ವಿಶ್ವದ ವಿಸ್ಮಯದ ಏಕೈಕ ಕಾಡು ಕತ್ತಲೆಕಾನು
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ವಿಶಾಲವಾದ ಅರಣ್ಯ ಪ್ರದೇಶವನ್ನು ಹೊಂದಿರುವ ತಾಲೂಕು,ಪಶ್ಚಿಮ ಘಟ್ಟದ ಪ್ರಮುಖ ಅರಣ್ಯವೂ ಇಲ್ಲೆ ಇರುವುದು.ಇಂತಹ ಅಪರೂಪದ ಅರಣ್ಯ ಪ್ರದೇಶ ಕತ್ತಲೆಕಾನು
ವಿಶ್ವದಲ್ಲೆ ವಿಶೇಷವಾದ ವಿರಳ ತಳಿಗಳ ಆಶ್ರಯತಾಣ ಈ ಕಾಡು. ಜಿಲ್ಲೆಯ ಹಾಗೂ ಪಕ್ಕದ ಜಿಲ್ಲೆಗಳಲ್ಲಿ ವಿಶೇಷವಾದ ಉರಗಗಳು ಸಿಕ್ಕರೆ ತಂದು ಬಿಡೋದು ಕೂಡ ಈ ಕಾನಿನಲ್ಲೇ.. ದೇಶದಲ್ಲಿ ಇರೋ ಸಿಂಗಳಿಕಗಳ ಪೈಕಿ ಸುಮಾರು ಅರ್ಧದಷ್ಟು ಸಿಂಗಳಿಕಗಳ ಆಶ್ರಯತಾಣವಿದು. ವಿಶ್ವದಲ್ಲೇ ಇರೋ ಏಕೈಕ ವಿಶೇಷ ಅಳಿವಿನ ಅಂಚಿನಲ್ಲಿರೋ ಮರಗಳಿರೋ ಕಾಡು ಇದು.
ವಿಶ್ವದಲ್ಲೇ ಅಪರೂಪವಾದ ಸಸ್ಯಗಳನ್ನ ಹಾಗೂ ಪ್ರಾಣಿಗಳನ್ನ ಹೊಂದಿರೋ ಏಕೈಕ ತಾಣ.
ವಿಶ್ವದ ಹಲವೆಡೆ ಅಪರೂಪವಾದ ಕಾಡುಗಳಿವೆ. ಕಾಡುಗಳಲ್ಲಿ ಅಪರೂಪದ ತಳಿಗಳಿವೆ. ಆದರೆ ಈ ಕಾಡು ಇವೆಲ್ಲದಕ್ಕೂ ವಿಭಿನ್ನ. ಈ ಕಾಡುಗಳು ದಟ್ಟವಾಗಿ ಒಂದೇ ಕಡೆ ಹರಡಿಕೊಂಡಿವೆ. ಕೆಲವೇ ಕೆಲವು ಹೆಕ್ಟೇರ್ ಪ್ರದೇಶಗಳಲ್ಲಿ ಇಷ್ಟೊಂದು ದಟ್ಟ ಕಾಡು ವ್ಯಾಪಿಸಿರೋ ಏಕೈಕ ತಾಣವಿದು. ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಾವಿನಗುಂಡಿ ಸಮೀಪದ ಕತ್ತಲೆಕಾನು ಅನ್ನೋದೇ ಈ ವಿಭಿನ್ನ ಹಾಗೂ ವಿಶೇಷವಾದ ಅರಣ್ಯ ಪ್ರದೇಶ.
ಮಾವಿನಗುಂಡಿಯಿಂದ ಕೇವಲ 8 ಕಿಲೋಮೀಟರ್ ದೂರದಲ್ಲಿರೋ ಈ ಕಾನು ಕೇವಲ 8 ಹೆಕ್ಟೇರ್ ಪ್ರದೇಶದಲ್ಲಿ ದಟ್ಟವಾಗಿ ಬೆಳೆದಿದೆ. ವಿಶ್ವದಲ್ಲೇ ಎಲ್ಲೂ ಇಲ್ಲದ ವಿಶೇಷ ಕತ್ತಲೆಕಾನುಗೇರು ಅನ್ನೋ ಪ್ರಭೇದ ಇರೋ ಏಕೈಕ ಅರಣ್ಯವಿದು.
ಇಲ್ಲಿ ಕಾಡುಗಳು ದಟ್ಟವಾಗಿ ಬೆಳೆದಿರೋದ್ರಿಂದ ಸದಾ ಇಲ್ಲಿನ ಪ್ರದೇಶ ತಂಪಾಗಿರುತ್ತದೆ. ಸೂರ್ಯನ ಬೆಳಕೂ ಕೂಡ ಪ್ರವೇಶಿಸದಷ್ಟು ದಟ್ಟ ಪ್ರದೇಶಗಳಿವೆ. ವರ್ಷದ 365 ದಿನಗಳ ಕಾಲ ಕೂಡ ಇಲ್ಲಿನ ಸಣ್ಣ ಬದುಗಳಲ್ಲಿ ನೀರು ಹರಿಯುತ್ತಿರುತ್ತದೆ. ಸಾಮಾನ್ಯವಾಗಿ ಎಲ್ಲಾ ಕಾಲದಲ್ಲೂ ಕೂಡ ಮಳೆಯಾಗುತ್ತಿರುತ್ತೆ. ಬೇರೇ ಬೇರೇ ಪ್ರಭೇದಕ್ಕೆ ಸೇರಿದ 72 ಅಪರೂಪದ ಸಸ್ಯ ತಳಿಗಳನ್ನ ಇಲ್ಲಿ ಗುರುತಿಸಲಾಗಿದೆ.
