ಕೆ.ವಿ .ಸುಬ್ಬಣ್ಣ ಎಂಬ ರಂಗ ಗಾರುಡಿಗ *****
ಆ ದಿನಗಳಲ್ಲಿ ರವೀಂದ್ರ ಕಲಾಕ್ಷೇತ್ರದ ಕಟ್ಟಡದಲ್ಲಿ ಕೆಲವು ದುರಸ್ಥಿ ಕಾರ್ಯಗಳಿದ್ದುದರಿಂದ ಅದನ್ನು ಮುಚ್ಚಿ ಅದರ ಹಿಂದುಗಡೆ ಇರುವ ಜಾಗದಲ್ಲಿ ಒಂದು ವಿಶಾಲವಾದ, ಸಾಕಷ್ಟು ಉದ್ದವಿರುವ ಹಜಾರದ ಕಟ್ಟಡವೊಂದನ್ನು ನಿರ್ಮಿಸಿದ್ದರು. ಗಾಳಿ,ಬೆಳಕು ಚೆನ್ನಾಗಿ ಬರುತ್ತಿದ್ದ, ಛಾವಣಿಗೆ ಸಿಮೆಂಟ್ ತಗಡು ಹೊದೆಸಿದ್ದ ಆ ಕಟ್ಟಡ ರಂಗಕರ್ಮಿಗಳಿಗೆ ಸಭೆ, ರಿಹರ್ಸಲ್ ಮುಂತಾದ ಅನುಕೂಲ ಕಲ್ಪಿಸುವದರ ಜೊತೆಗೆ ಇಂಥ ಕಮ್ಮಟಗಳಿಗೂ ಅವಕಾಶ ದೊರಕಿಸುತ್ತಿತ್ತು. ಅದಕ್ಕೆ ಕನ್ನಡದ ಓರ್ವ ಪ್ರತಿಭಾವಂತ, ಪ್ರಸಿದ್ಧ ನಾಟಕಕಾರ ಸಂಸ ಅವರ ಹೆಸರನ್ನಿಡಲಾಗಿತ್ತು.
ನಾಟಕ ಪ್ರದರ್ಶನಗಳು ಕಲಾಕ್ಷೇತ್ರದ ಪಕ್ಕದ ಪುಟ್ಟಣ್ಣಚೆಟ್ಟಿ ಟೌನ್‍ಹಾಲ್‍ನಲ್ಲಿ ಪ್ರದರ್ಶನಗೊಳ್ಳುತ್ತಿದ್ದವು.ಆ ಹಜಾರದಲ್ಲಿ ಮೃದುವಾದ ಹತ್ತಿಯ, ಬೆಳ್ಳನೆಯ ಹೊದಿಕೆಯ ದಪ್ಪನೆಯ ಥಡಿ ಅಥವಾ ಗಾದಿಗಳನ್ನು ಹಾಸಿದ್ದರು. ಅವು ಹೇಗಿದ್ದವು ಅಂದರೆ ನೋಡಲು ದಪ್ಪನೆಯ ಹಾಸುಗೆಯಾಗಿ ಕಂಡರೂ ಅದರ ಮೇಲೆ ನಡೆಯುವಾಗ, ಕೂತಾಗ ತಗ್ಗಿಹೋಗುತ್ತಿತ್ತು.(ಇಂಥವನ್ನು ಬಹುಮುಖ್ಯ ರಾಜಕೀಯ ಸಭೆಗಳಲ್ಲಿ, ದುಬಾರಿ ಹೋಟೆಲ್‍ಗಳಲ್ಲಿ ಬಳಸುತ್ತಾರೆಂದು ಶಿಭಿರಾರ್ಥಿಯೊಬ್ಬರು ಹೇಳಿದ್ದರು)
ವೇದಿಕೆ, ಖುರ್ಚಿಗಳಿಲ್ಲದೇ ಆ ಹಾಸಿನ ಮೇಲೆಯೇ ನಮ್ಮ ಕಮ್ಮಟ, ರಾತ್ರಿ ಮಲಗಲೂ ಅಲ್ಲಿಯೇ, ನಮ್ಮ ಊಟ, ಉಪಹಾರದ ಸಿದ್ಧತೆಗೆ ಪಕ್ಕದ ಮತ್ತೊಂದು ಕಟ್ಟಡದಲ್ಲಿ ನಾಲ್ಕಾರು ಅಡುಗೆ ಭಟ್ಟರಿದ್ದರು. ಸ್ನಾನ, ಶೌಚಕ್ಕೂ ಉತ್ತಮವಾದ ವ್ಯವಸ್ಥೆಯಿತ್ತು.
