ರವಿ ಬೆಳಗೆರೆ ಎಂಬ..
ಪತ್ರಿಕೋದ್ಯಮಿಯಾದವನು ಏನನ್ನು ಮಾರಿಕೊಂಡರೂ ಅವಮಾನ ಪಡಬೇಕಿಲ್ಲ,
ಆದರೆ ಪೆನ್ನು ಮಾರಿಕೊಂಡ ಮೇಲೆ
ಅವನಿಗೂ, ಬರೆಯುವ ಯಂತ್ರಕ್ಕೂ ವ್ಯತ್ಯಾಸವಿರುವದಿಲ್ಲ. — ರವಿ ಬೆಳಗೆರೆ
ಬದುಕಿನ ಹತಾಶೆಯ, ನಿಸ್ಸಹಾಯಕತೆಯ ಒಬ್ಬಂಟಿ ದಿನಗಳು ಅವು; ಆ ದಿನಗಳಲ್ಲಿ ನನ್ನ ಏಕತಾನತೆಯ ಬದುಕನ್ನು ಸಹ್ಯಗೊಳಿಸಿ, ಭವಿಷ್ಯದ ಬಗ್ಗೆ ಭರವಸೆ ಮೂಡಿಸಿದ್ದು ಕನ್ನಡ ಜನಾಂತರಂಗ ಮತ್ತು ಹಾಯ್ ಬೆಂಗಳೂರ್. ಜನಾಂತರಂಗದ ಸಂಪಾದಕ, ಒಡೆಯ ಬಿ.ವಿ.ಸೀತಾರಾಮ್ ಕೆಲವು ವಿಷಯಗಳಲ್ಲಿ ರವಿ ಬೆಳೆಗೆರೆಯವರಿಗೆ ತದ್ವಿರುದ್ಧ. ಆದರೆ ಯೋಚನಾ ಕ್ರಮದಲ್ಲಿ ಸಾಕಷ್ಟು ಸಾಮ್ಯತೆ ಇರುವದನ್ನ ಗಮನಿಸಿದ್ದೇನೆ. (ಬಿ.ವಿ.ಸೀಯವರಿಗೂ ನಾನು ಕೃತಜ್ಞನಾಗಿರಲೇ ಬೇಕು).
ರವಿ ಎಷ್ಟು ವಿಸ್ತಾರವಾದ ನೆಟ್‍ವರ್ಕ, ಫೀಲ್ಡವರ್ಕ ಬಗ್ಗೆ ನಿರ್ಧಿಷ್ಠವಾದ ಧೋರಣೆ, ಸುದ್ದಿಯ ಮೂಲದ ಬಗ್ಗೆ ಖಚಿತತೆ ಹೊಂದಿದ್ದರು ಎನ್ನುವದನ್ನ ನಾನು ಸ್ವಲ್ಪಮಟ್ಟಿಗಾದರೂ ತಿಳಿದ ಕಾರಣಕ್ಕೆ ಆ ಬಗ್ಗೆ ಹೇಳಬೇಕು.
ಹಾಯ್ ಆ ವಾರ ಹೊರಬರಲು ಎರಡೇ ದಿನ ಬಾಕಿ ಇತ್ತು. ಸುದ್ದಿಗಾಗಿ ಬೇರೊಂದು ತಾಲೂಕಿಗೆ ಹೋಗಬೇಕಾಗಿ ಮುಂಜಾನೆ 6-6.30ರ ಸುಮಾರಿಗೆ ನಮ್ಮೂರು ಸಿದ್ದಾಪುರದ ಬಸ್ ಸ್ಟಾಂಡ್‍ಗೆ ಬಂದೆ. ಎದುರಿನಲ್ಲಿದ್ದ ಸ್ಟಾಲ್‍ಗಳಲ್ಲಿ ಇದ್ದ ನಾಲ್ಕಾರು ಜನರಲ್ಲಿ, ಪತ್ರಿಕೆ ವಿತರಕ ಸ್ನೇಹಿತರ ನಡುವೆ ಹಾಟ್ ಡಿಸ್ಕಶನ್; ಎನೂ ಅಂತ ವಿಚಾರಿಸಿದರೆ ಸರ್, ಪೇಪರ್ ನೋಡಿ ಅಂದರು. ಒಂದು ಪತ್ರಿಕೆ ನೋಡಿದೆ. ಶಾಸಕ ವಸಂತ ಅಸ್ನೋಟಿಕರ್ ಮರ್ಡರ್. ದಿಗಿಲು ಬಿದ್ದು ಹತ್ತಿರದಲ್ಲೇ ಇದ್ದ, ಖಾಯಂ ಆಗಿ ಬಳಕೆ ಮಾಡುತ್ತಿದ್ದ, ಇನ್ನೂ ತೆರೆಯದಿದ್ದ
ಟೆಲಿಫೋನ್ ಬೂತ್ ಮಾಲೀಕನನ್ನು ಹಿಂದುಗಡೆ ಇದ್ದ ಮನೆಯಿಂದ ಎಬ್ಬಿಸಿ ಕರೆತಂದು ಬಾಸ್‍ಗೆ ಫೋನ್ ಮಾಡಿದೆ. ಅಚ್ಚರಿಯೆಂದರೆ ಅವರು ಒಂದು ನಿಮಿಷದಲ್ಲಿ ಎತ್ತಿಕೊಂಡರು. ಆ ನಸುಕಿನಲ್ಲಿ. ವಿಷಯ ಹೇಳೋ ಅಷ್ಟರಲ್ಲೇ ಕೊಳ್ಗಿ, ಗೊತ್ತಾಗಿದೆ, ನೀನು ಸೀದಾ ಕಾರವಾರಕ್ಕೆ ಹೋಗು, ಪೇಪರ್ ನಾಳೆ ಸಂಜೆ ಪ್ರಿಂಟ್‍ಗೆ ಹೋಗೋ ಟೈಮ್, ನಮ್ಗೆ ಸಮಯ ಇಲ್ಲ. ಆದಷ್ಟು ಸಂಗ್ರಹ ಮಾಡು, ಇನ್ನೊಂದು ಗಂಟೆಗೆ ಇಲ್ಲಿಂದ ಸ್ಪೆಶಲ್ ರಿಪೋರ್ಟರ್ ಹೊರಡ್ತಾರೆ. ಕಾರವಾರ ಹಂಡ್ರೆಡ್ ಪರ್ಸಂಟ್ ಬಂದ್ ಆಗಿರುತ್ತೆ. ಮೊದ್ಲು ನೀನು ಹೋಗಿ ಅಲ್ಲಿ ಸೇರ್ಕೋ, ನಿನ್ನ ಮೀಟ್ ಆಗಬೇಕು ಅಂದ್ರೆ ಇಲ್ಲಿಂದ ಹೊರಡೋನಿಗೆ ಒಂದು ಗುರ್ತು ಬೇಕು, ಆತ ಹೇಗಾದ್ರೂ ಬರ್ತಾನೆ, ಎಲ್ಲಿ, ಎಷ್ಟು ಟೈಮಿಗೆ ಸಿಗೋದು ಅಂತ ಈಗ್ಲೇ ಹೇಳು, ಆತ ಬಂದವನು ಅಲ್ಲಿ ಕಾಯ್ತಿರ್ತಾನೆ ಎಂದರು. ನಾನು ಸವಿತಾ ಹೊಟೇಲ್ ಎದುರು ಎಂದು ಬಿಟ್ಟೆ. ಶಿರಸಿಗೆ ಹೋಗಿ, ಕಾರವಾರದ ಬಸ್ ಹತ್ತಿದರೆ ಸಿದ್ದಾಪುರದಲ್ಲಿ ಪಿ.ಎಸ್.ಐ. ಆಗಿ ಕೆಲಸ ಮಾಡಿದ್ದ ಸ್ಮಾರ್ಟ ವ್ಯಕ್ತಿತ್ವದ, ಸಹೃದಯ ಮನುಷ್ಯರಾಗಿ ಶಿರಸಿಯಲ್ಲಿದ್ದ ಶಶಿಧರ್ ಎನ್ನುವವರು ಕಂಡರು. ಅವರನ್ನ ಅರ್ಜಂಟಾಗಿ ಕಾರವಾರಕ್ಕೆ ಡ್ಯೂಟಿಗೆ ಹಾಕಿದ್ದರು. ಒಂದಿಷ್ಟು ಮಾತನಾಡುತ್ತ ಹೋದೆ.
ಕಾರವಾರಕ್ಕೆ ಹೋದರೆ ಕುಡಿಯಲು ನೀರಿಗೂ ಗತಿಯಿಲ್ಲ, ಈಡೀ ಪಟ್ಟಣ ಬಂದ್, ಎಲ್ಲಿ ನೋಡಿದರೂ ಪೊಲೀಸ್ ಮತ್ತು ಅಸ್ನೋಟಿಕರ್ ಅಭಿಮಾನಿಗಳು. ಕಾರವಾರ ಕೊತ ಕೊತ ಕುದಿಯುತ್ತಿತ್ತು. ಅವರು ಮರ್ಡರ್ ಆದ ಕಲ್ಯಾಣಮಂಟಪದ ಎದುರಿನ ರಕ್ತದೋಕುಳಿಯ ಫೋಟೊ ತೆಗೆದುಕೊಂಡೆ. ಅಸ್ನೋಟಿಕರ್ ಮನೆಗೆ ಹೋಗಿ ಅಲ್ಲಿನ ಹಲವು ಫೋಟೊ ತೆಗೆದುಕೊಂಡೆ, ಆದರೆ ನಿಜವಾದ ಹಕಿಕತ್ ದೊರಕಲೇ ಇಲ್ಲ. ಎಲ್ಲ ಅನಿಶ್ಚಿತ, ಅಸಂಬದ್ದ ಮಾಹಿತಿಗಳು. ಕೊಲೆಗಾರರು ಯಾರು? ಎನ್ನುವದು ಗೊತ್ತಾಗುತ್ತಲೇ ಇಲ್ಲ. ಮಧ್ಯಾಹ್ನದ ಊಟವಿರಲಿ, ಗುಟುಕು ಚಹಾ ಕೂಡ ಇಲ್ಲದ ಸ್ಥಿತಿಯಲ್ಲಿ ಹಾಗೇ ಓಡಾಡುತ್ತಿದ್ದಾಗ — ಈಗ ತೀರಿಹೋಗಿರುವ ಆತ್ಮೀಯ ಗೆಳೆಯ ವೆಂಕಟಾಚಲ ಸಿಕ್ಕ. ಆತ ಮೊದಲು ಸಿದ್ದಾಪುರದಲ್ಲಿ ಧ್ಯೇಯನಿಷ್ಠ ಪತ್ರಕರ್ತ ಎನ್ನುವ ಪತ್ರಿಕೆಗೆ ವರದಿಗಾರನಾಗಿದ್ದ. ಮತ್ತು ನನ್ನ ಪತ್ರಿಕೋದ್ಯಮದ ಪುರ್ನಜನ್ಮಕ್ಕೂ ಕಾರಣವಾಗಿದ್ದ. ನಂತರ ಕಾರವಾರದಿಂದ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದ. ಅಲ್ಲಿಗೆ ಗುಟುಕು ನೀರಿಗೆ ತೊಂದರೆಯಾಗದ ಭರವಸೆ ಬಂತು.
