ಸಿದ್ದಾಪುರ : ಚುನಾವಣೆಯ ಪ್ರಚಾರದ ಸಂದರ್ಭಗಳಲ್ಲಿ ಹಾಗೂ ಏನಾದರೂ ಘಟನೆಗಳು ಸಂಭವಿಸಿದಾಗ ರಾಜಕಾರಣಿಗಳು ಅಥವಾ ರಾಜಕಾರಣಿಗಳಿಗೆ ಬಳಸಿದ ಪದಗಳು ಟ್ರೋಲ್ ಆಗೋದು ಇಂದಿನ ದಿನಗಳಲ್ಲಿ ಟ್ರೆಂಡ್ ಆಗಿದೆ. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ‘ಹೌದು ಹುಲಿಯಾ’ ಹಾಗೂ ‘ಮಿಣಿ ಮಿಣಿ ಪೌಡರ್’. ಆದ್ರೆ ಇವುಗಳನ್ನ ವ್ಯಾಪಾರಕ್ಕೆ ಬಳಸಿಕೊಂಡ್ರೆ ಹೇಗೆ!?
ಹೌದು.. ಇಂತಹುದೇ ಒಂದು ಕಾರ್ಯಕ್ಕೆ ಮುಂದಾಗಿದ್ದಾರೆ ಕಿರಣ್ ಅನ್ನೋ ಯುವಕ. ಸಿದ್ದಾಪುರದ ಕಡಕೇರಿಯ ಕಿರಣ್, ಬಿಳಗಿಯಲ್ಲಿ ನಡೆಯುತ್ತಿರೋ ಮಾರಿಕಾಂಬಾ ಜಾತ್ರೆಯಲ್ಲಿ ಅಂಗಡಿಯೊಂದನ್ನ ಹಾಕಿದ್ದಾರೆ. ವ್ಯಾಪಾರ ಚೆನ್ನಾಗಿ ಆಗ್ಲಿ ಎನ್ನುವ ಕಾರಣದಿಂದ ಟ್ರೆಂಡ್ ಆಗಿರೋ ‘ಹೌದು ಹುಲಿಯಾ’ ಡೈಲಾಗ್ ಅನ್ನ ತಮ್ಮ ಅಂಗಡಿಗೆ ಬಳಸಿ ‘ಹೌದು ಹುಲಿಯಾ ಫಾಸ್ಟ್ ಫುಡ್’ ಅಂತ ಇಟ್ಟಿದ್ದಾರೆ. ಕೆಲ ತಿಂಗಳುಗಳ ಹಿಂದೆ ಉಪಚುನಾವಣಾ ಪ್ರಚಾರದಲ್ಲಿ ಸಿದ್ಧರಾಮಯ್ಯಗೆ ವ್ಯಕ್ತಿಯೊಬ್ಬ ಬಳಸಿದ್ದ ಹೌದು ಹುಲಿಯಾ ಅನ್ನೋ ಪದ ಎಲ್ಲಿಲ್ಲದಂತೆ ಟ್ರೋಲ್ ಆಗಿತ್ತು. ಇದನ್ನೇ ವ್ಯಾಪಾರಕ್ಕೆ ಬಳಸುವ ಯೋಚನೆ ಮಾಡಿದ ಕಿರಣ್, ಅಂಗಡಿಗೆ ‘ಹೌದು ಹುಲಿಯಾ ಫಾಸ್ಟ್ ಫುಡ್’ ಅಂತ ಹೆಸರಿಟ್ಟು ಜಾತ್ರೆಗೆ ಬರೋ ಗ್ರಾಹಕರನ್ನು ಸೆಳೆಯೋ ಪ್ರಯತ್ನ ಮಾಡುತ್ತಿದ್ದಾರೆ. ವಿಭಿನ್ನ ಪ್ರಯತ್ನದ ಈ ಅಂಗಡಿ ಬಿಳಗಿ ಮಾರಿಕಾಂಬಾ ಜಾತ್ರೆಯಲ್ಲಿ ಜನರ ಗಮನ ಸೆಳೆಯುತ್ತಿದೆ.