ಆದ್ಯೋತ್ ಅಂಕಣದಲ್ಲಿ ಕೊಳಗಿ ನೆನಪು

ಮೊದಲ ಬಾರಿ ಕಂಡ ಹೆಗ್ಗೋಡಿನ ನೀನಾಸಂ…

ಬೆಂಗಳೂರಿನಲ್ಲಿ ನಡೆದ ಕಮ್ಮಟ ಮತ್ತು ಹಿಂದಿನ ವರ್ಷದ ಶಿವಮೊಗ್ಗದ ಕಮ್ಮಟ ಎರಡೂ ನನಗೆ ಅಮೂಲ್ಯವಾದ ಕಲಿಕೆಯನ್ನು ಕೊಟ್ಟಿರುವದನ್ನು ಈಗಲೂ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಿದ್ದೇನೆ. (ಅಗತ್ಯವಿದೆಯೋ ಇಲ್ಲವೋ,ಹೇಳಬೇಕು ಅನ್ನಿಸುತ್ತಿದೆ. ಕಮ್ಮಟ ನಡೆದು ಎರಡು ವರ್ಷಗಳ ನಂತರ ಮೈಸೂರಿನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನಕ್ಕೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಧಿಕೃತವಾಗಿ ಆಹ್ವಾನಿಸಿತ್ತು. ಹೋಗಿ-ಬರುವ ಪ್ರಯಾಣ ವೆಚ್ಚ, ಅಲ್ಲಿ ಉಳಿಯಲು ಹೊಟೆಲ್‍ನಲ್ಲಿ ಮುಂಚಿತವಾಗಿ ಕಾಯ್ದಿರಿಸಿದ ಕೊಠಡಿ, ನಾನಿದ್ದ ಜಾಗದಿಂದ ಮೈಸೂರಿನಲ್ಲಿ ಎಲ್ಲಿಗೇ ಹೋಗಲೂ ಉಚಿತ ಬಸ್ ಪಾಸ್, ಊಟ,ಉಪಹಾರಕ್ಕೆ ಟೋಕನ್ ಎಲ್ಲವನ್ನೂ ಒದಗಿಸಿತ್ತು. ಮೈಸೂರೂ ಕೂಡ ಆಗ ನನಗೆ ಹೊಸತು. ಸಮ್ಮೇಳನದ ಉದ್ಘಾಟನೆ,ವಿಚಾರ ಸಂಕಿರಣ ಮುಂತಾದ್ದನ್ನು ವೀಕ್ಷಿಸಿ, ಮೂರನೇಯ ದಿನ ಅಲ್ಲಿನ ವಸ್ತು ಪ್ರದರ್ಶನ ನೋಡಿಕೊಂಡು, ಸುಮ್ಮನೆ ಫುಟ್‍ಫಾತ್‍ನಲ್ಲಿ ನಡೆದುಕೊಂಡು ಬರುತ್ತಿದ್ದೆ. ನನ್ನೆದುರು ಹಾದು ಹೋದ ಆಟೋವೊಂದರಲ್ಲಿ ಎಚ್.ಎಸ್.ವೆಂಕಟೇಶಮೂರ್ತಿ ಕೂತಿರುವಂತೆ ಅನ್ನಿಸಿ, ಕೈಎತ್ತಿ ವಿಶ್ ಮಾಡಿದೆ. ನಂತರ ಅವರಾಗಲಿಕ್ಕಿಲ್ಲ,ಇನ್ಯಾರೋ ಇರಬಹುದು ಎಂದು ನಾಲ್ಕು ಹೆಜ್ಜೆ ಮುಂದಿಟ್ಟೆ. ಹಿಂದಿನಿಂದ ಯಾರೋ ಕರೆದಂತಾಗಿ ತಿರುಗಿ ನೋಡಿದರೆ ಅವರೇ! ಆಟೋ ನಿಲ್ಲಿಸಿ,ಇಳಿದು ನನ್ನ ಕರೆಯುತ್ತ ಬರುತ್ತಿದ್ದರು. ಒಂದಿಷ್ಟು ಮಾತನಾಡಿ, ಅಷ್ಟರಲ್ಲಿ ಅದೇ ಆಟೋದಿಂದ ಇಳಿದು, ನಮ್ಮ ಬಳಿ ಬಂದವರನ್ನ ಪರಿಚಯಿಸಿದರು.ಅವರು ಕನ್ನಡದ ಪ್ರತಿಭಾವಂತ ಬರೆಹಗಾರ ಕಾಡು, ಪರಸಂಗದ ಗೆಂಡೆತಿಮ್ಮ, ಭುಜಂಗಯ್ಯನ ದಶಾವತಾರಗಳು, ಗೋಡೆ ಮುಂತಾದ ಕಾದಂಬರಿ ಹಾಗೂ ಮಹತ್ವದ ಕಥೆ, ಕವಿತೆಗಳನ್ನು ಬರೆದ ಶ್ರೀಕೃಷ್ಣ ಆಲನಹಳ್ಳಿ. ಎಚ್ಚೆಸ್ವಿ ಅಂತ:ಕರಣವುಳ್ಳ ಮನುಷ್ಯ ಎನ್ನುವದು ಅನುಭವಕ್ಕೆ ಬಂದಿದ್ದರೂ ಅವರ ವರ್ತನೆ ನನ್ನ ಮನಸ್ಸನ್ನು ತುಂಬಿತ್ತು).


