ದಾರ್ಶನಿಕ ಸಾಹಿತಿ ಯು.ಆರ್.ಅನಂತಮೂರ್ತಿ..
ಸಗಣಿಯ ಪುಟ್ಟ ಪುಟ್ಟ ಉಂಡೆಯನ್ನು ಮಾಡಿ ಹೊಸಲಿನ ಮೇಲಿಟ್ಟು, ಮೇಲೆ ದೂರುವೆ ನೆಟ್ಟು, ಒಂದೊಂದು ಚೆಂಡುಹೂವಿಟ್ಟು ಅಲಂಕರಿಸುವದು ಎರೆದುಕೊಳ್ಳುವ ಹಬ್ಬದ ಹಿಂದಿನ ದಿನವೆ? ಅಂಗಳದಲ್ಲಿ, ಗೊಬ್ಬರದ ಗುಂಡಿಯ ಬಳಿ, ಕೊಟ್ಟಿಗೆಯ ಹತ್ತಿರ, ಅಶ್ವತ್ಥವೃಕ್ಷದ ಕೆಳಗೆ, ಗ್ರಾಮದ ಮುಖ್ಯ ಬೀದಿಗಳಲ್ಲಿ ಪಾತಾಳದಿಂದ ಬಲೀಂದ್ರ ಲೋಕವನ್ನು ನೋಡಿಹೋಗಲು ಬರುವನೆಂದು ಪಂಜುಗಳನ್ನು ನೆಟ್ಟು ‘ದೀಪ್ ದೀಪ್ ಒಳ್ಗೆ-ಹಬ್ಬಕ್ಕೊಂದು ಹೋಳ್ಗೆ’ ಎಂದು ಕೂಗುವದು, ಕೇರಿಗೆ ಕೇಳಿಸುವ ಹಾಗೆ ಪೈಪೋಟಿಯಲ್ಲಿ ಗಂಟಲೆತ್ತಿ ಕೂಗುವದು ಯಾವ ರಾತ್ರೆ? ಮಧ್ಯರಾತ್ರೆಯಲ್ಲಿ ಒಂದು ಕನಸಿನಿಂದ ಇನ್ನೊಂದು ಕನಸಿಗೆ ಮಗ್ಗುಲಾಗುವ ಅರೆಮರೆವಿನಲ್ಲಿ ಆಂಟಿಗೆ ಪಂಟಿಗೆ ತಂಡದವರು ಕಾರ್ತೀಕಕ್ಕೆಲ್ಲ ಕೊರಳು ಕೊಟ್ಟು ಹಾಡುವುದು ಯಾವ ದಿನ? ಮಂಕಾಗಿ ಉರಿಯುವ ಹಣತೆ ಮಿಣಕ್ ಮಿಣಕ್ ಎನ್ನುತ್ತದೆ. ನರಸಿಂಹ ಮಾವ ಸತ್ತ. ರಾಗಜ್ಜ ಸತ್ತರು. ಅಮ್ಮ ಸತ್ತಳು. ಒಂದಲ್ಲ ಒಂದು ದಿನ ಎಲ್ಲರೂ ಸಾಯಬೇಕೆನ್ನುವ ಮೃತ್ಯುಪ್ರಜ್ಞೆಯಲ್ಲಿ ಹಬ್ಬಹುಣ್ಣಿಮೆ ಸಡಗರವೆಲ್ಲ ಅಹಾ ಎಷ್ಟು ಸುಂದರ- ನೋಯುವದು,ನೋಯಿಸುವದು ಎಷ್ಟು ವ್ಯರ್ಥ ಎಂದು ಬಾಳು ಹದವಾಗಬೇಕು, ಮೃದುವಾಗಬೇಕು. ಅದರ ಬದಲು- ಎಷ್ಟೆಲ್ಲ ತಿಳಿದರೂ ಈಗ ನಾನೇ.
