ನೀ ಚೆನ್ನಾಗಿ ಬರೆತೀಯಾ ಬರೀತಾ ಹೋಗು

(ಪತ್ರಕರ್ತ ರವಿ ಬೆಳೆಗೆರೆ ನಿಧನರಾಗಿ 15 ದಿನವಾಗುತ್ತ ಬಂದಿದೆ ಆದರೆ ಅವರ ನೆನಪು ಅವರ ಅಭಿಮಾನಿಗಳಲ್ಲಿ ಒಡನಾಟಮಾಡಿದವರಲ್ಲಿ ಅಜರಾಮರ. ಇಂತಹ ನೆನಪನ್ನು ಆದ್ಯೋತ್ ನ್ಯೂಸ್ ಓದುಗರೊಂದಿಗೆ ಹಂಚಿಕೊಂಡಿದ್ದಾರೆ ಧಾರವಾಡದ ಪ್ರಸನ್ನ ಕರ್ಪೂರ)

ನೀ ಚೆನ್ನಾಗಿ ಬರೀತಿಯಾ ಬರೀತಾ ಹೋಗು !
ಪ್ರಸನ್ನ ಕರ್ಪೂರ್
ನೀನು ಬರೀತಿಯಾ ಬರೀಬೇಕು. ನಿನಗೆ ಆ ಸಾಮರ್ಥ್ಯ ಇದೆ. ಬರೀತಾ ಹೋಗು. ಅದರಲ್ಲಿ ಸಿಗುವ ತೃಪ್ತಿ ಮತ್ತೊಂದರಲ್ಲಿ ಇಲ್ಲ. ಮುಂದೆ ನಿನಗೆ ಅದರ ಅನುಭವ ಆಗುತ್ತದೆ ಎಂದು ಪ್ರೋತ್ಸಾಹದ ಮಾತುಗಳ ಮೂಲಕ ನನ್ನಲ್ಲಿನ ಬರವಣಿಗೆ ತುಡಿತ ಹೆಚ್ಚಿಸಿದ್ದು ರವಿ ಬೆಳಗೆರೆ.
2016ರಲ್ಲಿ ನಾನು ನರಸಿಂಹ ಭಟ್ ಚಾಪಖಂಡ ಹಾಗೂ ಸಹೋದರ ಆದಿತ್ಯ ಪಾಂಡುರಂಗಿ ಜತೆಗೂಡಿ ಜೊಯಿಡಾದ ಬರಬೂಸಾದಲ್ಲಿರುವ ರವಿ ಅವರ ಬಂಗಲೆಗೆ ಹೋಗಿದ್ದೆ. ಬೆಳಗ್ಗೆ ಬೇಗನೇ ಹೋಗಿದ್ದೆವು. ಒಂದೆಡೆ ಇಂಗ್ಲಿಷ್ ಕಾದಂಬರಿಕಾರ ಮನೋಹರ ಮಳಗಾಂವಕರ್ ಅವರ ಬಂಗಲೆ ನೋಡುವ ತವಕ ಇನ್ನೊಂದೆಡೆ ಬಹುದಿನಗಳ ನಂತರ ರವಿ ಅವರ ಭೇಟಿಯಾಗುವ ಉದ್ದೇಶ.ಹೋಗುತ್ತಿದ್ದಂತೆ ಎದುರಾದ ಬಳ್ಳಾರಿಯ ಲಕ್ಷ್ಮೀ ಬನ್ನಿ ಅಪ್ಪಾಜಿ ಇನ್ನೂ ಏನೋ ಬರೀತಾ ಇದ್ದಾರೆ. ರಾತ್ರಿಯಿಡೀ ಮಲಗೇ ಇಲ್ಲ . ನೀವು ಬಂದಿರುವ ವಿಷಯ ತಿಳಿಸುವೆ ಎಂದಾಗ ನನಗೆ ಆಶ್ಚರ್ಯ ಮತ್ತು ಏನು ಬರೆಯುತ್ತಿದ್ದಾರೆ ಎನ್ನುವ ಕುತೂಹಲ. ಒಳಗೆ ಹೋಗಿ ಹೀಗೆ ಧಾರವಾಡದಿಂದ ಪ್ರಸನ್ನ ಮತ್ತು ಆದಿತ್ಯ ಅವರು ಬಂದಿದ್ದಾರೆ. ಜತೆಗೆ ನರಸಿಂಹನೂ ಇದ್ದಾರೆ ಅಂತ ಹೇಳಿದ ಲಕ್ಷ್ಮೀಗೆ ಕೂಡಲೇ ಒಳಗೆ ಕರೆದುಕೊಂಡು ಬಾ ಅವರನ್ನು. ಅವರು ನನ್ನ ಆತ್ಮೀಯರು ಎಂದು ಹೇಳಿದ್ದರು.

