ಆದ್ಯೋತ್ ಅಂಕಣದಲ್ಲಿ ಕೊಳಗಿ ನೆನಪು

ಮನಸ್ಸನ್ನು
ಬದಲಿಸಿದ ದಾರ್ಶನಿಕ …..
ಗರಿ ಬಿಚ್ಚಿದ ನವಿಲಿನಂತಹ ಅಕ್ಷಯ ನಕ್ಷತ್ರದ ರಾತ್ರಿ ; ಸಪ್ತ ಋಷಿಗಳ ಮಂಡಲ ; ವಸಿಷ್ಠರ ಪಕ್ಕದಲ್ಲಿ ನಾಚಿ ಮಿನುಗುವ ಅರುಂಧತಿ. ಕೆಳಗೆ ಹುಲ್ಲಿನ, ಹಸಿಮಣ್ಣಿನ, ವಿಷ್ಣುಕಾಂತಿಯ, ಸುಗಂಧಿಯ, ಹೆಣ್ಣಿನ ಬೆವರಿದ ಮೈಯ ವಾಸನೆ. ಕತ್ತಲು ಆಕಾಶ,ನೆಮ್ಮದಿಯಿಂದ ನಿಂತ ವೃಕ್ಷಗಳು. ಕನಸೋ ಎಂದು ಕಣ್ಣುಜ್ಜಿಕೊಂಡರು. ಎಲ್ಲಿಂದ ಇಲ್ಲಿಗೆ ಬಂದೆ, ಎಲ್ಲಿಗೆ ಹೋಗಬೇಕೆಂದು ಬಂದು ಮರೆತುಬಿಟ್ಟೆ ಎಂದು ಕಳವಳಿಸಿದರು. ‘ಚಂದ್ರಿ’ಎಂದು ಕರೆದು ಪೂರ್ಣ ಎಚ್ಚರಾದರು. ಆಲಿಸಿದರು. ಕಾಡಿನಲ್ಲಿ, ಮೌನದಲ್ಲಿ ಗುಟ್ಟುಗಳನ್ನು ಹೇಳುತ್ತಿರುವಂತಹ ಚಿಲಿಚಿಲಿ ಎನ್ನುವ ಕತ್ತಲು. ಚಿಲಿಪಿಲಿ ಎನ್ನುವ ಶಬ್ದ ‘ಮಿಣಕ್’ ‘ಮಿಣಕ್’ ಎನ್ನುವ ಬೆಳಕಾಗಿ,ರಾಶಿರಾಶಿಯಾದ ಮಿಣುಕುಹುಳುಗಳು ತೇರಿನಂತೆ ಏರಿಬಂದು ಪೊದೆಯಿಂದ ಹೊರಗೆ ಪ್ರತ್ಯಕ್ಷವಾದವು. ಕಣ್ಣು ತುಂಬುವಂತೆ, ಕಿವಿ ತುಂಬುವಂತೆ ಆಲಿಸುತ್ತ ನೋಡಿದರು. ಸುತ್ತಲೂ ಮಿಣುಕು ಹುಳುಗಳ ರಾಶಿರಾಶಿ ತೇರು…- ಸಂಸ್ಕಾರ (ಯು.ಆರ್.ಅನಂತಮೂರ್ತಿ)

