ರವಿ ಬೆಳಗೆರೆ ಎಂಬ ಹೃದಯವಂತ..
ಬದುಕೆ ಹಾಗೆ. ಇಲ್ಲಿ ಅಡ್ವೈಸ್ಟಿನಷ್ಟು ಸುಲಭವಾದ್ದು ಮತ್ತೊಂದಿಲ್ಲ. ಆದರೆ ಬದುಕಿನ ಶ್ರೇಷ್ಠ ಗುರಿಗಳನ್ನ ತಲುಪಿದವರನ್ನ ಕೇಳಿ ನೋಡಿ: ಅವರು ಅಡ್ವೈಸು ಮಾಡುವದೂ ಇಲ್ಲ, ಇನ್ನೊಬ್ಬರಿಂದ ಅಷ್ಟಾಗಿ ಅಡ್ವೈಸು ಪಡೆದಿರುವದೂ ಇಲ್ಲ. ಅವರ ಪಾಡಿಗವರು ಒಂದು ಗಮ್ಯವನ್ನಿಟ್ಟುಕೊಂಡು ದುಡಿದಿರುತ್ತಾರೆ. ಬೆಳೆದಿರುತ್ತಾರೆ. ಗುರಿ ತಲುಪುವ ಬದಲು ಒಂದು ಹೆಗ್ಗುರುತನ್ನು ಸೃಷ್ಠಿಸಿ ಈ ಜಗತ್ತಿಗೆ ಬಿಟ್ಟು ಹೋಗಿರುತ್ತಾರೆ- ರವಿ ಬೆಳಗೆರೆ
ಹಿಂದಿನ ವಾರ ನಾನು ಬರೆದಾಗ ರವಿ ಬೆಳಗೆರೆ ಜೊತೆಗಿನ ಮೊದಲ ಭೇಟಿಯ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಅವರ ಜೊತೆ ಕೆಲ ಹೊತ್ತು ಮಾತನಾಡಿದೆ, ಕೊನೆಯಲ್ಲಿ ಅವರು ನನಗೆ ವರದಿಗಾರಿಕೆಯ ಆಫರ್ ಕೊಟ್ಟರು ಅಂತ ಬರೆದಿದ್ದೆ. ಎಲ್ಲವೂ ಸರಿ, ಅವರೂ ನನ್ನಂಥ ಬೆಂಗಳೂರೆಂಬ ಮಾಯಾಂಗನೆಯಿಂದ ದೂರವಿದ್ದು ಮತ್ತೆ ಅದಕ್ಕೇ ಅನಿವಾರ್ಯವಾಗಿ ಮರುಳಾಗಿ, ತಮ್ಮ ಹೊಸ ಪತ್ರಿಕೆಗೆ ಕೊಟ್ಯಾಂತರ ಜನರ ಬದುಕಿಗೆ ಸಹಾಯಕವಾದ ಬೆಂಗಳೂರಿನ ಹೆಸರಿಟ್ಟು ಶುರುವಿಟ್ಟುಕೊಂಡರಲ್ಲ, ಆ ಥರ ಹೊರ ಊರಿನಿಂದ ಹೋದ ರವಿಯಂಥ ಸೃಜನಶೀಲರಿಗೆ ಒಂದು ಕುತೂಹಲವಿರುತ್ತದೆ ಎಂದು ನನ್ನ ಅನಿಸಿಕೆ. ಹೊಸದಾಗಿ ಬಂದವರು ಏತಕ್ಕೆ ಇಲ್ಲಿಗೆ ಬಂದರು ಎಂದು? ಪ್ರಾಯಶ: ಅವತ್ತು ಆಗಿದ್ದು ಹಾಗೆಯೇ. ಕೊನೆಯದಾಗಿ ಹೊರಡುವ ಹೊತ್ತಿನಲ್ಲಿ ರವಿ ಸರ್ ‘ಕೊಳ್ಗಿ, ನೀನು ಬೆಂಗಳೂರಿಗೆ ಬಂದದ್ದು ಯಾಕೆ?’
