ಆದ್ಯೋತ್ ನ್ಯೂಸ್ ಡೆಸ್ಕ್ : ಕನ್ನಡ ಸಾಹಿತ್ಯ ಪ್ರಾಕಾರಗಳಲ್ಲಿ ಪ್ರವಾಸ ಕಥನ ಸಾಹಿತ್ಯವೂ ಒಂದಾಗಿದೆ..ಪ್ರಭುಶಂಕರ, ರಾವ್ ಬಹದ್ದೂರು ಸೇರಿದಂತೆ ಒಂದಿಷ್ಟು ಸಾಹಿತಿಗಳ ಪ್ರವಾಸ ಕಥನ ಬರವಣಿಗೆ ಕುತೂಹಲಕಾರಿಯಾಗಿರುತ್ತದೆಯೇ ಹೊರತು ಉಳಿದಂತೆ ಹೆಚ್ಚಿನವು ಸ್ಥಳಪುರಾಣ, ಐತಿಹ್ಯ, ಸಿಗುವ ವಸ್ತು, ಬೆಂಗಳೂರಿನಿಂದ ಇರುವ ದೂರ, ಅಲ್ಲಿ ಇರುವ ಸೌಲಭ್ಯ
ಹೀಗೆ ಚರ್ವಿತಚರ್ವಣವಾಗಿರುತ್ತದೆ. ಇದಕ್ಕೆ ಅಪವಾದವಾಗಿರುವುದು ಗಂಗಾಧರ ಕೊಳಗಿಯವರ
ಅಲೆಮಾರಿಯ ಅನುಭವ ಕಥನ.
“ಯಾನ“-
ಇದೊಂದು ವಿಭಿನ್ನ ಪ್ರವಾಸ ಕಥನ. ಹೊನ್ನೆಮರಡು ಎಂಬ ಶರಾವತಿ ಹಿನ್ನೀರಿನ ಪ್ರದೇಶವನ್ನು ಅಪ್ಪಟ ಪರಿಸರ ಪ್ರದೇಶವನ್ನಾಗಿ ಕಾದಿಟ್ಟಿರುವ ಎನ್.ಎಸ್.ಎಲ್.ಸ್ವಾಮಿಯವರ ಕನಸಿನ ಕೂಸಾದ ಬೆಳಗಾವಿಯಿಂದ ಮೈಸೂರುವರೆಗೆ ಒಂದು ಸಾವಿರ ಸೈಕಲ್ ಸವಾರರನ್ನು ಸೇರಿಸಿ ಪರಿಸರ ಅದ್ಯಯನ ಮಾಡುತ್ತಾ ಬೈಸಿಕಲ್ ಯಾನ ಮಾಡುವ ಯೋಜನೆ. ಇದಕ್ಕೆ ಪೂರಕವಾಗಿ ಯಾವ ಮಾರ್ಗದಲ್ಲಿ ಹೋಗಬೇಕು, ಎಲ್ಲಿ ಉಳಿಯಬೇಕು ಈ ಮುಂತಾದ ವಿವರ ಸಂಗ್ರಹಿಸಲು ತನ್ನೊಂದಿಗೆ ಒಂದಿಷ್ಟು ಜನರನ್ನು ಸೇರಿಸಿಕೊಂಡು ಹೊರಟಿದ್ದರು. ಈ ತಂಡವನ್ನು ಸೇರಿಕೊಂಡವರು ಗಂಗಾಧರ ಕೊಳಗಿ. ಬೈಸಿಕಲ್ ಯಾನದ ತಂಡವನ್ನು ಕೊಳಗಿಯವರು ಸೇರಿಕೊಂಡಿದ್ದು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದಲ್ಲಿ. ಅಲ್ಲಿಂದ ಪ್ರಾರಂಭವಾಗುವ ಕೊಳಗಿಯವರ ಯಾನದ ಅನುಭವ ಮೈಸೂರಿನಲ್ಲಿ ಮುಕ್ತಾಯವಾಗುತ್ತದೆ.
ಸುಳ್ಯದಿಂದ ಮೈಸೂರು ವರೆಗಿನ ಯಾನದಲ್ಲಿ ಏನಿದೆ ಎನ್ನುವಂತಿಲ್ಲ. ಏಕೆಂದರೆ ಅವರು ಯಾನ ಮಾಡಿರುವುದು ಬಸ್ ಓಡಾಡುವ ರಸ್ತೆಯಲ್ಲಿ ಅಲ್ಲ. ಕಾಡಂಚಿನ ಪ್ರದೇಶದಲ್ಲಿ ಕ್ಷಣ ಕ್ಷಣಕ್ಕೂ ಅಪಾಯಗಳು ಎದುರಾಗುವ ಸ್ಥಳದಲ್ಲಿ. “ನಮ್ಮ ಉದ್ದೇಶ ಆರಾಮಾಗಿ ಹೈವೆಯಲ್ಲಿ ಹೋಗುವುದಲ್ಲ.
