ಆದ್ಯೋತ್ ಸುದ್ದಿನಿಧಿ:
ಯಕ್ಷಗಾನ ಬಡಗುತಿಟ್ಟಿನ ಖ್ಯಾತ ಕಲಾವಿದ ಹಡಿನಬಾಳು ಶ್ರೀಪಾದ ಹೆಗಡೆ (66) ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾರೆ.
ಇವರು ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಹಡಿನಬಾಳದವರು. ಇವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ.ಕಳೆದ ವರ್ಷ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು.
1953 ರಂದು ಜನಿಸಿದ ಶ್ರೀಪಾದ ಹೆಗಡೆ ಎಸ್‍ಎಸ್‍ಎಲ್‍ಸಿ ವರೆಗೆ ಶಿಕ್ಷಣ ಪಡೆದಿದ್ದರು. 1976,ರಲ್ಲಿ ಗುಂಡಬಾಳಾ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ನಡೆದ ಹರಿಕೆ ಬಯಲಾಟದ
ಮೂಲಕ ಯಕ್ಷಗಾನಕ್ಕೆ ಪ್ರವೇಶಿಸಿದ್ದರು.
ಆ ಬಳಿಕ ಇಡಗುಂಜಿ,ಸಾಲಿಗ್ರಾಮ,ಪೆರ್ಡೂರ,ಅಮೃತೇಶ್ವರಿ, ಹಿರೇಮಹಾಲಿಂಗೇಶ್ವರ ಮೇಳ, ಪಂಚಲಿಂಗೇಶ್ವರ ಮೇಳ ಶಿರಸಿ, ಪೆಲ, ಬಚ್ಚಗಾರು, ರಾಮನಾಥೇಶ್ವರ, ಮಂದಾರ್ತಿ, ಶಿರಸಿ ಮಾರಿಕಾಂಬ,ನೀಲಾವರ ಮೇಳದಲ್ಲಿ ಕಲಾ ಸೇವೆ ಸಲ್ಲಿಸಿದ್ದರು.
ಮಾರುತಿ ಪ್ರತಾಪ,ಲಂಕಾದಹನ ಯಕ್ಷಗಾನದ ಹನುಮಂತ,ಗದಾಯುದ್ದ ಭೀಮ ಇವರಿಗೆ ಹೆಸರು ತಂದುಕೊಟ್ಟ ಪಾತ್ರಗಳು ಕುಮಟಾ ಗೋವಿಂದ ನಾಯ್ಕ ನಂತರ ಹನುಮಂತನ ಪಾತ್ರಕ್ಕೆ ಜೀವತುಂಬಿದ್ದ ಕಲಾವಿದರಾಗಿದ್ದರು.
ನಾಯಕ-ಪ್ರತಿನಾಯಕ ಪಾತ್ರಕ್ಕೆ ಸೈ ಎನಿಸಿಕೊಂಡಿದ್ದ
ಹೆಗಡೆಯವರು ಹಾಸ್ಯಪಾತ್ರಗಳಾದ ಬ್ರಾಹ್ಮಣ, ಬಾಗಿಲದೂತ, ವನಪಾಲ, ಅಜ್ಜಿ, ಮಂಥರೆ, ಕಪ್ಪದದೂತ, ಕಾಶಿಮಾಣಿ, ಸ್ತ್ರೀಪಾತ್ರದಲ್ಲಿ ಚಿತ್ರಾಂಗದೆ, ಅಂಬೆ, ಬಣ್ಣದ ವೇಷದಲ್ಲಿ ಘೋರ ಶೂರ್ಪನಖಿ ಪಾತ್ರಗಳನ್ನೂ ಮಾಡುವ ಮೂಲಕ ಯಕ್ಷಗಾನದ ಆಲ್ ರೌಂಡರ್ ಎನಿಸಿಕೊಂಡಿದ್ದರು.
ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಸಂದಿವೆ.
ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಹಡಿನಬಾಳದಲ್ಲಿ ಮೃತರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.