ಆದ್ಯೋತ್ ಅಂಕಣದಲ್ಲಿ ಕೊಳಗಿ ನೆನಪು

ರವಿ ಬೆಳಗೆರೆ ಎನ್ನುವ ಹೃದಯವಂತ..
ಈ ಜಗತ್ತಿನ ಎಲ್ಲ ಲೇಖಕರೂ ಒಬ್ಬಂಟಿಗರೇ. ಅವರು ಸಮುದ್ರದ ನಟ್ಟನಡುವೆ ಮುರಿದುಹೋದ ನಾವೆಯಲ್ಲಿ ಕುಳಿತು ದಿಕ್ಕುಗಾಣದಂತಾದ ಅಂಬಿಗನಂತವರು. ಅದು ಜಗತ್ತಿನಲ್ಲೇ ಅತ್ಯಂತ ಒಬ್ಬಂಟಿಯಾದ ವೃತ್ತಿ. ನಿಮ್ಮದನ್ನು ನೀವೇ ಬರೆಯಬೇಕು. ಅದಕ್ಕೆ ಯಾರೆಂದರೆ ಯಾರೂ ಸಹಾಯ ಮಾಡಲಾರರು. ಅನ್ನವೂ ನಿಮ್ಮದೇ. ಬೇಯಿಸಿಕೊಳ್ಳುವವರೂ ನೀವೇ. ಹೊಟ್ಟೆಯ ನೋವು ನಿಮ್ಮದೇ. ತಿನ್ನುವ ಔಷಧಿಯೂ ನಿಮ್ಮದೇ. – ರವಿ ಬೆಳಗೆರೆ

ಅದಾಗಲೇ ಕನ್ನಡದ ಪತ್ರಿಕೋದ್ಯಮದಲ್ಲಿ ಕಪ್ಪು ಸುಂದರಿ ‘ಹಾಯ್ ಬೆಂಗಳೂರು’ ಹೆಸರು ಮಾಡತೊಡಗಿದ ದಿನಗಳು. ನಿಧಾನಕ್ಕೆ ಸೊರಗುತ್ತಿದ್ದ ಲಂಕೇಶ್ ಪತ್ರಿಕೆಯ ಎದುರು ಪೈಪೋಟಿ ನಡೆಸುತ್ತ, ಪತ್ರಿಕೆಯ ಲೇ ಔಟ್, ಬರಹಗಳಲ್ಲಿ ಸಾಕಷ್ಟು ಅಸ್ತವ್ಯಸ್ಥತೆ ಕಾಣುತ್ತಿದ್ದರೂ ಪ್ರತಿವಾರದ ಸುದ್ದಿಗಳು ಸ್ಪಷ್ಟವಾಗಿ, ನೇರವಾಗಿ ಪ್ರಕಟವಾಗುತ್ತಿದ್ದವು. ‘ಇದೇನಪ್ಪಾ ಇದು, ಈವರೆಗೆ ನೋಡಿರದ ಹೊಸ ಥರದ ಪತ್ರಿಕೆ’ ಎಂದು ಕಾತರಿಸುವ, ‘ಇದು ಬಿಡು ಟ್ಯಾಬ್ಲ್ಯಾಡ್’ ಎಂದು ಮೂತಿ ಮುರಿಯುವವರೂ ಕದ್ದು ನೋಡುತ್ತಿದ್ದ ‘ಹಾಯ್’ ಓದುಗ ವಲಯದಲ್ಲಿ ಸದ್ದು ಮಾಡತೊಡಗಿತ್ತು.