ಸಂಜೆಯಾದಂತೆ ಸೀದಾ ಯಾವುದೋ ಟ್ಯಾಕ್ಸಿ ಹಿಡಿದು ಅಂಕೋಲಾಕ್ಕೆ ಬಂದು ಬಾಸ್‍ಗೆ ಫೋನ್ ಮಾಡಿದೆ. ನನ್ನ ಕೆಲವು ಮಾತು ಕೇಳಿದ ಅವರು ಕೊಳ್ಗಿ, ಬಹುತೇಕ ಮಾಹಿತಿ ಸಿಕ್ಕಿದೆ, ಕೊಲೆ ಮಾಡಿಸಿದ್ದು ಯಾರು? ಅವ ಎಲ್ಲಿದಾನೆ? ಅಂತೆಲ್ಲ. ಆತ ಈಗ ದುಬೈಲಿದಾನೆ. ಮುತ್ತಪ್ಪ ರೈ ಮೂಲಕ ಅಲ್ಲಿಗೇ ಕಾಂಟಾಕ್ಟ ಮಾಡ್ತೀದಿನಿ, ನೋ ವರಿ, ನೀನು ಫೋಟೊ,ನಿಂಗೊತ್ತಿದ್ದು ಕೊಡು, ಇಲ್ಲಿಂದ ಹೊರಟಿರೋನು ಯಾಮಾರಿಸ್ತಾನೆ; ಚಂಗಲು. ಕೇಳಿದ್ರೆ ದುಡ್ಡು,ಗಿಡ್ಡು ಕೊಡೋಕೆ ಹೋಗಬೇಡ, ಅವನ್ನ ತೀರಾ ಹಚ್ಕೋಬೇಡ, ಅವನ ಹತ್ರ ನಾನು ಮ್ಯಾನೇಜ್ ಮಾಡ್ತೀನಿ, ನಾಳೆ ಸಂಜೆ ಫೋನ್ ಮಾಡುಅಂದರು. ಬೆಂಗಳೂರಿನಿಂದ ಆ ವ್ಯಕ್ತಿಯೂ ಬಂದರು. ಇಬ್ಬರೂ ಭೇಟಿಯಾಗಿ ಕೆಲಸ ಹಂಚಿಕೊಂಡು ಸಂಗ್ರಹ ಮಾಡಿದೆವು. ನಂತರ ಅಂಕೋಲಾಕ್ಕೆ ಬಂದು ( ಆಗ ಇಂಟರ್‍ನೆಟ್ ಇಲ್ಲದ ಕಾರಣ ಕೈ ಬರಹದಲ್ಲಿ ಬರೆದ ವರದಿಯನ್ನ ಪ್ಯಾಕ್ಸ ಮಾಡಿದ್ವಿ, ಬೆಂಗಳೂರಿನಿಂದ ಬಂದವರು ಅಲ್ಲೇ ಬಸ್ ಹತ್ತಿ ವಾಪಸ್ ಆದರು. ನಂಗೆ ಬಸ್ ಇರದ್ದಕ್ಕೆ ಮತ್ತೆ ಕಾರವಾರದ ವೆಂಕಟ್ ರೂಮಿಗೆ ಬಂದೆ). ಆ ವಾರದ ಹಾಯ್ ಬೆಂಗಳೂರ್ ನೋಡಿದ ನಾನು ಕಂಗಾಲಾಗಿಬಿಟ್ಟೆ. ನಾವು ಶೋಧಿಸಿದ ಸುದ್ದಿ ತೃಣಮಾತ್ರದ್ದು. ರವಿ ಬೆಳಗೆರೆ ಬೆಂಗಳೂರು ಆಫೀಸಲ್ಲೇ ಕೂತು ಈಡೀ ಪ್ರಕರಣದ ಇಂಚು.ಇಂಚನ್ನು ತಮ್ಮದೇ ಸ್ಟೈಲಿನಲ್ಲಿ ಬರೆದಿದ್ದರು. ನಾವು ಬರೆದದ್ದನ್ನು ಸೇರಿಸಿ ನಮಗಿಬ್ಬರಿಗೂ ಬೈ ಲೈನ್ ಕೊಟ್ಟಿದ್ದರು. ದುಬೈನಲ್ಲಿದ್ದ ಭೂಗತ ದೊರೆಯ ಸಂದರ್ಶನವನ್ನೂ ಮಾಡಿದ್ದರು. ದೆಟ್ ಇಸ್ ರವಿ ಬೆಳಗೆರೆ.
ಆ ನಂತರ ನನ್ನ ಹಲವಾರು ವರದಿಗಳು ಹಾಯ್‍ನಲ್ಲಿ ಬಂದಿವೆ.( ನಾನಿದ್ದಾಗ ಸಿದ್ದಾಪುರದ ಯಾವ ಸುದ್ದಿಗಳೂ ಬರಲಿಲ್ಲ. ನಾನು ಭಯಕ್ಕೆ, ಅಥವಾ ಇನ್ಯಾವುದೇ ಕಾರಣಕ್ಕೆ ವರದಿ ಮಾಡದೇ ದೂರ ಉಳಿದಿದ್ದಲ್ಲ. ನಾನು ಹಾಯ್ ಬಿಟ್ಟ ನಂತರ ಶೃಂಗೇಶ್ ಕೆಲವೊಂದು ವರದಿಗಳನ್ನ ಮಾಡಿದರು).
ಹೀಗಿರುವಾಗ ಅಮ್ಮನಿಗೆ ಸ್ಟ್ರೋಕ್ ಆಯ್ತು. ಅಮ್ಮ ಈಗ ನೆನಪಿರುವ ಪ್ರಕಾರ 22-23 ದಿನ ಕೋಮಾದಲ್ಲಿದ್ದಳು ಮನೆಯಲ್ಲೇ. ಡಾಕ್ಟರ್ ಚಿಕಿತ್ಸೆ, ನಾಟಿ ಚಿಕಿತ್ಸೆ ಎಲ್ಲ ಆದರೂ ಆಕೆ ಎಚ್ಚರ ಆಗಲಿಲ್ಲ. ಅಂಥ ಹೊತ್ತಿನಲ್ಲಿ ಶ್ರೀಮಾನ್ ವೆಂಕಟಾಚಲ ಸುಮ್ಮನೆ ಫೋನ್ ಮಾಡಿದ. ವಿಷಯ ಹೇಳಿದೆ. ಆತನಿಗೂ ಸ್ವಂತ ಮಗನ ಹಾಗೇ ಅಮ್ಮ ಉಣಬಡಿಸಿದವಳು. ಬಹುತೇಕ ದಿನ ನಾನು, ಅವನೂ ಒಟ್ಟಿಗೇ ನಮ್ಮನೆಯಲ್ಲಿ ಬದುಕಿದವರೇ. ಇಲ್ಲಿ, ಕಾರವಾರದಿಂದ 20-25 ಕಿಮೀ.ದೂರದಲ್ಲಿ ಹಳಗಾದಲ್ಲಿ ಒಂದು ಆಸ್ಪತ್ರೆಯಿದೆ, ಸ್ಟ್ರೋಕ್‍ಗೆ ಸ್ಪೇಶಲ್. ಅಲ್ಯಾಕೆ ತೋರಿಸಬಾರದು ಎಂದ.
