ಮಕ್ಕಳಿಗೆ ಸನಾತನ ಶಿಕ್ಷಣ ನೀಡುವುದು ಇಂದಿನ ಆದ್ಯತೆಯಾಗಬೇಕು

ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಶ್ರೀರಾಮಕ್ಷೇತ್ರ ಉಜಿರೆ ಅವರೊಂದಿಗೆ ಆದ್ಯೋತ್ ನ್ಯೂಸ್ ಸಂದರ್ಶನ

ಆದ್ಯೋತ್ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಸುಪ್ರಿಂಕೋರ್ಟ್ ಅನುಮತಿ ನೀಡಿರುವ ಬಗ್ಗೆ ಸ್ವಾಮೀಜಿಯವರ ಅಭಿಪ್ರಾಯ?

ಸ್ವಾಮೀಜಿ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎನ್ನುವುದು ಭಾರತೀಯರೆಲ್ಲರ ಆಶಯವಾಗಿತ್ತು.ನಮ್ಮ ಸನಾತನ ಧರ್ಮ ಯಾರನ್ನೂ ಹೀಗಳೆಯುವುದಿಲ್ಲ. ರಾಮಮಂದಿರ ನಿರ್ಮಾಣ ತಡವಾಗುತ್ತಿರುವುದಕ್ಕೆ ರಾಜಕಾರಣವೇ ಕಾರಣ ಹೊರತು ಧಾರ್ಮಿಕ ಕಾರಣವಲ್ಲ. ರಾಮಮಂದಿರ ನಿರ್ಮಾಣಕ್ಕೆ ಭಾರತದ ಮುಸಲ್ಮಾನರು ವಿರೋಧಿಸುವುದಿಲ್ಲ ಸಹಕರಿಸುತ್ತಾರೆ. ಆದರೆ ಇಲ್ಲಿಯ ರಾಜಕಾರಣಿಗಳು ಮುಸಲ್ಮಾನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ.

ಆದ್ಯೋತ್ : ಸನಾತನ ಶಿಕ್ಷಣದ ಬಗ್ಗೆ ಸ್ವಾಮೀಜಿಯವರು ಒತ್ತು ಕೊಡುತ್ತಿದ್ದಾರೆಯೇ?

ಸ್ವಾಮೀಜಿ : ಆಧ್ಯಾತ್ಮದಲ್ಲಿ ಬೆಳಕು ಚೆಲ್ಲುವ ಸನಾತನ ಶಿಕ್ಷಣವನ್ನು ಇಂದು ಮಕ್ಕಳಿಗೆ ನೀಡುವ ಅವಶ್ಯಕತೆ ಇದೆ ಇದರಿಂದ ಸಮಾಜದಲ್ಲಿ ನಡೆಯುತ್ತಿರುವ ಅಪರಾಧಗಳು ಕಡಿಮೆಯಾಗುತ್ತದೆ. ಆದರೆ ರಾಜಕಾರಣಿಗಳು ಇದನ್ನು ಕೇಸರೀಕರಣ ಎಂದು ಹೀಗಳೆಯುತ್ತಾರೆ. ನಮ್ಮ ಸನಾತನ ಪರಂಪರೆಯ ಬಗ್ಗೆ ನಮ್ಮ ಮಕ್ಕಳಿಗೆ ಅರಿವಿರಬೇಕು. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ವೇದಾಂತ, ಧಾರ್ಮಿಕ, ನೈತಿಕ ಶಿಕ್ಷಣವನ್ನು ನೀಡುವುದರ ಜೊತೆಗೆ ಆಧುನಿಕ ಶಿಕ್ಷಣವನ್ನು ನೀಡಲಾಗುತ್ತಿದೆ. ಯಾವುದೇ ಸಮಾಜದಲ್ಲಿ ಬದಲಾವಣೆಯಾಗಬೇಕೆಂದರೂ ಶಿಕ್ಷಣ ದೊರೆಯಬೇಕು.

ಆದ್ಯೋತ್ : ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಸ್ವಾಮೀಜಿಯವರು ಗೋಕರ್ಣದಲ್ಲಿ ಸನಾತನ ಶಿಕ್ಷಣವನ್ನು ನೀಡುವ ವಿಶ್ವವಿದ್ಯಾಲಯ ಸ್ಥಾಪಿಸುವ ಕಾರ್ಯಕ್ಕೆ ಮುಂದಾಗಿದ್ದಾರಲ್ಲ. ನಿಮ್ಮ ಸಹಮತವಿದೆಯೇ?