ಆಗ ನಾನು ಕನ್ನಡ ಜನಾಂತರಂಗ ಪತ್ರಿಕೆಯ ಸಿದ್ದಾಪುರ ತಾಲೂಕು ವರದಿಗಾರನಾಗಿದ್ದ ದಿನಗಳು. ಆ ಮೊದಲೇ ಒಂದೆರಡು ಬಾರಿ ಹಾಯ್ ಬೆಂಗಳೂರು ಓದಿದ್ದರೂ ನಿಯಮಿತವಾಗಿ ದೊರೆಯುತ್ತಿರಲಿಲ್ಲ. ನಂತರ ಸಿದ್ದಾಪುರದ ರಂಗೈನ್ ಎನ್ನುವವರು ಅದರ ಅಧಿಕೃತ ವಿತರಕರಾದ ನಂತರ ವಾರವಾರವೂ ದೊರೆಯತೊಡಗಿತು. ಓದುತ್ತ, ಓದುತ್ತ ಹೋದಂತೆಲ್ಲ ನಾನೂ ಅದರೆಡೆಗೆ ಆಕರ್ಷಿತನಾಗಿದ್ದೆ. ಲಂಕೇಶ ಪತ್ರಿಕೆಯಿಂದ ನಾನು ನಿರೀಕ್ಷಿಸುತ್ತಿದ್ದುದು ಇದರಲ್ಲಿ ಸಿಗುತ್ತಿತ್ತು ಎಂದು ಕಾಣಿಸುತ್ತದೆ. ಆಗಲೇ ನನಗೆ ಒಮ್ಮೆ ರವಿ ಬೆಳಗೆರೆಯವರನ್ನು ಭೇಟಿಯಾಗಬೇಕು ಎನ್ನುವ ಹುಕಿ ಹುಟ್ಟಿದ್ದು. ಆದರೆ ಮಾಮೂಲಿಯಾದ ಸಣ್ಣನೆಯ ಭಯವೂ ಇತ್ತು. ಅವರ ಗಡುಸಾದ, ಮೊನಚಾದ ಬರವಣಿಗೆ ಅವರನ್ನೊಬ್ಬ ಪೆಡಸು ವ್ಯಕ್ತಿತ್ವದ ಕಲ್ಪನೆಗೆ ಅವಕಾಶ ಮಾಡಿಕೊಟ್ಟಿತ್ತು.

ರವಿ ಬೆಳಗೆರೆಯವರ ಬಗ್ಗೆ ತುಂಬಾ ದಿನಗಳ ಹಿಂದಿನಿಂದಲೇ ಒಂದು ಕುತೂಹಲವಿತ್ತು. ಅವರು ಕಸ್ತೂರಿಯಲ್ಲಿ ಬರೆದ ಪ್ರಖ್ಯಾತ ಹಿಂದೂಸ್ತಾನಿ ಗಾಯಕ ಹಾಸಣಗಿ ಗಣಪತಿ ಭಟ್ಟರ ಕುರಿತಾದ ಲೇಖನವನ್ನ ಓದಿ ಅದೆಷ್ಟು ಪ್ರಭಾವಿಸಿಬಿಟ್ಟೆ ಅಂದರೆ ಬರೆದರೇ ಇಂತಾ ಲೇಖನ ಬರೆಯಬೇಕು ಅನ್ನಿಸುವಷ್ಟು( ಆ ಕಸ್ತೂರಿಯನ್ನು ಈಗಲೂ ನನ್ನ ಬಳಿ ಕಾದಿಟ್ಟುಕೊಂಡಿದ್ದೇನೆ). ಓರ್ವ ಮಾಮೂಲಿ ಪತ್ರಕರ್ತ ಬರೆದುಬಿಡಬಹುದಾದ ಲೇಖನವನ್ನು ತಮ್ಮ ಭಾಷೆ, ಬರವಣಿಗೆಯ ಶೈಲಿ, ನಿರೂಪಣೆಗಳ ಮೂಲಕ ಜೀವ ರಸವನ್ನು ತುಂಬಿದ್ದಲ್ಲದೇ, ಆ ಮಹಾನ್ ಗಾಯಕರ ಬಗ್ಗೆ ಇನ್ನಷ್ಟು ಗೌರವ ಹುಟ್ಟಿಸುವ ರೀತಿಯಲ್ಲಿ ಆಪ್ತವಾಗಿ ಬರೆದಿದ್ದರು. ಮಂದ್ರವಾಗಿ ಹರಿದುಬರುವ ಸಂಗೀತದ ಆಲಾಪದಂತೆ, ಮೌನದ ಕ್ರೌರ್ಯವನ್ನು ಸಹನೀಯಗೊಳಿಸುವ ತಂಬೂರದ ನಾದದಂತೆ ಆ ಬರವಣಿಗೆ. ಬಹುಷ: ಆ ಲೇಖನದಿಂದಲೇ ನಾನು ಬೆಳಗೆರೆಯವರಿಗೆ ಫಿದಾ ಆಗಿಬಿಟ್ಟೆ ಅನ್ನಿಸುತ್ತದೆ.