ಮಾರನೇ ದಿನವೇ ಗೆಳೆಯ ಸಂತೋಷ ಹುಲೇಕಲ್ ಕಾರಿನಲ್ಲಿ ಶವವೇ ಆಗಿದ್ದ ಅಮ್ಮನನ್ನು ಹಳಗಾಕ್ಕೆ ಕರೆದುಕೊಂಡು ಹೋದೆವು. (ಇಲ್ಲಿ ಇದನ್ನ ಯಾಕೆ ಪ್ರಸ್ತಾಪ ಮಾಡ್ತೀದಿನಿ ಅಂದ್ರೆ ಈ ಎಲ್ಲ ವಿಷಯಗಳನ್ನು ರವಿ ಬೆಳಗೆರೆ ಹತ್ರ ಹೇಳ್ತಿದ್ದೆ. ನೀ ಸುದ್ದಿ ಬರೆಯೋದು ಬ್ಯಾಡ ಮಾರಾಯಾ, ಅಮ್ಮನ್ನ ಸರಿ ಮಾಡ್ಕೋ ಅಂತಿದ್ರು. ನಂತರ ಗೊತ್ತಾಯ್ತು ರವಿ ಸರ್ ಅಮ್ಮನೂ ಸ್ಟ್ರೋಕ್‍ಗೆ ಒಳಗಾಗಿದ್ರಂತೆ).
ಅಂತೂ ಕೋಮಾದಲ್ಲಿ ಅಲ್ಲಿಗೆ ಹೋದ ಅಮ್ಮ ಒಂದು ವಾರದ ನಂತರ ತಾನಾಗೇ ನಡೆದು ಬಂದು ಕಾರ್ ಹತ್ತಿ ಕೂತು ತಮ್ಮಾ, ನಿನ್ನ ಮದುವೆ ನೋಡಿ ಸಾಯ್ಬೇಕು, ಅದನ್ನ ಆದಷ್ಟು ಬೇಗ ಮಾಡು ಅಂದಳು.
ಅಲ್ಲಿಗೆ ನನ್ನ ಹಾಯ್ ಸಹವಾಸ ಮುಗಿಯುವ ಲಕ್ಷಣ ಕಂಡಿತು. ಎರಡು-ಮೂರು ತಿಂಗಳಲ್ಲಿ ಮದುವೆಯೂ ಆದೆ. ವರ್ಷದಲ್ಲಿ ಮಗನೂ ಹುಟ್ಟಿದ. ಫೋನ್ ಮಾಡಿ ವಿಷಯ ಹೇಳಿದ್ರೆ ಏ,ಕೊಳ್ಗಿ, ಎಷ್ಟು ಮರಿ ಹುಟ್ಟಿದಾವೋ ಎಂದು ಕಕ್ಕುಲತೆಯಿಂದ ಹಾರೈಸಿದ್ದರು.
ಆ ನಂತರ ಅನಿವಾರ್ಯವಾಗಿ ನನ್ನ ವರದಿಗಾರಿಕೆಯ ಕೆಲಸದಲ್ಲಿ ತೊಡಕಾಗತೊಡಗಿತು. ಈ ನಡುವೆ ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕ್ ಒಂದರಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರದ ಬಗ್ಗೆ ಓರ್ವ ವಯೋವೃದ್ದರು ಹೋರಾಟ ನಡೆಸುತ್ತಿದ್ದು ಈ ಬಗ್ಗೆ ಅವರು ವಿಸ್ತಾರವಾದ ಮಾಹಿತಿಯನ್ನೂ ರವಿ ಬೆಳಗೆರೆಯವರಿಗೆ ಕಳಿಸಿದ್ದರು. ಅದನ್ನ ಬಾಸ್ ನನಗೆ ರವಾನಿಸಿ ಇದರ ಬಗ್ಗೆ ಗಮನ ಕೊಡು ಎಂದಿದ್ದರು. ಕೆಲವೇ ದಿನಗಳಲ್ಲಿ ಆ ಹೋರಾಟಗಾರರ ಮೇಲೆ ನಡುಹಗಲಿನಲ್ಲೇ ಮಾರಣಾಂತಿಕ ಹಲ್ಲೆಯಾಯ್ತು. ನಾನು ಅವರಿದ್ದ ಆಸ್ಪತ್ರೆಗೆ ಹೋಗಿ ಮತ್ತಷ್ಟು ವಿವರ ಪಡೆದು, ಆ ಬ್ಯಾಂಕ್‍ನ ನಿರ್ದೇಶಕರಾಗಿದ್ದರೂ, ಇಂಥ ಲಫಡಾದ ಬಗ್ಗೆ ವಿರೋಧವಿದ್ದವರಿಂದ ಮಾಹಿತಿ ಪಡೆಯಲು ಹೋದೆ. ಅಲ್ಲೇ ಒಂದು ಎಡವಟ್ಟಾಯ್ತು; ಒಂದೇ ಸರ್‍ನೇಮ್ ಇದ್ದ ಎರಡು ನಿರ್ದೇಶಕರಲ್ಲಿ ಪರ-ವಿರೋಧವಿದ್ದವರಿದ್ದರು. ನನ್ನ ಆಯ್ಕೆ ತಪ್ಪಾಗಿ ಪರವಿದ್ದವರ ಬಳಿ ಹೋಗಿಬಿಟ್ಟೆ. ಎಷ್ಟೇ ಹುಶಾರಾಗಿದ್ದರೂ ಎಡವಟ್ಟಾಗುತ್ತದೆ ಎನ್ನುವದಕ್ಕೆ ಇದೊಂದು ನಿದರ್ಶನ. ಅವರ ಜೊತೆ ಎರಡು ನಿಮಿಷ ಕಳೆಯುವಷ್ಟರಲ್ಲೇ ನಾನು ರಾಂಗ್‍ಪ್ಲೇಸ್‍ಗೆ ಬಂದಿದೇನೆ ಅನ್ನೋದು ಮನವರಿಕೆಯಾಯ್ತು. ನಿಧಾನಕ್ಕೆ ಅಲ್ಲಿಂದ ಕಳಚಿಕೊಳ್ಳುವ ಹಂಚಿಕೆ ಹಾಕಿದೆ. ಅಷ್ಟರಲ್ಲೇ ಆತ ಇನ್ನೊಂದಿಬ್ಬರು ನಿರ್ದೇಶಕರಿಗೆ ಫೋನ್ ಮಾಡುತ್ತಿದ್ದ. ನನಗೇನೂ ಭಯವಿರಲಿಲ್ಲ. ಅಲ್ಲೇ ಕೂತಿದ್ದರೆ ನನ್ನ ಜೊತೆ ಡೀಲ್ ಮಾಡಿ ಒಂದಿಷ್ಟು ಹಣ ಕೊಟ್ಟು ಬಾಯಿ ಮುಚ್ಚಿಸುವ ಪ್ರಯತ್ನ ಮಾಡ್ತಿದ್ದರೇನೋ? ಅಷ್ಟೇ. ನಿಧಾನಕ್ಕೆ ಅಲ್ಲಿಂದ ಎದ್ದು ಹೊರಬಂದು ಬಿಟ್ಟೆ.
ಬೇರೆ ಒಂದು ಕೆಲಸಕ್ಕೆ ಒಂದೆರಡು ದಿನದಲ್ಲೇ ಬೆಂಗಳೂರಿಗೆ ಹೋಗಬೇಕಿತ್ತು. ಮಾರನೇ ದಿನ ಹೋದವನು ಅಕ್ಕನ ಮನೆಯಿಂದ ರವಿಯವರಿಗೆ ಫೋನ್ ಮಾಡಿ ಬೆಂಗ್ಳೂರಿಗೆ ಬಂದಿದೀನಿ, ರಿಪೋರ್ಟ ಬರಿತೀದಿನಿ, ನಾಳೆ ಆಫೀಸಿಗೆ ಬರ್ತಿನಿ ಎಂದು ಮಾಹಿತಿ ಕೊಟ್ಟೆ.
ಮಾರನೇ ದಿನ ಹೋದಾಗ ರವಿ ಬೆಳಗೆರೆ ಒಂದಿಷ್ಟು ಮಾತಾಡಿ, ವಿಷಯಕ್ಕೆ ಬಂದು ನಾನು ತಂದ ವರದಿ ನೋಡಿದರು. ಕೊಳ್ಗಿ, ಒಂದು ಸಂದಿಗ್ಧ ಎದುರಾಗಿದೆ ಮಾರಾಯಾ, ನೀನು ಈ ವರದಿಗೆ ಹೋಗಿದ್ದು ಅಲ್ಲೆಲ್ಲ ಸುದ್ದಿಯಾಗಿದೆ. ನನ್ನ ದೋಸ್ತ.. ದಿಲ್ಲಿಯಿಂದ ಫೋನ್ ಮಾಡಿ ಈ ಸ್ವಲ್ಪ ದಿನ ಹೆಲ್ಡಅಪ್ ಮಾಡೋಕಾಗತ್ತಾ ಅಂತ ಕೇಳ್ದ. ಅವನ ಸೋದರಮಾವ( ಅವರು ಧ್ಯೇಯ ಮತ್ತು ನಿಷ್ಠೆ ನಮ್ಮ ಅಜೆಂಡಾ ಅನ್ನುವ ಹೊಗಳಿಕೆಯಲ್ಲಿದ್ದವರು) ಒತ್ತಾಯ ಮಾಡ್ತಿದಾರಂತೆ. ಏನು ಮಾಡೋದು? ಅಂತ ಚೆಂಡನ್ನು ನನ್ನ ಅಂಗಳಕ್ಕೆ ತಳ್ಳಿದರು.
