ತೇಜಸ್ವಿ ಎಂಬ ವಿಸ್ಮಯ
ಬರೆಯುವಾಗಿನ ಕಷ್ಟ ಮತ್ತು ಬರೆದ ನಂತರದ ನಿರಾಳ ಸುಖ ಬರೆಹಗಾರರಿಗೆಲ್ಲ ಅನುಭವಗ್ರಾಹಿಯಾದದ್ದೇ. ಆದರೆ ಕತೆ, ಕಾದಂಬರಿ, ಕವಿತೆ ಮುಂತಾದವನ್ನು ಬರೆಯುವಾಗಿನದಕ್ಕಿಂತ ಬೇರೊಬ್ಬರ ಜೊತೆಗಿನ ನಮ್ಮ ಅನುಭವಗಳನ್ನು ದಾಖಲಿಸುವದು ನಿಜಕ್ಕೂ ಕಷ್ಟದ ಕೆಲಸ. ನಮ್ಮ ಮನಸ್ಸಿನಲ್ಲಿ ಸ್ಮೃತಿಯಾಗಿ ಅಡಗಿಕೊಂಡವುಗಳನ್ನು ಮತ್ತೆ ಸಾಕ್ಷಾತ್ಕರಿಸಿಕೊಳ್ಳುತ್ತ, ಯಾವ ಉತ್ಪ್ರೇಕ್ಷೆ, ಕಲ್ಪನೆಗಳಿಗೆ ಆಸ್ಪದ ಕೊಡದೇ ನಿಜವಾಗಿ ನಡೆದ ಘಟನೆಗಳನ್ನ ಬರೆಯುವದು ಸವಾಲಿನ ಮತ್ತು ಸಂಕಷ್ಟದ ಕೆಲಸವೆಂದು ‘ಅದ್ಯೋತ’ಕ್ಕೆ ಬರೆಯುತ್ತಿರುವ ಈ ಸರಣಿಯಲ್ಲಿ ಅನುಭವಕ್ಕೆ ಬಂದಿದೆ.
ಸ್ವಲ್ಪವೇ ವ್ಯತ್ಯಾಸವಾದರೂ ನನ್ನ ಅನುಭವ ಕಾಲ್ಪನಿಕ ಅನ್ನಿಸಿಬಿಡಬಹುದಾದ ಅಥವಾ ಒಡನಾಟದ ಮೂಲಕ ಅನುಭವಗಳನ್ನು ಒದಗಿಸಿದ ಮಹನೀಯರ ವ್ಯಕ್ತಿತ್ವಕ್ಕೆ ಧಕ್ಕೆಯಾಗಬಹುದಾದ ಎಲ್ಲ ಸಾಧ್ಯತೆಗಳೂ ಇರುತ್ತವೆ. ಅದು ಮಾತ್ರವಲ್ಲದೇ ಮನಸ್ಸಿನೊಳಕ್ಕೆ ಕೊಕ್ಕೆ ಹಾಕಿ ಅಲ್ಲಿ ಅಂತರ್ಗತವಾಗಿರುವ ನೆನಪುಗಳನ್ನು ಎಳೆದು ಮೇಲೆತ್ತುವ ಸ್ಥಿತಿ ನಿಜಕ್ಕೂ ಹಿಂಸೆಯೇ. ಎಷ್ಟೆಲ್ಲ ಸಂತೋಷ, ಖುಷಿ ಕೊಟ್ಟ ಅಂದಿನ ಅನುಭವ ಮತ್ತೆ ಸಿಗದಲ್ಲ ಎನ್ನುವ ವೇದನೆಯೂ ಆಗುತ್ತದೆ. ಏನೇ ಇದ್ದರೂ ನನ್ನ ಅನುಭವ, ನೆನಪುಗಳಿಗೆ ದ್ರೋಹ ಬಗೆಯದೇ ನಿಜವಾಗಿ ಬರೆದಿದ್ದೇನೆ ಎನ್ನುವ ತೃಪ್ತಿ ನನಗಿದೆ.