ಮೊದಲ ದಿನ ಬೆಳಿಗ್ಗೆ ಒಂಬತ್ತು ಗಂಟೆಯ ಮೊದಲೇ ಎಲ್ಲ ಶಿಭಿರಾರ್ಥಿಗಳೂ ಬಂದು ಸೇರಿದ್ದರು. 25 ಶಿಬಿರಾರ್ಥಿಗಳಿದ್ದ ತಂಡ ನಮ್ಮದು. ನಮ್ಮ ಉಪಹಾರ ಮುಗಿದ ಸ್ವಲ್ಪ ಹೊತ್ತಿಗೆ ನೀಟಾಗಿ ಇನ್‍ಶರ್ಟ ಮಾಡಿದ, ಚೆಂದನೆಯ ಬುಲ್ಗಾನಿನ್ ಗಡ್ಡದ, ಉದ್ದ ಮುಖದ, ಕೆಂಪಗೆ ಹೊಳೆಯುತ್ತ ಸುಂದರವಾಗಿದ್ದ ಮುಖದ ವ್ಯಕ್ತಿಯೊಬ್ಬರು ಬಂದು ನಮ್ಮನ್ನೆಲ್ಲ ಸೇರಿಸಿ ಪೂರ್ವಭಾವಿ ಪರಿಚಯ, ಕಮ್ಮಟದ ಉದ್ದೇಶ, ಯೋಜನೆಗಳ ಬಗ್ಗೆ ವಿವರಿಸಿದರು. ಅವರು ಕನ್ನಡದ ಹೆಸರಾಂತ ಸಾಹಿತಿ ರಾಮಚಂದ್ರ ದೇವ. ಅವರನ್ನು ಮೊದಲು ನೋಡಿದಾಗ ಇವರು ಇಂಗ್ಲೀಷರಿರಬೇಕು ಅಂದುಕೊಂಡು ಬಿಟ್ಟಿದ್ದೆ. ಕನ್ನಡದಷ್ಟೇ ಅಸ್ಖಲಿತವಾದ ಇಂಗ್ಲೀಷ್ ಅವರದ್ದು. ಕನ್ನಡದ ಮಾತಿನ ನಡುವೆಯೇ ಅವರಿಗೆ ಗೊತ್ತಿಲ್ಲದೇ ಇಂಗ್ಲೀಷ್ ಅವರ ಬಾಯಿಯಿಂದ ಹೊರಬರುತ್ತಿತ್ತು.(ಆಗ ಅವರ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ಅವರು ಪ್ರಜಾವಾಣಿ ಬಳಗದ ಪ್ರಿಂಟರ್ಸ ಪ್ರಕಾಶನದ ಮುಖ್ಯಸ್ಥರಾಗಿದ್ದರು, ಕಥೆ, ಕವಿತೆ, ಕಾದಂಬರಿಗಳ ಜೊತೆಗೆ ಮ್ಯಾಕ್ ಬೆತ್‍ನಂಥ ಇಂಗ್ಲೀಷ್‍ನ ಅತುತ್ತಮ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು ಎನ್ನುವದನ್ನ ನಂತರ ತಿಳಿದುಕೊಂಡೆ) ಮೊದಲನೇ ಭೇಟಿಯಲ್ಲೇ ರಾಮಚಂದ್ರ ದೇವ್ ನಮಗೆಲ್ಲ ಅಚ್ಚುಮೆಚ್ಚಿನವರಾದರು.
ಪೂರ್ವಭಾವಿ ಸಭೆ ಮುಗಿದ ನಂತರ ಕಮ್ಮಟದ ಉದ್ಘಾಟನೆ. ಅಷ್ಟೊತ್ತಿಗೆ ನಮ್ಮ ಹಿಂದೆ ಸಾಕಷ್ಟು ಮಂದಿ ಬಂದು ಕುಳಿತಿದ್ದರು. ತಿರುಗಿ ನೋಡಿದಾಗ ಒಬ್ಬರ ಮುಖ ಪರಿಚಯ ಸಿಕ್ಕಿತು. ಅವರು ಚಂದ್ರಶೇಖರ ಕಂಬಾರ.
