ಆದ್ಯೋತ್ ಅಂಕಣದಲ್ಲಿ ಕೊಳಗಿ ನೆನಪು

ಬೆಳಗೆರೆ ಎಂಬ…
ಮನುಷ್ಯ ತನ್ನನ್ನು ತಾನು ಹುಡುಕಿಕೊಳ್ಳಬೇಕಂತೆ. ತನ್ನನ್ನು ತಾನು ಅನ್ವೇಷಿಸಿಕೊಳ್ಳಬೇಕಂತೆ. ನಾನು ಅದಕ್ಕಂತಲೇ ಹೊರಟೆ. ಮತ್ಯಾರೋ ನನ್ನನ್ನು ಹುಡುಕಿಕೊಂಡು ಹೊರಟರು. ಅವರಿಗೆ ಎಟ್ ಲಿಸ್ಟ ನನ್ನ ಹೆಜ್ಜೆಗುರುತುಗಳಾದರೂ ಇದ್ದವು; ನನ್ನನ್ನು ಹುಡುಕಲಿಕ್ಕೆ. ನನಗೇನಿವೆ? ಹುಡುಕುವವನೂ ನಾನೇ; ಕಳೆದುಹೋಗಿರುವವನೂ ನಾನೇ. ನಾನೆಷ್ಟು ನೀಚ? ನಂಗಷ್ಟೇ ಗೊತ್ತು. ಹುಡುಕಲು ಬಂದವರಿಗೆ ನನ್ನ ನೀಚತನವಷ್ಟೇ ಕಾಣುತ್ತೆ. ಅದಕ್ಕವರು ಭೂತಗನ್ನಡಿಯಿಡುತ್ತಾರೆ. ಅವರಿಗೆ ಗೊತ್ತಾಗುವದಿಲ್ಲ. ನನ್ನೊಳಗೊಬ್ಬ ಒಳ್ಳೆಯವನೂ ಇದ್ದಾನೆ. ನನ್ನೊಳಗಿನ ಒಳ್ಳೆಯದನ್ನು ಹುಡುಕಿಕೊಂಡು ಇನ್ಯಾರೋ ಬರುತ್ತಾರೆ—- ರವಿ ಬೆಳಗೆರೆ

ಅವತ್ತು ನಾನು ಮನೆಗೆ ವಾಪಸ್ಸಾಗಿ ಬಿಟ್ಟೆ. ಅಮ್ಮ ನಿಧಾನವಾಗಿ ಚೇತರಿಸುತ್ತಿದ್ದುದು ದಿನಾ ಫೋನ್ ಮುಖಾಂತರ ಗೊತ್ತಾಗುತ್ತಿತ್ತು. ನನ್ನ ಕೆಲಸದ ಗಡಿಬಿಡಿಯಲ್ಲಿ ನಾನು ಮಗ್ನನಾಗಿಬಿಟ್ಟಿದ್ದೆ. ಆ ತಿಂಗಳು ಕಳೆದು ಹೊಸ ತಿಂಗಳ 2 ನೇ ತಾರೀಖಿಗೆ ನನಗೊಂದು ಪೋಷ್ಟ ಬಂತು. ಬಿಡಿಸಿ ನೋಡಿದರೆ ರವಿ ಬೆಳಗೆರೆಯವರ ಎರಡು ಸಾಲಿನ ಮುತ್ತಿನ ಹನಿ ಪೋಣಿಸಿಟ್ಟಂತ ಎರಡು ಸಾಲಿನ ಪತ್ರ, ಅದರ ಜೊತೆಗೆ 2 ಸಾವಿರ ರೂ.ಗಳ ಚೆಕ್. ಪತ್ರದಲ್ಲಿ ನಿಮ್ಮ ಈ ತಿಂಗಳ ಸಂಬಳ ಎನ್ನುವ ಒಕ್ಕಣಿಕೆ. ನಿಜಕ್ಕೂ ನಾನು ಕಂಗಾಲಾಗಿಬಿಟ್ಟೆ. ಎಲ್ಲೋ ಸುಮ್ಮನೆ ಹೇಳಿರಬೇಕು ಅಂದುಕೊಂಡು ಅವರ ಮಾತನ್ನು ನಿರ್ಲಕ್ಷಿಸಿಬಿಟ್ಟಿದ್ದೆ. ಆದರೆ ಅವರು ಮರೆತಿರಲಿಲ್ಲ. ಮನೆಗೆ ಬಂದು ಫೋನ್ ಮಾಡಿದೆ. ಎಷ್ಟೋ ಕಾಲ್ ಮಾಡಿದ ನಂತರ ಸಿಕ್ಕರು. ಏನಾದರೂ ಸಹಾಯ ಬೇಕಾದರೆ ಹೇಳು ಅಂತ ಅವರು ಹೇಳಿದ್ದರೂ ಅಂತ ಸಮಸ್ಯೆ ಬಾರದ ಕಾರಣ ಮತ್ತೆ ಫೋನ್ ಮಾಡಿರಲಿಲ್ಲ- ಆಗ ಮಾತ್ರವಲ್ಲ, ನನ್ನ ಎರಡೂವರೆ ವರ್ಷದ ಹಾಯ್ ಬೆಂಗಳೂರು ವರದಿಗಾರಿಕೆಯ ಅವಧಿಯಲ್ಲಿ ಅವರು ಕೊಡುತ್ತಿದ್ದ ವೇತನ ಬಿಟ್ಟರೆ ಹಣವನ್ನಾಗಲೀ, ಇನ್ನಿತರ ಯಾವುದೇ ಸಹಾಯವನ್ನಾಗಲೀ ಅವರಿಂದ ನಾನು ಪಡೆದುಕೊಳ್ಳಲಿಲ್ಲ- ನಿಮ್ಮ ಪತ್ರಿಕೆಗೆ ವರದಿಗಾರಿಕೆ ಮಾಡಲು ನನಗೆ ಕಷ್ಟವಾಗಬಹುದೇನೋ? ಯಾಕೆಂದ್ರೆ ನಂಗೆ ಟ್ಯಾಬೋಲಾಯ್ಡ ಪತ್ರಿಕೆಗೆ ಕೆಲಸ ಮಾಡಿ ಗೊತ್ತಿಲ್ಲ ಅಂದೆ. ‘ ಕೊಳ್ಗಿ, ಎಲ್ಲಾನೂ ಹುಟ್ಟಿನಿಂದ ಕಲಿತು ಬಂದಿರ್ತಿವಾ? ಕಲಿತಾ ಹೋಗು, ತಾನಾಗೇ ಗೊತ್ತಾಗತ್ತೆ’ ಎಂದು ಫೋನಿಟ್ಟುಬಿಟ್ಟರು.

