ಆರೋಗ್ಯ ಸಚೀವರ ಭರವಸೆ: ತಾತ್ಕಾಲಿಕವಾಗಿ ಮುಷ್ಕರ ಸ್ಥಗಿತಗೊಳಿಸಿದ ವೈದ್ಯಕೀಯ ಗುತ್ತಿಗೆ ನೌಕರರು

ಆದ್ಯೋತ್ ಸುದ್ದಿನಿಧಿ:
ಆರೋಗ್ಯ ಸಚೀವ ಶ್ರೀರಾಮುಲು ಭರವಸೆಯ ಹಿನ್ನೆಲೆಯಲ್ಲಿ ಕಳೆದ14 ದಿನದಿಂದ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರು ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದು ಗುರುವಾರದಿಂದ ಕೆಲಸಕ್ಕೆ ಹಾಜರಾಗಲಿದ್ದಾರೆ ಎಂದು ಸಂಘದ ಅಧ್ಯಕ್ಷ ವಿಶ್ವಾರಾಧ್ಯ ಎಚ್.ಯಾಮೋಜಿ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಸ್ವಾಮಿ ತಿಳಿಸಿದ್ದಾರೆ.
ಮಂಗಳವಾರ ಸಚಿವ ಶ್ರೀರಾಮುಲು ಹಾಗೂ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಘದ ಅಧಿಕೃತ ಮುಷ್ಕರದ ದಿನಗಳಲ್ಲಿ ಕಡಿತವಾದ ವೇತನವನ್ನು ಪಾವತಿಸಲು ಕ್ರಮಕೈಗೊಳ್ಳಲು ಒಪ್ಪಲಾಯಿತು ಮತ್ತು ಮುಷ್ಕರದ ಸಮಯದಲ್ಲಿ ಸೇವೆಯಿಂದ ವಜಾಗೊಂಡಿರುವ, ನೋಟಿಸ್ ನೀಡಿರುವುದನ್ನು ಹಿಂಪಡೆಯಲು ಒಪ್ಪಿಗೆ ಸೂಚಿಸಲಾಗಿದೆ.ಕರೋನಾ ಸಂದರ್ಭದಲ್ಲಿ ಮೃತಪಟ್ಟ ಇಲಾಖಾ ಗುತ್ತಿಗೆ, ಹೊರಗುತ್ತಿಗೆ ನೌಕರರ ಕುಟುಂಬಗಳಿಗೆ 50 ಲಕ್ಷ ಪರಿಹಾರ ಮತ್ತು ಕೇಂದ್ರ ಸರ್ಕಾರದ ವಿಮೆ ಕವರ್ ಆಗದಿದ್ದರೆ 30 ಲಕ್ಷ ಪರಿಹಾರ ವನ್ನು ನ್ಯಾಯಸಮ್ಮತವಾಗಿ ವಿಶೇಷ ಸಂದರ್ಭ ಎಂದು ಪರಿಗಣಿಸಿ ಇತರೆ ಸೌಲಭ್ಯಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಕೋವಿಡ್ ಆಪತ್ತು ಪ್ರೋತ್ಸಾಹ ಧನ ಎಲ್ಲಾ ಗುತ್ತಿಗೆ, ಹೊರಗುತ್ತಿಗೆ ಕೋವಿಡ್ ವಾರಿಯರ್ಸ್’ ನೌಕರರಿಗೂ ಜಾರಿಗೊಳಿಸಿ ನೌಕರರ ಆತ್ಮಸ್ಥೈರ್ಯ ಹಾಗೂ ಹುಮ್ಮಸ್ಸು ಹೆಚ್ಚಿಸಲು ಕೈಗೊಳ್ಳವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದ ನೌಕರರ ಹೆಚ್ ಆರ್ ಒಪಿ 2020-21 ನಲ್ಲಿನ ನ್ಯೂನತೆಗಳನ್ನು ಸರಿಪಡಿಸುವುದು ಮತ್ತು ಪ್ರಸ್ತುತ ನೀಡುತ್ತಿರುವ ವೇತನಕ್ಕಿಂತ ಕಡಿಮೆ ವೇತನ ನಿಗಧಿಪಡಿಸಿರುವುದನ್ನು ಕೂಡಲೆ ಹಿಂಪಡೆಯುವುದು ಮತ್ತು ನಿಯಮದಂತೆ ವಾರ್ಷಿಕ ವೇತನ ಹೆಚ್ಚಳವನ್ನು ನೀಡುವುದು. ಬಾಕಿ ಇರುವ (ಹಿಂದಿನ ವರ್ಷಗಳ ಮತ್ತು ಪ್ರಸ್ತುತ ವರ್ಷದ) ಬೋನಸ್’ಅನ್ನು ನೀಡುವುದು ಮತ್ತು ಈಗಾಗಲೇ ನೀಡಿರುವ ಬೋನಸ್’ಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಅಧ್ಯಕ್ಷ ವಿಶ್ವರಾಧ್ಯ ಹೇಳಿದ್ದಾರೆ.