ಆಗ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದವರು ಅವರು. ಹಿಂದಿನ ವರ್ಷ ಶಿವಮೊಗ್ಗದಲ್ಲಿ ಸಾಹಿತ್ಯ ಅಕಾಡೆಮಿಯ ಹತ್ತು ದಿನಗಳ ಕಮ್ಮಟದಲ್ಲಿ ಪಾಲ್ಗೊಂಡಿದ್ದಾಗ ಅವರು ಕಂಡಿದ್ದರು. ನನಗೆ ಅಕಾಡೆಮಿ ಶಿವಮೊಗ್ಗದ ಬಿ.ಎಚ್.ರಸ್ತೆಯಲ್ಲಿರುವ ದುರ್ಗಾಲಾಡ್ಜನಲ್ಲಿ ವಸತಿಗೆ ವ್ಯವಸ್ಥೆ ಮಾಡಿತ್ತು. ಆವರೆಗೆ ಉಳಿಯುವದಿರಲಿ,ಲಾಡ್ಜ್‍ಗಳು ಹೇಗಿರುತ್ತವೆ ಎಂದು ಗೊತ್ತಿರದ ಹುಡುಗನಾದ ನಾನು ಒಂಟಿಯಾಗಿ ಅಲ್ಲಿನ ರೂಮ್‍ನಲ್ಲಿ ಉಳಿಯಬೇಕಿತ್ತು. ಬೆಳಗಿನ ಉಪಹಾರ, ಸಂಜೆಯ ಊಟಕ್ಕೆ ಮೊದಲೇ ಟೋಕನ್ ಕೊಟ್ಟಿದ್ದರು.ಅದನ್ನು ಕೊಟ್ಟು ಊಟ,ತಿಂಡಿ ಮಾಡುತ್ತಿದ್ದೆ. ಮಧ್ಯಾಹ್ನ ಕಮ್ಮಟದಲ್ಲೇ ಆಗುತ್ತಿತ್ತು. ಒಂದು ದಿನ ಮಧ್ಯಾಹ್ನ ನನಗೆ ಅನಿವಾರ್ಯವಾಗಿ ನನ್ನ ಕೊಠಡಿಗೆ ಹೋಗಬೇಕಾಗಿ ಬಂತು; ಯಾಕೆ ಅಂತ ನೆನಪಾಗುತ್ತಿಲ್ಲ. ಕಮ್ಮಟ ನಡೆಯುತ್ತಿದ್ದ ಕಮಲಾ ನೆಹರೂ ಕಾಲೇಜಿನಿಂದ ದುರ್ಗಾ ಲಾಡ್ಜ್‍ಗೆ ಬರುತ್ತಿದ್ದೆ. ಲಾಡ್ಜ್‍ನ ಸ್ವಲ್ಪ ಪಕ್ಕದ ಸಿಂಡಿಕೇಟ್ ಬ್ಯಾಂಕ್‍ನ ಗೇಟ್ ಎದುರು ಓರ್ವ ವ್ಯಕ್ತಿ ಸಿಗರೇಟ್ ಸೇದುತ್ತಾ ನಿಂತಿದ್ದರು. ನಡೆದು ಕೊಂಡು ಬರುತ್ತಿದ್ದವನು ಸುಮ್ಮನೆ ನೋಡಿದೆ, ಅರೇ!, ಇವರನ್ನೆಲ್ಲೋ ನೋಡಿದ್ದೆನಲ್ಲಾ ಎಂದುಕೊಳ್ಳುತ್ತಾ ಮುಂದೆ ಹೋದೆ. ನನ್ನ ಮನಸ್ಸೆಂಬ ಮರ್ಕಟ ಕೇಳಬೇಕಲ್ಲ, ಮತ್ತೊಮ್ಮೆ ನೋಡೋಣ ಅಂತಾ ವಾಪಸ್ ಬಂದು ಒಂದಿಷ್ಟು ದೂರ ಹೋಗಿ ಪುನ: ಬರುತ್ತ ಅವರನ್ನ ನೋಡಿದೆ. ಓಹ್, ಮರೆತೆನೆಂದರ ಮರೆಯಲೀ ಹೆಂಗ, ಮಾವೊತ್ಸೆತುಂಗಾ ಹಾಡು ಬರೆದ ಕವಿ,- ಆ ಕವಿತೆ ಮತ್ತು ಅವರ ಫೋಟೊ ಸದ್ಯದಲ್ಲೇ ಯಾವುದೋ ಪತ್ರಿಕೆಯಲ್ಲಿ ಓದಿದ್ದರಿಂದ ಪಟ್ಟನೆ ನೆನಪಾಯಿತು.ನಾನು ಧಿಜ್ಮೂಢನಾಗಿ ನಿಂತು ಅವರನ್ನ ನೋಡುತ್ತಿದ್ದದು ಅವರ ಗಮನಕ್ಕೂ ಬಂದಿರಬೇಕು. ‘ಏನೋ ತಮಾ, ಯಾಕ ಹಾಂಗ ನೋಡಾಕತ್ತೀ’ ಅಂದರು. ‘ನೀವು ಚಂದ್ರಶೇಖರ ಕಂಬಾರ ಅಲ್ಲವಾ? ಅಂದೆ. ‘ಹೌದೋ’ ಎಂದವರು ನನ್ನ ಬಗ್ಗೆ ವಿಚಾರಿಸಿ, ಬೇಷ್ ಮಾಡು ಅಂದಿದ್ದರು.