ಆ ನಂತರವೂ ಕೂಡ ನನ್ನ ಒಂಟಿತನ, ಕೆಲಸದ ಗಡಿಬಿಡಿ, ಎಲ್ಲಕ್ಕಿಂತ ಮುಖ್ಯವಾಗಿ ಹಾಯ್ ಬೆಂಗಳೂರ್ ನಂಥ ಪತ್ರಿಕೆಗೆ ಹೇಗೆ ವರದಿಗಾರಿಕೆ ಮಾಡೋದು ಎನ್ನುವ ತಲೆಬಿಸಿಯಲ್ಲಿ ಕೆಲಸವನ್ನ ಮುಂದಕ್ಕೆ ಹಾಕುತ್ತಲೇ ಬಂದೆ. ಆ ತಿಂಗಳೂ ಕಳೆಯಿತು. ಮತ್ತೆ ಸರಿಯಾಗಿ 2ನೇ ತಾರೀಕಿಗೆ ಪತ್ರ; ಅದರಲ್ಲಿ ಎರಡು ಸಾವಿರ ರೂ.ಗಳ ಚೆಕ್ ಮತ್ತು ಮತ್ತೊಂದು ಈಗಲೂ ಮರೆಯಲಾಗದ ಒಕ್ಕಣಿಕೆಯ ಬಾಂಬ್. ‘ ಕೊಳ್ಗಿ, ನೀನು ಎಲ್ಲಿ ಮಲಕ್ಕಿಕೊಂಡಿದೀಯಾ ಅಂತಾ ಗೊತ್ತಾದ್ರೆ ಬಂದು ಒದ್ದು ಎಬ್ಬಿಸ್ತಿದ್ದೆ’ ಎನ್ನುವ ಮಮತೆಯ ಸಾಲುಗಳು’.
ಝೆನ್ ಪರಂಪರೆಯಲ್ಲಿ ಈ ರೀತಿ ಕಟುವಾದ, ತೀಕ್ಷ್ಣವಾದ ಶಿಕ್ಷಣ ಪದ್ಧತಿಯ ಬಗ್ಗೆ ಓದಿದ್ದೆ; ಅದು ಈಗ ನನ್ನೆದುರೇ ಬಂದು ನಿಂತಿತ್ತು. ಆ ನಂತರ ಚುರುಕಾದೆ. ಮನೆಯಲ್ಲಿ ಒಬ್ಬನೇ ಆಗಿದ್ದರಿಂದ ಬೆಳಗಿನ 11ರೊಳಗೆ ಮನೆ ಕೆಲಸ ಮುಗಿಸಿ ತೋಟದ ಕೆಲಸ ನೋಡಿ, ಮಧ್ಯಾಹ್ನದ ನಂತರ ಆಗ ಕೆಲಸ ಮಾಡುತ್ತಿದ್ದ ಜನಾಂತರಂಗದ ಸುದ್ದಿ ಕೆಲಸ. ಆಗ ಈಗಿನಂತೆ ಇಂಟರ್‍ನೆಟ್ ಇರಲಿಲ್ಲ. ಆಯಾ ದಿನದ ಸುದ್ದಿಗಳನ್ನ ಬರೆದು, ಕವರ್‍ನಲ್ಲಿ ಹಾಕಿ, ಮಾರನೆಯ ದಿನ ಬೆಳಿಗ್ಗೆ ಪೇಪರ್ ತರೋ ವ್ಯಾನ್‍ಗೆ ಅದನ್ನು ತಲುಪಿಸುವ ವ್ಯವಸ್ಥೆ ಮಾಡಬೇಕಿತ್ತು. ಅದನ್ನು ಆ ಡ್ರೈವರ್ ಪತ್ರಿಕೆ ಆಫೀಸಿಗೆ ತಲುಪಿಸುತ್ತಿದ್ದ. ಅಂದರೆ ಇವತ್ತಿನ ಸುದ್ದಿ ನಾಡಿದ್ದು ಪ್ರಕಟವಾಗುತ್ತಿತ್ತು.

ಅಂದಿನ ಎಲ್ಲ ಪತ್ರಿಕೆಗಳ ಸ್ಥಿತಿಯೂ ಇದೇ. ಈ ನಡುವೆ ‘ಹಾಯ್..’ಗಾಗಿ ಸುದ್ದಿ ಸರ್ಚ ಮಾಡ್ಬೇಕಿತ್ತು. ಅದಕ್ಕೆ ಮಾಮೂಲಿ ಸುದ್ದಿ ಆಗೋದಿಲ್ಲ, ಯಾವ ಪತ್ರಿಕೆಯಲ್ಲೂ ಬರದ, ಜನಸಾಮಾನ್ಯರ ಗಮನಕ್ಕೆ ಬರದ, ಕ್ರಿಮಿನಲ್ ಓರಿಯಂಟಲ್ ಸುದ್ದಿಗಳೇ ಅಗತ್ಯವಾಗಿತ್ತು.