ಗುತ್ತಿಗೆ ಮತ್ತು ಹೂರಗುತ್ತಿಗೆ ನೌಕರರಿಗೆ ಕಾಲಕಾಲಕ್ಕೆ ವೇತನವನ್ನು ನೀಡಲು ಅಗತ್ಯ ಕ್ರಮವಹಿಸುವುದು ಮತ್ತು ಇಲ್ಲಿವರೆಗೂ ಎಲ್ಲಾ ವರ್ಗದ ಎಲ್ಲಾ ಹಂತದ ನೌಕರರ ಬಾಕಿ ಇರುವ ವೇತನವನ್ನು ಪಾವತಿಸುವುದು. ಗುತ್ತಿಗೆ, ಹೊರಗುತ್ತಿಗೆ ನೌಕರರನ್ನು ಗೌರವದಿಂದ ಕಾಣುವುದು ಮತ್ತು ಎಜೆನ್ಸಿಯ ಬದಲಾವಣೆಯ ಹೆಸರಲ್ಲಿ ಅಥವಾ ವಾರ್ಷಿಕ ಸೇವೆ ಮುಂದುವರಿಸುವ ವಿಷಯದ ಹಾಗೂ ಇತರ ವಿಷಯದಲ್ಲಿ ಕಿರುಕುಳ ನೀಡುವುದನ್ನು ನಿಲ್ಲಿಸುವುದು. ಕೆಲಸದ ಸ್ಥಳದಲ್ಲಿ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಮಾಡುವ ಶೋಷಣೆಯನ್ನು ತಡೆಗಟ್ಟಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸುವ ಕುರಿತು ಒಪ್ಪಿಗೆ ಸೂಚಿಸಲಾಯಿತು ಎಂದು ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಸ್ವಾಮಿ ತಿಳಿಸಿದ್ದಾರೆ.
ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಸರ್ಕಾರಿ ರಜಾದಿನಗಳಂದು ಕರ್ತವ್ಯ ನಿರ್ವಹಿಸಿದ್ದಲ್ಲಿ ಆ ದಿನದ ಪರ್ಯಾಯ ರಜೆಯನ್ನು ಹಾಗೂ ವೇತನವನ್ನು ನೀಡಬೇಕು. ದಿನ ರಜೆ ಮತ್ತು ಇತರ ಸಾಮಾನ್ಯ ರಜಾ ದಿನಗಳನ್ನು ಕೆಲಸ ನಿರ್ವಹಿಸಿದ್ದನ್ನು ಒಳಗೊಂಡಂತೆ, ಮಹಿಳಾ ಸಿಬ್ಬಂದಿಗಳಿಗೆ ಗರ್ಭಪಾತ ಹಾಗೂ ಎಂ ಟಿ ಪಿ/ ಹೆರಿಗೆ ರಜೆ, ಹಾಗೂ ಪಿತೃತ್ವ ರಜೆಯನ್ನು ಕೆಲವು ನಿದರ್ಶನಗಳಲ್ಲಿ ನಿರಾಕರಿಸಲಾಗುತ್ತಿದೆ, ಇದನ್ನು ಸರಿಪಡಿಸಬೇಕು ಮತ್ತು ಈ 25 ಸಾಂದರ್ಭಿಕ ರಜೆ ನಿಗಧಿಪಡಿಸಿ ಆದೇಶ ನೀಡುವ ಕುರಿತು ಹಾಗೂ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ Employee Grievance Committee ಒಪ್ಪಿಗೆ ಮಾಡಲು ಸೂಚಿಸಲಾಯಿತು ಎಂದು ಹೇಳಿದ್ದಾರೆ.

ಸಮಾನ ಕೆಲಸಕ್ಕೆ ಸಮಾನ ವೇತನ, ಹೆಚ್ ಆರ್ ಪಾಲಿಸಿ ಹಾಗೂ 14 ಬೇಡಿಕೆಗಳಲ್ಲಿ ಉಳಿದ ಬೇಡಿಕೆಗಳನ್ನು ಕಾಲಮಿತಿಯೊಳಗೆ ಈಗಾಗಲೇ ರಚಿಸಿರುವ ಸಮಿತಿಯ ಮೂಲಕ ಪರಿಹರಿಸುವುದು ಎಂದು ಮಂಗಳವಾರ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ನಗರದದ ಖಾಸಗಿ ಹೋಟೆಲ್ ನಲ್ಲಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಿರಿಯ ಬಿಎಂಎಸ್ ಮುಖಂಡ ಎಸ್. ಡಿ ಕೆ ಸದಾಶಿವ್, ಬಿಎಂಎಸ್ ಪ್ರಧಾನ ಕಾರ್ಯದರ್ಶಿ ಎಸ್. ಸಿ.ವಿ ಲೋಕೇಶ್, ಕೆಎಸ್‌ಎಚ್‌ ಸಿಒಇಎ ಸಂಘದ ಅಧ್ಯಕ್ಷ ವಿಶ್ವಾರಾಧ್ಯ ಎಚ್,ಯಾಮೋಜಿ, ಪ್ರಧಾನ ಕಾರ್ಯದರ್ಶಿ ಎಸ್. ಶ್ರೀಕಾಂತ್ ಸ್ವಾಮಿ ಮತ್ತು ಎಲ್ಲಾ ರಾಜ್ಯ ಸಮಿತಿ ಪದಾಧಿಕಾರಿಗಳು, ಜಿಲ್ಲೆ. ಅಧ್ಯಕ್ಷರು ಮತ್ತು ಇತರ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

About the author

Adyot

Leave a Comment