ನಾನಾಗ ಚಿಕ್ಕವನು ; ಪ್ರಾಯಶ: ಪ್ರಾಥಮಿಕ ಶಾಲೆಯ 5-6ನೇಯ ತರಗತಿಯ ಹುಡುಗ. ಓದುವ ಹವ್ಯಾಸ ಎನ್ನುವದಕ್ಕಿಂತ ಚಟ ಎಂದರೆ ಸರಿಯೇನೋ? ಅದನ್ನ ಅಂಟಿಸಿಕೊಂಡು ಯಾವುದೇ ಪುಸ್ತಕ ಸಿಗಲಿ, ಕೊನೆ ಪಕ್ಷ ಹರಿದು ಚಿಂದಿಯಾದ ಪೇಪರ್ ಹಾಳೆಯನ್ನೂ ಓದುವ ತೀವ್ರತೆ ಹೊಂದಿದ್ದ ದಿನಗಳು. ನೆಂಟರ ಮನೆಗೆ ಹೋದಾಗ ಅಲ್ಲೊಂದು ಪುಸ್ತಕ ಸಿಕ್ಕಿತ್ತು. ಓದಿದೆ. ಆ ಪುಸ್ತಕ ನನ್ನನ್ನು ಎಷ್ಟೊಂದು ಗಾಢವಾಗಿ ಸೆಳೆದಿತ್ತು ಅಂದರೆ ಅದನ್ನು ಮರೆಯಲು ಸಾಧ್ಯವೇ ಆಗಿರಲಿಲ್ಲ. ನನ್ನ ಯಥಾಪ್ರಕಾರದ ಎಡವಟ್ಟಿನಿಂದ ಅದರ ಹೆಸರು, ಕೃತಿಕಾರನ ಹೆಸರು ನೆನಪಿರಲಿಲ್ಲ. ಸುಮಾರು ವರ್ಷಗಳ ನಂತರ ಅಚಾನಕ್ಕಾಗಿ ಒಂದು ಕಾದಂಬರಿಯ ಪುಟ ಬಿಡಿಸಿದೆ. ಅಷ್ಟರಲ್ಲಾಗಲೇ ಕೆಲವು ಸಾಹಿತಿಗಳ ಹೆಸರು, ಪ್ರಸಿದ್ಧ ಪುಸ್ತಕಗಳ ಹೆಸರುಗಳನ್ನು ಅರಿತುಕೊಂಡವನಾಗಿದ್ದೆ.
ಆ ಕಾದಂಬರಿಯ ಮೊದಲ ಸಾಲುಗಳನ್ನು ಓದುತ್ತಿದ್ದಂತೇ ಕೆಲವು ವರ್ಷಗಳ ಹಿಂದೆ ಓದಿದ ಸಾಲುಗಳು ನೆನಪಾದವು. ನನ್ನನ್ನು ಇಷ್ಟು ವರ್ಷಗಳ ಕಾಲ ಕಾಡುತ್ತ ಬಂದ ಪುಸ್ತಕ ಅದಾಗಿತ್ತು. ಆ ಕೃತಿಯ ಮೊದಲ ಸಾಲುಗಳು ಹೀಗಿತ್ತು ‘ ಜಗನ್ನಾಥ ಒಬ್ಬನೇ ನಡೆಯುವಾಗ ಹೊಂಡಗಳನ್ನು ಬಳಸುವದಿಲ್ಲ ; ಹಾರುತ್ತಾನೆ’. ಅದು ‘ಭಾರತೀಪುರ’ ಕಾದಂಬರಿ. ಅದನ್ನು ಬರೆದವರು ಕನ್ನಡದ ಹೆಸರಾಂತ ಬರಹಗಾರ ಯು.ಆರ್.ಅನಂತಮೂರ್ತಿ.
ಆವತ್ತಿನಿಂದ ಇವತ್ತಿನವರೆಗೂ ಅನಂತಮೂರ್ತಿ ನನ್ನನ್ನು ಪ್ರಭಾವಿಸಿದ, ಈಗಲೂ ಅದೇ ಪ್ರಭಾವವನ್ನು ಉಳಿಸಿಕೊಂಡಿರುವಷ್ಟು ನನ್ನೊಳಗಿರುವ ಸಂವೇದನಾಶೀಲ ಬರಹಗಾರ. ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿ, ಸಮ್ಮಾನಗಳನ್ನು ಪಡೆದ ಅನಂತಮೂರ್ತಿಯವರನ್ನು ಕೇವಲ ಬರಹಗಾರ ಅಂತ ಸಂಬೋಧಿಸುತ್ತಿರುವದು ಆಶ್ಚರ್ಯವೆನ್ನಿಸಬಹುದು. ಕೇವಲ ಭಾಷಣ, ಹೇಗೆ ಬೇಕೋ ಹಾಗೇ ವೇದಿಕೆಗೆ ತಕ್ಕಂತೆ ಮಾತನಾಡಿ, ಅಪರೂಪಕ್ಕೆ, ಲೆಕ್ಕಕ್ಕೆ ಸಿಗಬೇಕು ಎನ್ನುವ ಕಾರಣಕ್ಕೆ ಪುಸ್ತಕ ಬರೆದವರೆಲ್ಲ ಸಾಹಿತಿ ಅಂತ ಹೇಳಿಸಿಕೊಳ್ಳುವ ಸಂದರ್ಭದಲ್ಲಿ ಅವರ ಸಾಲಿಗೆ ಇವರನ್ನು ಸೇರಿಸಲಾಗದು ಎನ್ನುವ ಕಾರಣಕ್ಕೆ ಬರಹಗಾರ ಅಂತ ಉಲ್ಲೇಖ ಮಾಡ್ತಿರೋದು.
ಬಹುಷ: ಅನಂತಮೂರ್ತಿ ನನಗೆ ಮುಖ್ಯವಾಗೋದು ಅವರು ಹುಟ್ಟಿದ, ಬೆಳೆದ ಪರಿಸರ, ಜನಜೀವನ ನನ್ನದು ಆಗಿರೋ ಕಾರಣಕ್ಕೇನೋ ಅಂತ ಅಂದುಕೊಂಡಿದ್ದೇನೆ. ಬಹುತೇಕ ಅವರ ಜೀವನಕ್ಕೂ, ನನ್ನದಕ್ಕೂ ಹೋಲಿಕೆಯಿರುವದಕ್ಕೇನೋ? ಓದು, ಬರಹಗಳು ಒಂದು ರೀತಿಯಲ್ಲಿ ಅಸಂಪ್ರದಾಯ ಎನ್ನುವ ಪರಿಸರದಲ್ಲಿ ಹುಟ್ಟಿದ ನನ್ನಂಥವನಿಗೆ, ಅಂತದ್ದೇ ಪರಿಸರದಲ್ಲಿ ಹುಟ್ಟಿ, ಬೆಳೆದು, ಅದನ್ನು ಮೀರುವ ಪ್ರಯತ್ನ ಮಾಡಿದ ಕಾರಣಕ್ಕೇನೋ? ಅಥವಾ ಅದೆಲ್ಲಕ್ಕಿಂತ ಮುಖ್ಯವಾಗಿ ಅವರ ಬರವಣಿಗೆಯ ಶೈಲಿ,ಶಬ್ದ ಬಳಕೆ, ವಾಕ್ಯ ಜೋಡಣೆಗಳ ಜೊತೆಗೆ ನನ್ನದು ಅನ್ನಿಸುವ ಕಥಾವಸ್ತುಗಳಿರುವದು ಕಾರಣವಾಗಿರಬಹುದು. ಏನೇ ಇದ್ದರೂ ನನ್ನನ್ನು ಅತ್ಯಂತವಾಗಿ ಸೆಳೆದ ವ್ಯಕಿತ್ವ ಅವರದ್ದು.