ನನ್ನ ಪ್ರಕಾರ ಯಾರೇ ಪತ್ರಕರ್ತ ಇರಲಿ, ಕೆಲವು ಕಾಲವಾದರೂ ‘ಟ್ಯಾಬೋಲಾಯ್ಡ’ ಎಂದು ಒಂಥರಾ ಹಿಂಜರಿಕೆಯಲ್ಲಿ ಕರೆಯಿಸಿಕೊಳ್ಳುವ ಪತ್ರಿಕೆಗಳಿಗೆ ಕೆಲಸ ಮಾಡಬೇಕು. ಅದರಿಂದ ಅಂಟಬಹುದಾದ ವೈರಸ್ ಗಳನ್ನು ನಿವಾರಿಸಿಕೊಳ್ಳುವ ನೈತಿಕತೆ, ಸಾಮರ್ಥ ನಮಗಿದ್ದರೆ ಸಾಕು. ಅದೊಂದು ಪತ್ರಿಕೋದ್ಯಮದ ಅವರ್ಚನೀಯ ಅನುಭವ. ರಾಜಕಾರಣಿಗಳ, ಸಾಹಿತಿಗಳ ಅಥವಾ ಯಾರದ್ದೋ ಭಾಷಣಗಳನ್ನ, ಒಂದು ವಸ್ತು, ಸ್ಥಳ,ವ್ಯಕ್ತಿಗಳ ಬಗೆಗಿನ ವಿಶೇಷತೆಗಳನ್ನ ಬರೆದುಬಿಡಬಹುದು, ಪೊಲೀಸ್ ಇಲಾಖೆ ಕೊಟ್ಟ ದಾಖಲೆಯ ಪ್ರಕಾರ ಅಪರಾಧ ಸುದ್ದಿಗಳನ್ನ ಬರೆಯಬಹುದು. ಆದರೆ ಯಾರ ಗಮನಕ್ಕೂ ಬಾರದ, ಅಕಸ್ಮಾತ್ ಕೆಲವರ ಗಮನಕ್ಕೆ ಬಂದರೂ ಭಯದಲ್ಲಿ ಮುಚ್ಚಿಹೋಗಿಬಿಡಬಹುದಾದ ಸಂಗತಿ,ಘಟನೆಗಳನ್ನ ಅವುಗಳ ದಾಖಲಾತಿ ಸಮೇತ ಹೆಕ್ಕಿ ತೆಗೆದು ಸುದ್ದಿ ಮಾಡೋದಿದೆಯಲ್ಲ, ಅದು ಪತ್ರಕರ್ತನ ಎದುರಿನ ಸವಾಲು.
ಈ ಬಗ್ಗೆ ಪತ್ರಕರ್ತ ಸ್ನೇಹಿತರಿಗೆ ವಿಭಿನ್ನ ಧೋರಣೆಗಳಿರಬಹುದು. ನನ್ನ ಅನುಭವವನ್ನ ನಾನು ಹೇಳ್ತಿದೀನಿ ಅಷ್ಟೇ. ಕ್ರೈಮ್ ಓರಿಯಂಟಲ್ ಪತ್ರಿಕೋದ್ಯಮಕ್ಕೆ ಧೈರ್ಯ, ಹುಂಬತನ, ಛಾಲೆಂಜ್ ಮತ್ತು ಪ್ರಸಿದ್ಧನಾಗುವ ಹಂಬಲ ಇರದಿರುವ ಮನಸ್ಸು ಬೇಕು.
ನನಗೂ ಅದು ಹೊಸತು. ಆವರೆಗೆ ಕಾರ್ಯಕ್ರಮಗಳ, ವೇದಿಕೆಯ ಮೇಲೆ ಮಾತನಾಡಿದವರ ಮಾತು,ಫೋಟೊ ಬರೆದ ರೂಢಿ. ಅದರ ಜೊತೆಗೆ ಅದಕ್ಕಿಂತ ಭಿನ್ನವಾದ ಸುದ್ದಿ ಬರೆಯಬೇಕಾದ ಸಂದಿಗ್ಧತೆ ಎದುರಾಗಿತ್ತು. ನಮ್ಮ ತಾಲೂಕಿನಲ್ಲಿ ಅದೇನು ಸುದ್ದಿ ಸಿಕ್ಕೀತು; ಮಾತ್ರವಲ್ಲದೇ ಈಡೀ ಉತ್ತರ ಕನ್ನಡ ಜಿಲ್ಲೆಯ ಸುದ್ದಿಗಳನ್ನು ಹೆಕ್ಕಿ ತೆಗೆಯಬೇಕಿತ್ತು. ಹಾಗಾಗಿ ವಾರಕ್ಕೆರಡು ದಿನ ಹಾಯ್ ಗಾಗಿ ಮೀಸಲಿಡುವದು ಅನಿವಾರ್ಯವಾಗಿತ್ತು. ಬೇರೆ ಬೇರೆ ತಾಲೂಕಿನ ಪರಿಚಿತರ, ಪತ್ರಕರ್ತ ಸ್ನೇಹಿತರ ನೆರವು ಪಡೆದು ಒಂದೀಡಿ ದಿನ ಅಲ್ಲಿ ತಿರುಗಿ,ಸುದ್ದಿ,ಫೋಟೊ ಸಂಗ್ರಹಿಸಿ ವಾಪಸ್ಸು ಮನೆಗೆ ಬಂದು ಅವನ್ನೆಲ್ಲ ಬರೆದು ಕೋರಿಯರ್ ಮಾಡುವವರೆಗೆ ಧಾವಂತ.
ಸುದ್ದಿಗಳಲ್ಲಿ ಕೆಲವೊಂದನ್ನು ನಾನೇ ಹುಡುಕಿಕೊಂಡು ಹೋಗುತ್ತಿದ್ದೆ. ಮೊದ ಮೊದಲು ಅವು ಹಾಯ್ ಬೆಂಗಳೂರಿಗೆ ಅಗತ್ಯವಿಲ್ಲದ ಮತ್ತು ಅದರಲ್ಲಿ ಪ್ರಕಟವಾಗದಿರುವ ಸುದ್ದಿಗಳನ್ನೇ ಬರೆದದ್ದು ಹೆಚ್ಚು. ಆಗೆಲ್ಲ ರವಿ ಬೆಳಗೆರೆ ಇಂಥ ಸುದ್ದಿ ಯಾಕೆ ನಮಗೆ ಮುಖ್ಯವಲ್ಲ, ಎಂಥವು ಬೇಕು ಎನ್ನುವದರ ಜೊತೆಗೆ ಹೇಗೆ ಸುದ್ದಿ ಅರಸಬೇಕು ಎನ್ನುವದನ್ನು ಹೇಳುತ್ತಿದ್ದರು.

ಬೇರ್ಯಾವ ಪತ್ರಿಕೆಗಳಲ್ಲೂ ಬರದ ಸುದ್ದಿಗಳು ನಮಲ್ಲಿ ಬರಬೇಕು ಎನ್ನುವದು ಅವರ ಉದ್ದೇಶವಾಗಿತ್ತು. ಕೆಲವೊಮ್ಮೆ ಅವರೇ ಫೋನ್ ಮಾಡಿ ಇಂಥಲ್ಲಿಗೆ ಹೋಗಿ, ಇಂಥ ಸುದ್ದಿ ತೆಗೆದುಕೊಂಡು ಬಾ ಎಂದು ಕೂಡ ಸೂಚಿಸುತ್ತಿದ್ದರು. ಅವರಿಗೆ ಪತ್ರ ಬರೆದು ಸುದ್ದಿ ಜಾಡನ್ನು ಕೊಡುವ ಅನೇಕರಿದ್ದರು. ರವಿ ಯಾವಾಗ್ಲೂ ಒಂದು ಮಾತನ್ನ ಮರೆಯದೇ ಹೇಳುತ್ತಿದ್ದರು. ಅದನ್ನು ಮರೆಯುವಂತೆಯೇ ಇಲ್ಲ.
