ಆದ್ಯೋತ್ ಸುದ್ದಿನಿಧಿ:
2020-21ನೇ ಸಾಲಿನ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್(ಸಿವಿಲ್)(ವಿಭಾಗ-1) ಹಾಗೂ ಕಿರಿಯ ಸಹಾಯಕ ಇಂಜಿನಿಯರ್(ಸಿವಿಲ್) ಹುದ್ದೆಯ ನೇಮಕಾತಿಯ ಪರೀಕ್ಷಾ ಕೇಂದ್ರವನ್ನು ಉತ್ತರಕನ್ನಡ ಜಿಲ್ಲೆಯಲ್ಲಿಯೂ ಆರಂಭಿಸುವಂತೆ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್. ನಾಯ್ಕ,ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿ, ಪರೀಕ್ಷಾ ಕೇಂದ್ರ ತೆರೆಯಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸೂಚನೆ ನೀಡಿದ್ದಾರೆ.
ನೇಮಕಾತಿ ಪ್ರಕ್ರಿಯೆಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ನವೆಂಬರ್ ತಿಂಗಳಲ್ಲಿ ನಡೆಸಲು ಕರ್ನಾಟಕ ಲೋಕಸೇವಾ ಆಯೋಗ ತಿರ್ಮಾನಿಸಿ ರಾಜ್ಯದಲ್ಲಿ ಒಟ್ಟು 5 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಿತ್ತು.
ಉತ್ತರಕನ್ನಡ ಜಿಲ್ಲೆಯಲ್ಲಿ ಸುಮಾರು 1500ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷಾರ್ಥಿಗಳಿದ್ದು ಜಿಲ್ಲೆಯಲ್ಲಿ ಯಾವುದೇ ಪರೀಕ್ಷಾ ಕೇಂದ್ರ ನಿಗದಿಪಡಿಸಲಾಗಿಲ್ಲ. ಇದರಿಂದಾಗಿ ಪರೀಕ್ಷಾರ್ಥಿಗಳು ಸುಮಾರು 200 ಕಿ.ಮೀ. ದೂರದ ಬೆಳಗಾವಿ ಜಿಲ್ಲೆಗೆ ತೆರಳಬೇಕಾದ ಅನಿವಾರ್ಯತೆ ಇತ್ತು. ಅಲ್ಲದೇ, ಕೋವಿಡ್-19ರ ಸೋಂಕು ಎಲ್ಲೆಡೆ ಹೆಚ್ಚಾಗಿರುವುದರಿಂದ ಪರೀಕ್ಷಾರ್ಥಿಗಳು ಬೆಳಗಾವಿ ಜಿಲ್ಲೆಗೆ ತೆರಳಿ ಪರೀಕ್ಷೆ ಎದುರಿಸಲು ಮುಂಚಿನ ದಿನವೇ ತೆರಳಬೇಕಾಗಿದ್ದು ಇದು ಪರೀಕ್ಷಾರ್ಥಿಗಳ ಪಾಲಕರಲ್ಲಿ ಚಿಂತೆಗೀಡು ಮಾಡಿತ್ತು. ಕೋವಿಡ್-19ರ ಸೋಂಕಿನ ಭಯದಿಂದ ಹಲವು ಪರೀಕ್ಷಾರ್ಥಿಗಳು ಪರೀಕ್ಷೆಯಿಂದ ಗೈರು ಆಗುವ ಸಂಭವವಿತ್ತು. ಹೀಗಾಗಿ, ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರವನ್ನು ತೆರೆಯುವಂತೆ ಕರ್ನಾಟಕ ಲೋಕಸೇವಾ ಆಯೋಗ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ನಿರ್ದೇಶನ ನೀಡುವಂತೆ ಶಾಸಕರು ಮುಖ್ಯಮಂತ್ರಿ ಅವರಿಗೆ ಮನವಿಯನ್ನು ಸಲ್ಲಿಸಿದ್ದರು.
ಮನವಿಗೆ ಸ್ಪಂಧಿಸಿದ ಮುಖ್ಯಮಂತ್ರಿಗಳು ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಕಾರವಾರದಲ್ಲಿ ಪರೀಕ್ಷಾ ಕೇಂದ್ರ ತೆರೆಯುಂತೆ ಸೂಚನೆ ನೀಡಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದಶಿಗಳು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗಳಿಗೆ ಪತ್ರ ಬರೆದು “ಉತ್ತರಕನ್ನಡ ಜಿಲ್ಲೆಯಲ್ಲಿಯೂ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್(ಸಿವಿಲ್)(ವಿಭಾಗ-1) ಹಾಗೂ ಕಿರಿಯ ಸಹಾಯಕ ಇಂಜಿನಿಯರ್(ಸಿವಿಲ್) ಹುದ್ದೆಯ ನೇಮಕಾತಿಯ ಪರೀಕ್ಷಾ ಕೇಂದ್ರ ತೆರೆಯಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಧನ್ಯವಾದಗಳು ಮಾನ್ಯ ಶಾಸಕರಿಗೆ. ,🙏