ಮುಂದೆ ನಾವು ಅವರ ಕೋಣೆ ಪ್ರವೇಶಿಸುತ್ತಿದ್ದಂತೆ ಬಾರಪಾ ಪ್ರಸನ್ನ, ಆದಿತ್ಯ ಏನ್ ಭಾಳ ದೂರ ಬಂದೀರಲ್ಲಾ? ಯಾಕ ನನ್ನ ನೆನಪಾತೋ ಅಥವಾ ಈ ಬಂಗಲೆ ನೋಡ ಬೇಕೆನಿಸತೋ ಅಂದರು.ನಾವು ಅದಕ್ಕೆ ಪ್ರತ್ಯುತ್ತರವಾಗಿ ಎರಡೂ ಅಂದೆವು. ಛೋಲೋ ಆತ ನೋಡಪಾ. ನನಗ ಬೆಂಗಳೂರಿಗಿಂತ ಇಲ್ಲೇ ಹೆಚ್ಚು ಬರವಣಿಗೆ ಸಾಗೋದು. ಪ್ರಶಾಂತ ವಾತಾವರಣ, ಮನೆ ಒಳಗೆ ಬೇಸರಾದಾಗ ಹೊರಗೆ ಗಿಡದ ಕೆಳಗೆ ಕುಳಿತುಕೊಳ್ಳುತ್ತೇನೆ.ಈ ಪರಿಸರದಲ್ಲೇ ಒಂದು ವಿಶಿಷ್ಟತೆ ಇದೆ. ಇಲ್ಲಿ ಹೊಳೆಯುವ ವಿಚಾರಗಳು ಅದ್ಭುತ. ಬಹುಶಃ ಮಳಗಾಂವಕರ್ ಅವರ ಬರೆಹದ ಶಕ್ತಿಯೇ ಈ ಪರಿಸರವಾಗಿತ್ತು. ಅವರು ಶಿಸ್ತಿನ ಮನುಷ್ಯ ನಾನು ಸ್ವಲ್ಪ ಸೋಮಾರಿ ಎಂದು ಹಾಸ್ಯ ಮಾಡಿದ್ದರು.

