ಆದ್ಯೋತ್ ಸುದ್ದಿ ನಿಧಿ : ಮಧ್ಯಪ್ರದೇಶದಿಂದ ತವರಿಗೆ ನಿನ್ನೆ ಸಂಜೆ ಮರಳಿದ್ದ ಮುಂಡಗೋಡಿನ ಮಳಗಿಯ ನವೋದಯ ಶಾಲೆಯ ವಿದ್ಯಾರ್ಥಿಗಳನ್ನು ಸಚಿವ ಶಿವರಾಮ್ ಹೆಬ್ಬಾರ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಮಳಗಿಯಲ್ಲಿರುವ ಪಂಚವಟಿ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ಮಧ್ಯಪ್ರದೇಶಕ್ಕೆ ತೆರಳಿ ಲಾಕ್ ಡೌನ್ ಸಮಯದಲ್ಲಿ ಅಲ್ಲೇ ಸಿಲುಕಿ ಹಾಕಿಕೊಂಡಿದ್ದರು. ವಿಷಯ ತಿಳಿದ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ತಕ್ಷಣ ಅವರಿಗೆ ವಾಹನ ವ್ಯವಸ್ಥೆ ಮಾಡಿ ಜಿಲ್ಲೆಗೆ ಕರೆತರುವಲ್ಲಿ ಶ್ರಮಿಸಿದ್ದರು. ನಿನ್ನೆ ಸಂಜೆ ಎಲ್ಲಾ ವಿದ್ಯಾರ್ಥಿಗಳೂ ಸುರಕ್ಷಿತವಾಗಿ ಜಿಲ್ಲೆಗೆ ಬಂದು ತಲುಪಿದ್ದರು. ಇಂದು ಉಸ್ತುವಾರಿ ಸಚಿವರು ವಿದ್ಯಾರ್ಥಿಗಳು ತಂಗಿದ್ದ ನವೋದಯ ವಿದ್ಯಾಲಯಕ್ಕೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಅವರೊಂದಿಗೆ ಕೆಲ ಸಮಯವನ್ನು ಕಳೆದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮಕ್ಕಳು ಸುರಕ್ಷಿತವಾಗಿ ತಲುಪಲು ಕಾರಣ ಮುಖ್ಯಮಂತ್ರಿಗಳು ಹಾಗೂ ಕಾರ್ಯದರ್ಶಿಗಳು, ಜಿಲ್ಲಾಡಳಿತ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಂದು ಮಕ್ಕಳ ಆರೋಗ್ಯ ಪರೀಕ್ಷೆ ನಡೆಯಲಿದ್ದು, ಕೊರೊನಾ ಇಲ್ಲ ಅಂತ ಖಾತ್ರಿ ಮಾಡಿಕೊಂಡು ಅವರನ್ನು ಅವರವರ ಮನೆಗಳಿಗೆ ತಲುಪಿಸೋ ವ್ಯವಸ್ಥೆ ಮಾಡುತ್ತೇವೆ ಎಂದರು.