ಇಷ್ಟೆಲ್ಲ ಪುರಾಣ ಯಾಕೆ ಹೇಳುತ್ತಿದ್ದೇನೆ ಅಂದರೆ ತೇಜಸ್ವಿಯವರ ಜೊತೆಗಿನ ಒಡನಾಟದ ಅನುಭವಗಳ ಕೊನೆಯ ಕಂತನ್ನು ಬರೆಯಲು ಸಾಧ್ಯವಾಗುತ್ತಲೇ ಇಲ್ಲ. ಯಾಕೆ ಅನ್ನುವದು ನನಗೂ ಅರ್ಥವಾಗಲಿಲ್ಲ. ಹಿರಿಯ ಸ್ನೇಹಿತರಾದ ಮತ್ತು ಕುವೆಂಪು ಹಾಗೂ ತೇಜಸ್ವಿಯವರ ಕುರಿತು ಅಪಾರ ಅಭಿಮಾನ ಇಟ್ಟುಕೊಂಡಿರುವ ಕೋಟೆಕೊಪ್ಪ ಶ್ರೀಧರ ಗೌಡರ ಬಳಿ ಇದನ್ನು ತೋಡಿಕೊಂಡಾಗ ಅವರ ಮಾತುಗಳು ಕೊಂಚ ನಿರಾಳತೆಯನ್ನು ಕೊಟ್ಟವು.
ತೇಜಸ್ವಿಯವರ ಬಗ್ಗೆ ನಾನು ತೃಣ ಮಾತ್ರದ ಚಿತ್ರಣವನ್ನೇ ಕೊಟ್ಟಿರುವದು. ಅವರ ವ್ಯಕ್ತಿತ್ವ, ವಿಚಾರಧಾರೆ, ಸಾಧನೆ ಇವೆಲ್ಲ ಅತ್ಯಂತ ವಿಸ್ತಾರ ಮತ್ತು ನನ್ನಂಥ ಕಿರಿಯನ ಗ್ರಹಿಕೆಗೂ ಧಕ್ಕದಂಥದ್ದು ಎಂದೇ ಭಾವಿಸಿದ್ದೇನೆ.
ಅವರು ತಮ್ಮ ತಂದೆ ಕುವೆಂಪು ಕುರಿತಾದ ಅಣ್ಣನ ನೆನಪು ಪುಸ್ತಕದಲ್ಲಿ ಬರೆದ ಕೆಲವು ಸಾಲುಗಳು ಅದನ್ನು ಪುಷ್ಠಿಕರಿಸುತ್ತವೆ ಅಂದುಕೊಂಡಿದ್ದೇನೆ. ‘ ಮನಸ್ಸು ಅಥವಾ ಅರಿವು ವಾಸ್ತವವನ್ನು ತಟಸ್ಥವಾಗಿ ಪ್ರಥ:ಕರಿಸುವ ನಿರ್ಜೀವ ಕನ್ನಡಿಯಂತಲ್ಲ. ಇಂದ್ರಿಯಗಳ ನೂರಾರು ಮಾರ್ಗಗಳ ಮುಖಾಂತರ ನಿರಂತರವಾಗಿ ಮನಸ್ಸಿಗೆ ರವಾನಿಸಲ್ಪಡುವ ವಾಸ್ತವದ ತುಣುಕುಗಳನ್ನು ಸಂಯೋಜಿಸುತ್ತ ನಮ್ಮೊಳಗಿನ ವಿಶ್ವವನ್ನು ವಿಸ್ತರಿಸುತ್ತಾ, ಪುನರ್ರೂಪಿಸುತ್ತ ಹೋಗುತ್ತದೆ. ಪ್ರತಿ ಹೊಸ ಅರಿವೂ ನಮ್ಮ ಆಂತರಿಕ ವಿಶ್ವದ ಮೊತ್ತವನ್ನು ವಿಸ್ತರಿಸುವದಲ್ಲದೇ ಅದರ ಒಟ್ಟೂ ಸಂಯೋಜನೆಯಲ್ಲೇ ಗುಣಾತ್ಮಕ ಬದಲಾವಣೆಯನ್ನು ಮಾಡುತ್ತದೆ. ಅತ್ಯಂತ ದುರ್ಬಲವಾಗಿ ಕಾಣುವ ಪದಪುಂಜಗಳು, ವಾಕ್ಯ ಸಮುಚ್ಛಯಗಳು ಸಹಸ್ರಾರು ವರ್ಷಗಳ ಹಿಂದೆ ಬದುಕಿದ್ದ ಕವಿಯೊರ್ವನ ಅತ್ಯಂತ ಕ್ಷಣಿಕ ಭಾವಸ್ಪಂದನವನ್ನು ಅಜರಾಮರವಾಗಿ ಉಳಿಸುತ್ತವೆ! ಎನ್ನುತ್ತಾರೆ ತೇಜಸ್ವಿ.