ಇದು ಓರ್ವ ನಿಜವಾದ ಪತ್ರಕರ್ತ ಮತ್ತು ಸಂವೇದನಾಶೀಲ ಸಾಹಿತಿ ಕೇಳಲೇಬೇಕಾದ ಪ್ರಶ್ನೆ. ಯಾಕೆಂದರೆ ಅಷ್ಟೊಂದು ದೂರದಿಂದ ಜನಸಾಮಾನ್ಯ ಬೆಂಗಳೂರಿಗೆ ಬರಲಾರ,ಬಂದರೂ ಏನೋ ತುರ್ತು ಕೆಲಸ,ಗಂಭೀರವಾದ ಕಾರ್ಯ ಇದ್ದೇ ಇರುತ್ತದೆ. ಹಣವಿದ್ದವರಾದರೆ ಮಜಾ ಮಾಡಲು ಬರುತ್ತಾರೆ,ಅವರೆಲ್ಲ ರವಿ ಬೆಳಗೆರೆನೋ, ವಿಧಾನ ಸೌಧದಲ್ಲಿರುವ ಶಾಸಕರನ್ನ, ಮಂತ್ರಿಗಳನ್ನ ಭೇಟಿ ಮಾಡುವ ಉಸಾಬರಿಗೆ ಹೋಗುವದಿಲ್ಲವಲ್ಲ.
ನಾನು ಹೇಳಲೇಬೇಕಾಯ್ತು; ಸ್ವಲ್ಪ ಸ್ವಂತ ಹರಿಕತೆ ಅನಿಸಬಹುದು. ನನ್ನ ಅಮ್ಮನಿಗೆ ಏನೋ ತೊಂದರೆಯಾಗಿ ಡಾಕ್ಟರ್ ಬಳಿ ಚೆಕ್‍ಅಪ್‍ಮಾಡಿಸಿದಾಗ ಗರ್ಭಕೋಶ ಜಾರಿದೆ, ಅದಕ್ಕೆ ಆಫರೇಶನ್ ಮಾಡಿಸಲೇ ಬೇಕು ಎನ್ನುವ ರಿಪೋರ್ಟ ಬಂತು. ಸರಿ, ಅದನ್ನು ಮಾಡಿಸಬೇಕಾದ್ದೆ. ಸಂದಿಗ್ಧ ಏನೂ ಅಂದರೆ ಅಮ್ಮನಿಗೆ ಆಫರೇಶನ್ ಆದ ನಂತರ ಕನಿಷ್ಠ 2 ತಿಂಗಳು ರೆಸ್ಟ ಬೇಕು, ಮತ್ತೆ ಆಗಾಗ ಡಾಕ್ಟರ್ ಹತ್ತಿರ ಚೆಕ್‍ಅಪ್ ಮಾಡಿಸಬೇಕು. ಆಗ ಮನೆಯಲ್ಲಿ ಇದ್ದವರು ನಾನು ಮತ್ತು ಅಮ್ಮ ಮಾತ್ರ. ಹಿರಿಯ ಅಕ್ಕ ಬಂಗಾರಕ್ಕ, ಎರಡನೆ ಅಕ್ಕ ವನಜಕ್ಕ ಬೆಂಗಳೂರಿನಲ್ಲಿದ್ದರು,ಮೂರನೆ ಅಕ್ಕ ವಿದ್ಯಾ ಹುಬ್ಬಳ್ಳಿಯಲ್ಲಿದ್ದಳು. ಮನೆಯಲ್ಲಿ ನೋಡಿಕೊಳ್ಳುವವರು ಯಾರು? ಕೊನೆಗೆ ಅಕ್ಕಂದಿರೇ ತೀರ್ಮಾನಮಾಡಿ ಅಮ್ಮನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ,ಅಲ್ಲೇ ಚಿಕಿತ್ಸೆ ಮಾಡಿಸಿ,ವಾಸಿಯಾಗುವವರೆಗೆ ಉಳಿಸಿಕೊಳ್ಳುವದು ಎಂದು ನಿಶ್ಚಯಿಸಿದರು.
