ಸಿದ್ದಾಪುರ : ಕರ್ನಾಟಕದ ರಾಜರಾಜೇಶ್ವರಿ, ಕನ್ನಡತಾಯಿ ಭುವನೇಶ್ವರಿ ನೆಲೆಸಿರೋ ತಾಣ ಹಾಗೂ ಭುವನೇಶ್ವರಿ ತಾಯಿಗೆ ನಿತ್ಯತ್ರಿಕಾಲಪೂಜೆ ನಡೆಯೋ ಪಾವನ ಪುಣ್ಯಭೂಮಿಯೇ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿ.
ಸಿದ್ದಾಪುರ ಕುಮಟಾ ರಾಜ್ಯ ಹೆದ್ದಾರಿಯಲ್ಲಿ ಸುಮಾರು 8 ಕಿಲೋಮೀಟರ್ ದೂರ ಸಾಗಿ 300 ಮೀಟರ್ ಎತ್ತರದಲ್ಲಿರೋ ಸುತ್ತಲೂ ನಿತ್ಯ ಹರಿದ್ವರ್ಣಗಳಿಂದ ತುಂಬಿರೋ ಪ್ರದೇಶವನ್ನ ತಲುಪಿದಾಗ ಭುವನೇಶ್ವರಿ ತಾಯಿಯ ದೇಗುಲ ಕಾಣಸಿಗುತ್ತದೆ. ದೇಗುಲದ ಎದುರು ಮೊದಲು ಕಾಣಸಿಗೋ ನಂದಿಧ್ವಜ ಸ್ತಂಭ ದೇಗುಲದ ಸುಂದರತೆಯನ್ನ ಎತ್ತಿ ಹೇಳುತ್ತೆ. ಒಳಗಡೆ ಸಾಗಿದಾಗ ಕಾಣುವುದೇ ಕಲ್ಲಿನ ಗರ್ಭಗುಡಿಯಲ್ಲಿ ವಿರಾಜಮಾನಳಾಗಿರೋ ಕನ್ನಡದ ಅಧಿದೇವತೆ ತಾಯಿ ಭುವನೇಶ್ವರಿ. ದೇವಾಲಯದ ಗರ್ಭಗುಡಿಯಲ್ಲಿ ಕದಂಬರ ಕಾಲದ ಕಲೆಯನ್ನ ಪರಿಚಯಿಸುವ ಅನೇಕ ಕೆತ್ತನೆಗಳಿವೆ. ದೇಗುಲದ ಕಲ್ಲಿನ ಕಂಬಗಳ ಕೆತ್ತನೆ ಶಿಲ್ಪಿಯ ಚಾಕಚಕ್ಯತೆಯ ಕಲೆಯನ್ನ ಎತ್ತಿ ತೋರಿಸುವಂತಿದೆ. ದೇಗುಲದ ಅಕ್ಕ ಪಕ್ಕಗಳಲ್ಲಿ ಶಿವ ಹಾಗೂ ವಿಷ್ಣುವಿನ ಗುಡಿಗಳಿವೆ. ದೇವಾಲಯದ ಬಲಭಾಗದಲ್ಲಿ 350 ಮೆಟ್ಟಿಲುಗಳನ್ನು ಇಳಿದರೆ ಸುಂದರವಾದ ಕಲ್ಯಾಣಿ ಕಾಣಸಿಗುತ್ತದೆ. ದೇವಿಗೆ ದಿನಂಪ್ರತಿ ಕಲ್ಯಾಣಿಯ ನೀರಿನಿಂದಲೇ ಅಭಿಷೇಕ ಮಾಡಲಾಗುತ್ತದೆ. ಪ್ರವಾಸಿಗರಿಗೆ ಅನುಕೂಲವಾಗಲೆಂದು ಯಾತ್ರಿ ನಿವಾಸವನ್ನ ಕೂಡ ನಿರ್ಮಿಸಲಾಗಿದೆ.
ದೇವಾಲಯದ ಇತಿಹಾಸ –
ಈ ದೇವಾಲಯವು 1692ರಲ್ಲಿ ಬಿಳಗಿ ಸಾಮ್ರಾಜ್ಯದ ಅರಸ ಬಸವೆಂದ್ರ ನಿಂದ ನಿರ್ಮಾಣಗೊಂಡಿದೆ. ಬಿಳಗಿ ಸಾಮ್ರಾಜ್ಯವು ಗಂಗಾವಳಿ ತೀರದಿಂದ ಉಡುಪಿಯ ಗಂಗೊಳ್ಳಿ ತೀರದವರೆಗೆ ಹಬ್ಬಿತ್ತು. ಬಿಳಗಿಯ ಅರಸರು ಕನ್ನಡದ ಆರಾಧಕರು ಹಾಗೂ ಕನ್ನಡವನ್ನ ಪ್ರೀತಿಸುವವವರು ಆಗಿದ್ದರಿಂದ ಕನ್ನಡ ತಾಯಿಗಾಗಿ ಒಂದು ಆಲಯವನ್ನು ನಿರ್ಮಿಸಬೇಕೆಂಬ ಸಂಕಲ್ಪದಿಂದ ಭುವನಗಿರಿಯಲ್ಲಿ ದೇಗುಲವನ್ನ ನಿರ್ಮಿಸಿದರು. ಅಂದಿನಿಂದ ಇಂದಿನವರಿಗೂ ಕೂಡ ತಾಯಿ ಭುವನೇಶ್ವರಿಗೆ ನಿತ್ಯ ತ್ರಿಕಾಲ ಪೂಜೆ ಸಲ್ಲೋ ಏಕೈಕ ದೇಗುಲವಿದು.
ಹಾಗಿದ್ರೆ ದೇವಾಲಯಕ್ಕೆ ಬರೋದು ಹೇಗೆ?
ರಸ್ತೆ ಮಾರ್ಗ – ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ಕುಮಟಾ ರಾಜ್ಯ ಹೆದ್ದಾರಿಯಲ್ಲಿ ಸುಮಾರು 8 ಕಿಲೋಮೀಟರ್ ಕ್ರಮಿಸಿ ಅಲ್ಲಿಂದ 1 ಕಿಲೋಮೀಟರ್ ನಷ್ಟು ಕಡಿದಾದ ರಸ್ತೆಯಲ್ಲಿ ಸಾಗಬೇಕು.
ರೈಲು ಮಾರ್ಗ – ಬೆಂಗಳೂರಿನಿಂದ ತಾಳಗುಪ್ಪ ರೈಲಿಗೆ ಬಂದು, ತಾಳಗುಪ್ಪದಿಂದ ಸಿದ್ದಾಪುರಕ್ಕೆ ಬಸ್ ನಲ್ಲಿ ಬರಬಹುದು.