ಒಂದೈದು ನಿಮಿಷ ಯೋಚಿಸಿ ಬಾಸ್, ನಾನು ನಿಮ್ಮ ವರದಿಗಾರ. ನಿಮಗೆ ಒತ್ತಡ ಹಾಕ್ತಿರೋರು ನಿಮ್ಮ ಖಾಸಾ ದೋಸ್ತ. ನಿಮ್ಮ ಗೆಳೆತನ ಶಾಶ್ವತವಾಗಿರಬೇಕು. ನನ್ನ ವರದಿ ಬಾರದೇ ಇರೋದ್ರಿಂದ ಒಂದಷ್ಟು ಜನಕ್ಕೆ ಮೋಸ ಆಗುತ್ತೆ ಬಿಟ್ರೆ ನಿಮ್ಮ ಸಂಬಂಧಗಳಿಗೆ ಧಕ್ಕೆ ಆಗಲ್ಲ ಎನ್ನೋದಷ್ಟೇ ನಾನು ಹೇಳೋದು. ತೀರ್ಮಾನ ನಿಮ್ಮದು ಅಂತ ಹೇಳಿ ಹೊರಟು ಬಂದೆ. ತುಂಬ ನೋವಿನಿಂದ, ವಿಷಾದದಿಂದ. ನಂತರ ಒಂದುವಾರ, ಎರಡನೇ ವಾರವೂ ಕಾದೆ, ಆ ಸುದ್ದಿ ಪ್ರಕಟವಾಗಲಿಲ್ಲ. ಓರ್ವ ವರದಿಗಾರ ಯಾವುದೋ ಸಾಮಾನ್ಯ ವರದಿ ಬಾರದಿದ್ದರೂ ಸಂಪಾದಕ ಮಂಡಳಿಯ ಜೊತೆ ಜಗಳಕ್ಕೆ ಬೀಳ್ತಾನೆ.( ಅದರ ಹಿಂದಿನ ಹಕೀಕತ್ ಬೇರೆ ಇರುತ್ತೆ). ತನ್ನ ಜೀವನವನ್ನ ಪಣಕ್ಕಿಟ್ಟು ಕೆಲಸ ಮಾಡಿದ ಸುದ್ದಿ ಬರಲಿಲ್ಲ ಎಂದರೆ ಹೇಗಾಗಿರಬೇಡ. ಆದರೆ ಅವರಿಬ್ಬರ ಆದರ್ಶ, ಅಪರೂಪದ ಗೆಳೆತನ ಮುರಿಯಬಾರದು ಎಂದು ಅದನ್ನೆಲ್ಲ ನುಂಗಿಕೊಂಡೆ. ಮತ್ತು ಹಾಯ್ ಬೆಂಗಳೂರ್ ವರದಿಗಾರಿಕೆ ಬಿಟ್ಟೆ. ಆ ನಂತರದ ವಿದ್ಯಮಾನಗಳು ತಮಗೆಲ್ಲ ಗೊತ್ತು. ಆದರ್ಶ ದಂಪತಿಗಳ ಕಲಹಕ್ಕಿಂತ ದೊಡ್ಡ ಕೋಲಾಹಲ ಜನ್ಮ ಜನ್ಮಾಂತರದ ಗೆಳೆಯರದ್ದು. ನಾನು ಬಿಟ್ಟ ನಂತರ ಶೃಂಗೇಶ್ ಎನ್ನುವವರು ನಮ್ಮ ಜಿಲ್ಲೆಯ ವರದಿ ಮಾಡುತ್ತಿದ್ದರು. ನನಗಾಗದ ಕೆಲವರು ಅವರು ಮಾಡಿದ ವರದಿ ನಾನು ಮಾಡಿದ್ದು ಎಂದು ಗೌಜಿ ಹಾಕಿದ್ದು ನಡೆಯಿತು. ಬೇರೆಯವರು ಬರೆದ ಸುದ್ದಿಯನ್ನ ನನ್ನದು ಎನ್ನುವ ಹೀನ ಚಾಳಿ ನನಗಿಲ್ಲ.
ಆ ನಂತರ ವಿಜಯ ಕರ್ನಾಟಕ ಪತ್ರಿಕೆಗೆ ಸೇರಿಕೊಂಡೆ. ಒಂದೆರಡು ವರ್ಷಗಳ ಒಂದು ದಿನ ಮಧ್ಯಾಹ್ನ ಬೈಕ್ ಹೊಡ್ಕೊಂಡು ನಮ್ಮೂರ ಪೇಟೆ ಬೀದಿಲೀ ಬರ್ತೀದ್ದಂಗೇ ಬಸ್ ಸ್ಟಾಂಡ್ ಎದುರಿನ ಅಂಗಡಿ ಸಾಲಿನಲ್ಲಿ ಕೂಗೇ ಕೂಗು. ಅಲ್ಲಿದ್ದ ಹಲವರು ಏಕ ಕಂಠದಲ್ಲಿ ನನ್ನ ಕರಿತೀದ್ದರು. ನಾನು ಗಾಭರಿಯಾಗಿ ಬೈಕ್ ನಿಲ್ಲಿಸಿ ಹೋದ್ರೆ ಒಬ್ಬರಿಗಿಂತ ಒಬ್ಬರು ತರಾತುರಿಯಲ್ಲಿ ಅವತ್ತು ಬೆಳಗ್ಗೆಯಷ್ಟೇ ಬಂದಿದ್ದ ಹಾಯ್ ಬೆಂಗಳೂರ್‍ನ ಖಾಸ್ ಬಾತ್ ಪುಟ ನನ್ನೆದುರು ಬಿಚ್ಚಿ ಬೆಳಗೆರೆ ನಿಮ್ಮ ಫೋನ್ ನಂಬರ್ ಕೇಳಿದಾರೆ ಅಂತ ತೋರಿಸಿದರು. ಆ ಗುಂಪಿನಲ್ಲಿ ಹಾಯ್‍ನ ಅಧಿಕೃತ ವಿತರಕ ಜಿ.ಟಿ.ರಂಗೈನ್ ಕೂಡ ಇದ್ದರು.
ಓದಿದೆ. ನಾನು ವರದಿಗಾರಿಕೆ ಬಿಟ್ಟರೂ ಹಾಯ್ ಬೆಂಗಳೂರನ್ನ ಪ್ರತಿವಾರ ಕೊಂಡ್ಕೊಂಡು ಓದ್ತಿದ್ದೆ. ಯಾವುದೇ ತಪ್ಪಿಲ್ಲದೇ ಏಡ್ಸ ಎನ್ನುವ ಕಾಯಿಲೆಗೆ ತುತ್ತಾಗಿ, ಅದರ ವಿರುದ್ಧ ಹೋರಾಟ ನಡೆಸುತ್ತಿದ್ದ ವೀಣಾಧರಿಯವರಿಗೆ ಸ್ಟ್ರೋಕ್ ಆಗಿತ್ತು. ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಿಸದಾದಾಗ ರವಿಯವರಿಗೆ ಸಡನ್ನಾಗಿ ನನ್ನ ಅಮ್ಮನಿಗೆ ಆದ ಇದೇ ಕಾಯಿಲೆ ಮತ್ತು ಅದು ವಾಸಿಯಾಗಿದ್ದೂ ನೆನಪಾಗಿ, ನನ್ನ ಹೆಸರು ಬರೆದು, ಈ ಮಹಾನುಭಾವನ(?) ಬಗ್ಗೆ ಗೊತ್ತಿರೋರು ದಯವಿಟ್ಟು ಆತನಿಗೆ ನನ್ನ ಸಂಪರ್ಕ ಮಾಡಲು ಸೂಚಿಸಿ ಎಂದು ಬರೆದಿದ್ದರು. ಹಾಗಾಗಿ ಈ ಗೆಳೆಯರೆಲ್ಲ ಸ್ಪರ್ಧೆಗೆ ಬಿದ್ದು ನನ್ನನ್ನು ಹುಡುಕತೊಡಗಿದ್ದರು.
ನಂತರ ರವಿಸರ್‍ಗೆ ಫೋನ್ ಮಾಡಿ ಹಳಗಾ ಆಸ್ಪತ್ರೆಯ ವಿಳಾಸ ಕೊಟ್ಟು, ಅಲ್ಲಿಯ ರೀತಿ,ನೀತಿಗಳ ಬಗ್ಗೆ ಹೇಳಿ, ಅಗತ್ಯವಿದ್ರೆ ನಾನು ಅಲ್ಲಿಗೆ ಬರ್ತೀನಿ ಅಂತ ಹೇಳಿದೆ. ಆವಾಗ್ಲೂ ಏನಯ್ಯಾ, ಹ್ಯಾಂಗಿದೀಯಾ, ಬಾರೋ ಆಫೀಸ್‍ಗೆ ಅಂದಿದ್ರು.
ನನಗೆ ಆಗಲೂ- ಈಗಲೂ ದೊಡ್ಡ ಮನುಷ್ಯರು, ಸೆಲಿಬ್ರಿಟಿಗಳು ಅಂದರೆ ಒಂಥರಾ ಅಂಜಿಕೆ. ಅದು ನನ್ನ ಕೊರತೆ ಅಂತ ನಾನು ಭಾವಿಸಿಯೇ ಇಲ್ಲ, ದಿಸ್ ಇಸ್ ಒನ್ ಆಪ್ ದ ಸೆಪ್ಟೀ ಅಂತಾನೇ ತಿಳಿದವನು. ಅನುಭವಿಸಿದವನಿಗೆ ಗೊತ್ತು ಅಳಿಯನ ಯೋಗ್ಯತೆ ಅಂದಂಗೇ. ರವಿ ಬೆಳಗೆರೆಯವರೇ ಹೇಳ್ತಿದ್ರು; ಯಾವ ಮನುಷ್ಯನ ಹತ್ರಾನೂ ತೀರಾ ಹತ್ತಿರ, ಖಾಸಗಿಯಾಗಿ ಇರಬೇಡ. ಆದಷ್ಟು ಅಂತರ ಕಾಪಾಡ್ಕೋ ಅಂತಾ. ಅದನ್ನೇ ಅವರ ಹತ್ರಾನೂ ಪಾಲನೆ ಮಾಡಿದೆ. ನನಗೆಂದೂ ಅವರು ಒಳ್ಳೆ ಬರೀತಿಯಾ ಅಂತ ಹೇಳಿಲ್ಲ, ಹೊಗಳಿಲ್ಲ. ಆದರೆ ನನ್ನ ಬೆಳೆಸಿದರು.
ಆದರೆ ಈ ನಡುವಿನಲ್ಲಿ ರವಿ ಬೆಳಗೆರೆಯವರ ಸೃಜನಶೀಲತೆಯ ಪರಿಚಯವೂ ಆಯಿತು. ಹಾಯ್‍ಗೆ ಸೇರುವ ಮೊದಲೇ ಓದಿದ್ದ ವಿಶ್ವವಿಖ್ಯಾತ ಲೇಖಕ ಮಾಕ್ರ್ವೇಜ್‍ನ ಕಾದಂಬರಿಯ ಭಾವಾನುವಾದ ಮಾಂಡೋವಿ, ಚೀನಾದ ಜೊತೆಗಿನ ಯುದ್ದದಲ್ಲಿ ಹೋರಾಟ ನಡೆಸಿದ ಜಯವಂತ್ ದಳ್ವಿಯವರ ಹಿಮಾಲಯನ್ ಬ್ಲಂಡರ್ ಕಥನದ ಭಾವಾನುವಾದವನ್ನ ಓದಿ ಆಕರ್ಷಿತನಾಗಿಬಿಟ್ಟಿದ್ದೆ ಅವರ ಬರವಣಿಗೆಯ ಶೈಲಿಗೆ.
ಅವರ ಅನೇಕ ಅನ್ನೊದಕ್ಕಿಂತ ಹೆಚ್ಚುಕಡಿಮೆ 65-70 ಪುಸ್ತಕ ಪ್ರಕಟಗೊಂಡಿವೆ. ಹೇಳಿ ಹೋಗು ಕಾರಣಅನ್ನುವಂಥ ರವಿ ಬೆಳಗೆರೆ ಮಾತ್ರ ಬರೆಯಬಹುದಾದ ಕಾದಂಬರಿ, ನಾವೆಲ್ಲ ಚಿಕ್ಕವರಿದ್ದಾಗ ಇತಿಹಾಸದ ಪಾಠದಲ್ಲಿ ಓದುತ್ತಿದ್ದ ಠಕ್ಕರು ಎನ್ನುವ ಉತ್ತರ ಭಾರತದ ದರೋಡೆಕೋರರ ಬಗ್ಗೆ ಬರೆದ ರೇಶ್ಮೆ ರುಮಾಲು ಸರ್ಪ ಸಂಬಂಧ ಎನ್ನುವ ಮೂರು ಸರಣಿಗಳ ಕಾದಂಬರಿ, ಮುಂಬಯಿಯ ವಿಧ್ವಂಸಕ ಘಟನೆ ಕುರಿತಾದ ಬ್ಲಾಕ್ ಪ್ರೈಡೆ, ನೀನಾ ಪಾಕಿಸ್ತಾನ,..ಇಂಥ ಹಲವು ಪುಸ್ತಕಗಳನ್ನ ಬರೆದ ಮಹಾಶಯ ಅವರು. ಬರವಣಿಗೆಗೆ ಮೂಡ್ ಯಾಕೆ? ಬರೆಯೋದೇ ಮೂಡ್ ಅನ್ನುತ್ತ ಹೊರಟವರು ಅವರು. ಅವರ ವೇಗ,ಓಘ, ಶಬ್ದದ ಸಂಗ್ರಹ, ವಿಶಿಷ್ಠ ಶೈಲಿ ಅವರಿಗೇ ಒಲಿದು ಬಂದಿದ್ದು ಅನ್ನಿಸುತ್ತದೆ.