ಅವರನ್ನು ಮೊದಲು ಕಂಡದ್ದು ಶಿವಮೊಗ್ಗದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಕಥಾ ಕಮ್ಮಟದಲ್ಲಿ. ಕಮ್ಮಟದ ಎರಡನೇ ದಿನವೋ, ಮೂರನೇ ದಿನವೋ ಅವರ ಉಪನ್ಯಾಸ, ಚರ್ಚೆ ಇತ್ತು. ಮೊದಲ ದಿನವೇ ನಮಗೆ ಒದಗಿಸಿದ್ದ ಜಿ.ಎಚ್.ನಾಯಕ ಸಂಪಾದಿಸಿದ ಪಂಜೆ ಮಂಗೇಶರಾಯರಿಂದ ಯುವ ಪೀಳಿಗೆಯ ದೇವನೂರ ಮಹಾದೇವವರೆಗಿನ ಕತೆಗಾರರ ಕನ್ನಡದ ಕತೆಗಳು ಎನ್ನುವ ಕೃತಿಯಲ್ಲಿ ಮೊದಲು ಓದಿದ್ದೇ ಅನಂತಮೂರ್ತಿಯವರ ‘ಕ್ಲಿಪ್ ಜಾಯಿಂಟ್’ ಎನ್ನುವ ನೀಳ್ಗತೆಯನ್ನ. ಅದು ನನ್ನನ್ನು ಎಷ್ಟು ಪ್ರಭಾವಿಸಿತೆಂದರೆ ಸಾಹಿತ್ಯದ ಸಂಪರ್ಕಕ್ಕೆ ತಂದದ್ದೇ ಆ ಕಥೆ.
ದೇಶ, ಕಾಲ, ಸಮಯ, ಸಂದರ್ಭ, ಸ್ಥಳ ಬೇರೆಯಾಗಿದ್ದರೂ ಒಬ್ಬ ಬ್ರಾಹ್ಮಣ ಹುಡುಗ ಬೆಳೆದ ಪರಿಸರ, ಬೆಳೆಯುವಾಗಿನ ದುಗುಡ, ತೊಡಕು ಇವೆಲ್ಲವೂ ನನ್ನದೇ ಅನ್ನಿಸುವಂತ ಚಿತ್ರಣ ಕೊಟ್ಟವರು ಅನಂತಮೂರ್ತಿ,
ಅವರ ಬಗ್ಗೆ ತುಂಬಾ ಬರೆಯುವಷ್ಟು ಇದೆ. ನನ್ನ ದಿನನಿತ್ಯದ ಕೆಲಸಗಳ ನಡುವೆ ಏಕಾಗ್ರತೆ ಸಾಲದ ಕಾರಣ ಸಾಧ್ಯವಾಗುತ್ತಿಲ್ಲ. ಅವರನ್ನ ಅಪಾರ್ಥ ತಿಳದವರೇ ಹೆಚ್ಚು. ಅವರ ಇಷ್ಟದ ಕವಿ ಗೋಪಾಲಕೃಷ ಅಡಿಗರ ಶ್ರೀರಾಮನವಮಿಯ ದಿವಸ ಕವಿತೆಯ ಬಗ್ಗೆ ಅವರು ಬರೆದ ಲೇಖನ ಓದಿದರೆ ಅರ್ಥವಾದೀತು.
*****
ಗಂಗಾಧರ ಕೊಳಗಿ

About the author

Adyot

Leave a Comment