ಬೆಂಗಳೂರಿನ ಕಮ್ಮಟವನ್ನು ಕಂಬಾ ಅವರು ಕಮ್ಮಟ ಉದ್ಘಾಟಿಸಿದ ನಂತರ ನಮ್ಮ ಕಾರ್ಯಕ್ರಮಗಳು ಆರಂಭಗೊಂಡವು.
ಪ್ರತಿದಿನ ಬೆಳಿಗ್ಗೆ ಒಂದು ನಾಟಕವನ್ನು ( ಇಂಗ್ಲೀಷ್, ಸಂಸ್ಕøತದಿಂದ ಅನುವಾದ ಗೊಂಡಿದ್ದು ಸೇರಿದಂತೆ ಕನ್ನಡ ನಾಟಕಗಳು ಸೇರಿದ್ದವು) ಕಮ್ಮಟದ ನಿರ್ದೇಶಕರು ಆಯ್ಕೆ ಮಾಡಿದ ಓರ್ವ ಶಿಬಿರಾರ್ಥಿ ನಿಗಧಿಪಡಿಸಿದ ನಾಟಕದ ಕುರಿತಾಗಿ ಪ್ರವೇಶಿಕೆ ಅಥವಾ ಪರಿಚಯಾತ್ಮಕ ವಿವರಗಳನ್ನೊಳಗೊಂಡು ಸುಮಾರು ಅರ್ಧ ಗಂಟೆಯ ಅವಧಿಯಲ್ಲಿ ಮಾತನಾಡಬೇಕಿತ್ತು. ನಂತರ ಆ ದಿನ ಆಹ್ವಾನಿಸಿದ ವಿಶೇಷ ಅತಿಥಿಗಳಾದ ರಂಗ ನಿರ್ದೇಶಕರು, ನಾಟಕಕಾರರು, ಯಾರಾದರೊಬ್ಬರು ಆ ನಾಟಕದ ಕುರಿತು ವಿಸ್ತøತವಾಗಿ ಉಪನ್ಯಾಸ ನೀಡುತ್ತಿದ್ದರು. ನಂತರ ಅವರೊಂದಿಗೆ ಪ್ರಶ್ನೋತ್ತರ, ಚರ್ಚೆ. ಮಧ್ಯಾಹ್ನದ ನಂತರ ಒಟ್ಟಾರೆ ರಂಗಭೂಮಿಯ ಸಾಹಿತ್ಯ, ನಟನೆ, ರಂಗವಿನ್ಯಾಸಗಳ ಕುರಿತು ಸಂವಾದ, ಚರ್ಚೆ. ಸಂಜೆ ಟೌನ್ ಹಾಲಿನಲ್ಲಿ ನಾಟಕವಿದ್ದರೆ ವೀಕ್ಷಣೆ. ರಾತ್ರಿ ಊಟಕ್ಕೆ ಮೊದಲು ಕಮ್ಮಟದ ಕೊನೆಯ ದಿನದ ಪ್ರದರ್ಶನಕ್ಕಾಗಿ ಚಿಕ್ಕ ನಾಟಕವೊಂದರ ರಿಹರ್ಸಲ್ ಇವು ನಿತ್ಯದ ನಮ್ಮ ವೇಳಾಪಟ್ಟಿ. ಮೊದಲ ದಿನವೇ ನಮಗೆಲ್ಲ ನೋಟ್‍ಬುಕ್,ಇನ್ನಿತರ ಪರಿಕರಗಳ ಜೊತೆಗೆ ಕಮ್ಮಟದಲ್ಲಿ ಚರ್ಚೆಗೆ ಆಯ್ಕೆ ಮಾಡಿದ ನಾಟಕ ಕೃತಿಗಳನ್ನ ನೀಡಿದ್ದರು. ಅವೆಲ್ಲವನ್ನ ನಾವು ಓದಿ, ಚರ್ಚೆಗೆ ಸಿದ್ಧರಾಗಿಬೇಕಿತ್ತು. ನಿಜವಾಗಿಯೂ ಅದೊಂದು ಸದವಕಾಶವಾಗಿತ್ತು. ಆವರೆಗೆ ಓದಿರದ ಹತ್ತಾರು