ಆದ್ಯೋತ್ ಸುದ್ದಿ ನಿಧಿ : ಶಿರಸಿಯ ಖ್ಯಾತ ಪ್ರಸೂತಿ ತಜ್ಞರಾದ ಡಾ. ಜಿ ಎಂ ಹೆಗಡೆ ಅವರ ಸಮಾಜ ಸೇವೆ ಹಾಗೂ ವೈದ್ಯಕೀಯ ಕ್ಷೇತ್ರ ಮತ್ತು ಭಾರತೀಯ ವೈದ್ಯಕೀಯ ಸಂಘಕ್ಕೆ ಅಪಾರ ಕೊಡುಗೆಯನ್ನು ಗುರುತಿಸಿ ಪ್ರಸಕ್ತ ಸಾಲಿನ “IMA – KSB DOCTORS DAY AWARD 2020” ಘೋಷಿಸಲಾಗಿದೆ.
ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆಯ ವೈದ್ಯ ದಿನಾಚರಣೆ ಅಂಗವಾಗಿ ಕೊಡಲ್ಪಡುವ ಪ್ರಶಸ್ತಿ ಇದಾಗಿದ್ದು, ಜುಲೈ1ರಂದು ಬೆಂಗಳೂರಿನ IMA ಹೌಸ್ ನಲ್ಲಿ ನಡೆಯುವ ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಡಾ. ಜಿ ಎಂ ಹೆಗಡೆಯವರು 1985 ರಲ್ಲಿ ಶಿರಸಿಯಲ್ಲಿ ತಮ್ಮ ವೈದ್ಯಕೀಯ ಸೇವೆಯನ್ನು ಪ್ರಾರಂಭ ಮಾಡಿ 37 ವರ್ಷಕ್ಕಿಂತಲೂ ಹೆಚ್ಚು ಸಮರ್ಪಿತ ಸೇವೆಯನ್ನು ನೀಡಿದ ಅನುಭವ ಹೊಂದಿದ್ದಾರೆ. ಭಾರತೀಯ ವೈದ್ಯಕೀಯ ಸಂಘ ಶಿರಸಿ ಶಾಖೆಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಎರಡು ಬಾರಿ ರಾಜ್ಯಪ್ರಶಸ್ತಿಯ ಗೌರವವನ್ನು ಶಾಖೆಗೆ ತಂದಿದ್ದಾರೆ.
ಅಲ್ಲದೇ ಶಿರಸಿಯ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಕಾನಮುಸ್ಕಿ ಫೌಂಡೇಶನ್, ಗಜಾನನ ಶರ್ಮಾ ಮೆಮೋರಿಯಲ್ ಟ್ರಸ್ಟ್ ಸಿರ್ಸಿ ಮತ್ತು ವಿವಿಧ ಟ್ರಸ್ಟ್‌ಗಳ ಮೂಲಕ ಆರೋಗ್ಯ, ಪರಿಸರ, ಕೃಷಿ, ಪ್ರಾಣಿಗಳ ಪಾಲನೆ, ನೀರು ಕೊಯ್ಲು ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಾಡಿದ ಸಮುದಾಯ ಸೇವೆ ಸಮಾಜವನ್ನು ಶ್ರೀಮಂತಗೊಳಿಸಿದೆ. ಸ್ವಂತ ಐಎಂಎ ಸಿರ್ಸಿ ಕಟ್ಟಡವನ್ನು ಹೊಂದುವ ಕನಸನ್ನು ನನಸಾಗಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.2019 ರ ಜುಲೈನಲ್ಲಿ ಉದ್ಘಾಟನೆಯಾದ ಭವ್ಯವಾದ ಸುವರ್ಣ ಸೌಧವನ್ನು ನಿರ್ಮಿಸುವಲ್ಲಿ ಅವರ ಶ್ರಮ ಬಹಳವಾಗಿದೆ. ಐಎಂಎಯಿಂದ ಸಾಮಾಜಿಕ ಸೇವೆಗೆ ಉತ್ತೇಜನ ನೀಡಲು ಅವರು 2019 ರಲ್ಲಿ ಐಎಂಎ ಸಿರ್ಸಿ ಸೇವಾ ಪ್ರತಿಷ್ಠಾನವನ್ನು ಸ್ಥಾಪಿಸಿ ಅಧ್ಯಕ್ಷರಾಗಿ ಸಮರ್ಪಿತ ಸೇವೆ ಸಲ್ಲಿಸುತ್ತಿದ್ದಾರೆ.
ಡಾ. ಜಿ ಎಮ್ ಹೆಗಡೆಯವರ ಸೇವೆ ನಿಜವಾಗಿಯೂ ಶ್ಲಾಘನೀಯ.