ಮಾಮೂಲಿನಂತೆ ಏನಾದರಾಗಲೀ ಎಂದು ಗಟ್ಟಿಗುಂಡಿಗೆ ಮಾಡಿಕೊಂಡು ಬೆಂಗಳೂರಿಗೆ ಹೋದಾಗೊಮ್ಮೆ ಪದ್ಮನಾಭ ನಗರದಲ್ಲಿನ ದೇವೆಗೌಡರ ಪೆಟ್ರೋಲ್ ಬಂಕ್ ಸಮೀಪದ ಅವರ ಆಫೀಸಿಗೆ ಹೋದೆ.ಅಷ್ಟರ ಮೊದಲು ಎರಡು ಬಾರಿ ಪತ್ರವನ್ನೂ ಬರೆದಿದ್ದೆ. ಸಣ್ಣಗೆ ಭೇಟಿಯಾಗುವ ಆಸೆಯನ್ನೂ ವ್ಯಕ್ತಪಡಿಸಿದ್ದೆ. ‘ಬಾ, ಮಾರಾಯಾ’ ಎಂದೂ ಬರೆದಿದ್ದರು. ಹಾಗಾಗಿ ತುಸು ಭರವಸೆಯಲ್ಲೇ ಹೋದೆ. ಮಹಡಿ ಮೇಲಿದ್ದ ಆಫೀಸೊಳಕ್ಕೆ ಹೊಕ್ಕುತ್ತಿದ್ದಂತೆ ಯಾರೋ ಧೃಡಕಾಯದ ವ್ಯಕ್ತಿಯೊಬ್ಬರು ಕೂತಿದ್ದು ಕಂಡಿತು. ಅವರ ಬಳಿ ಹೋಗಿ ಮಾತನಾಡಿ ರವಿ ಬೆಳೆಗೆರೆಯವರನ್ನು ಕಾಣಲು ಬಂದೆ ಎಂದಾಗ ಒಳಗಡೆ ಇದಾರೆ, ತಿಳಿಸ್ತೀನಿ ಎಂದು ಅಲ್ಲಿದ್ದ ಸಹಾಯಕರೊಬ್ಬರಿಗೆ ಒಳಗಡೆ ಹೋಗಿ ನನ್ನ ಹೆಸರು ಬರೆದ ಹಾಳೆಯ ತುಣುಕೊಂದನ್ನು ಕೊಡಲು ಸೂಚಿಸಿದರು.( ಅವರು ಸಾಹಿತಿ, ಪತ್ರಕರ್ತ ಜೋಗಿ(ಜೆ.ಗಿರೀಶರಾವ್) ಎಂದು ನಂತರ ಗೊತ್ತಾಯಿತು.

ಒಳಗಿನಿಂದ ಕರೆ ಬಂದಾಗ ಅಳುಕುತ್ತಲೇ ಕಾಲಿಟ್ಟೆ. ಅಷ್ಟೇನೂ ದೊಡ್ಡದಲ್ಲದ ಕೊಠಡಿಯಲ್ಲಿ ಪುಸ್ತಕಗಳು, ಪತ್ರಿಕೆಗಳು ಹರವಿಕೊಂಡಿದ್ದ ಮೇಜಿನ ಹಿಂದೆ ಕೂತು ಬರೆಯುತ್ತಿದ್ದ ಸೊಂಪಾದ ತಲೆಗೂದಲಿನ, ದಟ್ಟವಾದ ಗಡ್ಡದ ಅಗಲ ಹರವಿನ ಶರೀರಾಕೃತಿಯ ವ್ಯಕ್ತಿ ಕಂಡರು. ಪತ್ರಿಕೆಗಳಲ್ಲಿ ಕಂಡ ಫೋಟೊ ನೋಡಿದ್ದರಿಂದ ಇವರೇ ರವಿ ಬೆಳಗೆರೆ ಅನ್ನೋದು ಖಾತ್ರಿಯಾಯ್ತು. ಸಣ್ಣಗಿನ ಧ್ವನಿಯಲ್ಲಿ ನಮಸ್ಕಾರ ಅಂದೆ. ತಲೆಯೆತ್ತಿ ನನ್ನತ್ತ ನೋಡಿದವರು ಸಣ್ಣ ಸ್ಮೈಲ್ ಮಾಡಿ ‘ ಬರ್ರಿ, ಕೂಡ್ರಿ’ ಎಂದರು. ಅಲ್ಲಿಗೆ ದೊಡ್ಡ ಸಮಾಧಾನವೇ ಆಯಿತು. ಇವರದ್ದು ಮೂಡ್ ಸರಿಯಿದೆ ಎನ್ನುವದಂತೂ ಖಾತ್ರಿಯಾಯಿತು.