ಏ ಚಹಾ ತಗೊಂಬಾ ಅಂತ ಲಕ್ಷ್ಮೀಗೆ ಹೇಳಿದ್ದಲ್ಲದೇ ಮಧ್ಯಾಹ್ನ ಊಟಕ್ಕ ಏನಾದರೂ ಸ್ಪೇಶಲ್ ಮಾಡಿ ಎಂದು ಫರ್ಮಾನು ಹೊರಡಿಸಿದ್ದರು. ರಾತ್ರಿ ನಿದ್ದೆಯಾಗಿಲ್ಲ ಅನಿಸಿತ್ತೆ. ನೀವು ವಿಶ್ರಾಂತಿ ಪಡೆಯಿರಿ. ನಾವು ಒಂದಿಷ್ಟು ಬಂಗಲೆ ಸುತ್ತಿ ಬರ್ತೇವಿ ಎಂದೆವು. ರೆಸ್ಟ್ ಪ್ರಶ್ನೆಯೇ ಇಲ್ಲ. ಈ ಪುಸ್ತಕ ಮುಗಿವರೆಗೆ ನಾ ನಿದ್ದೆ ಮಾಡಲ್ಲ. ಇದು ನನ್ನನೆಚ್ಚಿನ ಪುಸ್ತಕ ಎಂದು ರೇಖಾಳ ಆತ್ಮಚರಿತ್ರೆ ಇಂಗ್ಲಿಷ ಅವತರಣಿಕೆ ತೋರಿಸಿದ್ರು. ಕಾಟ್ ಮೇಲೆ ಹರಿವಿರುವ ಹಾಳೆಗಳನ್ನು ನೋಡಿದರೆ ಬೆಳಗಾಗುವಷ್ಟರಲ್ಲಿ ಒಂದು ನೂರು ಪುಟಗಳಷ್ಟು ಬರೆದಾಗಿತ್ತು ಎನ್ನುವುದು ಸ್ಪಷ್ಟವಾಯಿತು. ಕುತೂಹಲಕ್ಕೆಂದು ಆ ಹಾಳೆ ಹಿಡಿದು ನೋಡಿದೆ. ಮುತ್ತಿಟ್ಟ ಹಾಗೆ ಇದ್ದವು ಅದರಲ್ಲಿನ ಅಕ್ಷರಗಳು. ಒಂದೇ ಒಂದು ಕಾಗುಣಿತ ಲೋಪಗಳು ಕಂಡು ಬರಲಿಲ್ಲ. ನಾನು ಆಸಕ್ತಿಯಿಂದ ಅದನ್ನು ಓದುತ್ತಿರುವುದನ್ನು ಗಮನಿಸಿದ ರವಿ ನನಗೆ ಇತ್ತೀಚೆಗೆ ಅದೇಕೋ ಆರೋಗ್ಯ ಅಷ್ಟೊಂದು ಸಾಥ್ ಕೊಡ್ತಾ ಇಲ್ಲಾ. ನೀನು ಇದನ್ನು ಮುಂದುವರಿಸುವೆಯಾ? ಎಂದು ಕೇಳಿದಾಗ ನನಗೆ ಆಶ್ಚರ್ಯ ಮತ್ತು ಭಯ ಎರಡೂ ಆಯಿತು. ನನ್ನನ್ನು ಟೆಸ್ಟ್ ಆಡಲು ಹೀಗೆ ಹೇಳುತ್ತಿದ್ದಾರೋ ಅಥವಾ ನಿಜವಾಗಲೂ ಅವರ ಅಸಹಾಯಕತೆಯೋ ಎಂಬ ಗೊಂದಲ ನನ್ನನ್ನು ಕಾಡಲು ಶುರು ಮಾಡಿತು. ನೀ ಹೂಂ ಅಂದರೆ ಇವತ್ತಿನಿಂದಲೇ ಮುಂದುವರಿಸು ನಾನು ರೆಸ್ಟ್ ಮಾಡುವೆ. ಹೆದರಬೇಡ. ನಾನಿರುವೆ ಎಂದಿದ್ದರು.

