ನಮ್ಮ ಪೂರ್ವಾಶ್ರಮವು ರೈತಕುಟುಂಬವೇ ಆಗಿತ್ತು–ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ

ಆದ್ಯೋತ್ ನ್ಯೂಸ್ ಜೊತೆ ಶ್ರೀ ರಾಘವೇಶ್ವರ ಸ್ವಾಮೀಜಿ ಸಂದರ್ಶನ

ಆದ್ಯೋತ: ಶ್ರೀಗಳ ಪೂರ್ವಾಶ್ರಮದಲ್ಲಿ ಗೋವಿನ ಜೊತೆಗೆ,ಪ್ರಾಣಿಗಳ ಜೊತೆಗೆ ಒಡನಾಟ ಹೇಗಿತ್ತು?

ಸ್ವಾಮೀಜಿ : ನಮ್ಮ ಪೂರ್ವಾಶ್ರಮವು ನಿಟ್ಟೂರು ಸಮೀಪದ ಗ್ರಾಮವಾಗಿದ್ದು ರೈತ ಕುಟುಂಬವೇ ಆಗಿತ್ತು ಹೀಗಾಗಿ ಗೋವು ಸೇರಿದಂತೆ ಎಲ್ಲಾ ಪ್ರಾಣಿಗಳ ಬಗ್ಗೆ ಪ್ರೀತಿ ಇದೆ. ಅದರಲ್ಲೂ ಗೋವಿನ ಬಗ್ಗೆ ವಿಶೇಷ ಪ್ರೀತಿ ಇದೆ.
ಒಮ್ಮೆ ಪುಣೆಯ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿರುವ ಒಂದು ಕರು ನಮ್ಮ ಗಮನ ಸೆಳೆಯಿತು ಅದು ನಮಗೆ ಬೇಕು ಎಂದು ಅಪೇಕ್ಷೆ ಪಟ್ಟಾಗ ಅದರ ಮಾಲಿಕರು ಸಂತೋಷದಿಂದಲೇ ಕೊಟ್ಟರು. ಅದೇ ಮಹಾನಂದಿ ಅಲ್ಲಿಂದಲೇ ಗೋಸ್ವರ್ಗದ ಕನಸು ಚಿಗುರೊಡೆದಿದ್ದು.

ಆದ್ಯೋತ: ಶ್ರೀಗಳಿಗೆ ಗೋಸ್ವರ್ಗದ ಕಲ್ಪನೆ ಮೂಡಿದ್ದು ಹೇಗೆ?

ಸ್ವಾಮೀಜಿ: ಈಗಾಗಲೇ ಮಠದ ವ್ಯಾಪ್ತಿಯಲ್ಲಿ 14 ಗೋಶಾಲೆಗಳಿವೆ. ಎಲ್ಲಾ ಗೋಶಾಲೆಗಳಲ್ಲಿ ಹಾಗೂ ರೈತರ ಮನೆಗಳಲ್ಲಿ ಗೋವುಗಳನ್ನು ಕಟ್ಟಿ ಸಾಕುವ ಪದ್ದತಿ ಇದೆ. ಇದು ಗೋವುಗಳ ಸ್ವಾತಂತ್ರ್ಯ ಹರಣ ಮಾಡಿದಂತೆ ಎನ್ನುವುದು ನಮ್ಮ ಮನಸ್ಸಿಗೆ ಅನಿಸುತ್ತಿತ್ತು. ಮನುಷ್ಯ ನೀಡಿದಾಗಷ್ಟೆ ಆವುಗಳಿಗೆ ನೀರು ಮತ್ತು ಆಹಾರ. ಇನ್ನು ಹಾಲಿನ ಡೇರಿಗಳು ಗೋವಿನ ಜೀವದ ಕುರಿತು ಕಾಳಜಿ ಹೊಂದಿರುವುದಿಲ್ಲ. ಅವು ನೀಡುವ ಹಾಲಿನ ಬಗ್ಗೆ ಮಾತ್ರ ಯೋಚನೆ ಮಾಡುತ್ತವೆ. ಈ ಡೇರಿ ಎನ್ನುವುದು ಗೋವಿನ ಶೋಷಣೆಯ ಕೇಂದ್ರವಾದರೆ ಗೋಶಾಲೆ ಎನ್ನುವುದು ವೃದ್ದಾಶ್ರಮದಂತೆ, ಇವೆರಡರ ಹೊರತಾಗಿರುವುದೆ ಗೋಸ್ವರ್ಗ. ಇಲ್ಲಿ ಗೋವಿಗೆ ಯಾವುದೇ ಬಂಧನವಿಲ್ಲ ಅವುಗಳಿಗೆ ಅವಶ್ಯಕವೆನಿಸಿದಾಗ ಮೇವು,ನೀರು ಸಿಗಬೇಕು. ವಿಶ್ರಾಂತಿ ಪಡೆಯಲು ನೆರಳು ಇರಬೇಕು. ಗೋಡೆಗಳಿಲ್ಲದ ಸ್ವಚ್ಛಂದ ಸಾಮ್ರಾಜ್ಯವೇ ಗೋಸ್ವರ್ಗ.