ಅದರಲ್ಲೂ ಒಂದಂಕಿ ಮರ ಅನ್ನೋ ತಳಿಯೇ ವಿಭಿನ್ನವಾದದ್ದು. ಇದರ ಬೇರುಗಳು ಹೇರ್ ಪಿನ್ ರೀತಿಯಲ್ಲಿ ಕೊಂಡಿಯಾಕಾರದಲ್ಲಿ ಸುತ್ತುವರಿದಿವೆ. ಇದು ಆಕರ್ಷಣೀಯ ಹಾಗೂ ಅಪರೂಪವಾಗಿದೆ. ಈ ಕಾನಿನಲ್ಲಿ ವಿಶೇಷ ಪ್ರಭೇದದ ಎಲ್ಲಾ ರೀತಿಯ ಹಾಗೂ ಬಣ್ಣದ ಕಪ್ಪೆಗಳು ಹಾಗೂ ಚಿಟ್ಟೆಗಳನ್ನು ಕಾಣಬಹುದಾಗಿದೆ. ಅದೇ ರೀತಿ ಪಶ್ಚಿಮ ಘಟ್ಟದಲ್ಲಿರೋ ಸುಮಾರು ಅರ್ಧದಷ್ಟು ಸಿಂಗಳಿಕಗಳ ಆವಾಸ ಸ್ಥಾನ ಈ ಕತ್ತಲೆ ಕಾನು. ಆಯಾ ಸೀಸನ್ ನಲ್ಲಿ ಇಲ್ಲಿ ಸಿಂಗಳಿಕಗಳು ಹೆಚ್ಚಾಗಿ ಬರುತ್ತವೆ. ಜಿಲ್ಲೆಯ ಹಾಗೂ ಪಕ್ಕದ ಜಿಲ್ಲೆಗಳಲ್ಲಿ ಎಲ್ಲೇ ಕಾಳಿಂಗ ಸರ್ಪಗಳು ಕಂಡುಬಂದರೂ ಅದನ್ನ ಹಿಡಿದು ಇಲ್ಲಿಗೇ ತಂದು ಬಿಡಲಾಗುತ್ತೆ. ಆದ್ದರಿಂದ ಕಾಳಿಂಗ ಸರ್ಪಗಳ ಕಾಡು ಕೂಡ ಇದಾಗಿದೆ.
ವಿಶ್ವದಲ್ಲೇ ಅಪರೂಪದ ಸಸ್ಯ ತಾಣ ಇದಾಗಿದೆ.ಇದು ಅಧ್ಯಯನ ಕೇಂದ್ರ ಮಾತ್ರವಾಗಿರಬೇಕು.ಇದು ಪ್ರವಾಸಿ ತಾಣವಾಗಿ ಮಾರ್ಪಟ್ಟರೆ ಇಲ್ಲಿಯ ಸಹಜ ಕಾಡು,ಸಸ್ಯ ಸಂಕುಲ ನಾಶವಾಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಎಸಿಎಪ್ ಅಜೀಜ್ ಅಹ್ಮದ್
ಹಿರಿಯ ಪರಿಸರ ತಜ್ಞ ಎಂ.ಬಿ.ನಾಯ್ಕ ಕಡಕೇರಿ ಹೇಳುತ್ತಾರೆ,
ವಿಶ್ವದಲ್ಲೇ ಎಲ್ಲೂ ಇಲ್ಲದ ಒಂದು ಅಪರೂಪದ ಅರಣ್ಯ ಪ್ರದೇಶ ನಮ್ಮಲ್ಲಿದೆ ಅನ್ನೋದು ನಮ್ಮೆಲ್ಲರ ಹೆಮ್ಮೆ. ಆದರೆ ಈ ಅರಣ್ಯ ಪ್ರದೇಶಗಳಲ್ಲಿರೋ ವಿಶೇಷ ಪ್ರಭೇದಗಳ ಕುರಿತು ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ. ಟೂರಿಸಮ್ ಪ್ರದೇಶವಾಗಿ ಇದನ್ನ ಮಾರ್ಪಡಿಸದೇ, ಸಂಶೋಧನೆಗಳಿಗೆ ತೆರೆದಿಟ್ಟಾಗ ಮಾತ್ರ ಇಂತಹ ತಾಣಗಳ ಸಂರಕ್ಷಣೆ ಅಗುತ್ತದೆ.
*****
ಶ್ರೀಧರ ಮದ್ದಿನಕೆರೆ