ಈ ನಾಟಕ ಕಮ್ಮಟವೂ ಸಾಂಗವಾಗಿ ಮುಗಿಯಿತು. ಪಕ್ಕದ ಟೌನ್ ಹಾಲಿನಲ್ಲಿ ಪ್ರಸನ್ನ ಅವರ ಒಂದು ಲೋಕ ಕಥೆ ಮತ್ತು ನರಸಿಂಹನ್ ಅವರ ಕುದುರೆ ಬಂತು ಕುದುರೆ ಎನ್ನುವ ನಾಟಕಗಳ ಮೊದಲ ಪ್ರದರ್ಶನ ನೋಡಿದೆ. ಕುದುರೆ ಬಂತು ಕುದುರೆ ನಾಟಕ ನೋಡಲು ಶಂಕರನಾಗ್ ಸಾಮಾನ್ಯರಂತೆ ಬಂದು, ನಾಟಕ ನೋಡಿದ್ದರು. ಕೊನೆಯ ದಿನ ನಮ್ಮ ತಂಡ ಸಿದ್ಧಪಡಿಸಿದ್ದ ಕನಸು ಮಾರುವವರು ನಾಟಕದಲ್ಲಿ ಜಾದೂಗಾರನ ಪಾತ್ರದಲ್ಲಿ ನಟಿಸಿದೆ. ಕಮ್ಮಟದಲ್ಲಿ ಹಡಪದ್ ಎನ್ನುವ ಹೆಸರಿನ ಹೈಸ್ಕೂಲ್ ಅಧ್ಯಾಪಕರ ಸ್ನೇಹವಾಗಿ, ನಾವಿಬ್ಬರೂ ತುಂಬಾ ಆತ್ಮೀಯರಾದೆವು.ಅವರ ಊರು ಧಾರವಾಡ ಸಮೀಪದ ಉಪ್ಪಿನ ಬೇಟಗೇರಿ. ನಂತರದಲ್ಲಿ ಅವರಲ್ಲಿಗೆ ಹಲವಾರು ಸಾರಿ ಹೋಗಿ ಉಳಿದುಬಂದಿದ್ದೆ. ಅವರ ಜೊತೆ ಒಂದು ದಿನ ಬಿಡುವಿನಲ್ಲಿ ನನಗೆ ಅಪರಿಚಿತವಾಗಿದ್ದ ಬೆಂಗಳೂರಿನಲ್ಲಿ ಒಂದಿಷ್ಟು ಸುತ್ತಾಡಿದೆ. ಕೊನೆಯ ದಿನ ಬೀಳ್ಕೊಡುವಾಗ ರಾಮಚಂದ್ರ ದೇವ್ ಮಾತೊಂದನ್ನ ಹೇಳಿದ್ದರು ; ನೀನು ತುಂಬಾ ಇನೊಸೆಂಟ್, ಈ ಮುಗ್ದತೆ ಬರಹಗಾರನಿಗೆ, ಕಲಾವಿದನಿಗೆ ಇರಬೇಕು. ಅದರೆ ಅದೇ ಹೆಚ್ಚಾದರೆ ತೊಂದರೆ ಕೂಡ ಎಂದಿದ್ದರು.