ಸ್ವಾಮೀಜಿ : ಇದೊಂದು ಉತ್ತಮ ಕಾರ್ಯವಾಗಿದೆ. ರಾಘವೇಶ್ವರ ಸ್ವಾಮೀಜಿಯವರಿಗೆ ನಮ್ಮ ಬೆಂಬಲವಿದೆ. ಇಂದಿನ ಸಮಾಜಕ್ಕೆ ಸನಾತನ ಶಿಕ್ಷಣದ ಅವಶ್ಯಕತೆ ಇದೆ. ನಮ್ಮ ಚಿಂತನೆಗೆ ಪೂರಕವಾಗಿರುವ ವಿಶ್ವವಿದ್ಯಾಲಯ ಇದಾಗಿದೆ. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಈ ತರಹದ ಶಿಕ್ಷಣ ನೀಡಲಾಗುತ್ತಿದೆ. ಒಟ್ಟಾರೆ ಭಾರತೀಯ ಸಂಸ್ಕೃತಿಯ ಶಿಕ್ಷಣ ನೀಡುವ ವ್ಯವಸ್ಥೆಯಾಗಬೇಕು. ಇದರಲ್ಲಿ ಭಾರತೀಯ ಇಸ್ಲಾಂ ಸಂಸ್ಕೃತಿಯ ವಿಷಯವಿದ್ದರೆ ತಪ್ಪಿಲ್ಲ. ಆಧ್ಯಾತ್ಮಿಕ ಶಿಕ್ಷಣ ನೀಡಲು ಹೋದರೆ ಒಂದು ವರ್ಗ ಆಕ್ಷೇಪಿಸುತ್ತದೆ. ದಾರಿ ತಪ್ಪಿಸುವ ಕೆಲಸ ಮಾಡಿತ್ತಿದ್ದೀರಿ ಎನ್ನುತ್ತಾರೆ.

ಆದ್ಯೋತ್ : ರಾಜ್ಯದ ಪ್ರಮುಖ ಸಮಾಜದಲ್ಲಿ ಒಂದಾಗಿರುವ ಈಡಿಗ ಸಮಾಜದ ಅಭಿವೃದ್ಧಿಯ ಬಗ್ಗೆ ಸ್ವಾಮೀಜಿಯವರು ಕೈಗೊಂಡ ಕ್ರಮವೇನು?

ಸ್ವಾಮೀಜಿ : ಸನ್ಯಾಸಿಗಳು ಯಾವುದೇ ಒಂದು ಸಮಾಜಕ್ಕೆ ಸೀಮಿತರಾಗಬಾರದು. ಸಮಸ್ತ ಮಾನವ ಕುಲವೂ ಅಭಿವೃದ್ಧಿಯಾಗಬೇಕು ಎಂಬ ಆಶಯವನ್ನು ಹೊಂದಿರಬೇಕು. ಗುರುಪೀಠದಲ್ಲಿ ಕುಳಿತಿರುವವರು ಆತ್ಮಜ್ಞಾನವನ್ನು ಪಡೆದಿರಬೇಕು. ಸನ್ಯಾಸಿಯಾದವನು ಸಮಗ್ರವಾಗಿ ಚಿಂತಿಸಿದಾಗ ಅಭಿವೃದ್ಧಿ ಸಾಧ್ಯವಾಗುತ್ತದೆ.

ಆದ್ಯೋತ್ : ಹಾಗಾದರೆ ಜಾತಿ ಸಂಘಟನೆ ತಪ್ಪೆ?

ಸ್ವಾಮೀಜಿ : ಜಾತಿ ಸಂಘಟನೆ ತಪ್ಪಲ್ಲ. ಆದರೆ ಅದರಲ್ಲಿ ರಾಜಕಾರಣ ಬರಬಾರದು. ನಮ್ಮ ಗುರುಪೀಠ ಈಡಿಗ ಸಮಾಜವೂ ಸೇರಿದಂತೆ ಎಲ್ಲಾ ದುರ್ಬಲ ವರ್ಗದ ಸಮಾಜವನ್ನು ಒಟ್ಟಾಗಿ ಸೇರಿಸಿ ಅಭಿವೃದ್ಧಿ ಮಾಡುವ ಸಂಕಲ್ಪವನ್ನು ಹೊಂದಿದೆ.

About the author

Adyot

Leave a Comment