ಯಾವುದೇ ಸಂಪಾದಕನಿಂದ, ಪತ್ರಿಕೆಯ ಯಜಮಾನನಿಂದ ಬಾರದೇ ಇರುವ ಮಾತುಗಳು. ‘ ಕೊಳ್ಗಿ, ಹೊರಗಡೆ ಊರಿಗೆ ಹೋದಾಗ ಹೆಚ್ಚು ಅಲಿಬೇಡ, ನಿನ್ನ ಇರವನ್ನ ಆದಷ್ಟು ಕಡಿಮೆ ಗೊತ್ತು ಮಾಡ್ಕೊ, ಸೆಕ್ಯೂರ್ ಆಗಿರುವ ಒಳ್ಳೆಯ ಲಾಡ್ಜನಲ್ಲಿ ರೂಮ್ ಮಾಡು, ಮತ್ತು ಅಲ್ಲಿ ಇರೋದನ್ನ ಯಾರಿಗೂ ತಿಳಿಸಬೇಡ. ಆದಷ್ಟು ಬೇಗನೇ ರೂಮ್ ಸೇರ್ಕೋ. ಹೊಟ್ಟೆ ತುಂಬ ಊಟ ಮಾಡು. ಹಣ್ಣು, ಡ್ರೈ ಫ್ರೂಟ್ಸ ತಿನ್ನು, ಕುಡಿಯೋ ರಿಸ್ಕ ತಗೋಬೇಡ. ಟೆನ್ಶನ್ ಮಾಡ್ಕೋಬೇಡ. ಮತ್ತೆ ಕಳಿಸುವ ಸುದ್ದಿಯ ಜೊತೆಗೆ ಈ ಎಲ್ಲ ಖರ್ಚುಗಳ ಬಿಲ್ ಕಳಿಸು, ಹಣ ಕೊಡ್ತೇನೆ’
ನನಗೆ ಮಾತ್ರ ಅಲ್ಲ, ಹಾಯ್‍ನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ಬಗ್ಗೂ ಇಂಥದೇ ಕಾಳಜಿ ಅವರಿಗಿತ್ತು. ತನ್ನ ಪತ್ರಿಕೆಯ ಕೆಲಸ ಮಾಡುವ ಓರ್ವ ಸಾಮಾನ್ಯ ವರದಿಗಾರನ ಬಗ್ಗೆ ಇಷ್ಟೊಂದು ಕಾಳಜಿ ವಹಿಸುವ ಸಂಪಾದಕ ಅವರು ಮಾತ್ರ.ಈ ಬಗ್ಗೆ ಹೆಚ್ಚು ಬರೆಯೋದಿಲ್ಲ, ಒಂದು ಅನುಭವ ತಿಳಿಸಿ ಮುಗಿಸುತ್ತೇನೆ.

ಒಂದು ದಿನ ಫೋನ್ ಮಾಡಿದ ಬೆಳಗೆರೆ ‘ಇಂಥಲ್ಲಿಗೆ ಹೋಗಿ ಇಂಥವನ ಬಗ್ಗೆ ಮಾಹಿತಿ ಕಲೆ ಹಾಕು. ಆತ ನಿಮ್ಮ ಜಿಲ್ಲೆಯ ಮೋಸ್ಟ ಡೆಂಜರಸ್ ಕ್ರಿಮಿನಲ್, ಅವನ ಮತ್ತೊಂದು ಮುಖವಾಡ ಬಹುತೇಕ ಜನರಿಗೆ ಗೊತ್ತಿಲ್ಲ. ಅವನೀಗ ಸರಕಾರದ ಉನ್ನತ ಸ್ಥಾನಕ್ಕೆ ಹೋಗಿದ್ದಾನೆ. ಆತ ಮಾಡಿರಬಹುದಾದ ಅಪರಾಧಗಳಿಗೆ ಜೈಲಿನಲ್ಲಿರಬೇಕಾದ ವ್ಯಕ್ತಿ ಬೇರೆಯವರಿಗೆ ಶಿಕ್ಷೆ ಕೊಡುವ ಸ್ಥಾನಕ್ಕೆ ಬಂದು ಕೂತಿದ್ದಾನೆ. ಅವನ ಫೋಟೊ ಕೂಡ ಪೊಲೀಸ್ ಇಲಾಖೆಯಲ್ಲೂ ಲಭ್ಯವಿಲ್ಲ ಎನ್ನುವ ಮಾಹಿತಿ ಇದೆ. ಅಲ್ಲಿಗೆ ಹೋಗು’ ಎಂದು ಅಪ್ಪಣೆ ಮಾಡಿಬಿಟ್ಟರು. ರವಿಯವರನ್ನ ಆಫೀಸಿನ ಸಿಬ್ಬಂದಿಗಳು, ಉಳಿದ ವರದಿಗಾರರೂ ‘ಬಾಸ್’ ಎಂದು ಕರೆಯುತ್ತಿದ್ದುದರಿಂದ ನಾನೂ ‘ಓಕೆ ಬಾಸ್’ ಎಂದೆ.
ಬೇಕೆಂದೇ ನಾನು ಆ ಸ್ಥಳದ, ವ್ಯಕ್ತಿಯ ಹೆಸರುಗಳನ್ನು ಪ್ರಸ್ತಾವಿಸುತ್ತಿಲ್ಲ. ಮರು ದಿನ ಆ ಊರಿಗೆ ಹೋದೆ. ಒಂದೆರಡು ಬಾರಿ ಅಲ್ಲಿಗೆ ಹೋಗಿದ್ದೇನಾದರೂ ಆ ಊರು ನನಗೆ ಬಹುತೇಕ ಅಪರಿಚಿತವೇ. ಅಲ್ಲಿ ಹೋಗಿ ಇಳಿದ ನಂತರ ದಿಕ್ಕೇ ತೋಚದಂತಾಯ್ತು. ನನ್ನ ಶೋಧನೆಯನ್ನು ಎಲ್ಲಿಂದ, ಹೇಗೆ? ಆರಂಭಿಸಲಿ ಎನ್ನುವದೇ ತೋಚದಂತಾಯಿತು. ಯಾರ ಬಳಿಯೂ ನಾನು ಬಂದ ಕಾರ್ಯದ ಕುರಿತಾಗಿ, ಆ ವ್ಯಕ್ತಿಯ ಕುರಿತಾಗಲೀ ಪ್ರಸ್ತಾವಿಸುವಂತೆಯೇ ಇಲ್ಲ. ಅಲ್ಲೊಬ್ಬ ವರದಿಗಾರರು ಪರಿಚಯವಿದ್ದರು. ಅವರನ್ನು ಹುಡುಕಿಕೊಂಡು ಹೋಗಿ ಅದಾಗಲೇ ನಾನು ಅಲ್ಪಸ್ವಲ್ಪ ಕರಗತ ಮಾಡಿಕೊಂಡಿದ್ದ ಕ್ರೈಮ್ ಇನ್‍ವೆಸ್ಟಿಗೇಶನ್ ವರಸೆಯನ್ನು ಉಪಯೋಗಿಸಿ ವಿವರ ಪಡೆಯಲು ಪ್ರಯತ್ನಿಸಿದೆ. ಪುಣ್ಯಕ್ಕೆ ಅವರೂ ಆ ವ್ಯಕ್ತಿಯ ಕುರಿತು ವಿರೋಧ ಅಭಿಪ್ರಾಯ ಹೊಂದಿದ್ದರು. ಅವರ ಬಳಿ ಇರುವ ಮಾಹಿತಿ ಕೊಟ್ಟು, ವಕೀಲರೊಬ್ಬರ ಹೆಸರು ಹೇಳಿ,ಅವರ ಬಳಿ ಇನ್ನಷ್ಟು ವಿವರ ಸಿಗಬಹುದು ಎಂದರು.

ಅಲ್ಲಿಗೂ ಹೋದೆ. ಅವರು ಆ ವ್ಯಕ್ತಿಯ ಮೇಲೆ ದಾಖಲಾದ ಕೆಲವೊಂದು ಕೇಸ್‍ಗಳ ಬಗ್ಗೆ, ಮುಖ್ಯವಾಗಿ ಯಾರಿಗೂ ಐಬು ಸಿಗದಂತೆ, ಯಾವ ಸಾಕ್ಷವೂ ಸಿಗದಂತೆ ಆತ ನಡೆಸುತ್ತಿದ್ದ ನಿಗೂಢ ಕೆಲಸಗಳ ಬಗ್ಗೆ ಮಾಹಿತಿ ಕೊಟ್ಟರು. ಅವರ ಬಳಿ ದೊರಕಿದ್ದು ಅಷ್ಟೇ ಆದರೂ ಆ ವ್ಯಕ್ತಿಯ ಬಗ್ಗೆ ಒಂದು ನಿರ್ಧಿಷ್ಟ ಆಕೃತಿ ಮೂಡಲು ಸಹಕಾರಿಯಾಯ್ತು.
ರವಿ ಮೊದಲೇ ಹೇಳಿದ್ದರು. ‘ಎಲ್ಲಿಯೂ ಶುರುವಿನಲ್ಲೇ ನಾನು ಇಂಥ ಪತ್ರಿಕೆಯವನು ಅಂತಾ ಹೇಳ್ಕೋಬೇಡ. ಆದಷ್ಟು ನಿನ್ನ ಸ್ವಂತ ವರ್ಚಸ್ಸು, ಕುಶಲತೆಯಿಂದ ಮಾಹಿತಿ ಪಡೆಯೋಕೆ ಪ್ರಯತ್ನಿಸು, ಆಗೇ ಇಲ್ಲ ಎಂದಾಗ ಪತ್ರಿಕೆಯ ಹೆಸರು ಹೇಳು. ಪೊಲೀಸರು ಸತಾಯಿಸಿದರೆ ಅವರಿಗೆ ನನ್ನ ನಂಬರ್ ಕೊಟ್ಟು ಫೋನ್ ಮಾಡಿಸು. ವಿನಾ:ಕಾರಣ ನನ್ನ ನಂಬರ್ ಯಾರಿಗೂ ಕೊಡಬೇಡ’ ಎಂದು ಸೂಚನೆ ಕೊಟ್ಟಿದ್ದರು.

ನನ್ನ ಕೆಲಸ ಕೇವಲ ಇಪ್ಪತ್ತು ಪರ್ಸಂಟ್ ಮಾತ್ರ ಆಗಿತ್ತು. ಸೀದಾ ಅಲ್ಲಿನ ಪೊಲೀಸ್ ಸ್ಟೇಶನ್‍ಗೆ ಹೋದೆ. ಪೊಲೀಸ್ ಸ್ಟೇಶನ್ ಪರಿಚಯವಿದ್ದವರಿಗೆ ಅಲ್ಲಿನ ರೂಢಿ, ವರ್ತನೆಗಳು ಗೊತ್ತಿರುತ್ತವೆ. ನಾನು ವರದಿಗಾರ ಎನ್ನುವ ಕಾರಣಕ್ಕೆ ಪಿ.ಎಸ್.ಐ.ಬಳಿ ಬಿಟ್ಟರು. ಆತ ಇನ್ನೂ ಯುವಕ, ಧೃಡಕಾಯ. ಅವರ ಬಳಿ ನಾನು ಹುಡುಕುತ್ತಿದ್ದ ವ್ಯಕ್ತಿಯ ಬಗ್ಗೆ ಕೇಳಿದಾಗ ನನ್ನ ಬಗ್ಗೆಯೇ ಇನ್‍ವೆಸ್ಟಿಗೇಶನ್‍ಗೆ ಶುರು ಹಚ್ಚಿಬಿಟ್ಟರು. ಅವರ ಬಗ್ಗೆ ಯಾಕೆ? ನೀವ್ಯಾರೂ? ಅಂತೆಲ್ಲ. ಸುಮಾರು ಹೊತ್ತು ಅದು,ಇದು ಅಂದರೂ ಬಗೆಹರಿಯುವ ಬಾಬತ್ತಲ್ಲ ಅನ್ನಿಸಿ ನಾನು ಹಾಯ್ ಬೆಂಗಳೂರ್ ವರದಿಗಾರ ಅಂದೆ. ಒಂದು ಕ್ಷಣ ತಬ್ಬಿಬ್ಬಾದ ಪಿ.