ಇಡೀ ಆಧುನಿಕ ಸಮಾಜವೇ ಮನುಷ್ಯನ ವಿಶ್ಲೇಷಣಾತ್ಮಕ ಪ್ರತಿಭೆಯ ನಿರ್ಮಿತಿ. ಆದರೆ ಅನೇಕ ವಾಸ್ತವಗಳು ಮನುಷ್ಯನ ವಿಶ್ಲೇಷಣಾತ್ಮಕ ಪ್ರತಿಭೆಯ ಗಡಿಯಾಚೆಗೆ ನಿಲುಕದೇ ಉಳಿಯುತ್ತವೆ. ವಿಶ್ಲೇಷಿಸುತ್ತ, ವಿಭಜಿಸುತ್ತ ಬಹು ದೂರ ಬಂದಿರುವ ನಮ್ಮ ವೈಜ್ಞಾನಿಕ ನಾಗರಿಕತೆಗೆ ಇಂದು ಪರಿಸರ ವಿಜ್ಞಾನ ಅಥವಾ ಇಕಾಲಜಿ ಸತ್ಯದ ಹೊಸ ಹೊಸ ಆವಿಷ್ಕಾರಗಳನ್ನು, ಅರಿವಿನ ಸಂಶ್ಲೇಷಿತ ರೂಪಗಳನ್ನು ತೋರಿಸುತ್ತ ಇವೆ. ಅಮೇಜಾನಿನ ಕಾಡುಗಳಾಗಲೀ, ಆಫ್ರಿಕದ ನದಿಗಳಾಗಲೀ, ಮಧ್ಯಪ್ರಾಚ್ಯದ ಯುದ್ಧವಾಗಲಿ, ಚೆರ್ನೋಬಿಲ್ ಅನಾಹುತಗಳಾಗಲಿ ಭೂಮ್ಯಂತರಿಕ್ಷಗಳ ಸಮಗ್ರತೆಯಲ್ಲಿ ಇಡೀ ಮನುಕುಲದ ಹಣೆಬರಹವನ್ನಾಗಿ ನೋಡಿದಾಗ ನಮಗೆ ಹೊಳೆಯುವ ಸತ್ಯಗಳು ಅದರ ಪ್ರತ್ಯೇಕತೆಯಲ್ಲಿ ಅನಿಸುವದೇ ಇಲ್ಲ. ಅಖಂಡ ಸತ್ಯ, ಪೂರ್ಣ ದೃಷ್ಟಿ, ಅನೇಕತೆಯಲ್ಲಿ ಏಕತೆ ಮುಂತಾದ ಮಾತುಗಳನ್ನು ನಾವು ಆಗಾಗ್ಗೆ ಕೇಳುತ್ತ ಮತ್ತು ಹೇಳುತ್ತ ಇರುತ್ತೇವೆ. ಅನೇಕ ಸಾರಿ ಈ ಮಾತುಗಳು ನಮಗೆ ತರ್ಕಗತವಾಗಿರುತ್ತವೆಯೇ ಹೊರತು ಹೃದ್ಗತವಾಗಿರುವದಿಲ್ಲ. ನಮ್ಮ ಒಳಗಿನ ಮತ್ತು ಹೊರಗಿನ ವಿಶ್ವಕ್ಕೆ ಎಲ್ಲೆಕಟ್ಟುಗಳೇ ಇಲ್ಲದೇ ನಿರ್ದಿಗಂತವಾಗಿರುವಾಗ ಪೂರ್ಣತೆ ಮತ್ತು ಅಖಂಡತೆ ನಿಜವಾಗಿಯೂ ಸಾಧ್ಯವೇ? ಯಾವುದನ್ನು ಎಷ್ಟು ಪರಿಪೂರ್ಣವಾಗಿ ತಿಳಿದಿದ್ದೇವೆಂದು ಅಂದುಕೊಂಡರೂ ಬೇರೊಂದು ದೃಷ್ಟಿಕೋನದಿಂದ ಅದು ಅಪರಿಪೂರ್ಣ ಅರ್ಧಸತ್ಯವಾಗಿಯೇ ಉಳಿಯುವದಿಲ್ಲವೇ?