ಕಮ್ಮಟ ಮುಗಿಸಿ ಊರಿಗೆ ಬಂದ ಸುಮಾರು ಹದಿನೈದು ದಿನದ ನಂತರ ಹೆಗ್ಗೋಡಿಗೆ ಹೋದೆ. ಆಗ ಸಾಗರಕ್ಕೆ 6-7 ರೂ.ಬಸ್ ಚಾರ್ಜ. ಅಲ್ಲಿಂದ ಹೆಗ್ಗೋಡಿಗೆ 2 ರೂ. ಆಗ ಅದೇ ಒಜ್ಜೆ. ಹೆಗ್ಗೋಡು ಹಳ್ಳಿಯಂತೆ ಕಂಡರೂ ಹೊಸತನಕ್ಕೆ ಅಣ ಯಾಗುತ್ತಿತ್ತು. ಸುತ್ತ ವಿಶಾಲ ಇಳಿಜಾರು ಮೈದಾನದ ನಡುವೆ ಗುಡ್ಡದ ಮೇಲೆ ಹೈಸ್ಕೂಲ್, ಪ್ರಾಥಮಿಕ ಆರೋಗ್ಯ ಕೇಂದ್ರ, ಕರ್ನಾಟಕ ಬ್ಯಾಂಕ್‍ಗಳಿದ್ದೂ ಹಳ್ಳಿಯ ಸೊಗಡನ್ನು ಉಳಿಸಿಕೊಂಡಿತ್ತು. ಬೆಳಿಗ್ಗೆ ಹತ್ತೂವರೆ ಸುಮಾರಿಗೆ ಶಿವರಾಮ ಕಾರಂತ ರಂಗಮಂದಿರದ ಎದುರು ನಿಂತಿದ್ದೆ. ಅಲ್ಲೇ ಪಕ್ಕ ಸದ್ಯದಲ್ಲೇ ಕಟ್ಟಿರುವ ಹೆಂಚಿನ ಛಾವಣ ಯ ಕಟ್ಟಡದ ಬಾಗಿಲು ತೆರೆದಿರುವದನ್ನು ಗಮನಿಸಿ ಅಲ್ಲಿ ಹೋದೆ. ಒಳಗಡೆ ಕುಳಿತು ಏನನ್ನೋ ಬರೆಯುತ್ತಿದ್ದ ಒಂದಿಬ್ಬರು ವಿಚಾರಿಸಿದರು. ಸುಬ್ಬಣ್ಣನವರನ್ನು ಕಾಣಲು ಬಂದಿದ್ದೇನೆ ಅಂದಾಗ ಸ್ವಲ್ಪ ಹೊತ್ತಿಗೆ ಬರ್ತಾರೆ, ಕೂತಿರಿ ಎಂದು ಆಸನ ತೋರಿಸಿದರು. ಅದು ನೀನಾಸಂನ ಕಚೇರಿ ಎಂದು ತಿಳಿಯಿತು.
ನಾನು ಬಾಗಿಲಿಗೆ ಎದುರಾಗಿ ಕೂತಿದ್ದೆ. ಕೂತಲ್ಲಿಂದ ಹೊರಗಡೆ ಹೆಗ್ಗೋಡು ಊರೊಳಗೆ ಹಾದುಹೋದ ನೇರ ರಸ್ತೆ, ಆಗೀಗ ಸಂಚರಿಸುತ್ತಿದ್ದ ಉಡುಪಿ,ಹೊಸನಗರ ಕಡೆ ಹೋಗುವ,ಬರುವ ಬಸ್‍ಗಳು, ಇನ್ನಿತರ ವಾಹನಗಳು, ನಡೆದುಹೋಗುತ್ತಿದ್ದ ಜನರು..ಇವನ್ನೆಲ್ಲ ಅಪ್ರಜ್ಞಾಪೂರ್ವಕವಾಗಿ ಗಮನಿಸುತ್ತಿದ್ದೆ. ನೋಟ ಮಾತ್ರ ಅಲ್ಲಿ, ಮನಸ್ಸು ಎಲ್ಲೆಲ್ಲೋ? ಸ್ವಲ್ಪ ಹೊತ್ತಿಗೆ ಆ ನೇರ ರಸ್ತೆಯ ತುದಿಯಲ್ಲಿ ಒಂದು ಆಕೃತಿ ನಡೆದುಬರುತ್ತಿರುವದು ಕಾಣ ಸಿತು. ಹತ್ತಿರವಾಗುತ್ತಿದ್ದಂತೆ ಜುಬ್ಬಾ,ಪ್ಯಾಂಟ್ ತೊಟ್ಟ, ಕೈಯಲ್ಲೊಂದು ಸಣ್ಣಚೀಲ ಹಿಡಿದ ವ್ಯಕ್ತಿಯಾಗಿ, ರಂಗಮಂದಿರ ದಾಟಿ, ಕಚೇರಿಯೊಳಕ್ಕೆ ಬಂದರು. ಹತ್ತಿರವಾಗುತ್ತಿದ್ದಂತೇ ಸುಬ್ಬಣ್ಣ ಎಂದು ತಿಳಿದು ಎದ್ದುನಿಂತೆ. ಅವರು ನನ್ನ ಕಂಡವರು ಎಷ್ಟೊತ್ತಿಗೆ ಬಂದ್ರೀ ಎಂತೆಲ್ಲ ಆತ್ಮೀಯವಾಗೇ ಮಾತನಾಡಿಸಿ, ಅಲ್ಲಿದ್ದವರೊಬ್ಬರಿಗೆ ಕಾಫಿ ಕಳಿಸೋದಕ್ಕೆ ಹೇಳು ಎಂದರು. ಕಮ್ಮಟದ ಕುರಿತು ವಿಚಾರಿಸಿಕೊಳ್ಳುವಷ್ಟರಲ್ಲೇ ಕಾಫಿ ಬಂತು. ಅಲ್ಲಿ ಕುಡಿದ ಮೊದಲ ಕಾಫಿ ಅದು, ನಂತರದಲ್ಲಿ ಅದೆಷ್ಟು ಬಾರಿ ಕಾಫಿ ಕುಡಿದೆನೋ ಅಲ್ಲಿ. ನೀನಾಸಂ ಹಾಸ್ಟೆಲ್ ನಡೆಸುತ್ತಿದ್ದ ಕಾಕಾಲ್ ಅವರ ಕಾಫಿಯ ರುಚಿಯೇ ಬೇರೆ. ಅದಾದ ನಂತರ ಹಿಂದುಗಡೆ ಇದ್ದ ಕೊಠಡಿಗೆ ಕರೆದುಕೊಂಡು ಹೋದರು. ಅದು ಅವರ ಓದು, ಬರಹದ ಕೊಠಡಿ. ಅಲ್ಲಿ ಕೂತು ಮತ್ತಷ್ಟು ವಿವರವಾಗಿ ನನ್ನ ವೈಯುಕ್ತಿಕ ಬದುಕಿನ ಕುರಿತು ಕೇಳಿ,ತಿಳಿದುಕೊಂಡರು. ನಾನು ತರಂಗದಲ್ಲಿ ಬಂದ ಲೇಖನ ಓದಿ ಪ್ರಭಾವಿತನಾದ್ದನ್ನ, ಕಮ್ಮಟದ ಅನುಭವಗಳನ್ನ ಸಾಕಷ್ಟು ಹೇಳಿಕೊಂಡೆ.


ಆ ಸಮಯದಲ್ಲಿ ಅವರು ತಮ್ಮ ಬಳಿಯಿದ್ದ ಮಡಚಿಕೊಂಡಿದ್ದ ಸಣ್ಣ ಚೀಲವನ್ನು ಬಿಚ್ಚಿದರು. ಅದು ಸಂಚಿ! ಅಂದರೆ ನಮ್ಮ ಮಲೆನಾಡಿನಲ್ಲಿ ಪದಬಳಕೆಯಲ್ಲಿರುವ ಕವಳದ ಸಂಚಿ. ಕೌದಿಯಂತೆ ದಪ್ಪಗೆ, ಮೂರ್ನಾಲ್ಕು ಖಾನೆಗಳಿರುವ ಸಂಗ್ರಹ ಚೀಲ. ಅಡಕೆ,ವೀಳ್ಯದೆಲೆ, ಸುಣ್ಣದ ಡಬ್ಬಿ, ತಂಬಾಕು ಮುಂತಾದವು ಆ ಖಾನೆಗಳಲ್ಲಿ ಇರುತ್ತಿದ್ದವು. ಬಹುತೇಕ ಹಿರಿಯರ ಬಳಿ ಇಂಥ ಸಂಚಿ ಇದ್ದೇ ಇರುತ್ತಿತ್ತು. ಸುಬ್ಬಣ್ಣ ನಿಧಾನಕ್ಕೆ ಸಾಗರದ ಕಡೆ ಸಿದ್ಧಮಾಡುವ ಹೋಳಡಿಕೆಯ ಎರಡು ಚೂರು ಬಾಯಿಗೆ ಎಸೆದು, ಸಂಚಿಯಿಂದ ವೀಳ್ಯದೆಲೆ ತೆಗೆದು ಅದನ್ನು ಕೈಯಿಂದ ಗಸಗಸ ಉದ್ದಿ, ಮತ್ತೆ ತೊಡೆಯ ಮೇಲೆ ತಿಕ್ಕಿ, ನಾರು ಬಿಡಿಸಿ, ತೊಟ್ಟು ಮತ್ತು ಎಲೆಯ ತುದಿ ಚಿವುಟಿ, ಸಂಚಿಯಿಂದ ಕೊಳವೆ ಆಕಾರದ ಬೆಳ್ಳನೆಯ ಸುಣ್ಣದ ಡಬ್ಬಿ( ಇದಕ್ಕೆ ನಮ್ಮಲ್ಲಿ ಸುಣ್ಣದ ಕಾಯಿ ಎನ್ನುತ್ತಿದ್ದರು) ತೆಗೆದು ಎಲೆಗೆ ಸುಣ್ಣ ಹಚ್ಚಿ ಬಾಯಿಗಿಟ್ಟುಕೊಂಡು, ನಂತರ ಅದೇ ಡಬ್ಬಿಯ ಮತ್ತೊಂದು ತುದಿಯ ಮುಚ್ಚಳ ತೆಗೆದು ಅರ್ಧ ಬೆರಳುದ್ದದ ಎಸಳು ತಂಬಾಕನ್ನು ಚಿವುಟಿ, ಹೆಬ್ಬೆರೆಳು, ತೋರು ಬೆರಳಿನಲ್ಲಿ ಸ್ವಲ್ಪ ತಿಕ್ಕಿ ಬಾಯಿಗೆಸೆದುಕೊಂಡರು.

ಪಕ್ಕಾ ಟಿಪಿಕಲ್ ಗ್ರಾಮೀಣ ವ್ಯಕ್ತಿಯಂತೆ ಅವರ ವರ್ತನೆ ಇತ್ತು. ತಾನು ಸಿದ್ಧಪಡಿಸಿಕೊಳ್ಳುತ್ತಿದ್ದ ಕವಳದತ್ತ ದೃಷ್ಟಿಸದೇ, ಮಾತನಾಡುತ್ತ ಅಥವಾ ಮಾತುಗಳನ್ನ ಕೇಳಿಸಿಕೊಳ್ಳುತ್ತ ಅವರ ಈ ವಿಧಾನ ನನಗೇ ಹೊಸತೇನೂ ಆಗಿರಲಿಲ್ಲ. ಬಹುತೇಕ ಎಲ್ಲ ಮನೆಗಳಲ್ಲಿನ ಕವಳ ಹಾಕುವ ಹವ್ಯಾಸವಿದ್ದ ಹಿರಿಯರ ವಿಧಾನ ಈ ರೀತಿಯದೇ ಆಗಿತ್ತು. ಆದರೆ ಇವರು ಆ ರೀತಿ ವಯಸ್ಕರೇನೂ ಅಲ್ಲ, ಮತ್ತೆ ಓರ್ವ ಹೆಸರಾಂತ ಲೇಖಕ, ನಿರ್ದೇಶಕ. ನನಗೆ ತಲೆಬಿಸಿಯಾಯಿತು. ಹಳ್ಳಿಗಾಡಿನ ಓರ್ವ ಸಾಮಾನ್ಯ ಮನುಷ್ಯನಂತೆ ಸುಬ್ಬಣ್ಣ ಕವಳ ಹಾಕಿದ್ದು ಇವರು ದೂರದವರಲ್ಲ, ಹತ್ತಿರದವರೇ ಎನ್ನುವ ಒಂದು ತೆರನಾದ ಖುಷಿಯನ್ನೂ ಕೊಟ್ಟಿತು. ದೊಡ್ಡ ವ್ಯಕ್ತಿಯಾದರೂ ಮನಸ್ಸು ಬಿಚ್ಚಿ ಮಾತನಾಡಬಹುದಾದ, ಎದುರಿಗಿದ್ದವರು ಹೇಳಿದ್ದನ್ನ ಕೇಳಿಸಿಕೊಳ್ಳುವ ತಾಳ್ಮೆ ಇರುವ ಮನಸ್ಥಿತಿ ಇವರದ್ದು ಅನಿಸಿತು. ಅವರ ಟೇಬಲ್ ಮೇಲೆ, ಹಿಂದುಗಡೆ ಇರುವ ಕಪಾಟಿನಲ್ಲಿ ಪುಸ್ತಕಗಳೇ ತುಂಬಿಕೊಂಡಿದ್ದವು. ಬರೆದ ಹಾಳೆಗಳ ಕಂತೆ ಟೇಬಲ್ ಮೇಲೆ ಹರವಿಕೊಂಡಿತ್ತು. ಅವರು ಬರೆಯುವ ಸಿದ್ಧತೆ ಮಾಡಿಕೊಳ್ಳುತ್ತಿರುವದು ಗಮನಕ್ಕೆ ಬಂದು ನಿಧಾನಕ್ಕೆ ನಾನು ಹೊರಡುವ ಮಾತನಾಡಿದೆ.