ಅತ್ಯುತ್ತಮ ನಾಟಕಗಳನ್ನ ಒಂದೇ ಪಟ್ಟಿಗೆ ಓದಿದ್ದೆ; ಇಷ್ಟು ವರ್ಷಗಳಾದರೂ ಎಷ್ಟು ನೆನಪಿದೆ ಅಂದರೆ ವಿಗಡ ವಿಕ್ರಮ ರಾಯÀ, ಮಾಲವಿಕಾಗ್ನಿಮಿತ್ರ, ತುಘಲಕ್, ಸಾಹೇಬರು ಬರುತ್ತಾರೆ, ಹರಿಜನ್ವಾರ, ಮ್ಯಾಕ್‍ಬೆತ್, ಸಾಯೋ ಆಟ.. ಮುಂತಾಗಿ. ಅಂದಿನ ಓದು ನನಗೊಂದು ಪಾಠ ಕಲಿಸಿದೆ. ಇಂದಿಗೂ ನಾಟಕ ಕೃತಿಯೊಂದನ್ನು ಕಾದಂಬರಿಯನ್ನೋ, ಕಥೆಯನ್ನೋ ಓದುವಷ್ಟು ಆಸಕ್ತಿಯಿಂದ ಓದುತ್ತೇನೆ. ಕೆಲವರು ನಾಟಕಗಳನ್ನು ಓದುವದು ಅಂದರೆ ಬೋರ್ ಅನ್ನುತ್ತಾರೆ. ನನಗಂತೂ ಹಾಗನ್ನಿಸುವದೇ ಇಲ್ಲ.
ರಾಮಚಂದ್ರ ದೇವ್ ನಾಟಕಗಳ ಬಗ್ಗೆ ಮಾತನಾಡಬೇಕಾದ ಶಿಬಿರಾರ್ಥಿಗಳಿಗೆ ಮೊದಲೇ ಇಂಥ ದಿನ ಎಂದು ಸೂಚನೆ ನೀಡಿದ್ದರು. ನಮ್ಮ ಜೊತೆ ಪ್ರಸಿದ್ಧ ಚಿಂತಕ ಮೈಸೂರಿನ ಪ್ರೊ| ಶಿವರಾಮ ಐತಾಳ, ಡಾ| ಪಾಶ್ವನಾಥ್ ಹಾಗೂ ಮೈಸೂರು, ಗುಲ್ಬರ್ಗದ ಕೆಲವು ಹಿರಿಯ ರಂಗಕರ್ಮಿಗಳಿದ್ದರು. ಗ್ರಹಚಾರಕ್ಕೆ ಅವರೆಲ್ಲರ ಜೊತೆ ನನ್ನನ್ನೂ ನಾಟಕವೊಂದರ ಬಗ್ಗೆ ಪ್ರವೇಶಿಕೆ ಮಾತನಾಡಲು ರಾಮಚಂದ್ರ ದೇವ್ ಆಯ್ಕೆ ಮಾಡಿದ್ದರು. ಪರಿಚಯ ಮಾಡಿಕೊಳ್ಳುವಾಗಲೇ ನನಗೇನೂ ತಿಳಿದಿಲ್ಲ ಎಂದು ಹೇಳಿಕೊಂಡಿದ್ದರೂ ಅದ್ಯಾಕೆ ಹಾಗೇ ಮಾಡಿದರೋ ಈವರೆಗೂ ಬಗೆಹರಿದಿಲ್ಲ.
ನಾಲ್ಕನೇ ದಿನ ನನ್ನ ಸರದಿ; ನನಗೆ ಕೊಟ್ಟದ್ದು ಸಂಸರ ವಿಗಡ ವಿಕ್ರಮ ರಾಯ ನಾಟಕ. ನನ್ನ ತಿಳುವಳಿಕೆಯ ಮಟ್ಟಿಗೆ ಓದಿಕೊಂಡಿದ್ದೆ. ಅದನ್ನು ರಾಮಚಂದ್ರ ದೇವ್‍ರಿಗೂ ಹೇಳಿದ್ದೆ. ‘ಹೆದರಬೇಡ, ಮಾತಾಡು’ ಎಂದಿದ್ದರು.
ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ನಮ್ಮ ಕಮ್ಮಟದ ಜಾಗಕ್ಕೆ ವ್ಯಕ್ತಿಯೊಬ್ಬರ ಪ್ರವೇಶವಾಯಿತು. ನಮ್ಮೊಡನೆ ಯಾವುದೋ ಮಾತು-ಕಥೆಯಲ್ಲಿದ್ದ ದೇವ್ ಧಡಬಡಿಸಿ ಹೋಗಿ ಅವರನ್ನು ಸ್ವಾಗತಿಸಿದರು. ಸ್ವಲ್ಪ ಕುಳ್ಳು ಎನ್ನಬಹುದಾದ ತೆಳ್ಳನೆಯ ಶರೀರದ, ಮಧ್ಯೆ ಬೈತಲೆ ತೆಗೆದು ಹಿಂದೆ ಬಾಚಿದ ಕೂದಲಿನ, ಅಷ್ಟೇನೂ ದಟ್ಟವಲ್ಲದ ಗಡ್ಡದ, ದಪ್ಪ ಪ್ರೇಮಿನ ಕನ್ನಡಕದ ಹಿಂದಿರುವ ಪ್ರಖರವಾದ ಕಣ್ಣಿನ, ಹೆಗಲಿಗೆ ಬಗಲು ಚೀಲವೊಂದನ್ನ ನೇತು ಹಾಕಿಕೊಂಡಿದ್ದÀ ವ್ಯಕ್ತಿಯೊಬ್ಬರು ಬಂದು ನಮ್ಮ ಮುಂದಿನ ವೇದಿಕೆಯಲ್ಲಿ ಕೂತರು. ವೇದಿಕೆ ಅಂದರೆ ಅದೇ ಎದುರು ಕೂರುವದು. ರಾಮಚಂದ್ರ ದೇವ್ ನನ್ನನ್ನು ಆಹ್ವಾನಿಸಿ ಅವರ ಪಕ್ಕ ಕೂರಿಸಿದರು. ಅಷ್ಟರಲ್ಲೇ ಬಂದ ಚಂದ್ರಶೇಖರ ಕಂಬಾರರು ವೇದಿಕೆಗೆ ಬಂದು ಕೂತರು. ನನಗೆ ಹೊಸದಾಗಿ ಬಂದ ವ್ಯಕ್ತಿಯನ್ನು ಏಲ್ಲೋ ನೋಡಿದ್ದೆನಲ್ಲಾ? ಎನ್ನುವ ಅನಿಸಿಕೆ ಮನಸ್ಸಿನಲ್ಲಿ ಕೊರೆಯತೊಡಗಿ ವೇದಿಕೆಗೆ ಬಂದು ಕೂತರೂ ಯಾರು? ಎಂದು ಹೊಳೆಯುತ್ತಿರಲಿಲ್ಲ. ರಾಮಚಂದ್ರ ದೇವ್ ಇವತ್ತಿನ ನಮ್ಮ ಆಹ್ವಾನಿತರು ಕೆ.ವಿ.ಸುಬ್ಬಣ್ಣ ಎಂದು ಅವರ ಕುರಿತು ಪರಿಚಯಿಸತೊಡಗಿದಾಗ ಅವರ ಮುಂದಿನ ಮಾತುಗಳು ಕೇಳಿಸುತ್ತಲೇ ಇಲ್ಲ. ಓಹ್! ಇವರು ಹೆಗ್ಗೋಡಿನ ಸುಬ್ಬಣ್ಣ. ಕೆಲವು ವಾರಗಳ ಹಿಂದಷ್ಟೇ ಹೆಗ್ಗೋಡಿನ ನೀನಾಸಂ ಬಗ್ಗೆ ತರಂಗ ವಾರಪತ್ರಿಕೆಯಲ್ಲಿ ನಾ.ಡಿಸೋಜಾ ಅವರಿಂದ ಮುಖಪುಟದ ಅಗ್ರಲೇಖನವಾಗಿ ಪ್ರಕಟಗೊಂಡಿತ್ತು. ಅಲ್ಲಿ ಸುಬ್ಬಣ್ಣನವರ ಫೋಟೊ ನೋಡಿದ್ದೆ. ಈಗ ಅದು ನಿಚ್ಛಳವಾಗತೊಡಗಿತು. ಸಣ್ಣಗೆ ಬೆವರು ಮೈಯಲ್ಲಿ ಓಸರತೊಡಗಿತ್ತು, ಈ ಪಕ್ಕ ಕಂಬಾರ, ಆ ಪಕ್ಕ ಸುಬ್ಬಣ್ಣ. ಅವರಿಬ್ಬರ ಸಿದ್ಧಿ, ಪ್ರಸಿದ್ಧಿ ನನ್ನ ಅರಿವಿನ ತೆಕ್ಕೆಗೆ ಬಾರದಿದ್ದರೂ ಅವರು ಕನ್ನಡ ರಂಗಭೂಮಿಯ ಶ್ರೇಷ್ಠರೆನ್ನುವದರಲ್ಲಿ ಯಾವುದೇ ಅನುಮಾನವಿರಲಿಲ್ಲ. ನಾಟಕ ಕೃತಿಯನ್ನು ಸಾಕಷ್ಟು ಬಾರಿ ಓದಿ, ಹೇಳಬಹುದಾದದ್ದನ್ನು ಒಂದಿಷ್ಟು ಬರೆದುಕೊಂಡು,ಹುಂಬ ಧೈರ್ಯದಲ್ಲಿ ಸಿದ್ಧನಾಗಿದ್ದವನ ಜಂಘಾಬಲ ಉಡುಗತೊಡಗಿತ್ತು. ಹೇಳಬೇಕೆಂದುಕೊಂಡದ್ದು ನೆನಪಿದ್ದರೂ ನಾನು ಹೇಳುವದು ಅಸಂಬದ್ಧವಾಗಬಹುದು ಅನ್ನಿಸತೊಡಗಿತು. ನಾಟಕಗಳ ಬಗ್ಗೆ, ಅದರಲ್ಲೂ ಮೊದಲ ಬಾರಿಗೆ ಓದಿದ ನಾಟಕದ ಬಗ್ಗೆ ನನ್ನ ವಿವರಣೆಗಳು ಕಣ್ಣುಕಟ್ಟಿನ, ಗೊತ್ತಿಲ್ಲದಿದ್ದರೂ, ಗೊತ್ತಿರುವಂತೆ ತೋರಿಸಿಕೊಳ್ಳುವ ಸ್ವಪ್ರದರ್ಶನದ ಜೊತೆಗೆ ನನಗೇ ನಾನೇ ಸುಳ್ಳಾಗುವ ಸಂದರ್ಭವಾಗಬಹುದು ಅನ್ನಿಸತೊಡಗಿತು. ಅದಕ್ಕೇ ನಾನು ನೇರವಾಗಿ ಹೇಳಿದೆ. ‘ನನಗೆ ರಂಗಭೂಮಿಯ ಬಗ್ಗೆ ಏನೆಂದರೆ ಏನೂ ಗೊತ್ತಿಲ್ಲ, ಕಲಿಯುವ ಆಸಕ್ತಿಯಿಂದ ಬಂದಿದ್ದೇನೆ. ರಾಮಚಂದ್ರ ದೇವ್ ಒಳ್ಳೆಯ ಅವಕಾಶ ಒದಗಿಸಿದ್ದರೂ ನನ್ನಲ್ಲಿ ಆ ಸಾಮಥ್ರ್ಯವಿಲ್ಲ. ಸುಮ್ಮನೆ ಏನಾದರೂ ಮಾತನಾಡಲು ನಾನು ಸಿದ್ಧನಿಲ’್ಲ ಎಂದುಬಿಟ್ಟೆ. ಒಂದು ಕ್ಷಣ ಮೌನ. ಅಕ್ಕಪಕ್ಕದಲ್ಲಿದ್ದವರು, ನಮ್ಮ ಶಿಬಿರಾರ್ಥಿಗಳು ಎಲ್ಲರೂ ಕಕ್ಕಾಬಿಕ್ಕಿ. ಅರೆಘಳಿಗೆಯಲ್ಲೇ ಸುಬ್ಬಣ್ಣ ‘ಏನೂ ತೊಂದರೆಯಿಲ್ಲ. ಇವರು ಹೇಳಿದ್ದು ಸರಿಯಾಗಿಯೇ ಇದೆ. ಗೊತ್ತಿಲ್ಲದ್ದರ ಬಗ್ಗೆ ಕಾಟಾಚಾರಕ್ಕೆ ಮಾತನಾಡುವ ಬದಲು ತಮಗನ್ನಿಸಿದ್ದನ್ನು ಹೇಳಿದ್ದಾರೆ. ಅವರ ಸಮಯವನ್ನು ನಾನು ತೆಗೆದುಕೊಂಡು ಮಾತನಾಡುತ್ತೇನೆ’ ಎಂದು ನಾಟಕದ ವಿವರಗಳ ಬಗ್ಗೆ ತಮ್ಮ ಮಾತು ಶುರು ಹಚ್ಚಿಯೇ ಬಿಟ್ಟರು. ವೇದಿಕೆಯಿಂದ ಜಾರಲೆತ್ನಿಸಿದ ನನ್ನನ್ನ ಅಲ್ಲಿಯೇ ಕೂರುವಂತೆಯೂ ಸೂಚಿಸಿದರು.