ಆದ್ಯೋತ: ಇಲ್ಲಿಯ ಗೋಸ್ವರ್ಗದಲ್ಲಿ ನಿಮ್ಮ ಉದ್ದೇಶ ಈಡೆರಿದೆಯಾ?

ಸ್ವಾಮೀಜಿ: ಸಾಕಷ್ಟು ಈಡೇರಿದೆ. ಇಲ್ಲಿ ಗೋವುಗಳಿಗೆ ಯಾವುದೇ ಬಂಧನವಿಲ್ಲ ಇಲ್ಲಿ ಶೇ.30ರಷ್ಟು ಮಾತ್ರ ಮೇಲ್ಛಾವಣಿ ಇದೆ ಉಳಿದ ಭಾಗ ಸೂರ್ಯ ರಷ್ಮಿಗೆ ತೆರೆದುಕೊಂಡಿದೆ. ಗೋವುಗಳಿಗೆ ಇಲ್ಲಿ ಮೇವು,ನೀರಿಗೆ ಕೊರತೆ ಇಲ್ಲ. ಗೋವಿನ ಹಾಲು ಕರುವಿಗೆ ಮೀಸಲು. ಇಲ್ಲಿ ಹಾಲು ಕರೆಯುವ ಪದ್ದತಿ ಇಲ್ಲ ಒಟ್ಟಾರೆ ಇದು ಗೋವಿನ ಸಾಮ್ರಾಜ್ಯ.

ಆದ್ಯೋತ: ಮುಂದಿನ ದಿನಗಳಲ್ಲಿ ಗೋವಿನ ಉತ್ಪನ್ನವನ್ನು ಮಾರಾಟ ಮಾಡುವ ವಾಣಿಜ್ಯ ಉದ್ದೇಶ ಏನಾದರೂ ಇದೆಯೇ?

ಸ್ವಾಮೀಜಿ: ಖಂಡಿತಾ ಇಲ್ಲ ಗೋವು ಮನುಷ್ಯನ ಜೀವನಾಡಿ. ಗೋವು ವಾಣಿಜ್ಯದ ಸರಕಲ್ಲ. ಆದರೆ ಗೋವಿನ ಹಲವು ಉತ್ಪನ್ನಗಳು ಮನುಷ್ಷನ ವಿವಿಧ ಅವಶ್ಯಕತೆಗಳಿಗೆ ಒದಗುತ್ತದೆ. ಗೋಮಯ ದಿಂದ ಗೊಬ್ಬರ, ಗೋಮೂತ್ರದಿಂದ ಔಷಧ ಹೀಗೆ ಗವ್ಯೋತ್ಪನ್ನಗಳಿಂದ ಒಂದಿಷ್ಟು ಆದಾಯ ದೊರಕುತ್ತದೆ ಮತ್ತು ಅದು ಗೋವಿಗೆ ಉಪಯೋಗಿಸಲ್ಪಡುತ್ತದೆ.

ಆದ್ಯೋತ: ಗೋವಿನ ಬಗ್ಗೆ, ಗೋಸ್ವರ್ಗದ ಬಗ್ಗೆ ಮುಂದಿನ ಕಾರ್ಯಸೂಚಿ ಏನು?