ಮೊದಲ ಸಾರಿ ಬಂದಿದ್ದೀರಿ, ಸ್ಟೇಜ್ (ಶಿವರಾಮ ಕಾರಂತ ರಂಗಮಂದಿರ) ನೋಡಿಕೊಂಡು ಹೋಗಿ, ನಾನೂ ಸ್ವಲ್ಪ ಬರವಣ ಗೆ ಕೆಲಸದಲ್ಲಿ ಇದ್ದೀನಿ, ನಿಮಗೆ ಬಿಡುವಾದಾಗೆಲ್ಲ ಬನ್ನಿ ಎಂದು ಬೀಳ್ಕೊಟ್ಟರು. ಅಲ್ಲಿಂದ ಹೊರಬಿದ್ದು ರಂಗಮಂದಿರವನ್ನು ಸುತ್ತು ಹಾಕಿದೆ. ರಂಗ ಮಂದಿರದಲ್ಲಿ ನೀನಾಸಂ ನಡೆಸುವ ರಂಗ ತರಬೇತಿ ಕೋರ್ಸನ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ತರಬೇತಿ ನಡೆಯುತ್ತಿತ್ತು. 1972ರಲ್ಲಿ ಸ್ಥಳೀಯರ ದೇಣ ಗೆ ಮತ್ತು ರಾಜ್ಯ-ಕೇಂದ್ರ ಸರಕಾರದ ಅನುದಾನ ಪಡೆದು ನಿರ್ಮಾಣಗೊಂಡ ವಿಶಿಷ್ಠ ರಂಗಮಂದಿರ ಅದು. ಅದರ ಒಳಹೊಕ್ಕವನು ಬೆರಗಾಗಿಬಿಟ್ಟೆ. ವಿಶಾಲವಾದ ರಂಗವೇದಿಕೆ, ನಗರಗಳಲ್ಲಿನ ಸಿನೆಮಾ ಥಿಯೇಟರ್‍ಗಳ ರೀತಿ ಆಸನ ವ್ಯವಸ್ಥೆ, ಬಾಲ್ಕನಿಯಲ್ಲಿ ಸಿನೆಮಾ ತೋರಿಸಲು ಪ್ರೊಜೆಕ್ಟರ್ ಮುಂತಾದ ಯಂತ್ರಗಳು, ಅಲ್ಲಿಂದಲೇ ನಾಟಕಗಳಿಗೆ ಧ್ವನಿ, ಬೆಳಕಿನ ವ್ಯವಸ್ಥೆ ಒದಗಿಸುವ ವಿನ್ಯಾಸ. ಆಧುನಿಕವಾದ ಸಿನೆಮಾ ಥಿಯೇಟರ್‍ಗೆ ಕಡಿಮೆಯಿಲ್ಲದಿದ್ದರೂ ಅದರ ವಿನ್ಯಾಸ, ವಾತಾವರಣ ಸಹಜವಾಗಿತ್ತು. ನಂತರ ಅಲ್ಲಿನ ರಂಗಸ್ಥಳ 30-40 ಅಡಿಗಳದ್ದು, ಸುಮಾರು 550 ಪ್ರೇಕ್ಷಕರು ಕೂರಬಹುದಾದ ಅವಕಾಶ ಅಲ್ಲಿದೆ ಎಂದು ತಿಳಿದುಕೊಂಡೆ.

