ಸಿದ್ದಾಪುರ : ರಾಜ್ಯದಲ್ಲಿ ಮತ್ತೆ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದು, ಉತ್ತರ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ಮಂಗನಕಾಯಿಲೆಯ ಭೀತಿ ವ್ಯಾಪಕವಾಗಿ ಆವರಿಸಿದೆ. ಈ ನಿಟ್ಟಿನಲ್ಲಿ ಕೈಗೊಂಡಿರೋ ಕ್ರಮಗಳ ಬಗ್ಗೆ ಸಿದ್ದಾಪುರದ ತಾಲೂಕಾ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್, ಜಿಲ್ಲೆಯ ಸಿದ್ದಾಪುರ ತಾಲೂಕಾ ವ್ಯಾಪ್ತಿಯಲ್ಲಿ ಹೆಚ್ಚಾಗಿ ಮಂಗಗಳು ಸಾಯುತ್ತಿವೆ. ಈಗಾಗಲೇ ಕ್ಯಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 1 ಮಂಗನಲ್ಲಿ ಕೆ.ಎಫ್.ಡಿ ವೈರಾಣು ಪತ್ತೆಯಾಗಿದೆ. ತಾಲೂಕಿನಲ್ಲೇ ಮಂಗನ ಕಾಯಿಲೆಯ ಭೀತಿ ಹೆಚ್ಚಾಗಿದೆ. ಆದ್ದರಿಂದ ತಾಲೂಕಿನ ಎಲ್ಲಾ ಭಾಗಗಳಲ್ಲೂ ಲಸಿಕಾ ಕಾರ್ಯಕ್ರಮ ನಡೆಯುತ್ತಿದೆ. ಈಗಾಗಲೇ ಇದಕ್ಕೋಸ್ಕರ 6 ತಂಡಗಳನ್ನ ರಚನೆ ಮಾಡಲಾಗಿದ್ದು, ಸುಮಾರು 11,000 ಜನರಿಗೆ ಲಸಿಕೆ ನೀಡಲಾಗಿದೆ. ಇನ್ನೂ ಸುಮಾರು 54,000 ಜನರಿಗೆ ಲಸಿಕೆ ನೀಡಬೇಕಾಗಿದೆ. ಶಾಲಾ ಕಾಲೇಜುಗಳಲ್ಲಿ ವ್ಯಾಪಕವಾಗಿ ಲಸಿಕಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ವಿಶೇಷವಾಗಿ ಲಸಿಕೆ ನೀಡಿದ ಜನರಿಗೆ ಲಸಿಕೆ ಪಡೆದುಕೊಂಡ ಬಗ್ಗೆ ಕೆ.ಎಫ್.ಡಿ ಲಸಿಕೆ ಕಾರ್ಡ್ ನೀಡಲಾಗುತ್ತಿದೆ. ಇದರ ಬಗ್ಗೆ ಅರಣ್ಯ ಇಲಾಖೆ ಜೊತೆ ಸಮಾಲೋಚನೆ ನಡೆಸಿದ್ದೇವೆ. ಅರಣ್ಯ ಪ್ರದೇಶಗಳಿಗೆ ತೆರಳುವಾಗ ಈ ಕಾರ್ಡ್ ತೋರಿಸಿದಲ್ಲಿ ಅರಣ್ಯ ಇಲಾಖೆ ಅನುಮತಿ ನೀಡುತ್ತದೆ. ಅರಣ್ಯ, ಬೆಟ್ಟ ಪ್ರದೇಶಗಳಿಗೆ ತೆರಳೋ ಜನ ಇದರ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅವಶ್ಯಕವಾಗಿರುತ್ತದೆ. ಡಿ.ಎಂ.ಪಿ ತೈಲವನ್ನ ಹಚ್ಚಿಕೊಂಡೇ ಅರಣ್ಯ ಪ್ರದೇಶಗಳಿಗೆ ತೆರಳಬೇಕು. ಸಾರ್ವಜನಿಕರು ಲಸಿಕೆಯ ಬಗ್ಗೆ ಹೆದರಬೇಕಾದ ಅವಶ್ಯಕತೆ ಇಲ್ಲ. ದಯವಿಟ್ಟು ಎಲ್ಲರೂ ಲಸಿಕೆ ತೆಗೆದುಕೊಳ್ಳಬೇಕು ಅಂತ ಮನವಿ ಮಾಡಿದರು.
Very good.