ಅದರಂತೆ ಅಮ್ಮನನ್ನು ಕರೆದುಕೊಂಡು ಹೋದರು. ಆಪರೇಷನ್ನೂ ಆಯಿತು. ದಿನ ಆ ಬಗ್ಗೆ ಫೋನ್‍ನಲ್ಲಿ ಮಾಹಿತಿ ಪಡೆದುಕೊಳ್ಳುತ್ತಲೇ ಇದ್ದೆ. ಮೂರನೇ ದಿನ ಅಕ್ಕ ಫೋನೆತ್ತಿದವಳು ‘ ತಮ್ಮಾ, ಅಮ್ಮ ನಿನ್ನ ನೋಡಬೇಕು ಅಂತಾ ಕನವರಿಸುತ್ತಿದ್ದಾಳೆ. ಒಂದು ದಿವಸದ ಮಟ್ಟಿಗಾದರೂ ಬಂದು ಹೋಗು’ ಎಂದಳು. ನಾನು ಮಾಡಬೇಕಾದ ಕೆಲಸವನ್ನು ಅಕ್ಕಂದಿರು ಮಾಡುತ್ತಿದ್ದರು. ಅಮ್ಮನಿಗೆ ಯಾಕೋ ನನ್ನ ನೋಡಬೇಕೆಂಬ ಕಾತರ; ಎಷ್ಟೆಂದರೂ ನಾನು ಬಯಸಿ ಪಡೆದ ಮಗ( ಆ ಪುರಾಣ ಹೇಳೋಕೆ ಹೊರಟರೆ ಉದ್ದ ಆಗುತ್ತೆ). ನನ್ನ ನೋಡಬೇಕೆಂಬ ಹಂಬಲ ಅಮ್ಮನಿಗೆ.
ಹೇಗೆ ಹೋಗೋದು? ಆಗಷ್ಟೇ ನನ್ನ ಬದುಕಿನ ಮೊದಲನೇ ಆವೃತ್ತಿಯ ಸಾಹಿತ್ಯ,ಸಾಂಸ್ಕ್ರತಿಕ ಕ್ಷೇತ್ರದ ಒಡನಾಟದದಿಂದ ಭ್ರಮನಿರಸನ ಹೊಂದಿ,ಬದುಕಿಗೆ ಅನಿವಾರ್ಯವಾದ ಕೃಷಿಗೆ ತೊಡಗಿಸಿಕೊಂಡ ದಿನಗಳು. ಮನೆಯಲ್ಲಿ ಅಮ್ಮ,ನಾನು. ಕೊಟ್ಟಿಗೆಯಲ್ಲಿ ಎರಡು ಎಮ್ಮೆ,ನಾಲ್ಕಾರು ಹಸುಗಳು. ಮನೆಯ ಕೆಲಸಕ್ಕೆ ಲಕ್ಷ್ಮೀ,ಅವಳ ಮಗಳು ಗೌರಿ ಬರುತ್ತಿದ್ದರೂ ಬೆಳಿಗ್ಗೆ, ಸಂಜೆ ಎಮ್ಮೆ,ಒಂದು ಆಕಳಿನ ಹಾಲು ಹಿಂಡುವ ಕೆಲಸ ನನ್ನದೇ. ಅದರ ಜೊತೆಗೆ ತೋಟದ ಕೆಲಸ, ಪತ್ರಿಕೆಯ ವರದಿಗಾರಿಕೆ. ಅಮ್ಮ ಬೆಂಗಳೂರಿಗೆ ಹೋದ ಮೇಲೆ ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟದ ತಯ್ಯಾರಿ, ಹಿಂಡಿದ ಹಾಲನ್ನು ಕಾಯಿಸುವ, ಅದನ್ನು ಹೆಪ್ಪಾಗಿಸುವ, ಮರುದಿನ ಅದನ್ನು ಕಡೆದು,ಬೆಣ್ಣೆ ತೆಗೆಯುವ, ವಾರಕ್ಕೊಮ್ಮೆ ಅದನ್ನು ಕಾಯಿಸಿ ತುಪ್ಪವಾಗಿಸುವ ಕೆಲಸವಿದೆಯಲ್ಲ, ನಿಜಕ್ಕೂ ಹಳ್ಳಿಗಾಡಿನ ಈ ಕೆಲಸ ಮಾಡುವ ಹೆಣ್ಣುಮಕ್ಕಳಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ. ಅದರಂಥ ಸೂಕ್ಷ್ಮ ಕೆಲಸ ಮತ್ತೋಂದಿಲ್ಲ. ಅಮ್ಮ ನೋಡಬೇಕು ಅಂತಾ ವರಾತ ಹಚ್ಚಿದಾಗ ಹೋಗಬೇಕಲ್ಲ, ನಾನಿಲ್ಲದಾಗ ಇಲ್ಲಿ ವ್ಯವಸ್ಥೆ ನೋಡುವವರು ಯಾರು? ಹಗಲಾದರೆ ಲಕ್ಷ್ಮೀ ನೋಡ್ಕೋತಾಳೆ. ರಾತ್ರಿ ಎಮ್ಮೆ,ದನಗಳಿಗೆ ಹುಲ್ಲು ಹಾಕೋರು ಯಾರು? ತಲೆಬಿಸಿ ಮಾಡಿಕೊಂಡು ಹತ್ತಿರದ ನೆಂಟರ ಒಂದಿಬ್ಬರ ಬಳಿ ಕೇಳಿದೆ. ‘ ಇವತ್ತು ರಾತ್ರಿ ಹೊರಟು, ನಾಳೆ ಬೆಳಿಗ್ಗೆ ಬೆಂಗಳೂರು ತಲುಪಿ,ಅಮ್ಮನ್ನ ನೋಡಿಕೊಂಡು, ಮತ್ತೆ ರಾತ್ರಿ ಬಸ್ಸಿಗೆ ವಾಪಸ್ಸು ಬರ್ತೀನಿ.ಎರಡು ರಾತ್ರಿ,ಒಂದು ಹಗಲು, ಮನೆ ಕಡೆ ನೋಡ್ಕೊಳ್ಳಲು ಸಾಧ್ಯವಾ?’ ಅಂತಾ ಕೇಳದ್ರೆ ಆವಾಗ್ಲೇ ಅವರಿಗೆ ಸಿಕ್ಕಾಪಟ್ಟೆ ಕಾರ್ಯದೊತ್ತಡ.
ಇದೇ ಅಮ್ಮನಿಂದ ಅದೆಷ್ಟು ದಿನಗಳ ಕಾಲ ನಮ್ಮ ಮನೆಯಲ್ಲೇ ಪುಷ್ಕಳವಾಗಿ ಉಪಚಾರ ಪಡೆದ ಈ ವ್ಯಕ್ತಿಗಳಿಗೆ ಒಂದು ದಿನ ಆಸ್ಪತ್ರೆಯಲ್ಲಿರುವ ಅಮ್ಮನನ್ನ ನೋಡಹೊರಟ ನನಗೆ ಸಹಕಾರ ಕೊಡುವ ಮನಸ್ಸು ಬರಲಿಲ್ಲವಲ್ಲ! ತಪ್ಪು ನನ್ನದು ಅಥವಾ ನಮ್ಮದು ಇರಬಹುದು. ಅವರಿಗೆ ಉಪಚಾರ ಮಾಡಲು ಅವರೇನಾದರೂ ಗೋಗರೆದಿದ್ದರಾ? ನಾವೇ ಅಲ್ಲವಾ ಅದಕ್ಕೆ ಮುಂದಾಗಿದ್ದು. ಇರಲಿ,ಇಷ್ಟೆಲ್ಲ ತಲೆಬಿಸಿಗಳ ನಡುವೆ ನನ್ನ ಗೆಳೆಯ ರಾಮಚಂದ್ರ ನಾಯ್ಕ ತಾನು ಮನೆ ಕಾವಲು ಮಾಡುವದಾಗಿ ಹೇಳಿದ. ಲಕ್ಷ್ಮಿಗೆ ಹಿಂಡಿದ ಹಾಲನ್ನು ಅವಳ ಮನೆಗೆ ತೆಗೆದುಕೊಂಡು ಹೋಗಲು ಹೇಳಿದೆ. ನಂತರ ಬೆಂಗಳೂರಿಗೆ ಹೊರಟೆ.
