ಸಿದ್ದಾಪುರ : ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಹೆಚ್ಚುತ್ತಿರುವ ಮಂಗನ ಕಾಯಿಲೆ ಕುರಿತಾಗಿ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಶಿರಸಿ ಉಪವಿಭಾಗಾಧಿಕಾರಿ ಡಾ.ಈಶ್ವರ್ ಉಳ್ಳಾಗಡ್ಡಿ ಸಭೆ ನಡೆಸಿದರು.
ಸಿದ್ದಾಪುರದ ತಹಶೀಲ್ದಾರ ಕಚೇರಿಯಲ್ಲಿ ಸಭೆ ನಡೆಸಿ ಮಾತನಾಡಿದ ಎಸಿ, ತಾಲೂಕಿನಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಮಂಗನ ಕಾಯಿಲೆ ಕಂಡುಬಂದ ಪ್ರಕರಣಗಳ ಸಂಖ್ಯೆ 9 ಕ್ಕೇರಿದೆ. ಈಗಾಗಲೇ ಮಂಗನಕಾಯಿಲೆ ಹೆಚ್ಚಾಗಿ ಕಂಡುಬಂದ ಹೊನ್ನೆಘಟಗಿ ವ್ಯಾಪ್ತಿಯಲ್ಲಿ ಜನಜಾಗೃತಿ ಸಭೆ ನಡೆಸಿರುವುದು ಪರಿಣಾಮ ಬೀರಿದ್ದು, ಜನರು ಸ್ಪಂದಿಸುತ್ತಿದ್ದಾರೆ. ಅದೇ ರೀತಿ ಕಾನಸೂರು ವ್ಯಾಪ್ತಿಯಲ್ಲಿ ಜನಜಾಗೃತಿ ಜಾಥಾ ಹಾಗೂ ಪಾದಯಾತ್ರೆ ಮೂಲಕ ಜನರನ್ನ ಜಾಗೃತಿಗೊಳಿಸೋಣ. ತಾಲೂಕಾ ಆಡಳಿತದ ಜೊತೆ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರ ಕೂಡ ಅವಶ್ಯಕವಾಗಿದೆ ಎಂದರು.
ಲಸಿಕೆಯನ್ನು ಮೊದಲು ತೆಗೆದುಕೊಳ್ಳಬೇಕು. ಅದಾದ 1 ತಿಂಗಳ ನಂತರ ಇನ್ನೊಂದು ಡೋಸ್ ತೆಗೆದುಕೊಳ್ಳಬೇಕು. ಇದರಿಂದ 50 ಪ್ರತಿಶತ ರೋಗ ನಿರೋಧಕ ಶಕ್ತಿ ದೊರೆಯುತ್ತದೆ. ಅದಾದ 6 ತಿಂಗಳ ನಂತರ ಇನ್ನೊಂದು ಡೋಸ್ ತೆಗೆದುಕೊಳ್ಳಬೇಕು. ಆಗ ಮಾತ್ರ 80 ರಿಂದ 90 ಪ್ರತಿಶತ ರೋಗನಿರೋಧಕ ಶಕ್ತಿ ದೊರೆಯುತ್ತದೆ. ಆದ್ದರಿಂದ ದಯವಿಟ್ಟು ಲಸಿಕೆಯನ್ನ ಪಡೆದುಕೊಳ್ಳಿ ಅಂತ ಮನವಿ ಮಾಡಿದರು.
ಸಭೆಯಲ್ಲಿ ತಹಶೀಲ್ದಾರ್ ಮಂಜುಳಾ ಭಜಂತ್ರಿ, ತಾಲೂಕಾ ಆರೋಗ್ಯಾಧಿಕಾರಿ ಲಕ್ಷ್ಮೀಕಾಂತ ನಾಯ್ಕ ಸೇರಿದಂತೆ ಅನೇಕ ಅಧಿಕಾರಿಗಳು ಹಾಜರಿದ್ದರು.