ಹುಬ್ಬಳ್ಳಿಯಲ್ಲಿ ಚಿಗರೆ ಸಾರಿಗೆ ಉದ್ಘಾಟನೆ

ಹುಬ್ಬಳ್ಳಿ : ನಗರಗಳ ಸುಸ್ಥಿರ ಅಭಿವೃದ್ಧಿಗೆ ಹೆಚ್ ಡಿ ಬಿ ಆರ್ ಟಿ ಎಸ್ ನಂತಹ ಯೋಜನೆಗಳು ಪೂರಕ. ಹುಬ್ಬಳ್ಳಿ ಧಾರವಾಡ ಅವಳಿ ನಗರ ಸುಂದರವಾಗಲು ಇದು ವರದಾನವಾಗಲಿದೆ. ರಾಜ್ಯದ ಎಲ್ಲೆಡೆ ಇಂತಹ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಬೇಕು, ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಹತ್ತು ನಗರಗಳಿವೆ. ಅಭಿವೃದ್ಧಿ ಎಂಬುದು ಸುಸ್ಥಿರವಾಗಿರಬೇಕು. ಪರಿಸರ, ಮಾನವ ಆರೋಗ್ಯ, ವಿಶೇಷವಾಗಿ ಮಕ್ಕಳ ಭವಿಷ್ಯಕ್ಕೆ ಮಾರಕವಾಗದಂತೆ ರೂಪುಗೊಳ್ಳಬೇಕು. ಅಭಿವೃದ್ಧಿಯು ಜೀವನಮಟ್ಟದ ಸುಧಾರಣೆ ಆಧರಿಸಿರಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹೇಳಿದರು.

ಹೊಸೂರಿನ ರಾಯ್ಕರ್ ಮೈದಾನದಲ್ಲಿಂದು ಹುಬ್ಬಳ್ಳಿ ಧಾರವಾಡ ತ್ವರಿತ ಬಸ್ ಸಾರಿಗೆ ವ್ಯವಸ್ಥೆ (ಹೆಚ್.ಡಿ.ಬಿ.ಆರ್.ಟಿ.ಎಸ್) ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಹುಬ್ಬಳ್ಳಿ ಧಾರವಾಡ ಅವಳಿನಗರಗಳ ಮಧ್ಯೆ 22.5 ಕಿಲೋಮೀಟರ್ ಉದ್ದದ ಹೆಚ್.ಡಿ.ಬಿ.ಆರ್.ಟಿ.ಎಸ್ ಯೋಜನೆಯನ್ನು ಔಪಚಾರಿಕವಾಗಿ ಉದ್ಘಾಟಿಸಿರುವುದು ಸಂತಸ ತಂದಿದೆ. ಸುಸ್ಥಿರ ಮತ್ತು ಪರಿಸರ ಸ್ನೇಹಿ, ಕಡಿಮೆ ವೆಚ್ವದ ಸಾರಿಗೆ ವ್ಯವಸ್ಥೆ ಇದಾಗಿದೆ. ಎರಡನೇ ಹಂತದ ನಗರಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ಪೂರಕವಾಗಿದೆ. ಅಭಿವೃದ್ಧಿಯಲ್ಲಿ ಯಾವುದೇ ಒಬ್ಬ ವ್ಯಕ್ತಿ ಹಿಂದೆ ಬೀಳಬಾರದು ಎಂಬುದು ಸರ್ಕಾರದ ಆಶಯವಾಗಿದೆ. ಒತ್ತಡ ಮುಕ್ತ ನೆಮ್ಮದಿ ಬದುಕಿಗೆ ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಾಗಬೇಕು. ಪರಿಸರ ಮಾಲಿನ್ಯ ಅಧಿಕವಾದರೆ ನಮ್ಮ ಆರೋಗ್ಯ ಹದಗೆಟ್ಟು ಒತ್ತಡ ಹೆಚ್ಚಾಗುತ್ತಿದೆ. ಭಾರತ ಪರಿಸರ ಸಂರಕ್ಷಣೆ, ನೀರು, ನೈರ್ಮಲ್ಯ ನಿರ್ವಹಣೆಯಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದೆ ಎಂದರು.

ಉಪಮುಖ್ಯಮಂತ್ರಿ, ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ, ಸಾರಿಗೆ ಮತ್ತು ಕೃಷಿ ಸಚಿವ ಲಕ್ಷ್ಮಣ ಸವದಿ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಸಿ.ಎಂ.ನಿಂಬಣ್ಣವರ, ಶಂಕರ ಪಾಟೀಲ ಮುನೇನಕೊಪ್ಪ, ವಿಧಾನಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಎಸ್.ವಿ.ಸಂಕನೂರ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ವಾಕರಸಾಸಂ ಅಧ್ಯಕ್ಷ ವಿ.ಎಸ್.ಪಾಟೀಲ ಮತ್ತಿತರರು ವೇದಿಕೆಯಲ್ಲಿ ಇದ್ದರು.

About the author

Adyot

Leave a Comment