಣಾದಿಂದ ದೆಹಲಿ ಚಲೋ ಎಂಬ ಘೋಷವಾಕ್ಯ ದೊಂದಿಗೆ ಹೋರಾಟದ ಕಹಳೆ ಊದಿ ಕೇಂದ್ರಕ್ಕೆ ಪ್ರತಿಭಟನೆಯ ಬಿಸಿ ಮುಟ್ಟಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಕೇಂದ್ರ ಹೇಳುವ ಮಾತೇ ಬೇರೆ. ಉತ್ತಮ ಅಥವಾ ಹೆಚ್ಚಿನ ದರ ಕೊಡುವವರಿಗೆ ಮಾರಾಟ ಮಾಡುವ ಸದವಕಾಶ ರೈತರಿಗೆ ಸಿಗಲಿದೆ ಎಂದು ಹೇಳುತ್ತಿದೆ. ಈ ಕಾಯಿದೆ ರೈತರಿಗೆ ವರದಾನವೇ ಹೊರತು ಅನ್ಯಾಯ ಹೇಗೆ ಎಂಬ ವಾದ ಕೇಂದ್ರದ್ದಾಗಿದೆ. ಸಾಲದ್ದಕ್ಕೆ ತಾನು ತಂದಿರುವ ಹೊಸ ಕಾಯಿದೆಗಳ ಸಮಗ್ರ ಮಾಹಿತಿ ಹೊತ್ತ ಸಂದೇಶ ಸಾರಲು ಹೊರಟಿದೆ. ಹೊಸ ಕಾಯಿದೆಗಳ ಮೂಲಕ ಕೃಷಿಯನ್ನು ಲಾಭದಾಯಿಕವಾಗಿಸಿಕೊಂಡ ಕೆಲ ಯಶೋಗಾಥೆಗಳ ಪ್ರಚಾರ ಮಾಡುತ್ತಿದೆ. ಅಂದರೆ ಕಾಯಿದೆಗಳ ಪರ ಅಭಿಯಾನ ಶುರು ಮಾಡಿದೆ.
ಆದರೆ ರೈತರು ಇದ್ಯಾವುದಕ್ಕೂ ಸೊಪ್ಪು ಹಾಕುತ್ತಿಲ್ಲ.ಅವರ ಹೋರಾಟ ದಿನೇ ದಿನೆ ವ್ಯಾಪಕ ಬೆಂಬಲ ಗಳಿಸುವಲ್ಲಿ ಯಶಸ್ವಿಯಾಗಿದೆ. ಪರಿಣಾಮ ಡಿ.8ರಂದು ಭಾರತ ಭಂದ್ ಕರೆ ನೀಡಲಾಗಿದೆ. ಕೇವಲ ಉತ್ತರ ಭಾರತಕ್ಕೆ ಸೀಮಿತವಾಗಿದ್ದ ರೈತರ ಹೋರಾಟದ ಕಿಚ್ಚು ಇದೀಗ ದಕ್ಷಿಣಕ್ಕೂ ಹಬ್ಬಿದೆ. ಇದಕ್ಕೆ ಕರ್ನಾಟಕವೂ ಹೊರತಾಗಿಲ್ಲ. ಈಗಾಗಲೇ ರಾಜ್ಯದ ರೈತ ಸಂಘಟನೆಗಳು, ಕಬ್ಬು ಬೆಳೆಗಾರರ ಸಂಘ, ಹಸಿರುಸೇನೆ ಬಂದ್ ಬೆಂಬಲಿಸಿವೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರೈತಪರ ಕಾನೂನುಗಳು ಎಂದುಕೊಂಡೇ ಸುಗ್ರಿವಾಜ್ಞೆ ಮೂಲಕ ರೈತ ವಿರೋಧಿ ಕಾನೂನುಗಳನ್ನು ಜಾರಿಗೊಳಿಸುತ್ತಿದೆ. ಅದನ್ನು ಕರ್ನಾಟಕ ಸರಕಾರ ಚಾಚೂ ತಪ್ಪದೆ ಜಾರಿಗೊಳಿಸುತ್ತಿದೆ ಎಂಬ ವಾದ ರಾಜ್ಯದ ರೈತ ಮುಖಂಡರದ್ದಾಗಿದೆ. ಕೇಂದ್ರ ರಾಜ್ಯದಲ್ಲಿನ ಎಪಿಎಂಸಿಗಳನ್ನುತನ್ನ ತೆಕ್ಕೆಗೆ ಪಡೆದುಕೊಂಡು ಖಾಸಗಿಯವರಿಗೆ ರತ್ನಗಂಬಳಿ ಹಾಕುತ್ತದೆ ಎಂಬ ವಾದ ಅನೇಕ ರೈತರದ್ದಾಗಿದೆ. ಇದರ ಬದಲು ಬೆಂಬಲ ಬೆಲೆ ವ್ಯವಸ್ಥೆಗೆ ಕಾನೂನು ರೂಪ ಕೊಡಲಿ ಎನ್ನುವುದು ಬಹುತೇಕ ರೈತರ ಬೇಡಿಕೆ. ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆ ಶಿಥಿಲಗೊಳಿಸುವ ಹುನ್ನಾರ ಈ ಕಾಯಿದೆಯಲ್ಲಿದೆ ಎನ್ನುವ ವಾದ ರೈತರದು.