ಈ ಕತೆಯನ್ನ ಕೇಳಿದ್ದೇ ರವಿ ಬೆಳಗೆರೆ ಎರಡು ಕ್ಷಣ ಏನೂ ಮಾತನಾಡಲಿಲ್ಲ. ‘ ಕೊಳ್ಗಿ, ಎಲ್ಲ ಅಮ್ಮಂದಿರೂ ಒಂದೇ, ನಿನ್ನ ಅಮ್ಮ ನನ್ನ ಅಮ್ಮನೇ, ನೀನು ಏನೂ ಟೆನ್ಶನ್ ಮಾಡ್ಕೋಬೇಡ, ಆರಾಮಾಗಿ ಊರಿಗೆ ಹೋಗು. ಇದು ನನ್ನ ಪರ್ಸನಲ್ ಫೋನ್ ನಂಬರ್,ತೊಗೋ. ಅಮ್ಮನಿಗೆ ಏನೇ ತೊಂದರೆಯಾದರೂ, ಏನೇ ಅಗತ್ಯವಿದ್ರೂ ತಕ್ಷಣ ಹೇಳು, ದುಡ್ಡು, ಆಸ್ಪತ್ರೆ ಏನೇ ಬೇಕಾದ್ರೂ ಫೋನ್ ಮಾಡು, ಆಕೆ ನಿನ್ನ ಅಮ್ಮ ಮಾತ್ರ ಅಲ್ಲ,ನನ್ನ ಅಮ್ಮಾನೂ ಕೂಡ. ಯಾವುದಕ್ಕೂ ಮುಲಾಜು ಮಾಡ್ಕೋಬೇಡ. ಆರಾಮಾಗಿ ಊರಿಗೆ ಹೋಗು’ ಎಂದದ್ದು ರವಿ ಬೆಳಗೆರೆ. ನಾನೊಬ್ಬ ಸಾಮಾನ್ಯ ಹುಡುಗ,ಅಪರಿಚಿತ. ನನ್ನಿಂದ ಅವರಿಗೆ ನಯಾಪೈಸೆ ಪ್ರಯೋಜನವಾಗದು. ನಾನು ಹುಟ್ಟಿದಾಗಿನಿಂದ ನೋಡುತ್ತ ಬಂದಂತೆ ವರ್ಷಾನಗಟ್ಟಲೆ ನಮ್ಮ ಮನೆಯ ಆತಿಥ್ಯ ಸವಿದ ಮಹಾನುಭಾವರಿಗೆ ಅನ್ನಿಸದ ಭಾವನೆ, ನೆರವಾಗಬೇಕೆಂಬ ಕನಿಷ್ಠ ಮನೋಸ್ಥಿತಿ ಇಲ್ಲದ ದೊಡ್ಡ ಮನುಷ್ಯರಿಗೆ ಇಲ್ಲದ ಮನುಷ್ಯತ್ವ ರವಿ ಬೆಳಗೆರೆ ಎನ್ನುವ ಯಾವುದೋ ಕಾಣದ,ಕೇಳಿ ಮಾತ್ರ ಗೊತ್ತಿದ್ದ ಮನುಷ್ಯನಿಗೆ ಎಲ್ಲಿಂದ ಬಂತು? ಒಳಗೆ ನಿಜವಾದ ಹೃದಯವಿದ್ದರೆ ಹೊರಗೆ ಅದರ ಪ್ರತಿಫಲನ. ಅದಕ್ಕೇ ಅವರಿಗೆ ಹೃದಯವಂತ ಅಂದದ್ದು. ನನಗೆ ಮಾತ್ರವಲ್ಲ, ನನ್ನಂಥ ಸಾವಿರಾರು ಮಂದಿ ಸಾಮಾನ್ಯ ಮನುಷ್ಯರ ಅನುಭವವೂ ಈ ರೀತಿಯದ್ದೇ.
