ಆದ್ಯೋತ್ ಸುದ್ದಿನಿಧಿ:
ಕುಣಬಿ ಜನಾಂಗದ ಚಿತ್ರಣವಿರುವ, ಪ್ರಸನ್ನಕರ್ಪೂರ ರಚಿಸಿರುವ
ಕಾಡಕಸ್ತೂರಿ ಕೃತಿ ರವಿವಾರ ಬಿಡುಗಡೆಗೊಂಡಿತು.
ಉತ್ತರಕನ್ನಡ ಜಿಲ್ಲೆಯಲ್ಲಿ ಜೊಯಿಡಾ ಕುಂಬರವಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಕುಣಬಿ ಸಮಾಜ ಅಭಿವೃದ್ದಿ ಸಂಘ ಹಾಗೂ ಸನ್ ಫಾರ್ಮ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ
ಕಾಡಕಸ್ತೂರಿ ಕೃತಿ ಬಿಡುಗಡೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಮತ್ತು ಅನುಸೂಚಿತ ಬುಡಕಟ್ಟು ಆಯೋಗದ ಅಧ್ಯಕ್ಷ ನೆಹರೂ ಓಲೇಕಾರ,ಸಾವಿರಾರು ವರ್ಷಗಳಿಂದ ಅರಣ್ಯ ಸಂರಕ್ಷಣೆ ಮಾಡುತ್ತ ಬಂದಿರುವ ಕುಣಬಿ ಜನಾಂಗವನ್ನು ಎಸ್ಟಿ ಪಂಗಡಕ್ಕೆ ಸೇರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕೆ ಎಲ್ಲ ಪ್ರಯತ್ನ ಮಾಡಲಾಗುವುದು.ಕಾಡಿನ ಮಧ್ಯೆ ಇದ್ದುಕೊಂಡು ಜೀವನ ಸಾಗಿಸುತ್ತಿರುವ ಈ ಅಪರೂಪದ ಜನಾಂಗದ ನೋವು ನಲಿವು ಬದುಕು ಬವಣೆಯ ಚಿತ್ರಣ ಕಟ್ಟಿಕೊಟ್ಟಿರುವ ಕಾಡಕಸ್ತೂರಿ ಕೃತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನೊಬ್ಬ ಅತಿಥಿ ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಉದಪುಡಿ ಮಾತನಾಡಿ, ಅರಣ್ಯವಾಸಿಗಳ ಜತೆ ಒಡನಾಟದ ಅನುಭವಜನ್ಯ ಕೃತಿ ಕಾಡ ಕಸ್ತೂರಿಯಾಗಿದೆ. ಒಂದು ಜನಾಂಗದ ಸಮಗ್ರ ಚಿತ್ರಣ ಬಿಂಬಿಸುವಲ್ಲಿ ಕೃತಿಕಾರ ಇಲ್ಲಿ ಯಶಸ್ವಿಯಾಗಿದ್ದಾರೆ.ಇದರಲ್ಲಿನ ಅಂಶಗಳು ಕುಣಬಿಗಳ ನ್ಯಾಯಯುತ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಪೂರಕವಾಗಲಿದೆ ಎಂದರು.
ಕೃತಿ ಪರಿಚಯಿಸಿದ ಡಾ. ಮಹಾಂತೇಶ ಬಿರಾದಾರ ಇದೊಂದು ಅತ್ಯುತ್ತಮ ಸಂಶೋಧನಾ ಹಾಗೂ ನಿಸರ್ಗ ಸೊಬಗಿನ ನೈಜ ವರ್ಣನೆ ಹೊಂದಿರುವ ಅಪರೂಪದ ಕೃತಿ ಎಂದರು. ಬುಡಕಟ್ಟು ಜನಾಂಗದ ಮೂಲದಿಂದ ಹಿಡಿದು ಅವರ ಸಂಸ್ಕತಿ ಸಂಪ್ರದಾಯ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ವ್ಯವಸ್ಥೆಯ ಸಮಗ್ರ ಪರಿಚಯ ಕೃತಿಯಲ್ಲಿದೆ. ಕೃತಿ ಓದುತ್ತಾ ಸಾಗಿದಂತೆ ಡೇರಿಯಾ ಎಂಬ ಮನಮೋಹಕ ಗ್ರಾಮದ ವಾಸ್ತವ್ಯದ ಅನುಭವ ಆಗುತ್ತದೆ. ಈ ಓದಿನಿಂದ ಕಣ್ಣೆದುರು ಇಡೀ ಕಾಡಿನ ಚಿತ್ರಣ ಕಣ್ಣೆದುರು ಬಿಂಬಿತವಾಗುತ್ತದೆ ಎಂದರು.