ತೇಜಸ್ವಿಯವರ ಈ ಅಭಿಪ್ರಾಯಗಳನ್ನು ಓದುವಾಗ ವಿಸ್ಮಯವೂ ಆಗುತ್ತದೆ. ಸಾಹಿತಿಯಾಗಿ, ಕೃಷಿಕನಾಗಿ, ಛಾಯಾಗ್ರಾಹಕನಾಗಿ, ಪರಿಸರ ತಜ್ಞನಾಗಿ ನಮ್ಮೆದುರು ಕಾಣುವ ತೇಜಸ್ವಿ ಓರ್ವ ಆಧ್ಯಾತ್ಮಿಕ ದಾರ್ಶನಿಕ, ವಿಜ್ಞಾನಿ, ಸಂಶೋಧಕ, ವಾಸ್ತವದ ನೆಲೆಯಲ್ಲಿ ನಿಂತು ಕಾಲ,ದೇಶಗಳನ್ನು ಅರಿಯುವ ತೆರೆದ ಮನಸ್ಸಿನ ಅಪ್ಪಟ ಮನುಷ್ಯನಾಗಿ ಕಾಣುತ್ತಾರೆ. ನಿಂತ ನೀರಾಗಿ ಬಿಡುವ ಶುದ್ಧ(?) ಸಾಹಿತ್ಯದ ಓದು, ಬರವಣಿಗೆಯನ್ನು ಮೌನವಾಗಿಯೇ ನಿರಾಕರಿಸಿ, ಈ ವಿಶ್ವದ ಎಲ್ಲದರ ಬಗ್ಗೆಯೂ ಕುತೂಹಲದ ಮತ್ತು ಚಿಕಿತ್ಸಕ ದೃಷ್ಟಿಕೋನವನ್ನ ಹೊಂದಿದ್ದ ತೇಜಸ್ವಿ ಅಪರೂಪದವರೇ ಸರಿ. ಶಿವರಾಮ ಕಾರಂತರನ್ನು ಬಿಟ್ಟರೆ ಇಷ್ಟೊಂದು ಗಾಢವಾಗಿ ತನ್ನ ಮನಸ್ಸಿನ ಕಿಟಕಿಯನ್ನು ವಿಶ್ವವನ್ನು ಕಾಣಲು ತೆರೆದುಕೊಂಡ ಬರೆಹಗಾರ ಪ್ರಾಯಶ: ಯಾರೂ ಇಲ್ಲ ; ನನ್ನ ತಿಳುವಳಿಕೆಯ ಮಟ್ಟಿಗೆ.
ಮೇಲ್ನೋಟಕ್ಕೆ ತುಂಬ ತಮಾಷೆಯಾಗಿ ಕಂಡರೂ ಅವರ ಬರಹಗಳಲ್ಲಿ ಗಂಭೀರವಾದ, ಮನುಷ್ಯನಾದವನು ತನಗೆ ತಾನು ಕೇಳಿಕೊಳ್ಳಲೇ ಬೇಕಾದ ಪ್ರಶ್ನೆಗಳು ಅಡಕವಾಗಿಯೇ ಇರುತ್ತವೆ. ಹೊಸ ದಿಗಂತದ ಕಡೆಗೆ ಎನ್ನುವ ತಾವೇ ರೂಪಿಸಿಕೊಂಡ ಜಾಡು ಅವರನ್ನು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಠವಾದ ಮತ್ತು ಉಳಿದ ಬರಹಗಾರರಿಗಿಂತ ವಿಭಿನ್ನವಾಗಿ ಕಾಣುವ ವ್ಯಕ್ತಿತ್ವವನ್ನು ದೊರಕಿಸಿಕೊಟ್ಟದ್ದು. ಅವರ ಕತೆಗಳಿರಲಿ, ಕಾದಂಬರಿಗಳಿರಲಿ, ಬೇಟೆಗಾರರ ಅನುಭವ ಕಥನವಾಗಿರಲಿ, ಅದ್ಭುತ ಜಗತ್ತು ಎನ್ನುವ ಸರಣಿಗಳ ಬರಹವಾಗಿರಲಿ, ಅಣ್ಣನ ನೆನಪು ಪಾಕಕ್ರಾಂತಿ ಮುಂತಾದ ಸ್ವಾನುಭವದ ನಿರೂಪಣೆಗಳಾಗಿರಲಿ, ಪ್ಯಾಪಿಲಾನ್‍ನಂಥ ರೋಚಕ, ವಿಸ್ಮಯದ ಭಾವಾನುವಾದವಾಗಲೀ.. ಎಲ್ಲದರಲ್ಲೂ ತೇಜಸ್ವಿಯವರ ಗ್ರಹಿಕೆ, ನಿರೂಪಣೆಗಳೆಲ್ಲ ವೈಶಿಷ್ಠ್ತ ಮತ್ತು ವಿಭಿನ್ನ. ಇವೆಲ್ಲ ಅವರನ್ನು ಉತ್ಪ್ರೇಕ್ಷಿತವಾಗಿ ಕಾಣುವ ವಿಧಾನ ಅನ್ನುವ ಬೇಸರವಾದರೂ ಹೇಳಲೇಬೇಕಾದ ಮಾತುಗಳು ನನ್ನೊಳಗಿನ ಒತ್ತಡದಿಂದ ಹೊರಬಂದಂಥವು. ತೇಜಸ್ವಿಯವರ ಕುರಿತಾಗಿ ನನಗಿಂತ ಅವರ ಅಪಾರ ಓದುಗರಿಗೆ ಹೆಚ್ಚಿನ ತಿಳುವಳಿಕೆ ಇದೆ ಎನ್ನುವ ವಿಶ್ವಾಸ ನನ್ನದು.
ಯಾಕೋ, ಏನೋ? ತೇಜಸ್ವಿ ಪದೇ ಪದೇ ಕಾಡುವ, ಮನಸ್ಸಿನಲ್ಲಿ ಖಾಯಂ ಆಗಿ ಸ್ಥಾಪಿತವಾದ ಅವೀಸ್ಮರಣಿಯ ವ್ಯಕ್ತಿತ್ವವಾಗಿ ಉಳಿದುಕೊಂಡು ಬಿಟ್ಟಿದ್ದಾರೆ. ಆ ನೆನಪು ಶಾಶ್ವತವಾಗಿರಲಿ ಎನ್ನುವ ಕಾರಣಕ್ಕೆ ನನ್ನ ಮಗನಿಗೆ ಅವರ ಹೆಸರನ್ನೇ ಇಟ್ಟುಕೊಂಡಿದ್ದೇನೆ. ದಿನಕ್ಕೆ ಹಲವಾರು ಬಾರಿ ನೆನಪಾಗುತ್ತಿರಲಿ ಎಂದು. ಇದು ಅವರಿಗೆ ಸಲ್ಲಿಸಬಹುದಾದ ಕೃತಜ್ಞತೆ ಮತ್ತು ಪ್ರೀತಿ ಎಂದು ಭಾವಿಸಿದ್ದೇನೆ.
ವಂದನೆಗಳು.