ಸ್ವಾಮೀಜಿ: ಈಗಾಗಲೆ ಗೋಸ್ವರ್ಗದಲ್ಲಿ ಗೋ ವೀಕ್ಷಣೆಗೆ ಆನುಕೂಲವಾಗುವ ಪಥಗಳು, ಸಪ್ತಸನ್ನಿಧಿ ಸರೋವರ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಲಾಗಿದೆ. ಮುಂದೆ ಅತ್ಯಾಧುನಿಕ ಪರಿಪೂರ್ಣವಾದ ಗೋಚಿಕಿತ್ಸಾಲಯ, ಗೋ ಉಪಾಸನೆ ಮಾಡಲು ಧ್ಯಾನ ಮಂದಿರ, ಗವ್ಯಾಧಾರಿತ ಆಯುರ್ವೇದ ಚಿಕಿತ್ಸಾಕೇಂದ್ರ, ಗೋವಿಗೆ ಸಂಬಂಧಿತ ವಿವಿಧ ಭಾಷೆ ಗ್ರಂಥಾಲಯ, ಗೋವಿಗೆ ಸಂಬಂಧಿಸಿದ ವಸ್ತುಗಳ ಸಂಗ್ರಹಾಲಯ, ಗೋವಿಗೆ ಸಂಬಂಧಿಸಿದ ಸಂಶೋಧನಾ ಕೇಂದ್ತ ಹೀಗೆ ಗೋವಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಹಾಗೂ ಗೋವಿಗೆ ಇನ್ನೂ ಹೆಚ್ಚಿನ ಅನುಕೂಲ ಕಲ್ಪಿಸುವ ಕಾರ್ಯಸೂಚಿಯನ್ನು ನಾವು ಹೊಂದಿದ್ದೇವೆ.

ವಿಶ್ವದಲ್ಲಿ ಹಾಗೂ ನಮ್ಮ ದೇಶದಲ್ಲಿ ವಿವಿಧ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ನಮ್ಮ ಜೀವಿತಾವಧಿಯಲ್ಲಿ ನಮ್ಮ ಉಪಯೋಗಕ್ಕೆ ಒದಗುವ ಗೋಮಾತೆಯನ್ನು ನಾವು ಮರೆಯುತ್ತಿದ್ದೇವೆ. ಸರಕಾರ ವರ್ಷದ ಒಂದು ದಿನವನ್ನು ಗೋದಿನವನ್ನಾಗಿ ಆಚರಿಸಬೇಕೆಂದು ಆಗ್ರಹಿಸುತ್ತೇನೆ‌. ಭಾನ್ಕುಳಿ ಮಠದ ಗೋಸ್ವರ್ಗದಲ್ಲಿ ಈ ವರ್ಷದ ಮಕರ ಸಂಕ್ರಮಣದ ದಿನವನ್ನು ಗೋದಿನವನ್ನಾಗಿ ಆಚರಿಸಲಾಗಿದೆ. ಇನ್ನು ಮುಂದೆ ಪ್ರತಿವರ್ಷವು ಗೋದಿನದ ಆಚರಣೆ ನಡೆಯುತ್ತದೆ : ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ

About the author

Adyot

4 Comments

  • ಬಾಯಿಬಡುಕ ಮನುಜ ಸೇವೆಗಿಂತ ಮೂಕ ಜೀವಿ ಗೋಸೇವೆ ಅತ್ಯಂತ ಶ್ರೇಷ್ಠ. ಅತ್ಯುತ್ತಮ ಕಾಯಕ.

  • ಧನ್ಯವಾದ ಗಳು ಗೋಪಾಲ ನಾಯ್ಕರೆ
    ಗಣೇಶ ಭಟ್ಟ

  • ಅಭಿನಂದನೆಗಳು. ಅದ್ಯೋತ್ ನ್ಯೂಸ್ ಚಾನೆಲ್ ಉತ್ತಮವಾಗಿ ಮೂಡಿ ಬರಲಿ

Leave a Comment