ಸ್ವಲ್ಪ ತಡೆದು ಬರೆಯುತ್ತಿದ್ದುದನ್ನು ನಿಲ್ಲಿಸಿ, ಪಕ್ಕಕ್ಕೆ ಜರುಗಿ ಪ್ಯಾಕ್‍ನಿಂದ ಸಿಗರೇಟ್ ತೆಗೆದು ಹೊತ್ತಿಸಿಕೊಂಡವರು ಸೇದ್ತೀರಾ? ಎನ್ನುವ ರೀತಿಯಲ್ಲಿ ಸಿಗರೇಟ್ ಪ್ಯಾಕನ್ನು ನನ್ನ ಎದುರು ಚಾಚಿದರು. ನಾನು ಅವಸರದಲ್ಲಿ ‘ ಇಲ್ಲ,ಇಲ್ಲ’ ಎಂದೆ. ‘ಅದಕ್ಯಾಕ್ರೀ ಭಯ ಬೀಳ್ತೀರಿ’ ಎಂದು ಸಣ್ಣಗೆ ಗೇಲಿ ಮಾಡಿ ‘ ನಿಮ್ಮೂರು ಯಾವುದ್ರೀ?’ ಎಂದರು. ನಾನು ನನ್ನ ಪುರಾಣ ಪ್ರವಚನ ಒಪ್ಪಿಸಿದಾಗ ಆಶ್ಚರ್ಯದಿಂದ ಕಣ್ಣು ಅರಳಿಸಿ ‘ ಸಿದ್ದಾಪುರಾನಾ? ಐನಕೈ ಗೊತ್ತಲ್ವಾ, ರಾಮಕೃಷ್ಣ ಹೆಗಡೆ, ಅವರ ಪತ್ನಿ, ಸುಲೋಚನಕ್ಕ ಇವರೆಲ್ಲ ನನ್ನ ಪರಿಚಯದವರೇ!’ ಎಂದರು. ‘ಅವರೆಲ್ಲ ನನಗೆ ಹತ್ತಿರದ ಆತ್ಮೀಯರು, ಸಂಬಂಧಿಕರಿಗಿಂತ ಹೆಚ್ಚು ವಿಶ್ವಾಸಿಕರು’ ಎಂದಾಗ ಓಹ್ ಎಂದರು.

