ಕಣ್ಮನ ಸೆಳೆದ ಧಾರವಾಡ ಕೃಷಿ ಮೇಳ

ಧಾರವಾಡ : ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಜನವರಿ 18 ರಿಂದ ನಡೆಯುತ್ತಿರೋ ಕೃಷಿ ಮೇಳಕ್ಕೆ ಇಂದು ತೆರೆ ಬಿದ್ದಿದೆ. ಈ ಬಾರಿ ಎಲ್ಲರ ಆಕರ್ಷಣೆಗೆ ಕಾರಣವಾಗಿದ್ದು ಜಾನುವಾರು ಮೇಳ. ಕೃಷಿ ಉಪಯೋಗದ ಜಾನುವಾರುಗಳಿಂದ ಹಿಡಿದು ಮನೆಯಲ್ಲಿ ಸಾಕಬಹುದಾದ ಪ್ರಾಣಿಗಳ ಪ್ರದರ್ಶನವೂ ಈ ಬಾರಿ ನಡೆದಿದ್ದು ವಿಶೇಷ. ಸಾವಿರಾರು ಜನರು ಈ ಮೇಳದಲ್ಲಿ ಪಾಲ್ಗೊಂಡು, ಅಚ್ಚರಿ ವ್ಯಕ್ತಪಡಿಸಿದರು.

ಜಾನುವಾರು ಮೇಳದಲ್ಲಿ ವಿವಿಧ ಬಗೆಯ ಆಕಳುಗಳಿಂದ ಹಿಡಿದು ಬೃಹತ್ ಗಾತ್ರದ ಗೂಳಿಗಳವೆರೆಗೆ ಅನೇಕ ಪ್ರಾಣಿಗಳು ಮೇಳದಲ್ಲಿ ಪ್ರದರ್ಶನಗೊಳ್ಳುತ್ತಿವೆ. ರೈತರು ತಮ್ಮ ನೆಚ್ಚಿನ ಜಾನುವಾರುಗಳನ್ನ ತಂದು ಮೇಳಕ್ಕೆ ಆಗಮಿಸಿದ್ದ ಜನರಿಗೆ ಹೆಮ್ಮೆಯಿಂದ ಪ್ರದರ್ಶಿಸಿದರು. ವಿವಿಧ ಬಗೆಯ ಎಮ್ಮೆ, ಕೋಣ, ಹೋರಿ, ಎತ್ತುಗಳು ಮೇಳದಲ್ಲಿ ಪ್ರಮುಖ ಆಕರ್ಷಣೆಯ ಜಾನುವಾರುಗಳಾಗಿವೆ. ಆನೆಯ ಮರಿಗಳಂತೆ ಕಾಣುತ್ತಿದ್ದ ಕೋಣ ಹಾಗೂ ಎತ್ತುಗಳನ್ನ ನೋಡಿದರ ಜನರು ಬಾಯಿ ಮೇಲೆ ಕೈಯಿಟ್ಟುಕೊಳ್ಳುತ್ತಿದ್ದಾರೆ. ಇನ್ನು ಹಾಲು ಹಾಗೂ ಮಾಂಸದ ಉದ್ದೇಶಕ್ಕೆ ಬಳಸೋ ಅನೇಕ ಬಗೆಯ ಜಾನುವಾರುಗಳು ಕೂಡ ಮೇಳದ ವಿಶೇಷ ಅತಿಥಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ನಾಯಿಯೂ ಸಾಕಷ್ಟು ಪ್ರಾಮುಖ್ಯತೆ ಪಡೆದಿರೋ ಹಿನ್ನೆಲೆಯಲ್ಲಿ ಅವುಗಳ ಪ್ರದರ್ಶನ ಕೂಡ ನಡೆದಿದೆ. ಮುಧೋಳ ನಾಯಿ, ಜರ್ಮನ್ ಶೆಪರ್ಡ್, ಪಿಟ್ ಬುಲ್, ಗ್ರೇಡ್ ಡೆನ್ ತಳಿಯ ನಾಯಿಗಳು ಜನರನ್ನು ಆಕರ್ಷಿಸಿದವು. ಅಲ್ಲದೇ ಮೇಳದಲ್ಲಿ ರೈತರಿಗೆ ಉಪಯೋಗ ಆಗುವ ಸಲಕರಣೆಗಳನ್ನು ಪ್ರದರ್ಶನ ಮಾಡಲಾಗಿತ್ತು. ರೈತರು ಎಲ್ಲ ಪ್ರದರ್ಶನಗಳನ್ನು ನೋಡಿ ಮಾಹಿತಿ ಪಡೆದುಕೊಂಡರು. ಅಲ್ಲದೇ ಈ ಬಾರಿಯ ಮೇಳದಲ್ಲಿ ಹೆಚ್ಚಿನ ಮಟ್ಟದಲ್ಲಿ ಯುವಕ, ಯುವತಿಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಇನ್ನು ಮೇಳದಲ್ಲಿ ವಿವಿಧ ಬಗೆಯ ಕುದುರೆಗಳನ್ನೂ ಕೂಡ ಪ್ರದರ್ಶನಕ್ಕೆ ಇಡಲಾಗಿತ್ತು. ಇತ್ತೀಚಿಗೆ ಕುರಿ ಸಾಕಾಣಿಕೆಯೂ ದೊಡ್ಡ ಉದ್ಯಮವಾಗಿ ಬೆಳೆದಿರೋದ್ರಿಂದ ಅದಕ್ಕೂ ಇಲ್ಲಿ ಅವಕಾಶ ಕಲ್ಪಿಸಲಾಗಿತ್ತು. ವಿವಿಧ ಬಗೆಯ ಕುದುರೆಗಳು ಕೂಡ ಜನರನ್ನ ಆಕರ್ಷಿಸಿದವು. ಇದೇ ವೇಳೆ ಅತೀ ಹೆಚ್ಚು ಹಾಲು ಕೊಡೋ ವಿವಿಧ ಬಗೆಯ ಆಕಳು ಹಾಗೂ ಎಮ್ಮೆಗಳು ಜನರನ್ನ ಆಕರ್ಷಿಸಿದವು.

About the author

Adyot

Leave a Comment