ಪ್ರಕೃತಿಯನ್ನ, ಪರಿಸರವನ್ನ, ಕಾಡನ್ನ, ಬದಲಾಗುತ್ತಿರುವ ನಾಡನ್ನು, ಆ ಮೂಲಕ ಜನಜೀವನವನ್ನು ಕಾಣುತ್ತ ಹೋಗುವುದು. ಅದಕ್ಕೆ ಹೆಚ್ಚೆಚ್ಚು ಒಳದಾರಿಗಳನ್ನು ಹುಡುಕಿ ಹೋಗೋದು. ಎಲ್ಲ ಕಡೆ ಸಿಗೊಲ್ಲ,ಸಿ ಗೋ ಕಡೆ ಪಡೆದುಕೊಳ್ಳುವುದು”. ಇದು ಬೈಸಿಕಲ್ ಯಾನದ ರೂವಾರಿ ಸ್ವಾಮಿಯವರ ಮಾತು.
ಪಟ್ಟೆ ಕಾಡಿನ ರೋಚಕತೆ ಅಲ್ಲಲ್ಲಿ ಕಾಣುವ ಹಳ್ಳಿಯ ಹೊಟೆಲ್ ಗಳು, ಅಲ್ಲಿ ಸಿಗುವ ವಿಚಿತ್ರ ಹೆಸರಿನ ತಿಂಡಿಗಳು, ಭಾಗಮಂಡಲದ ಚಳಿ, ಸೈಕಲ್ ಮೇಲೆ ಪ್ರಯಾಣಿಸುವವರ ಪ್ರಯಾಸ ಇವೆಲ್ಲವನ್ನು ಸ್ವತಃ ಅನುಭವಿಸುಂತೆ ಯಾನದಲ್ಲಿ ಚಿತ್ರಿಸಲಾಗಿದೆ. ಚಿತ್ರಕಲಾವಿದ ಸಂತೋಷ ಸಸಿಹಿತ್ಲುರವರ ಒಳಪುಟದ ಚಿತ್ರ ಹಾಗೂ ಮೊನಪ್ಪನವರ ಮುಖಪುಟದ ವಿನ್ಯಾಸ ಆಕರ್ಷಕವಾಗಿದೆ. ಇದರ ಜೊತೆಗೆ ಸೈಕಲ್ ಯಾನಕ್ಕೆ ಸೇರಿಕೊಳ್ಳಲು ಸಿದ್ದಾಪುರದಿಂದ ಸುಳ್ಯದ ತನಕ ಕೊಳಗಿಯವರ ಬಸ್ ಯಾನದ ಪ್ರಸಂಗಗಳು ಹಾಸ್ಯದ ಹೊನಲನ್ನು ಉಕ್ಕಿಸುತ್ತದೆ. ಇದರಲ್ಲಿ ಅವರ ಬದುಕಿನ ಕೆಲವು ಘಟನೆಗಳೂ ಸೇರಿಕೊಂಡು ಹಾಸ್ಯದ ಜೊತೆಗೆ ಗಂಭೀರ ಭಾವನೆಗಳನ್ನೂ ಹುಟ್ಟು ಹಾಕುತ್ತದೆ.
“ಒಂದು ಕಾಲದಲ್ಲಿ ಸಮೃದ್ಧ ಕಾಡಿನಿಂದ ಕೂಡಿದ್ದ ಪ್ರದೇಶದಲ್ಲಿ ಮನುಷ್ಯ ವಾಸ್ತವ್ಯ ಹೂಡಿರುವ ಕುರುಹಾಗಿ ರಬ್ಬರ್, ಗೇರು ತೋಪನ್ನು ಕಂಡಾಗ ಪಶ್ಚಿಮಘಟ್ಟದ ಸಂರಕ್ಷಣೆಯ ಬಗ್ಗೆ ಮಾತನಾಡಿದರೆ ಅದು ನಾನು ನನಗೆ ಮಾಡಿಕೊಳ್ಳುವ ಮೋಸ ಅನ್ನಿಸಿತು. ಬಟ್ಟೆ, ಪೆನ್ನು, ಪೇಪರ್, ಚಪ್ಪಲಿ, ಶೂ, ವಾಹನ, ಮೊಬೈಲ್ ಒಂದೇ ಎರಡೇ ಆಧುನಿಕವಾದುದನ್ನು ಬಹುತೇಕ ಪರಿಸರದಿಂದಲೇ ಎಲ್ಲವನ್ನೂ ಪಡೆದುಕೊಂಡು ದಟ್ಟ ಕಾಡುಗಳನ್ನು ಕಡಿದು ಈ ತೋಪುಗಳನ್ನು ಮಾಡಿದ್ದು ತಪ್ಪು ಎನ್ನಲು ನನಗೆ ನಿಜವಾಗಿ ನೈತಿಕತೆಯಿದೆಯೇ?” ಇದು ಕೊಳಗಿಯವರ ಪ್ರಾಮಾಣಿಕ ಆತ್ಮವಿಮರ್ಶೆಯ ಪರಿ. ಇನ್ನು ಯಾನದ ಪ್ರಾರಂಭದಲ್ಲಿ ಬರುವ ಸೈಕಲ್ ಕುರಿತಾದ ಕೊಳಗಿಯವರ ಅನುಭವ,ಬಾಲ್ಯದಲ್ಲಿ ಅವರು ಸೈಕಲ್ ಕಲಿತ ಪರಿ, ಸೈಕಲ್ ಬಗ್ಗೆ ಅವರಿಗಿರುವ ಗಾಢ ನಂಬಿಕೆ ಇವೆಲ್ಲವನ್ನು ಚಿತ್ರಿಸಿರುವ ರೀತಿ ಓದುಗರನ್ನು ತಟ್ಟುತ್ತದೆ. ಒಟ್ಟಾರೆ ಯಾನ ಕೇವಲ ಒಂದು ಚರ್ವಿತಚರ್ವಣ ಪ್ರವಾಸ ಕಥನವಾಗದೆ ಬದುಕಿನ ಜೀವಂತಿಕೆಯನ್ನು ತಿಳಿಸಿಕೊಡುವ ಪುಸ್ತಕವಾಗಿದೆ.
ಪತ್ರಕರ್ತರಾಗಿರುವ ಗಂಗಾಧರ ಕೊಳಗಿಯವರು ಈಗಾಗಲೇ ಸಮಯದ ನಿಜ(ಲೇಖನಗಳ ಸಂಗ್ರಹ), ಮನಸು ಆಕಾಶದ ನಿಹಾರಿಕೆ(ಕಥಾಸಂಕಲನ), ಕಾಡಂಚಿನ ಕತೆಗಳು(ಪ್ರಬಂಧ ಸಂಕಲನ), ಗಾಂಜಾ ಗ್ಯಾಂಗ್ ಹಾಗೂ ಕತ್ತಲೆಕಾನು(ಕಾದಂಬರಿ) ಪ್ರಕಟಿಸಿದ್ದಾರೆ. ಈಗ ಪ್ರವಾಸ ಕಥನ ಯಾನ ಬಿಡುಗಡೆಗೊಂಡಿದೆ. ಪರಿಸರ ಪ್ರಿಯರು, ಉತ್ತಮ ಬರಹಗಾರರು ಆಗಿರುವ ಕೊಳಗಿಯವರು ಭಾವುಕರು. ಅವರ ಎಲ್ಲಾ ಕೃತಿಗಳಲ್ಲೂ ಇದು ಕಂಡುಬರುತ್ತದೆ. ಯಾನದಲ್ಲೂ ಇದು ಕಂಡುಬರುತ್ತದೆ.ಇದರಿಂದಾಗಿಯೇ ಇದು ವಿಭಿನ್ನವಾಗಿದೆ.
(ಮುಂದಿನ ಭಾಗದಲ್ಲಿ ನೀರಯಾನ)
ಯಾನ ನಿತ್ಯಬದುಕಿನ ಹಿನ್ನೋಟದಂತಿದೆ. ಅತ್ಯುತ್ತಮ ಕೃತಿ.
ಯಾನದ ಓದಿನ ಯಾನ ಮಾಡಲೇಕೆಂಬ ಪ್ರೇರಣೆ ಯಾಗುವಂತೆ ಪರಿಚಯಿಸಿದ್ದೀರಿ. ಈ ರೀತಿಯ ಪ್ರೋತ್ಸಾಹ ಕೃತಿಯನ್ನು ಓದುಗರಲ್ಲಿ ಕೊಂಡೊಯ್ಯುತ್ತದೆ. ಉತ್ತಮ ಕೃತಿಗಾಗಿ ಸ್ನೇಹಿತ ಕೊಳಗಿ ಅವರಿಗೆ ಹಾಗೂ ಪರಿಚಯಿಸಿದ ಅದ್ಯೋತ ನ್ಯೂಸ್ ಗೆ ವಂದನೆಗಳು.