ಸಿದ್ದಾಪುರ : ಜಿಲ್ಲೆಯಲ್ಲಿ ದಿನೇ ದಿನೇ ಮಂಗನಕಾಯಿಲೆ ಪ್ರಕರಣ ಹೆಚ್ಚಾಗುತ್ತಿದ್ದು, ಮಂಗನಕಾಯಿಲೆ ಹಾಗೂ ಕೊರೊನಾ ಕುರಿತು ಸಿದ್ದಾಪುರದ ತಹಸೀಲ್ದಾರ್ ಕಚೇರಿಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಮಂಗನ ಕಾಯಿಲೆ ಕುರಿತು ಮಾಹಿತಿ ನೀಡಿದ ತಾಲೂಕಾ ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ, ಈವರ್ಷ ತಾಲೂಕಿನಲ್ಲಿ 220 ರಕ್ತದ ಮಾದರಿ ಸಂಗ್ರಹಿಸಿದ್ದು, ಸುಮಾರು 160 ಮಾದರಿಗಳ ವರದಿ ಬಂದಿದೆ. 10 ವರದಿಗಳಲ್ಲಿ ಪಾಸಿಟಿವ್ ಅಂಶ ಕಾಣಿಸಿಕೊಂಡಿದ್ದು, ಈಗಾಗಲೇ ತಾಲೂಕಿನಲ್ಲಿ 1 ಸಾವು ಸಂಭವಿಸಿದೆ. ಇದರಲ್ಲಿ ಒಬ್ಬ ರೋಗಿ ಸಿದ್ದಾಪುರದ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 2 ಜನ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 6 ಜನ ಗುಣಮುಖರಾಗಿದ್ದಾರೆ. ತಾಲೂಕಿನಲ್ಲಿ 60ಕ್ಕೂ ಹೆಚ್ಚು ಮಂಗಗಳ ಸಾವು ಸಂಭವಿಸಿದೆ. 23 ಸಾವಿರ ಚುಚ್ಚುಮದ್ದುಗಳನ್ನು ಈಗಾಗಲೇ ನೀಡಲಾಗಿದೆ ಎಂದರು.
ಇನ್ನು ಕೊರೊನಾ ಪ್ರಕರಣದಲ್ಲಿ ವಿದೇಶದಿಂದ ಬರುವವರನ್ನ ಪ್ರಾಥಮಿಕ ಶಂಕಿತರು ಅಂತ ಗುರುತಿಸಲಾಗಿದೆ. ತಾಲೂಕಿನಲ್ಲಿ 7 ಜನರಲ್ಲಿ ಒಬ್ಬರ 14 ದಿನದ ನಿಗಾ ಮುಗಿದಿದೆ. 6 ಜನರನ್ನು ಮನೆಯಲ್ಲಿ ನಿಗಾ ಇರಿಸಲಾಗಿದೆ. ಕೊರೊನಾಗಾಗಿ ತಾಲೂಕಾ ಆಸ್ಪತ್ರೆಯಲ್ಲಿ 1 ವಾರ್ಡ್ ಮೀಸಲಿರಿಸಲಾಗಿದೆ. ಸಾಮಾನ್ಯ ಜನರಿಗೆ ಮಾಸ್ಕ್ ನ ಅವಶ್ಯಕತೆ ಇಲ್ಲ. ನಿಗಾದಲ್ಲಿದ್ದವರು ಮಾಸ್ಕ್ ಹಾಕಿಕೊಳ್ಳುವುದು ಅವಶ್ಯ. ಜಿಲ್ಲಾಧಿಕಾರಿಗಳ ಆದೇಶದಂತೆ ಹಾಸ್ಟೆಲ್ ನಲ್ಲಿ ಐಸೋಲೇಶನ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು .
ನಾಳೆ ಬುಧವಾರ ಸಿದ್ದಾಪುರದಲ್ಲಿ ಸಂತೆ ನಡೆಯಲಿದ್ದು, ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತರಕಾರಿ ಹಾಗೂ ಹಣ್ಣುಗಳನ್ನ ಮಾರಬಹುದಾಗಿದೆ. ಇದಕ್ಕಾಗಿ ನೆಹರೂ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ತಹಸೀಲ್ದಾರ್ ಮಂಜುಳಾ ಭಜಂತ್ರಿ ತಿಳಿಸಿದರು.