ಗಂಗಾಧರ ಕೊಳಗಿ
ಗಂಗಾಧರ್ ಕೊಳಗಿ ಅವರಿಗೆ ನಮಸ್ಕಾರಗಳು,
ಪೂರ್ಣಚಂದ್ರ ತೇಜಸ್ವಿ ಅವರ ಜೊತೆಗಿನ
ಒಡನಾಟದ ಅನುಭವಗಳ ಕೊನೆಯ ಕಂತು ಇದೀಗತಾನೆ ಓದಿದೆ. ತುಂಬಾ ಚೆನ್ನಾಗಿ ಬರೆದಿದ್ದೀರ.
ಈ ಕೊನೆಯ ಕಂತನ್ನು ಬರೆಯಲು ಕಷ್ಟವಾಗುತ್ತಿದೆ ಹೇಗೆ ಲೇಖನವನ್ನು ಮುಗಿಸಬೇಕೆಂದು ಗೊತ್ತಾಗುತ್ತಿಲ್ಲ ಆದುದರಿಂದ ಕೊನೆಯ ಕಂತು ಬರೆಯಲು ಬಹಳ ದಿವಸಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ನಿಮ್ಮಂತೆಯೇ ಇಷ್ಟಪಟ್ಟು ಓದುವ ಓದುಗರಿಗೆ ತಡ ಮಾಡುತ್ತಿದ್ದೇನಲ್ಲ ಎಂಬ ಬೇಸರ ನನ್ನನ್ನು ಕಾಡುತ್ತಿದೆ ಎಂದು ನೀವು ಕೆಲವು ದಿವಸಗಳ ಹಿಂದೆ ನನ್ನೊಡನೆ ನಿಮ್ಮ ಮನಸ್ಸಿನ ಭಾವನೆಯನ್ನು ಹಂಚಿಕೊಂಡಿದ್ರಿ.
ಅದನ್ನು ಕೂಡ ಯಥಾವತ್ತಾಗಿ ಯಾವ ಸಂಕೋಚವೂ ಇಲ್ಲದೆ ಲೇಖನದಲ್ಲಿ ನನ್ನ ಹೆಸರನ್ನು ಪ್ರಸ್ತಾಪಿಸುವ ಮುಖಾಂತರ ಸಹಜವಾದ ಬರವಣಿಗೆ ಹೇಗಿರಬೇಕು ಎಂಬುದಕ್ಕೆ ಉದಾಹರಣೆ ಎಂಬಂತೆ ಬರೆದಿದ್ದೀರಿ.
ಎಲ್ಲಾ ಕಂತುಗಳಲ್ಲೂ ನಿಮ್ಮ ಬರವಣಿಗೆ ಅದ್ಭುತವಾಗಿ ಮೂಡಿ ಬಂದಿದೆ. ಲೇಖನಮುಗಿದು ಹೋಯಿತಲ್ಲ ಎಂಬ ಬೇಸರ ನನ್ನನ್ನು ಕಾಡುತ್ತಿದೆ.
ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶಿಸುವ ಯಾವುದೇ ಆಡಂಬರವಿಲ್ಲದ ಸಹಜತೆಯಿಂದ ಕೂಡಿದ ಒಂದು ಚಲನಚಿತ್ರ ನೋಡಿದಂತೆ ನನಗೆ ಅನಿಸುತ್ತಿದೆ. ಅಷ್ಟರಮಟ್ಟಿಗೆ ನಿಮ್ಮ ಲೇಖನ ನನ್ನ ಮನ ಮುಟ್ಟಿದೆ ಹೃದಯ ತಟ್ಟಿದೆ.