ಕೆಲವು ವರ್ಷಗಳ ಹಿಂದಷ್ಟೇ ನೀನಾಸಂನಲ್ಲಿ ರಂಗಶಿಕ್ಷಣ ಕೇಂದ್ರ(1980) ಆರಂಭಗೊಂಡಿತ್ತು. ರಾಜ್ಯದ ಹಲವೆಡೆಗಳಿಂದ ಆಯ್ದ ಸುಮಾರು 20-25 ಆಸಕ್ತರಿಗೆ ಅಲ್ಲಿ ತರಬೇತಿ ನೀಡಲಾಗುತ್ತಿತ್ತು. ಒಂದಿಷ್ಟು ಹೊತ್ತು ಅವರ ತರಬೇತಿ ನೋಡಿ ಹೊರಟು ಬಂದವನು ನಂತರ ಸುಬ್ಬಣ್ಣನವರಿಗೆ ಪತ್ರ ಬರೆದೆ. ಅವರಿಂದ ಮಾರುತ್ತರವೂ ಬಂತು. ಬರಬೇಕು ಅನ್ನಿಸಿದಾಗೆಲ್ಲ ಬನ್ನಿ, ಕಾಗದ ಬರೆಯುತ್ತಿರಿ ಎನ್ನುವ ಪ್ರೀತಿಯ ಒಸಗೆಯೂ ಅದರಲ್ಲಿತ್ತು. ಅಲ್ಲಿಂದ ಆರಂಭಗೊಂಡ ಪತ್ರ ವ್ಯವಹಾರ, ತಿಂಗಳಿಗೆ ಎರಡು ಬಾರಿಯಾದರೂ ಹೆಗ್ಗೋಡಿಗೆ ಭೇಟಿ ಹಲವು ವರ್ಷಗಳ ಕಾಲ ನಿರಂತರವಾಗಿತ್ತು.


1949ರಲ್ಲಿ ಸುಬ್ಬಣ್ಣನವರ ತಂದೆ ಕೆ.ಜಿ.ರಾಮಪ್ಪನವರು ಹೆಗ್ಗೋಡಿನ ಸುತ್ತಮುತ್ತಲಿನ ಆಸಕ್ತರನ್ನು ಒಟ್ಟುಗೂಡಿಸಿ ಕಟ್ಟಿದ್ದು ನೀಲಕಂಠೇಶ್ವರ ನಾಟ್ಯಸೇವಾ ಸಂಘ ಎನ್ನುವ ಹವ್ಯಾಸಿ ರಂಗಸಂಸ್ಥೆ. ನಿಜಕ್ಕೂ ಆ ಎಲ್ಲ ಹಿರಿಯರ ಉತ್ಸಾಹ, ಶ್ರಮ ಗೌರವಕ್ಕೆ ಅರ್ಹವಾದದ್ದು. ತಮ್ಮ ಬಿಡುವಿನ ವೇಳೆಯನ್ನು ಸೃಜನಶೀಲವಾಗಿ ಉಪಯೋಗಿಸಿಕೊಳ್ಳುತ್ತ, ಸ್ವಂತ ಬದುಕಿಗೆ, ಸುತ್ತಲಿನ ಸಮೂಹಕ್ಕೆ ಅಗತ್ಯವಾದ ಪ್ರಜ್ಞೆಯನ್ನು ಪಡೆದುಕೊಳ್ಳುತ್ತ ಹೋದರು. ನಂತರದಲ್ಲಿ ಮೈಸೂರಿನಲ್ಲಿ ಎಂ.ಎ.ಮುಗಿಸಿ ಬಂದ ಸುಬ್ಬಣ್ಣ ಆರಿಸಿಕೊಂಡದ್ದು ಗ್ರಾಮೀಣ ಬದುಕನ್ನ. ಅನಂತಮೂರ್ತಿ, ಹಾಮಾನಾ ಮುಂತಾದವರ ಸಹಪಾಠಿಯಾಗಿದ್ದ ಸುಬ್ಬಣ್ಣ ಮನಸ್ಸು ಮಾಡಿದ್ದರೆ ವಿಶ್ವವಿದ್ಯಾಲಯದಲ್ಲೇ ಕೆಲಸ ಮಾಡಬಹುದಿತ್ತು. ಸಾಕಷ್ಟು ಸ್ಥಿತಿವಂತರಾದ ಕುಟುಂಬದ ಸುಬ್ಬಣ್ಣ ಅದೊಂದೇ ಕಾರಣಕ್ಕೆ ಹಳ್ಳಿಯಲ್ಲಿ ಉಳಿಯಲಿಲ್ಲ. ಅವರ ಪ್ರಜ್ಞೆಯನ್ನು ವಿಸ್ತರಿಸಿದ್ದು ರಾಮ ಮನೋಹರ ಲೋಹಿಯಾ ಅವರ ಚಿಂತನೆಗಳು, ಹೋರಾಟಗಾರ ಗೋಪಾಲಗೌಡರಂಥವರ ಒಡನಾಟ. ಜನಪರ ಚಿಂತನೆ ಇದ್ದರೆ ಸಾಲದು, ಅದು ಕ್ರಿಯೆಯಾಗಬೇಕು ಎನ್ನುವ ಉದ್ದೇಶ ಸುಬ್ಬಣ್ಣನವರಿಗಿತ್ತೇನೋ? ವಿಶ್ವ ವಿದ್ಯಾಲಯಗಳಲ್ಲಿ, ಉನ್ನತ ಹುದ್ದೆಗಳಲ್ಲಿ ಆರಾಮವಾಗಿದ್ದು ಜನಪರವಾದ, ಸಮಾಜಮುಖಿಯಾದ ವಿಚಾರಧಾರೆ ಹರಿಸುವದು ಸುಲಭ, ಕಟು ವಾಸ್ತವದ ದೈನಿಕದಲ್ಲಿ, ಸಮಾಜದ ನಡುವೆ ಅದರ ಸಂಘರ್ಷ, ಸಂಪರ್ಕ, ಸೈದ್ಧಾಂತಿಕ ಧೋರಣೆಯ ಭಿನ್ನತೆಗಳ ನಡುವೆ ತನ್ನತನ, ಸಾಕ್ಷಿ ಪ್ರಜ್ಞೆ ಉಳಿಸಿಕೊಂಡು ಬದುಕುವದು ಕಷ್ಟ. ಸುಬ್ಬಣ್ಣ ಅಂಥ ಅಗ್ನಿದಿವ್ಯವನ್ನು ಸಾಧಿಸಿದವರು ಎಂತಲೇ ನನ್ನ ಭಾವನೆ.
ನೂರಾರು ಸದಸ್ಯರ, ಸಾಮೂಹಿಕ ನೇತೃತ್ವದ ಸಂಘವೊಂದನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುವದು ಎಷ್ಟು ಕಷ್ಟ ಎನ್ನುವುದು ಬಹುತೇಕ ಎಲ್ಲರಿಗೂ ಗೊತ್ತು. ಆದರೆ ನೀನಾಸಂನಲ್ಲಿ ಸುಬ್ಬಣ್ಣ ಸಂಘರ್ಷ, ಭಿನ್ನಮತಗಳಿಗೆ ಅವಕಾಶವನ್ನೇ ಒದಗಿಸಲಿಲ್ಲ. ಆ ಊರಿನವರಿಗೆ, ನೀನಾಸಂ ಸದಸ್ಯರಿಗೆ ಸುಬ್ಬಣ್ಣನವರ ಬಗ್ಗೆ ಅಷ್ಟೊಂದು ನಂಬಿಕೆ,ವಿಶ್ವಾಸ. ನೀನಾಸಂ ನೇತೃತ್ವ ವಹಿಸಿದ ಸುಬ್ಬಣ್ಣ ತಮ್ಮ ಕೊನೆಗಾಲದವರೆಗೂ ಅದನ್ನು ಉಳಿಸಿಕೊಂಡರು. ಭಿನ್ನ ರಾಜಕೀಯ ಧೋರಣೆಯ, ವಿವಿಧ ರಾಜಕೀಯ ಪಕ್ಷಗಳ ಧುರೀಣರಾಗಿದ್ದವರೆಲ್ಲ ನೀನಾಸಂ ಮಟ್ಟಿಗೆ ಅವನ್ನೆಲ್ಲ ಮರೆತಿರುತ್ತಿದ್ದರು. ಹೇಗೆ ಸುಬ್ಬಣ್ಣ ಅವರನ್ನೆಲ್ಲ ಒಗ್ಗೂಡಿಸಿಕೊಂಡು ಮಂಡಳಿಯನ್ನು ಬೆಳೆಸಿ, ನೀನಾಸಂಗೂ, ಅದರ ಜೊತೆಯಲ್ಲೇ ಹೆಗ್ಗೋಡು ಎನ್ನುವ ಊರಿಗೂ ಅಂತರಾಷ್ಟ್ರೀಯ ಖ್ಯಾತಿಯನ್ನು ತಂದು ಕೊಟ್ಟರೋ ಆ ಶ್ರೇಯಸ್ಸು ಸುಬ್ಬಣ್ಣನವರ ಜೊತೆ ಅವರಿಗೆ ಸಹಕಾರ ನೀಡಿದ ಊರವರಿಗೂ ಸಲ್ಲಬೇಕು.(ಸುಬ್ಬಣ್ಣ ಅದನ್ನು ಸಾಕಷ್ಟು ಬಾರಿ ಹೇಳಿದ್ದರು)

About the author

Adyot

Leave a Comment