ರವಿ ಬೆಳೆಗೆರೆಯವರ ಮತ್ತೊಂದು ಜಂಪ್ ಅಥವಾ ಜಿಗಿತ ಓ ಮನಸೇ ಎನ್ನುವ ಪಾಕ್ಷಿಕ ಪ್ರಕಟಣೆಗೆ ಶುರು ಮಾಡಿದ್ದು, ಕನ್ನಡದ ಅತ್ಯಂತ ಪ್ರಮುಖ ಪತ್ರಕರ್ತರಾದ ಶರತ್ ಕಲ್ಕೋಡ್‍ರನ್ನ ಸಂಪಾದಕರನ್ನಾಗಿ ಮಾಡಿ, ತಾನು ಕೇವಲ ಗೌರವ ಸಂಪಾದಕನಾಗಿ ಉಳಿದ ರವಿ ಆ ಮೂಲಕ ಸಾಧಿಸಿದ್ದು ಬಹಳಷ್ಟು. ಓ ಮನಸೇಯ ಸತ್ವವನ್ನ, ಶಕ್ತಿಯನ್ನ, ಅದು ಕೊಡುವ ಕಂಪರ್ಟನ್ನ ಅದನ್ನ ಓದಿಯೇ ತಿಳಿಯಬೇಕು.( ಅವರ ಎಲ್ಲ ಪುಸ್ತಕಗಳು ನನ್ನಲ್ಲಿದ್ದವು. ಈಗ ಹಲವೊಂದಿಲ್ಲ.ಓದುತ್ತೇನೆ ಅಂತ ಒಯ್ದವರು ಕೊಟ್ಟೇ ಇಲ್ಲ, ಅವರ ಮನೆ ಲೈಬ್ರಿಯಲ್ಲಾದರೂ ಇರಲಿ).
ರವಿ ಬೆಳಗೆರೆ ದೈವಾಂಶಸಂಭೂತರಲ್ಲ, ವಿಶಿಷ್ಠ ವ್ಯಕ್ತಿಯೂ ಅಲ್ಲ. ಅವರಲ್ಲೂ ನಮ್ಮೆಲ್ಲರಲ್ಲಿ ಇರುವ ಎಲ್ಲ ಗುಣ,ದೋಷಗಳು ಇದ್ದವು. ಹಗಲು ನಾಸ್ತಿಕ, ರಾತ್ರಿ ದೈವಿಕ ಎನ್ನುವ ಆಷಾಡಭೂತಿತನ ಇರಲಿಲ್ಲ. ಆದರೆ ಒಬ್ಬ ನಿಜವಾದ ಅಪ್ಪನ, ಅದಕ್ಕಿಂತ ಹೆಚ್ಚಾಗಿ ನಿಜವಾದ ಅಮ್ಮನ ಗುಣಗಳಿದ್ದವು. ಕಷ್ಟದ ಬದುಕು ಅನುಭವಿಸಿದವರಿಗಷ್ಟೇ ಗೊತ್ತು, ಅಪ್ಪ,ಅಮ್ಮನ ದುಡ್ಡಲ್ಲಿ ಬದುಕು ಸಾಗಿಸೋರು ಸಲೀಸಾಗಿ ಟೀಕೆ ಮಾಡೋಕೆ ಸಾಧ್ಯ. ಸ್ವತ: ಕಟ್ಟಿಕೊಳ್ಳೋ ಕಷ್ಟ ಅವರಿಗೆ ಗೊತ್ತಿರಲ್ಲ; ಟೀಕೆ ಮಾಡೋದು ಮಾತ್ರ.
ಈಗ ಬಾಸ್ ಇಲ್ಲ. ಆದರೆ ಅವರಿಲ್ಲ ಅನ್ನೋದನ್ನ ಮನಸು ಒಪ್ಪಿಕೊಳ್ಳುತ್ತಿಲ್ಲ. ಅವರು ಶಾಶ್ವತವಾಗಿ ಇದ್ದಾರೆ. ಅವರ ಶಿಷ್ಯರಾಗಿ ಆ ಖಿನ್ನತೆಗೆ ಒಳಗಾಗುವ ಸಾಧ್ಯತೆಯೇ ಇಲ್ಲ. ಗಟ್ಟಿಯಾಗಿ, ಇನ್ನಷ್ಟು ಧೃಡವಾಗಿ ಬೆಳೆಯಲೇಬೇಕು. ಕನ್ನಡ ಪತ್ರಿಕೋದ್ಯಮದಲ್ಲಿ ಲಂಕೇಶ್ ಅವರಷ್ಟೇ ಖಚಿತವಾಗಿ, ನಿರಂತರವಾಗಿ ಇರುತ್ತಾರೆ.
(ಮುಗಿಯಿತು)
ಗಂಗಾಧರ ಕೊಳಗಿ
(ಮುಂದಿನವಾರ ಮತ್ತೊಬ್ಬ ಸಾಹಿತಿಗಳ ನೆನಪಲ್ಲಿ)