ಇದು ರವಿ ಬೆಳಗೆರೆ ಎನ್ನುವ ಊಹಾತೀತ ವ್ಯಕ್ತಿತ್ವದ ಮನುಷ್ಯನ ಜೊತೆಗಿನ ಮೊದಲ ಅನುಭವ. ಇನ್ನು ಮುಂದಿನದು ಕೆಲವು ಕಾಲದ ಅವರ ಪತ್ರಿಕೆಯ ವರದಿಗಾರಿಕೆಯ ಅನಾವರಣ.
ನನಗೆ ಯಾರನ್ನೂ ಗುರುವೆಂದು ಸಲೀಸಾಗಿ ಒಪ್ಪಿಕೊಳ್ಳಲಾಗುವದಿಲ್ಲ. ಒಪ್ಪಿಕೊಂಡ ಮೇಲೂ ಕೂಡ ಗುರುವಿನ ಬಗ್ಗೆ ಒಂದು ಗೌರವ ತುಂಬಿದ ಅಂತರವನ್ನ ಉಳಿಸಿಕೊಂಡೇ ಇರುತ್ತೇನೆ. ಯಾವ ಗುರುವೂ ನಿಮಗೆ ಪರಿಪೂರ್ಣತೆಯನ್ನು ಕೊಡಲಾರ. ಅವನಾದರೂ ಮನುಷ್ಯ ಮಾತ್ರನೇ. ತಾನು ಕಲಿತದ್ದನ್ನಷ್ಟೇ ನಿಮಗೆ ಹೇಳಿಕೊಡಬಲ್ಲ. ಅದರಾಚೆಗಿನದ್ದೆಲ್ಲ ನಿಮ್ಮದೇ. ತೋಳು, ದುಡಿಮೆ, ಬೆವರು, ಮೆಟ್ಟಿಲು, ಗುರಿ.. ಎಲ್ಲವೂ ನಿಮ್ಮದೇ. ಮೆಟ್ಟಿಲು ಹತ್ತುವಾಗಿನ ಆಯಾಸವೂ ನಿಮ್ಮದೇ, ಹತ್ತಿ ನಿಂತ ಮೇಲಿನ ಸಮಾಧಾನವೂ ನಿಮ್ಮದೇ. ಆ ಸಮಾಧಾನದ ಕಿರುನಗೆಯಲ್ಲಿ ಗುರುವಿನೆಡೆಗೆ ಒಂದು ಕೃತಜ್ಞತೆಯೂ ಇದ್ದರೆ ನೀವಿನ್ನೂ ಹರಾಮಖೋರರರಾಗಿಲ್ಲವೆಂಬುದಕ್ಕೆ ಅದೇ ಸಾಕ್ಷಿ.- ರವಿ ಬೆಳಗೆರೆ.
(ಮುಂದುವರಿಯುವುದು)
–ಗಂಗಾಧರ ಕೊಳಗಿ
ತುಂಬಾ ನಿಜವಾಗಿದೆ.