ಎಸ್.ಐ. ನಂತರದಲ್ಲಿ ಅದನ್ನೇ ಅನುಮಾನಿಸತೊಡಗಿದರು. ಅದೇನೂ ಹೊಸತಲ್ಲವಲ್ಲ, ಯಾರ್ಯಾರೋ ನಾನು ಹಾಯ್ ಬೆಂಗಳೂರ್ ವರದಿಗಾರ ಅಂತ ಬಂದ ಎಷ್ಟು ಜನರನ್ನು ಅವರು ನೋಡಿದ್ದರೇನೋ? ‘ರವಿ ಬೆಳಗೆರೆ ನಮ್ಮ ಊರಿನವರೇ ಕಣ್ರೀ, ಅವರ ಮನೆ ಹಿಂದಿನ ಬೀದಿಯಲ್ಲೇ ನಮ್ಮ ಮನೆ, ನಾವೆಲ್ಲ ಒಂದೇ ಶಾಲೆಗೆ ಹೋದೋರು, ಒಟ್ಟಿಗೇ ಆಡ್ದೋರು’ ಎಂದು ಖುಷಿ ಪಟ್ಟವರು ಮತ್ತೆ ಯಥಾ ಪ್ರಕಾರ ‘ನೀವು ಅವರ ಪತ್ರಿಕೆಯವರಾ?’ ಎಂದು ರಾಗ ತೆಗೆದರು. ಪೊಲೀಸ್ ಬುದ್ದಿ ಹಾಗೇ ಅಲ್ವಾ? ಮತ್ತೆ ಮೀಡಿಯಾದವರು ಏನು ಕಡಿಮೆ? ಅನುಮಾನವೇ ಅಡಿಪಾಯ. ನನಗೆ ತಲೆಬಿಸಿ ಆಗತೊಡಗಿತು. ಅಲ್ಲಿ ನನಗೆ ಒಂದಿಷ್ಟು ಅಮೂಲ್ಯ ಮಾಹಿತಿ ದೊರಕುವ ಬಗ್ಗೆ ಸಿಕ್ಸಸೆನ್ಸ ಸೂಚನೆ ಕೊಡುತ್ತಿತ್ತು. ಬಿಡುವ ಹಾಗಿಲ್ಲ, ಸುಮಾರು ಹೊತ್ತಿನ ಚರ್ಚೆಯ ನಂತರ ‘ಈ ನಂಬರ್‍ಗೆ ಫೋನ್ ಮಾಡ್ತೀರಾ? ಖಾತ್ರಿಯಾಗುತ್ತೆ’ ಎಂದೆ. ‘ಯಾರದ್ದು ಈ ನಂಬರ್?’ ಎಂದಾಗ ‘ನನ್ನ ಬಾಸ್ ಅವರದ್ದು’ಎಂದೆ.

ಪುಣ್ಯಾತ್ಮ ಫೋನ್ ಮಾಡಿ ನನಗೆ ಕೊಟ್ಟ. ಆಗಲೇ ದಿನದ ಅರ್ಧ ಕಳೆದು 12 ಗಂಟೆಯಾಗುತ್ತ ಬಂದಿತ್ತು. ಬಂದ ಕೆಲಸ ನೋಡಿದರೆ ಅರ್ಧಂಬರ್ದ. ಅದೃಷ್ಟವಶಾತ್ ಬಾಸ್ ಫೋನ್ ಎತ್ತಿ ‘ ಕೊಳ್ಗಿ, ಎಲ್ಲಿದೀಯಾ? ಏನ್ಸಮಾಚಾರಾ?’ ಅಂದರು. ಅವರ ಧ್ವನಿಯ ಮಾಂತ್ರಿಕತೆಯನ್ನ ಎಲ್ಲರೂ ಕೇಳಿದವರೇ. ರವಿ ಬೆಳಗೆರೆಯವರ ಸ್ವರದಲ್ಲಿ ಇರುವ ಜೀವಂತಿಕೆ ನಮ್ಮನ್ನ ಉಲ್ಲಾಸಗೊಳಿಸಿಬಿಡುವಂತಿರುತ್ತದೆ ಅಲ್ಲವೇ? ಅದೇ ಸ್ವರದಲ್ಲಿ ಕೇಳಿದ್ದಕ್ಕೆ ನಾನು ಇಂಥ ಊರಿನ ಪೊಲೀಸ್ ಸ್ಟೇಶನ್‍ನಲ್ಲಿ ಇದೀನಿ. ಇಲ್ಲಿನ ಪಿ.ಎಸ್.ಐ.ನನ್ನ ನಂಬ್ತಾ ಇಲ್ಲ, ಇಲ್ಲಿ ಸಾಕಷ್ಟು ಮಾಹಿತಿ ಇದೆ. ಬಿಟ್ರೆ ಸಿಕ್ಕಲ್ಲ, ಅನಿವಾರ್ಯವಾಗಿ ಫೋನ್ ಮಾಡಬೇಕಾಯ್ತು’ ಎಂದವನು ‘ಬಾಸ್, ಇವರು ನಿಮ್ಮೂರಿನವರೇ ಅಂತೆ, ಮತ್ತೆ ನಿಮ್ಮ ಮನೆಯ ಹಿಂದಿನ ಓಣಿಯವರಂತೆ’ ಎಂದೆ. ‘ ಅಲ್ಲಯ್ಯಾ, ನಮ್ಮೂರಿನವನು ಅಲ್ಲಿದಾನಾ? ಸರಿ, ಅವಂಗೆ ಫೋನ್ ಕೊಡು’ಎಂದರು.
ನಂತರ ಅವರ ಮಾತುಕತೆ ಗಮನಿಸಿದರೆ ನಾನೇ ಕಂಗಾಲಾಗಬೇಕು. ಸ್ವಲ್ಪ ಹೊತ್ತು ಮಾತಾಡಿದ ರವಿ ನನಗೆ ಫೋನ್ ಕೊಡೋಕೆ ಹೇಳಿ ‘ ಮಾರಾಯಾ, ಈತ ನನ್ನ ಅಗ್ದೀ ದೋಸ್ತ, ಇಲ್ಲಿ ಇದಾನೇ ಅಂತ್ಲೇ ಗೊತ್ತಿರ್ಲಿಲ್ಲ, ನಿನ್ನ ಮೂಲಕ ಗೊತ್ತಾಗೋ ಹಾಗಾಯ್ತು, ನೋ,ವರಿ, ಡೂ.ಇಟ್’ ಅಂದರು.
