ಆದ್ಯೋತ್ ಸುದ್ದಿನಿಧಿ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅವಶ್ಯವಿರುವ ಎಲ್ಲಾಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ಈ ಕುರಿತು ಆದ್ಯೋತ್ ನ್ಯೂಸ್ ಜೊತೆಗೆ ಮಾತನಾಡಿದ ಹೆಬ್ಬಾರ್, ಸಿದ್ದಾಪುರ ತಾಲೂಕಿನಲ್ಲಿ ಕಾಣಿಸಿಕೊಂಡಿರುವ ಮಂಗನಖಾಯಿಲೆ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಭಾಗದ ಜನರ ಬೇಡಿಕೆಯಂತೆ ಮತ್ತು ಜಿಲ್ಲೆಗೆ ಅವಶ್ಯಕವಿರುವ ವೆಂಟಿಲೆಟರ್ ಅಳವಡಿಸಿರುವ ಆಂಬುಲೆನ್ಸ್ ಮಂಜೂರು ಮಾಡಿಸಲಾಗಿದೆ. ಮಂಗನಖಾಯಿಲೆಗೆ ಸಂಬಂಧಿಸಿದಂತೆ ಮಣಿಪಾಲ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯ ಸೌಲಭ್ಯ ಕಲ್ಪಿಸಲಾಗಿದೆ. ಮಂಗನಖಾಯಿಲೆಯಿಂದ ಮರಣ ಹೊಂದಿದವರಿಗೆ ಪರಿಹಾರ ಮಂಜೂರು ಮಾಡಲಾಗಿದೆ. ಉಣ್ಣೆ ನಿಯಂತ್ರಣಕ್ಕೆ ಅವಶ್ಯವಿರುವ ಔಷಧ ಹಾಗೂ ಸಿಬ್ಬಂದಿಗಳನ್ನು ನೀಡಲಾಗಿದೆ. ಇವೆಲ್ಲವನ್ನು ನನ್ನ ಗಮನಕ್ಕೆ ಬಂದ ನಾಲ್ಕು
ದಿನದಲ್ಲಿ ಮಾಡಿದ್ದೇನೆ ಎಂದು ಹೇಳಿದರು.
ನಮ್ಮ ಜಿಲ್ಲೆಯಲ್ಲಿ ಸಮಗ್ರ ರಕ್ತಪರೀಕ್ಷಾ ಕೇಂದ್ರವಿಲ್ಲ. ಈಗ ನಾವು ರಕ್ತಪರೀಕ್ಷೆಗೆ ನಮ್ಮ ನೆರೆ ಜಿಲ್ಲೆಯಾದ ಉಡುಪಿ, ಮಂಗಳೂರು, ಶಿವಮೊಗ್ಗ ಜಿಲ್ಲೆಯನ್ನು ಅವಲಂಬಿಸಬೇಕಾಗಿದೆ. ಇದರಿಂದ ಮಾರಕ ರೋಗವನ್ನು ಕಂಡು ಹಿಡಿಯುವಲ್ಲಿ ವಿಳಂಬವಾಗುತ್ತಿದೆ. ಆದ್ದರಿಂದ ಇನ್ನೂ ಹದಿನೈದು ದಿನದಲ್ಲಿ ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ಮಂಗನಖಾಯಿಲೆ ಸೇರಿದಂತೆ ಹಲವು ಮಾರಕ ರೋಗಗಳನ್ನು ಕಂಡುಹಿಡಿಯಲು ಅನುಕೂಲವಾಗುವಂತಹ ರಕ್ತಪರೀಕ್ಷಾ ಕೇಂದ್ರವನ್ನು ಜಿಲ್ಲಾ ಕೇಂದ್ರ ಕಾರವಾರದಲ್ಲಿ ಪ್ರಾರಂಭಿಸಲಾಗುವುದು. ಇದರಿಂದ ಖಾಯಿಲೆ ಕಂಡುಹಿಡಿಯುವಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಬಹುದು ಎಂದು ಹೇಳಿದರು.