ಅವತ್ತು ಸುಬ್ಬಣ್ಣ ನಮ್ಮಂಥ ಕಿರಿಯರಿಗೆ ಮತ್ತಷ್ಟು ಆಸಕ್ತಿ ಹುಟ್ಟುವ ರೀತಿಯಲ್ಲಿ, ನನ್ನಂಥವನ ಆಗಿನ ತಿಳುವಳಿಕೆಗೆ ಅರ್ಥವಾಗುವ ಸರಳ ರೀತಿಯಲ್ಲಿ ( ತಮ್ಮ ಮಾತುಗಳು ಪೇಲವವಾಗದಂತೆ) ಮಾತನಾಡಿದ್ದರು. ನನ್ನ ಬುದ್ದಿಗೆ ಪಡೆಯುವಷ್ಟನ್ನು ನಾನು ತಿಳಿದುಕೊಂಡಿದ್ದೆ.
ಆ ಕಾರ್ಯಕ್ರಮ ಮುಗಿದ ನಂತರ ಸುಬ್ಬಣ್ಣನವರಿಗೆ ಅಭಾರ ಸಲ್ಲಿಸಲಾಯಿತು. ನನಗೆ ಮಾತನಾಡಲಾಗದಿದ್ದದ್ದು ನನ್ನ ಸೋಲು ಎನ್ನಿಸುತ್ತಿದ್ದರೂ ಆಗಿನ ನನ್ನ ಹುಡುಗು ಬುದ್ದಿಗೆ ಸ್ವಪ್ರತಿಷ್ಠೆ, ಬೌದ್ಧಿಕ ತಿಳುವಳಿಕೆ ಮುಂತಾದ ಫಂಗಸ್‍ಗಳು ಅಂಟಿರದ ಕಾರಣಕ್ಕೆ ಶಾಲೆಯ ಕ್ಲಾಸಿನಲ್ಲಿ ಗುರುಗಳು ಕೇಳಿದ ಯಾವುದೋ ಪ್ರಶ್ನೆಗೆ ಉತ್ತರ ಹೇಳಲಾಗದಿದ್ದ ಸ್ಥಿತಿಯಂತೇ ಅನಿಸುತ್ತಿತ್ತು. ನನ್ನ ಆತ್ಮಾಭಿಮಾನಕ್ಕೆ ಅಂಥ ಏಟೇನೂ ಬಿದ್ದಿರಲಿಲ್ಲ. ನನಗಾದರೂ ಏನು ಗೊತ್ತಿತ್ತು? ಈ ಘಟನೆಯೇ ನನ್ನನ್ನು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಾದ ವ್ಯಕ್ತಿಯೊಬ್ಬರ ಜೊತೆ ಒಡನಾಟವಿರಿಸಿಕೊಳ್ಳುವ ಅವಕಾಶವನ್ನ ಕಲ್ಪಿಸಿಕೊಡುತ್ತದೆ ಎಂದು.
ಸಂಸ ರಂಗಮಂದಿರದಿಂದ ಹೊರಡುವ ಕೊನೆ ಕ್ಷಣದಲ್ಲಿ ಸುಬ್ಬಣ್ಣ ನನ್ನನ್ನ ಕರೆದರು. ಅವರಿಗೆ ನಾನು ಅವರೂರ ಹತ್ತಿರದವನು ಎನ್ನುವ ಪ್ರೀತಿಯೂ ಇದ್ದಿರಬೇಕು; ನನ್ನ ಬಗ್ಗೆ ವಿಚಾರಿಸಿ ತಿಳಿದುಕೊಂಡರು. ಅವತ್ತಿನ ನನ್ನ ನಡವಳಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಗೊತ್ತಿಲ್ಲದ್ದನ್ನ ಗೊತ್ತಿಲ್ಲ ಎಂದರೆ ಅವಮಾನವೇನಿಲ್ಲ, ತಿಳಿದುಕೊಳ್ಳುವದು ಮುಖ್ಯ ಎಂದೆಲ್ಲ ಹೇಳಿ, ಕಮ್ಮಟ ಮುಗಿಸಿ ಬಂದವರು ಹೆಗ್ಗೋಡಿಗೆ ಬನ್ನಿ ಎಂದರು.
ಗಂಗಾಧರ ಕೊಳಗಿ—
(ಮುಂದಿನ ಭಾಗ ಜುಲೈ-5 ರವಿವಾರ)