ನಾನು ಸಿನೆಮಾದಲ್ಲಿ ನೋಡಿದ್ದೆ; ಪ್ರಭಾವಶಾಲಿ ಅಪರಾಧಿಗಳ ಕೇಸ್ ಪೈಲ್ ಧೂಳು ತಿನ್ನುತ್ತ ಬಿದ್ದದ್ದನ್ನ ಝಾಢಿಸಿ, ಕೊಡವಿ ಹೊರತೆಗೆಯೋದನ್ನ. ಅಕ್ಷರಶ: ಇಲ್ಲೂ ಅದೇ ಆಯಿತು. ಸಾಹೇಬರು ಆ ವ್ಯಕ್ತಿಯ ಪೈಲ್ ತೆಗೆ ಎಂದು ಪಿ.ಸಿ.ಗೆ ಹೇಳಿದಾಗ ಅವನ ಹಿಂದೆ ರೆಕಾಡ್ರ್ಸ ರೂಮಿಗೆ ಹೋದೆ. ಎಷ್ಟೋ ಹೊತ್ತಿನ ನಂತರ ತಡಕಾಡಿ, ರ್ಯಾಕಿನ ತಳದಲ್ಲಿ ಇದ್ದ ಪೈಲ್‍ನ್ನ ತೆಗೆದು ಕೊಡವಿದರೆ ಧೂಳಿನ ಮೋಡ.
ಅದರಲ್ಲಿನ ವಿವರಗಳನ್ನ ನೋಟ್ಸ ಮಾಡಿಕೊಳ್ಳುವಾಗ ಇಂಥ ನೀಚ, ದೇಶದ್ರೋಹಿ ಯಾರೂ ಇಲ್ಲ ಅನ್ನಿಸುತ್ತಿತ್ತು. ಎಲ್ಲರಿಗೂ ಮೋಸಮಾಡಿ, ಮುಂಡಾಮೋಚಿ, ಈಡೀ ಜಿಲ್ಲೆಯ ಸ್ವಾಸ್ಥ್ಯವನ್ನ ಹಾಳು ಮಾಡಿ, ಧೀರ್ಘ ಕಾಲದವರೆಗೂ ನಿವಾರಣೆಯಾಗದ ಕಲಹವನ್ನ ಹುಟ್ಟುಹಾಕಿದ ಆತನ ಪ್ರವರ ಬರೆದುಕೊಳ್ಳುವಾಗ ಮೈ ಕಂಪಿಸುತ್ತಿತ್ತು. ಎಲ್ಲ ಮುಗಿದು ಆತನ ಫೋಟೊ ಕೇಳಿದರೆ ಪೊಲೀಸರ ಬಳಿಯೇ ಆತನ ಫೋಟೊ ಇಲ್ಲ!
ಇದು ವ್ಯವಸ್ಥಿತವಾದದ್ದೇ? ಪ್ರಶ್ನೆ ಬಂದರೂ ತಡೆದುಕೊಂಡೆ. ಆ ವ್ಯಕ್ತಿ ಅತ್ಯಂತ ಚತುರ, ಬುದ್ದಿಶಾಲಿ ಎನ್ನುವದು ಮನದಟ್ಟಾಗಿತ್ತು. ಪಿಕ್‍ಪಾಕೆಟ್ ಮಾಡಿದ ಆರೋಪಿಯ ಛಾಯಾಚಿತ್ರ ತೆಗೆದುಕೊಳ್ಳುವ ಪೊಲೀಸ್ ಇಲಾಖೆ ಬಳಿ ಇಂಥ ಕ್ರಿಮಿನಲ್ ಫೋಟೊ ಇಲ್ಲ ಎಂದರೆ? ಸುದ್ದಿಗೆ ಆಕಾರ ದೊರೆಯತೊಡಗಿತ್ತು. ಇನ್ನೊಂದಿಷ್ಟು ಜನರನ್ನ ಭೇಟಿಯಾದೆ, ಸಂಜೆಯಾಯ್ತು. ಮೊದಲೇ ನಿಗಧಿಪಡಿಸಿಕೊಂಡ ಜಾಗಕ್ಕೆ ಹೋಗಿ ಊಟ ಮಾಡಿದೆ. ಬಾಸ್ ಹೇಳಿದ ಮಾತನ್ನು ಮೀರಿ ಮುಖ ಮುಚ್ಚಿಕೊಂಡು ಸೆಕೆಂಡ್ ಶೋ ನೋಡಲು ಸಿನೆಮಾ ಥಿಯೇಟರ್‍ಗೆ ಹೋದೆ. ಅಲ್ಲಿನ ಜನರ ನಾಡಿಮಿಡಿತ ತಿಳಿಯುವದು ನನಗೆ ಬೇಕಿತ್ತು.