ಮೇಲ್ನೋಟಕ್ಕೆ ಈ ಕಾಯಿದೆಗಳು ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಆಕರ್ಷಕ ಮತ್ತು ಲಾಭದಾಯಕ ಎನಿಸುತ್ತವೆ. ಇರುವ ಅಲ್ಪ ಸ್ವಲ್ಪ ಭೂಮಿಯನ್ನು ಹೆಚ್ಚಿನ ದರಕ್ಕೆ ಮಾರಿದರೆ ದುಡ್ಡೇನೋ ಸಿಗಬಹುದು. ಆದರೆ ನೆಲವಿಲ್ಲದೇ ಮುಂದೊಂದು ದಿನ ನೆಲೆಗಾಗಿ ಪರಿತಪಿಸುವ ದಿನ ಬಂದರೆ ಆಗೇನು? ಎಂಬ ಪ್ರಶ್ನೆ ಕಾಡದಿರದು. ಪ್ರಾಕೃತಿಕ ವೈಪರೀತ್ಯ, ಮಳೆ ಕೊರತೆ ಸೇರಿದಂತೆ ಮೊದಲೇ ಕೃಷಿ ಕ್ಷೇತ್ರ ಬಿಕ್ಕಟ್ಟು ಎದುರಿಸುತ್ತಿದೆ. ಒಂದು ವರ್ಷ ಅತೀವೃಷ್ಟಿಯಾದರೆ ಇನ್ನೊಂದು ವರ್ಷ ಅನಾವೃಷ್ಟಿ.ಬೆಳೆ ಉತ್ತಮ ಬಂದಾಗ ಬೆಲೆ ಕೊರತೆ.ಹೀಗೆ ಸಂಕಷ್ಟಗಳ ಸರಮಾಲೆಯನ್ನೇ ಕೃಷಿಕ ಇಂದು ಧರಿಸಿದ್ದಾನೆ.ಪರಿಣಾಮ ಕೃಷಿಯಿಂದ ವಿಮುಖನಾಗುತ್ತಿದ್ದಾನೆ. ಕೊರೊನಾ ಲಾಕ್ ಡೌನ್ ನಿಂದಾಗಿ ಕೆಲ ಯುವಕರು ಹಳ್ಳಿಗಳತ್ತ ಹೆಜ್ಜೆ ಹಾಕಿದ್ದಾರಾದರೂ ಅಲ್ಲಿನ ಸಂಕಷ್ಟ ಸ್ಥಿತಿ ನೋಡಿ ಬೆರಗಾದವರೂ ಹಲವರಿದ್ದಾರೆ.
“ ವ್ಯಾಪಾರಿ, ಉದ್ದಿಮೆದಾರ ತಾನು ಮಾಡಿದ ಸಾಲ ತೀರಿಸಲಾಗದೇ ಕೋರ್ಟ್ ಗೆ ಅರ್ಜಿ ಹಾಕಿ ತಾನು ದಿವಾಳಿಯಾಗಿರುವುದಾಗಿ ಘೊಷಿಸಿಕೊಂಡಿದ್ದನ್ನು ನಾವು ನೋಡಿದ್ದೇವೆ. ಆದರೆ ಈವರೆಗೆ ಯಾವೊಬ್ಬ ರೈತನೂ ಕೋರ್ಟ್ ಗೆ ಅರ್ಜಿ ಮೂಲಕ ದಿವಾಳಿಯಾಗಿದ್ದೇನೆ ಎಂದು ಘೋಷಿಸಿಲ್ಲ. ಆದರೆ ವಾಸ್ತವದಲ್ಲಿ ಆತ ದಿವಾಳಿಯಾಗಿರುತ್ತಾನೆ. ಅಂತಹದರಲ್ಲಿರೈತರ ಜತೆ ಚರ್ಚಿಸದೇ ಅವರ ಆತಂಕ ನಿವಾರಿಸದೇ ಜಾರಿಯಾಗುವ ಈ ಮಾದರಿ ಕಾಯಿದೆಗಳು ರೈತನ ಪಾಲಿಗೆ ಮರಣಶಾಸನವೇ ಸರಿ’’ ಎಂದು ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ಹೇಳಿರುವ ಮಾತು ಕೂಡ ತುಂಬಾ ಮಾರ್ಮಿಕವಾಗಿದೆ.
ಒಂದಂತೂ ಸತ್ಯ. ಬಹುದಿನಗಳ ನಂತರ ರೈತ ಒಕ್ಕಟ್ಟಿನ ಮಂತ್ರ ಪಠಿಸುತ್ತಿದ್ದಾರೆ. ಅಪಾಯ ಎದುರಾಗಬಹುದು ಎನ್ನುವ ಆತಂಕವನ್ನುಮೆಟ್ಟಿ ನಿಲ್ಲಲು ರಾಜಕೀಯ ಪಕ್ಷಗಳನ್ನು ಬಿಟ್ಟು ಹೋರಾಟ ಹಾದಿ ತುಳಿದಿದ್ದಾರೆ. ಇದೀಗ ಕಾಂಗ್ರೆಸ್ ಸೇರಿದಂತೆ ದೇಶದ ನಾನಾ ಪಕ್ಷಗಳು ರಾಜಕಾರಣ ದೃಷ್ಟಿಯಿಂದಲೋ ಅಥವಾ ಕೇಂದ್ರದ ವಿರುದ್ಧದ ಹೋರಾಟವೆಂತಲೋ ಬೆಂಬಲ ಸೂಚಿಸಿವೆ. ಆದರೆ ಒಬ್ಬ ರೈತನ ಹಿತದೃಷ್ಟಿಯಿಂದ ಈ ಹೋರಾಟ ಸೂಕ್ತ ಹಾಗೂ ಸಕಾಲಿಕ .ಕೃಷಿ ಪ್ರಧಾನ ದೇಶದ ಹಿತವೂ ಇದರಲ್ಲೇ ಇದೆ.
—ಪ್ರಸನ್ನ ಕರ್ಪೂರ ಧಾರವಾಡ