ನಿಮ್ಮ ಬರವಣಿಗೆಯ ಪಯಣ ನಿರಂತರವಾಗಿರಲಿ
………ಕೋಟೆಕೊಪ್ಪ ಹೆಚ್. ಪಿ. ಶ್ರೀಧರ್ ಗೌಡ “ಕನ್ನಡಸೇನೆ ಕರ್ನಾಟಕ” ತೀರ್ಥಹಳ್ಳಿ
ಗಂಗಾಧರ್ ಕೊಳಗಿ ಅವರಿಗೆ ನಮಸ್ಕಾರಗಳು, ಪೂರ್ಣಚಂದ್ರ ತೇಜಸ್ವಿ ಅವರ ಜೊತೆಗಿನ ಒಡನಾಟದ ಅನುಭವಗಳ ಕೊನೆಯ ಕಂತು ಇದೀಗತಾನೆ ಓದಿದೆ. ತುಂಬಾ ಚೆನ್ನಾಗಿ ಬರೆದಿದ್ದೀರ.
ಈ ಕೊನೆಯ ಕಂತನ್ನು ಬರೆಯಲು ಕಷ್ಟವಾಗುತ್ತಿದೆ, ಹೇಗೆ ಲೇಖನವನ್ನು ಮುಗಿಸಬೇಕೆಂದು ಗೊತ್ತಾಗುತ್ತಿಲ್ಲ ಆದುದರಿಂದ ಕೊನೆಯ ಕಂತು ಬರೆಯಲು ಬಹಳ ದಿವಸಗಳನ್ನು ತೆಗೆದುಕೊಳ್ಳುತ್ತಿದೇನೆ. ನನ್ನ ಲೇಖನವನ್ನು ನಿಮ್ಮಂತೆಯೇ ಕುತೂಹಲದಿಂದ ಇಷ್ಟಪಟ್ಟು ಓದುವ ಓದುಗರಿಗೆ ತಡ ಮಾಡುತ್ತಿದ್ದೇನಲ್ಲ ಎಂಬ ಬೇಸರ ನನ್ನನ್ನು ಕಾಡುತ್ತಿದೆ ಎಂದು ನೀವು ಕೆಲವು ದಿವಸಗಳ ಹಿಂದೆ ನನ್ನೊಡನೆ ಹಂಚಿಕೊಂಡಿದ್ರಿ. ನಿಸ್ಸಂಕೋಚವಾಗಿ ಅದನ್ನೂ ಕೂಡ ಯಥಾವತ್ತಾಗಿ ಈ ಲೇಖನದಲ್ಲಿ ನನ್ನ ಹೆಸರನ್ನು ಪ್ರಸ್ತಾಪಿಸುವ ಮುಖಾಂತರ ಸಹಜವಾದ ಬರವಣಿಗೆ ಯಾವ ರೀತಿ ಇರಬೇಕು ಎಂಬುದಕ್ಕೆ ಇದು ಉದಾಹರಣೆಯಾಗಿದೆ.
ಎಲ್ಲಾ ಕಂತುಗಳಲ್ಲಿ ನಿಮ್ಮ ಬರವಣಿಗೆ ಅದ್ಭುತವಾಗಿ ಮೂಡಿಬಂದಿದೆ.
ಲೇಖನ ಮುಗಿಯುತ್ತಿದೆಯಲ್ಲ ಎಂಬ ಬೇಸರ ನನ್ನನ್ನು ಕಾಡುತ್ತಿದೆ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶಿಸುವ ಯಾವುದೇ ಆಡಂಬರವಿಲ್ಲದ ಸಹಜತೆಯಿಂದ ಕೂಡಿದ ಒಂದು ಚಲನಚಿತ್ರ ನೋಡಿದಂತೆ ಅನ್ನಿಸುತ್ತಿದೆ. ಅಷ್ಠರ ಮಟ್ಟಿಗೆ ನಿಮ್ಮ ಲೇಖನ ಮನ ಮುಟ್ಟಿದೆ ಹೃದಯ ತಟ್ಟಿದೆ
ನಿಮ್ಮ ಬರವಣಿಗೆಯ ಪಯಣ ನಿರಂತರವಾಗಿರಲಿ……… ಕೋಟೆಕೊಪ್ಪ ಹೆಚ್.ಪಿ.ಶ್ರೀಧರ್ ಗೌಡ, “ಕನ್ನಡ ಸೇನೆ ಕರ್ನಾಟಕ” ತೀರ್ಥಹಳ್ಳಿ