ಮುಂದೆ ಹಾಗೆ ಹರಟೆ ಲೋಕಾಭಿರಾಮ ಚರ್ಚೆ ನಡೆಯಿತು. ಅಂದ ಹಾಗೆ ದಾವೂದ ಇಬ್ರಾಹಿಂ ಬಗ್ಗೆ ಪುಸ್ತಕ ಬರೆಯಲು ಯೋಚಿಸಿದವ ನೀನೇ ತಾನೇ ಪ್ರಸನ್ನ.ಗೊತ್ತಪಾ ನನಗೆ ಮುಂಬೈನ ರೋಲಿ ಬುಕ್ಸನ ಪ್ರಕಾಶಕರು ನನಗೆ ಫೋನ್ ಮಾಡಿದ್ದರು ಎಂದರು. ನಾನು ಈ ಹಿಂದೆ ಮುಂಬೈನ ಖ್ಯಾತ ಕ್ರೈಂ ವರದಿಗಾರ ಬರೆದ ಮುಂಬೈ ಭೂಗತ ಜಗತ್ತಿನ ಸಮಗ್ರ ಮಾಹಿತಿಯುಳ್ಳ ಡೋಂಗ್ರಿ ಟು ದುಬೈ ಪುಸ್ತಕ ಓದಿದ್ದೆ. ಅದರಲ್ಲಿನ ರೋಚಕ ಸಂಗತಿ ಓದಿ ನಾನೇಕೆ ಇದನ್ನು ಕನ್ನಡದಲ್ಲಿ ಬರೆಯಬೇಕು ಎಂದುಕೊಂಡು ಪುಸ್ತಕದಲ್ಲಿದ್ದ ಪ್ರಕಾಶಕರ ಕಚೇರಿ ಫೋನ್ ನಂಬರ್ ನೋಡಿ ಕರೆ ಮಾಡಿದ್ದೆ. ಆಗ ಅವರು ನಿಮ್ಮ ಕರ್ನಾಟಕದವರೇ ರವಿ ಬೆಳಗೆರೆ ಎಂಬುವವರು ಈಗಾಗಲೇ ಅದನ್ನು ಮಾಡಿದ್ದಾರೆ ಎಂದಿದ್ದರು. ಈ ವಿಷಯ ರವಿ ಅವರ ಗಮನಕ್ಕೂ ಬಂದಿತ್ತು. ಆ ಮೇಲೆ ನಮ್ಮಿಬ್ಬರ ಭೇಟಿ ಅಥವಾ ಸಂಪರ್ಕ ಆಗಿರಲಿಲ್ಲ. ಆದರೆ ಈ ಭೇಟಿಯಲ್ಲಿ ಅದನ್ನು ನೆನಪಿಟ್ಟುಕೊಂಡು ರವಿ ನನಗೆ ಕೇಳಿದ್ದು ವಿಶೇಷವಾಗಿತ್ತು. ಸಂಜೆವರೆಗೆ ಅವರ ಜತೆಗಿದ್ದು ಒಟ್ಟಿಗೆ ಊಟ ಮಾಡಿ ಪತ್ರಿಕೋದ್ಯಮ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೆವು. ನನಗೆ ಅವರ ಬಾಯಲ್ಲಿ ಕೆಲ ರೋಚಕ ಸಂಗತಿಗಳನ್ನು ಕೇಳುವುದೆಂದರೆ ತುಂಬಾ ಖುಷಿ. ಅದು ಅವರು ಹೇಳುವ ರೀತಿ ಇರಬಹುದು ಅಥವಾ ಅವರಲ್ಲಿರುವ ಅಗಾಧ ಜ್ಞಾನ ನನ್ನನ್ನು ಅವರತ್ತ ಸೆಳೆದಿತ್ತು. ಅವರ ಬರವಣಿಗೆಯಲ್ಲಿನ ಅಕ್ಷರಗಳ ಜೋಡಣೆ, ಪದಗಳ ಬಳಕೆ, ಘಟನೆಗಳ ಹೋಲಿಕೆ ನೋಡಿ ನನಗೆ ಬೆರಗಾಗುತ್ತಿತ್ತು.ನಮಗೇಕೆ ಇದು ಅಸಾಧ್ಯ ಎದಾಗ. ಅಸಾಧ್ಯ ಯಾವುದೂ ಇಲ್ಲಪಾ ಬರಿತಾ ಹೋಗು. ನೋಡು ಎಂದು ಹುರುದುಂಬಿಸಿದ್ದರು. ಆ ಪ್ರೋತ್ಸಾಹದ ಫಲವಾಗಿ ನಾನು ಅವರ ಮತ್ತು ನೆಚ್ಚಿನ ಜೊಯಿಡಾ ಕಾಡು ಮತ್ತು ಅಲ್ಲಿನ ಬುಡಕಟ್ಟು ಜನರ ಬಗ್ಗೆ ಕಾಡ ಕಸ್ತೂರಿ ಎಂಬ ಟೈಟಲ್ ನಡಿ ಪುಸ್ತಕ ಬರೆದೆ. ಅಣ್ಣಾ ಇದಕ್ಕೆ ನೀವೇ ಮುನ್ನುಡಿ ಬರೀಬೇಕು ಎಂದಾಗ . ಜೊಯಿಡಾ ಕಾಡು ನನ್ನದು. ಅದರ ಬಗ್ಗೆ ಬರೆದ ಪುಸ್ತಕ ಎಂದರೆ ಮತ್ತೆ ನನ್ನ ಬಿಟ್ಟರೆ ಯಾರ ಬರೀತಾರೆ? ಮುನ್ನುಡಿಯೂ ನನ್ನದೇ. ಪುಸ್ತಕವನ್ನೂ ಅದೇ ಕಾಡಿನಲ್ಲಿ ನಾನೇ ಬಿಡುಗಡೆ ಮಾಡುವೆ ಎಂದಿದ್ದರು. ಅವರ ಆ ಕಾಡಿನ ವ್ಯಾಮೋಹ ನನ್ನ ಮೇಲೂ ಪ್ರಭಾವ ಬೀರಿದೆ. ಇನ್ನೇನು ಡಿಸೆಂಬರ್ ನಲ್ಲಿ ಪುಸ್ತಕ ಬಿಡುಗಡೆಗೆ ಯೋಚಿಸಿದ್ದೆ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಇಂದು ರವಿ ಸರ್ ನಮ್ಮೊಂದಿಗೆ ಭೌತಿಕವಾಗಿಲ್ಲ. ಆದರೆ ನೀನು ಬರೀತಾ ಹೋಗು. ನೀನು ಚೆನ್ನಾಗಿ ಬರೀತಿಯಾ ಎಂದು ಅವರು ಹೇಳಿದ ಮಾತು ಇಂದಿಗೂ ನನಗೆ ಪ್ರೇರಣಾಶಕ್ತಿಯಾಗಿವೆ. ನನಗೆ ಅಭಯ ನೀಡುತ್ತಿವೆ.