ನನ್ನೆದುರು ಒಂದು ಸವಾಲಿತ್ತು, ಬಾಸ್ ಮೊದಲೇ ಹೇಳಿದ್ದರು. ಈ ವ್ಯಕ್ತಿಯ ಫೋಟೊ ಈವರೆಗೆ ದೊರಕಿಲ್ಲ ಅಂತ. ಪೊಲೀಸ್ ಬಳಿಯೂ ಸಿಕ್ಕಿಲ್ಲ. ಹುಡುಕಲೇ ಬೇಕಲ್ಲ. ಮರುದಿನ ಬೆಳಿಗ್ಗೆ ಸುಮ್ಮನೆ ಊರು ಅಡ್ಡಾಡಲು ಹೋದೆ. ನನ್ನ ಗುರಿ ಫೋಟೊ ಸ್ಟುಡಿಯೋಗಳು. ಇಂಥ ವ್ಯಕ್ತಿಯ ಫೋಟೊ ಹುಡುಕೋಕೆ ಬಂದಿದೀನಿ ಎಂದು ಸುದ್ದಿ ಹರಡೊದರೊಳಗೆ ನಾನು ಅಲ್ಲಿಂದ ಹೊರಬೀಳಬೇಕು, ಅಂಥ ನಂಬಿಕೆಯವರು ಯಾರು? ಹಾಗೇ ಬರುತ್ತಾ ಒಂದು ಫೋಟೊ ಪ್ರೇಮ್ ಕಟ್ಟುವ ಅಂಗಡಿ ಕಂಡಿತು. ಸುಸ್ತಾಗಿದ್ದರಿಂದ ಅಲ್ಲಿ ನಿಂತೆ. ಆ ಅಂಗಡಿಯವನು ಪರವಾಗಿಲ್ಲ ಅನ್ನಿಸಿದ್ದರಿಂದ ಅವನ ಅಂಗಡಿ ಮೆಟ್ಟಿಲು ಹತ್ತಿ ಬೆಂಚ್ ಮೇಲೆ ಕೂತೆ. ಹೊಸ ಮನುಷ್ಯ ನಾನು, ಇನ್ನೂ ಹುಡುಗ. ಅದು,ಇದೂ ಮಾತನಾಡುತ್ತ ಹೋದೆವು. ಆ ಮೊದಲೇ ನಾನು ಜಯಂತ್ ಕಾಯ್ಕಿಣಿಯವರ ಅಮೃತಬಳ್ಳಿ ಕಷಾಯ ಕಥೆ ಓದಿದ್ದೆ. ಅದೂ ಫೋಟೊ ಪ್ರೇಮ್ ಕಟ್ಟುವ ವ್ಯಕ್ತಿಯ ಕಥೆಯಾಗಿದ್ದರಿಂದ ಅದರ ಪ್ರಸ್ತಾವ ಮಾಡಿದೆ. ಅಷ್ಟಾದದ್ದೇ ಆತ ಚಿಗುರಿಕೊಂಡುಬಿಟ್ಟ.

ಟ್ಯಾಬೋಲಾಯ್ಡ ಸುದ್ದಿಗಾರರಿಗೆ ನಿಜಕ್ಕೂ ಇಂಥ ಟ್ರಿಕ್ಸಗಳು ಅಗತ್ಯ ಅಂತ ಅನ್ನಿಸಿದ್ದು ಅವತ್ತು. ರಾಜಕಾರಣಿಗಳ, ಕಾರ್ಯಕ್ರಮಗಳ ಸುದ್ದಿ ಬರೆಯುವವರಿಗೆ ಇದರ ಅಗತ್ಯವಿಲ್ಲ. ಅವರು ಬೇಕೆಂದರೆ ಹೊಗಳಬಹುದು, ಇಲ್ಲವಾದರೆ ತೆಗಳಬಹುದು. ಇಂಥ ರಿಸ್ಕ ಇರೋದಿಲ್ಲ. ಆತ ನನ್ನ ಜೊತೆ ಬೆರೆಯುತ್ತಿದ್ದಂತೆ ‘ನನಗೆ ಇಂಥ ವ್ಯಕ್ತಿಯ ಫೋಟೊ ಬೇಕು, ಎಲ್ಲಿ ಸಿಗಬಹುದು’ ಎಂದೆ. ಸ್ವಲ್ಪ ಹೊತ್ತು ಯೋಚನೆ ಮಾಡಿದ ಆತ. ಬಹುಷ: ತನ್ನ ಸಾಧಕ-ಬಾಧಕ ಯೋಚಿಸಿರಬೇಕು. ನಂತರ ‘ನನ್ನ ಬಳಿ ಒಂದು ಗ್ರೂಪ್ ಫೋಟೊ ಇದೆ, ಅದರಲ್ಲಿ ಅವ ಇದಾನೆ’ ಅಂದರು. ನಾನು ಪುಟಿದೆದ್ದುಬಿಟ್ಟೆ. ಮೊದಲ ಬಾರಿಗೆ ಈವರೆಗೆ ತನ್ನ ಫೋಟೊವನ್ನು ಕೂಡ ಬಹಿರಂಗಪಡಿಸಿದ ವ್ಯಕ್ತಿಯೊಬ್ಬನ ಫೋಟೊ ನಮ್ಮ ತೆಕ್ಕೆಗೆ ಸೇರುವದಿತ್ತು. ಆ ಅಂಗಡಿಯವ ಆ ಗ್ರೂಪ್ ಫೋಟೊದಲ್ಲಿ ಆ ವ್ಯಕ್ತಿಯ ಫೊಟೊ ಕತ್ತರಿಸಿ ಕೊಟ್ಟರು. ಅದನ್ನೇ ‘ಹಾಯ್’ ಗೆ ಕಳುಹಿಸಿದೆ. ಫೋಟೊ ಅಸ್ಪಷ್ಟವಾಗಿದ್ದರೂ ಸುದ್ದಿಯ ಜೊತೆ ಪ್ರಕಟವಾಯಿತು. ಆ ವ್ಯಕ್ತಿ ತನ್ನ ಸ್ಥಾನದಿಂದ ಕೇವಲ ಸಸ್ಪೆಂಡ್ ಮಾತ್ರವಲ್ಲ; ಶಾಶ್ವತವಾಗಿ ಡಿಸ್‍ಮಿಸ್ ಆಗಿಬಿಟ್ಟ.
ನಾನು ಪ್ರತಿ ವಾರ, ಪ್ರತಿ ದಿನ, ಪ್ರತಿ ನಿಮಿಷದ ಪ್ರತಿ ಕ್ಷಣವನ್ನೂ ಹೊಸದಾಗಿ ಬದುಕಲು ಚಡಪಡಿಸುವ ವಿಕ್ಷಿಪ್ತ ಜೀವಿ. ನನಗೆ ನಿನ್ನೆಗಳಲ್ಲಿ ತಲೆ ಮರೆಸಿಕೊಳ್ಳುವ ಹಂಬಲವಿಲ್ಲ. ಕೈಗೆ ಸಿಕ್ಕ ಬಣ್ಣದ ಗುಲಗಂಜಿಯನ್ನು ಕಳೆದುಕೊಳ್ಳಬಾರದೆಂಬ ಆಸೆಯಿಂದಾಗಿ ರಾತ್ರಿಯಿಡೀ ನಿದ್ದೆಗೆಟ್ಟು ಆಡುವ ಮಗುವಿನಂತೆ ಈ ಬದುಕಿನ ಪ್ರತಿ ಕ್ಷಣ ಪ್ಯಾಸಿನೇಟ್ ಆಗಿ ಬದುಕಿದ್ದೇನೆ
ರವಿ ಬೆಳಗೆರೆ
(ಮುಂದುವರಿಯುವುದು)
ಗಂಗಾಧರ ಕೊಳಗಿ

About the author

Adyot

Leave a Comment