ಅದು ನಿಜವೂ ಹೌದು. ರಮಾನಂದ ಐನಕೈ ಮೂಲಕ ನನಗೆ ಅವರ ಕುಟುಂಬದವರ ಪರಿಚಯವಾದದ್ದು. ರಮಾನಂದ ಅವರ ಅಣ್ಣ ರಾಮಕೃಷ್ಣ ಹೆಗಡೆ ಮತ್ತು ನಾನು ನೀನಾಸಂ ನಾಟಕಗಳ, ಚಲನ ಚಿತ್ರೋತ್ಸವಗಳ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದೆವು. ಅವರ ತಂದೆ ರಾಮಪ್ಪ ಹೆಗಡೆಯವರು, ಅವರ ಪತ್ನಿ ನನ್ನನ್ನು ತುಂಬಾ ಪ್ರೀತಿಯಿಂದಲೇ ಕಾಣುತ್ತಿದ್ದರು. ನಾನು ಏನೂ ಕೆಲಸವಿಲ್ಲದಾಗ ಅಥವಾ ಬೇಸರವೆನ್ನಿಸಿದಾಗೆಲ್ಲ ಐನಕೈಗೆ ಹೋಗುತ್ತಿದ್ದೆ. ಎರಡು ವಾರ ಹೋಗದಿದ್ದರೆ ಹೋದ ತಕ್ಷಣ ‘ಯಾಕೋ, ಸುಮಾರು ದಿನ ಆಯ್ತು ಬಾರದೇ?’ಎಂದು ವಿಚಾರಿಸಿಕೊಳ್ಳುತ್ತಿದ್ದರಲ್ಲದೇ ಬರುವಾಗ ‘ಬರ್ತಾ ಇರೋ’ಎನ್ನುತ್ತಿದ್ದರು. ರಾಮಕೃಷ್ಣ ಹೆಗಡೆಯವರ ಪತ್ನಿ, ಅವರ ಅಣ್ಣ ವಿ.ಆರ್.ಹೆಗಡೆ, ಅವರ ಪತ್ನಿ..ಹೀಗೇ ಆ ದೊಡ್ಡ ಮನೆಯ ದೊಡ್ಡ ಮನಸ್ಸಿನವರೆಲ್ಲರೂ ಕುಗ್ಗಿಹೋಗಿದ್ದ ನನಗೆ ಆ ದಿನಗಳಲ್ಲಿ ಪ್ರೀತಿಯನ್ನು ಕೊಟ್ಟವರು. ಸುಲೋಚನಕ್ಕ ಆಗ ಬಿಳಗಿಯಲ್ಲಿ ಹೊಸದಾಗಿ ತೋಟ ರೂಪಿಸುತ್ತಿದ್ದರು. ರಾಮಕೃಷ್ಣ ಹೆಗಡೆಯವರ ಪತ್ನಿ ಹೆಸರಾಂತ ಪತ್ರಕರ್ತ, ಸಾಹಿತಿ ನಾ.ಸು.ಭರತನಹಳ್ಳಿಯವರ ಪುತ್ರಿ. ಅವರೂ ಕೂಡ ಮದುವೆಗೆ ಮೊದಲು ಸಂಯುಕ್ತ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದರಂತೆ. ರವಿ ಬೆಳಗೆರೆಗೆ ನಾ.ಸು.ಅವರ ಮನೆ ತವರು ಮನೆಯಿದ್ದಂತೆ. ಹಾಗಾಗಿ ಅವರೆಲ್ಲರ ಪರಿಚಯ ರವಿಯವರಿಗಿತ್ತು.
ಅಷ್ಟು ಹೇಳಿದ್ದೇ ಖುಷಿಯಾಗಿಬಿಟ್ಟರು. ನಿಧಾನಕ್ಕೆ ನನಗೆ ಬಳಸುತ್ತಿದ್ದ ಬಹು ವಚನ ಪ್ರಯೋಗ ಏಕ ವಚನಕ್ಕೆ ಇಳಿದಾಗ ನಾನೂ ನಿರಾಳವಾದೆ. ಅಲ್ಲಿ ತನಕದ ಬಹುವಚನ ನನಗೆ ಕಿರಿ ಕಿರಿ ಅನ್ನಿಸುತ್ತಿತ್ತು. ನನ್ನ ವೃತ್ತಿ,ಪ್ರವೃತ್ತಿಗಳ ಬಗ್ಗೆ ವಿಚಾರಿಸಿಕೊಳ್ಳುತ್ತ ಬಂದ ರವಿ ಬೆಳಗೆರೆ ಏಕಾಏಕಿ ‘ ಏಯ್ ಕೊಳ್ಗಿ, ನಮ್ಮ ಪತ್ರಿಕೆಗೆ ನಿಮ್ಮ ಜಿಲ್ಲೆಯಿಂದ ವರದಿ ಮಾಡ್ತಿಯೇನಯ್ಯಾ?’ ಅಂದರು. ನಾನು ಅವಾಕ್ಕಾಗಿಬಿಟ್ಟೆ. ನಾನು ಅದನ್ನು ನಿರೀಕ್ಷೆಯೂ ಮಾಡಿರಲಿಲ್ಲ. ಅದಕ್ಕಾಗಿ ಬಂದಿರಲೂ ಇಲ್ಲ. ಹಾಯ್ ಬೆಂಗಳೂರಿನಂಥ ಪತ್ರಿಕೆಗೆ ವರದಿ ಮಾಡುವ ಕೆಲಸ ನನಗೆ ಸಾಧ್ಯವಾಗದ್ದು ಎಂದೇ ನಾನು ಮೊದಲೇ ತೀರ್ಮಾನಿಸಿದ್ದೆ. ಈಗ ರವಿ ಬೆಳಗೆರೆಯವರು ಕೇಳಿದಾಗ ಗಾಭರಿಯೇ ಆಗಿತ್ತು. ‘ ಯಾವುದಕ್ಕೂ ಯೋಚ್ನೆ ಮಾಡಿ ಹೇಳ್ತಿನಿ’ ಅಂದೆ. ಅಷ್ಟರ ನಂತರವೂ ಸುಮಾರು ಹೊತ್ತು ಮಾತನಾಡಿ ಹೊರಬಂದೆ.

ಅವತ್ತು ‘ಏಯ್ ಕೊಳ್ಗಿ’ ಎಂದು ಪ್ರಾರಂಭಿಸಿದವರು ನಂತರದಲ್ಲಿ ಅದೇ ಸ್ಟೈಲ್, ಅದೇ ಸ್ವರ ಏರಿಳಿತದಲ್ಲಿ ನನ್ನ ಕರೆಯುತ್ತಿದ್ದರು. ಆ ಧ್ವನಿ ಅಂದಿನಿಂದ ಇಂದಿನವರೆಗೂ ನನ್ನ ಕಿವಿಯೊಳಗೆ ಗುಂಯ್‍ಗುಡುತ್ತಲೇ ಇದೆ.
ಮನುಷ್ಯ ಬೆತ್ತಲೆಯಾದಷ್ಟೂ ಮಾನವಂತನಾಗುತ್ತಾನೆರವಿ ಬೆಳಗೆರೆ
ಗಂಗಾಧರ ಕೊಳಗಿ

About the author

Adyot

Leave a Comment