ಹೀಗೆ ನನ್ನ ಮತ್ತು ರವಿ ಬೆಳಗೆರೆ ಅವರ ಒಡನಾಟ ತುಂಬಾ ಆತ್ಮೀಯತೆ ಮತ್ತು ವೃತ್ತಿಪರತೆಯಿಂದ ಕೂಡಿತ್ತು. ಈಗ ಎರಡು ವರ್ಷದ ಹಿಂದೆ ಜೊಯಿಡಾದಿಂದ ಬೆಂಗಳೂರಿಗೆ ಹೋಗುವಾಗ ಅಸ್ವಸ್ಥರಾಗಿ ಧಾರವಾಡಕ್ಕೆ ಬಂದಿದ್ದರು. ಸಪ್ತಾಪುರದಲ್ಲಿನ ಸ್ಪಂದನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಡಾ. ರಾಜು ಧೂಳಪ್ಪನವರ ಚಿಕಿತ್ಸೆಯಿಂದ ಗುಣಮುಖರಾಗಿದ್ದರು. ನಮಗೆ ಗೊತ್ತಾಗುವುದು ಸ್ವಲ್ಪ ತಡವಾಗಿತ್ತು. ಎಲ್ಲಿ ಆ ಪ್ರಸನ್ನ ಬಂದೇ ಇಲ್ಲ ಎಂದು ಕರೆ ಮಾಡಿ ಕರೆಯಿಸಿಕೊಂಡಿದ್ದರು. ಅದೆಷ್ಟೋ ಬಾರಿ ಧಾರವಾಡಕ್ಕೆ ಬಂದಾಗೊಮ್ಮೆ ನನ್ನನ್ನು ಭೇಟಿಯಾಗಿದ್ದರು. ನನ್ನ ಮಕ್ಕಳು ಏಕ್ತಾ ಮತ್ತು ನಿತ್ಯಶ್ರೀ ಜತೆ ಹರಟೆ ಹೊಡೆದಿದ್ದರು.ನಿಮ್ಮಪ್ಪ ಬರೀ ಕಾಡಿಗೆ ಹೋಗ್ತಾನಿಲ್ಲೋ . ಬಿಡಬೇಡಿ ನೀವು ಆತನ ಬೆನ್ನತ್ತಿ ಹೋಗಿ ಎಂದು ಅವರಿಗೆ ಹೇಳುತ್ತಿದ್ದರು. ನಾನು ಧಾರವಾಡಕ್ಕೆ ಬರಲು ನಾಲ್ಕು ಜನ ಕಾರಣ.ಒಬ್ಬರು ಡಾ. ಆನಂದ ಪಾಂಡುರಂಗಿ ದಂಪತಿ, ಪ್ರೊ. ಅಶೋಕ ಶೆಟ್ಟರ್, ಡಾ. ರಾಜು ಧೂಳಪ್ಪನವರ ಮತ್ತು ನೀನು ಎಂದು ಕರೆ ಮಾಡಿದಾಗೊಮ್ಮೆ ಹೇಳುತ್ತಿದ್ದರು. ಸ್ವಲ್ಪ ಕೊರೊನಾ ಗದ್ದಲ ಕಡಿಮೆ ಆಗಲಿ. ಧಾರವಾಡಕ್ಕೆ ಬರುವೆ. ಜೊಯಿಡಾಕ್ಕೆ ಹೋಗೋಣ ಎಂದಿದ್ದರು.

About the author

Adyot

1 Comment

  • ಬರವಣಿಗೆಗೆ ಪ್ರೇರಣೆ ನೀಡಿದವರನ್ನು ಎಂದೂ ಮರೆಯಲು ಸಾಧ್ಯವಿಲ್ಲ..ನಿಮಗೆ ಶುಭವಾಗಲಿ ಪ್ರಸನ್ನ..

Leave a Comment