ಡಾ. ಆನಂದ ಪಾಂಡುರಂಗಿ ಮಾತನಾಡಿ, ಹಿಂದುಳಿದ ತಾಲೂಕು ಜೊಯಿಡಾದ ಜನರ ಆರೋಗ್ಯ ವರ್ಧನೆ ಹಾಗೂ ಸಮಸ್ಯೆಗಳ ಪರಿಹಾರ ನಿಟ್ಟಿನಲ್ಲಿ ಉಚಿತ ತಪಾಸಣಾ ಶಿಬಿರಗಳನ್ನು ನಿರಂತರ ಆಯೋಜಿಸಲಾಗುವುದು. ಆರೋಗ್ಯ, ಶಿಕ್ಷಣ ಇವೆರೆಡು ಇಲ್ಲಿನ ಭಾಗಕ್ಕೆ ಅತ್ಯವಶ್ಯವಾಗಿದ್ದು, ಪ್ರಕೃತಿ ಹಾಗೂ ಅನನ್ಯ ಸಾಂಸ್ಕತಿಕ ಸಿರಿವಂತಿಕೆಯ ಈ ಪ್ರದೇಶ ನಾಡಿನ ಹೆಮ್ಮೆ ಎಂದರು.
ಇದೇ ವೇಳೆ ಜೊಯಿಡಾ ತಾಲೂಕು ಕಣಬಿ ಸಮಾಜ ಅಭಿವೃದ್ಧಿ ಸಂಘದ ವತಿಯಿಂದ ಡಾ. ಜಯಾನಂದ ಡೇರೇಕರ್ ನೇತೃತ್ವದಲ್ಲಿ ಶಾಸಕ ನೆಹರೂ ಓಲೇಕಾರ ಅವರಿಗೆ ಮನವಿ ಸಲ್ಲಿಸಲಾಯಿತು.
ನಂತರ ಶಿಬಿರದಲ್ಲಿ 109ಕ್ಕೂ ಹೆಚ್ಚು ಜನರ ಆರೊಗ್ಯ ಉಚಿತ ತಪಾಸಣೆ ಹಾಗೂ ಔಷಧ ವಿತರಣೆ ನಡೆಯಿತು. ತಜ್ಞ ವೈದ್ಯರಾದ ಡಾ. ಮನೋಜ ಭುಟ್ಟೆ, ಡಾ. ದತ್ತಾತ್ರೇಯ ಜಲ್ದೆ, ಡಾ. ಶರತ್ ವಿಜಾಪುರ, ಡಾ. ಆದಿತ್ಯ ಪಾಂಡುರಂಗಿ, ಡಾ.ಸ್ವಪ್ನಾ ಪಾಂಡುರಂಗಿ ಬಾಗವಹಿಸಿದ್ದರು.
ಗ್ರಾಪಂ ನೂತನ ಅಧ್ಯಕ್ಷೆ ವಿಜಯಲಕ್ಷ್ಮೀ ಡೇರೇಕರ್ ಅಧ್ಯಕ್ಷತೆ ವಹಿಸಿದ್ದರು.
ಎಸಿಎಫ್ ಶಿವಾನಂದ ತೋಡ್ಕರ್, ಎಸ್.ಎಸ್.ನಿಂಗಾಣಿ, ಮಹಾಂತೇಶ ಪಾಟೀಲ, ಸಂತೋಷ ಸೋನವಾಲ್ಕರ್, ಶಂಕ್ರಯ್ಯ ಶಾಸ್ತ್ರಿಗಳು, ಮಲ್ಲೇಶಪ್ಪ ಹೊರಪೇಟಿ, ಡಾ. ಮಹಾಂತೇಶ ಬಿರಾದಾರ, ರವಿಶಂಕರ ಡೇರೇಕರ್, ಯೋಗೇಶ ಡೇರೇಕರ್, ಚಂದ್ರಕಾಂತ ಶೆಟ್ಟಿ, ಪ್ರಕಾಶ ದಾಸನೂರ, ನಿರಂಜನ ಪಾಟೀಲ, ಮಲ್ಲೇಶ ಕಲ್ಯಾಣಿ, ಗುರುಶಾಂತ ಕಾಪಸೆ, ವೀರೇಶರೆಡ್ಡಿ ಪಾಟೀಲ, ಬಸವರಾಜ ಸೀಳಿನ್, ಶಿವನಗೌಡ ಪಾಟೀಲ,ಸಂಗಮೇಶ ಪಡನಾಡ, ಪ್ರಕಾಶ ಸೋನವಾಲ್ಕರ್,ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪ್ರಸನ್ನ ಕರ್ಪೂರ ಸ್ವಾಗತಿಸಿದರು. ಜಯಾನಂದ ಡೇರೇಕರ್ ವಂದಿಸಿದರು.