ಹೊನ್ನೆಮರಡುವಿನಲ್ಲಿ ಪರಿಸರ ದಿನಾಚರಣೆ

ಆದ್ಯೋತ್ ಸುದ್ದಿನಿಧಿ:
ಶಿವಮೊಗ್ಗ ಜಿಲ್ಲೆಯ ತಾಳಗುಪ್ಪ ಸಮೀಪದ ಲಿಂಗನಮಕ್ಕಿ ಆಣೆಕಟ್ಟಿನ ಹಿನ್ನೀರು ಪ್ರದೇಶದ ಹೊನ್ನೆಮರಡುವಿನ ಸಾಹಸ ಸಮನ್ವಯ ಕೇಂದ್ರದಲ್ಲಿ ಶುಕ್ರವಾರ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಮಾಜಿಕ ಹೋರಾಟಗಾರ ಎಚ್.ಬಿ.ರಾಘವೇಂದ್ರ ಮಾತನಾಡಿ,ಆಧುನಿಕ ಭೋಗ ಭಾಗ್ಯಗಳಿಗಾಗಿ ನಾವು ಕೆಡಸಿದ ಭೂಮಿಯ ಸಹಜ ಪರಿಸರದ ಮರು ಪೂರಣದ ಅಗತ್ಯತೆಯನ್ನು ಕೊರೋನಾ ಕಾಲದ ಲಾಕ್‍ಡೌನ್ ಸ್ಪಷ್ಟಪಡಿಸಿದೆ.ಕಾರು,ಬಂಗಲೆ,ಅಗತ್ಯಕ್ಕಿಂತ ಹೆಚ್ಚು ಖರ್ಚುವೆಚ್ಚಗಳು ಮೊದಲಾದ ಮನುಷ್ಯನ ಲಾಲಸೆ ಭೂಮಿಯನ್ನು ವಿನಾಶದತ್ತ ಒಯ್ಯುತ್ತಿದೆ.ಲಾಕ್ ಡೌನ್ ಕಾಲದ ಒಂದೇ ತಿಂಗಳಲ್ಲಿ ಮಲಿನಗೊಂಡಿದ್ದ ಗಂಗಾ,ಯಮುನಾ ನದಿಗಳು ಸ್ವಚ್ಛವಾಗಿ ಹರಿದಿವೆ.ಕಲುಷಿತ ಗಾಳಿ ಪರಿಶುಧ್ಧಗೊಂಡಿದೆ. ಇದರಿಂದ ವರ್ಷದ ಒಂದು ತಿಂಗಳ ಕಾಲ ಎಲ್ಲಾ ಚಟುವಟಿಕೆಯನ್ನು ಸ್ಥಗಿತಗೊಳಿಸುವುದನ್ನು ಕಡ್ಡಾಯಗೊಳಿಸಿ ಪರಿಸರವನ್ನು ಶುಭ್ರಗೊಳಿಸುವ ಅನಿವಾರ್ಯತೆ ಎದ್ದು ಕಾಣುತ್ತಿದೆ ಎಂದ ಅವರು ನಾವು ಕೆಲಕಾಲ ಹಿಂದೆ ಸರಿಯದಿದ್ದರೆ ಮುಂದಿನ ತಲೆಮಾರಿಗೆ ರೋಗ ರುಜುನೆಗಳನ್ನಲ್ಲದೆ ಬೇರೇನನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಾಹಿತಿ ಗಂಗಾಧರ ಕೊಳಗಿಯವರ ನಿಸರ್ಗದೊಡನೆ ಒಡನಾಟದ ಅನುಭವದ ಯಾನ ಪುಸ್ತಕವನ್ನು ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ವಿತರಿಸಲಾಯಿತು.
ನಾರಿ ಶಕ್ತಿ ಪ್ರಶಸ್ತಿ ಪುರಸ್ಕೃತ ನೊಮಿಟೋ ಕಾಮದಾರ್, ಗಂಗಾಧರ ಕೊಳಗಿ,ರಾಘವೇಂದ್ರ ಶರ್ಮ, ಕನ್ಯಾಕುಮಾರಿ ಹೆಗಡೆ,ಕವಿತಾ,ನಾಗರತ್ನ,ಕ್ಷಿತಿಜ್‍ಸೇತು,ಮಹಮ್ಮದ್ ರಫೀ, ನಾಗರಾಜ,ಗಾಂಧೀಜಿ,ಮಹದೇವ ಮತ್ತಿತರರು ಹಾಜರಿದ್ದು ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಟ್ಟರು.
ಸಾಹಸ ಸಮನ್ವಯ ಕೇಂದ್ರ ನಿರ್ದೇಶಕ ಡಾ.ಎಸ್.ಎಲ್.ಎನ್.ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

About the author

Adyot

Leave a Comment