ಯು.ಆರ್.ಅನಂತಮೂರ್ತಿ ( ‘ಕಾರ್ತೀಕ’- ಕತೆ)
ಮುಂದೆ ಇಂಥ ಸಮ್ಮೋಹಕ ಬರವಣಿಗೆಯ ಸೆಳೆತಕ್ಕೆ ಒಳಗಾದ ನಾನು ಮೊದಲು ಅನಂತಮೂರ್ತಿಯವರನ್ನು ಕಂಡದ್ದು ಶಿವಮೊಗ್ಗದಲ್ಲಿ ಎಂದೆನಲ್ಲ, ಮೊದಲ ನೋಟದಲ್ಲೇ ಅವರ ಬಗ್ಗೆ ಖುಷಿಪಟ್ಟಿದ್ದೆ. ಅಷ್ಟೊಂದು ಸುಂದರವಾಗಿದ್ದರು ಅವರು. ಮಾತನಾಡುವಾಗ ಅವರ ಮುಖಭಾವ, ಧ್ವನಿಯಲ್ಲಿ ಸ್ಪಷ್ಟತೆಯ ಜೊತೆಗೆ ಮಾತಿನ ಭಾವಕ್ಕೆ ಅನುಗುಣವಾದ ಏರಿಳಿತ, ಆಕರ್ಷಕ ಸ್ವರ, ಒಮ್ಮೊಮ್ಮೆ ಅರಳುವ, ಹಾಗೇ ಕಿರಿದಾಗುವ, ಕೆಲವೊಮ್ಮೆ ತನ್ನದೇ ಆದ ಲೋಕಕ್ಕೆ ಜಿಗಿದುಬಿಡುವ ಕಣ್ಣುಗಳು.. ಆ ಕ್ಷಣದಲ್ಲಿ ತಾನು ಸುಖಪಡುವ ಜೊತೆಗೇ ಎದುರಿದ್ದವರನ್ನೂ ಸಂಭ್ರಮಿಸುವ ವೈಖರಿಯ ಅವರ ಮಾತು ಮತ್ತು ಸ್ಟೈಲ್‍ನ್ನು ಕಂಡು ಸೋಜಿಗಪಟ್ಟದ್ದು ಅಲ್ಲಿ. ಅರೆನೆರೆಯುತ್ತಿದ್ದ ಕಪ್ಪು ಬಿಳುಪು ಮಿಶ್ರಣದ ಗಡ್ಡದಲ್ಲಿನ ಮುಖದಲ್ಲಿ ಕಿರುನಗೆಯ ಹನಿಯನ್ನು ಯಾವತ್ತೂ ಜೊತೆಗಿಟ್ಟುಕೊಂಡವರಂತೆ ಕಾಣುತ್ತಿದ್ದ ಅನಂತಮೂರ್ತಿ ಜೀನ್ಸ ಪ್ಯಾಂಟ್, ನೀಲಿ ಗೆರೆಯ ಸಣ್ಣ ಚೌಕುಳಿಯ ಶರ್ಟನಲ್ಲಿ ಮತ್ತಷ್ಟು ಸುಂದರವಾಗಿ ಕಾಣುತ್ತಿದ್ದರು.
ಆಗಿನ ಶಿವಮೊಗ್ಗದ ಆರೋಗ್ಯವಂತ ವಾತಾವರಣದ ಬೆಳಗಿನ ಹತ್ತುಗಂಟೆಗೆಲ್ಲ ನಮ್ಮೊಂದಿಗೆ ಕುಳಿತ ಅನಂತಮೂರ್ತಿ ಮಧ್ಯಾಹ್ನದವರೆಗೂ ಚೂರೂ ಸಿಡುಕದೇ, ಅನ್ಯಮನಸ್ಕರಾಗದೇ ಸಾಹಿತ್ಯದ ಬಗ್ಗೆ ಮಾತನಾಡಿದ್ದರು, ನಮ್ಮೊಂದಿಗೆ ಚರ್ಚಿಸಿದ್ದರು. ಸಂಜೆಯವರೆಗಲ್ಲ, ಮತ್ತೆ ಎರಡು ದಿನವೂ ಅವರು ಜೊತೆಗಿರಬೇಕೆಂಬ ಆಪೇಕ್ಷೆಯನ್ನ ಹುಟ್ಟಿಸಿದ್ದರು. ಎಂದೂ ಮಾಸದ, ಸಾಯದ ನೆನಪುಗಳನ್ನು ಒದಗಿಸಿಕೊಟ್ಟಿದ್ದರು.
ಅದಾಗಿ ವರ್ಷಗಳ ನಂತರ ಕೆ.ವಿ.ಸುಬ್ಬಣ್ಣನವರ ಪರಿಚಯವಾದ ನಂತರ ಅನಂತಮೂರ್ತಿಯವರ ಬಗ್ಗೆ ಇನ್ನಷ್ಟು ಅರಿತುಕೊಳ್ಳಲು ಸಹಾಯಕವಾಯ್ತು. ಕೆ.ವಿ.ಸುಬ್ಬಣ್ಣ ಮತ್ತು ಅನಂತಮೂರ್ತಿ ಪರಮಾಪ್ತ ಮಿತ್ರರೆಂತಲೂ, ಒಟ್ಟಿಗೇ ಮೈಸೂರಿನಲ್ಲಿ ಓದಿದವರು ಎಂತಲೂ ತಿಳಿದುಕೊಂಡೆ. ಅವೆಲ್ಲಕ್ಕಿಂತ ಅನಂತಮೂರ್ತಿ ‘ಭಾರತೀಪುರ’ ವನ್ನು ಬರೆದದ್ದು ಸುಬ್ಬಣ್ಣನವರ ಮನೆಯಲ್ಲಿ ಎನ್ನುವದನ್ನು ಕೇಳಿದಾಗಲಂತೂ ಮತ್ತಷ್ಟು ಸಂತೋಷವಾಯಿತು.
ಈ ನಡುವೆ ನನ್ನ ಉಳಿದೆಲ್ಲ ಕೆಲಸಗಳ ನಡುವೆ ನನ್ನ ಹಿರಿ ಅಕ್ಕನಿಗೆ ವರಾನ್ವೇಷಣೆ ಜವಾಬ್ದಾರಿಯೂ ನನಗಿತ್ತು. ಆ ಕುರಿತಾಗಿ ಹೆಗ್ಗೋಡಿನಲ್ಲೇ ಇದ್ದ ನನ್ನ ಸಂಬಂಧಿಕರೊಬ್ಬರ ಒಡನಾಟ ಒದಗಿಬಂತು. ಅವರ ಹೆಸರು ಶೇಷಗಿರಿರಾವ್ ಅಂತ. ನನ್ನ ಜೀವನದಲ್ಲಿ ಕಂಡ ಬೆರಳೆಣಿಕೆಯಷ್ಟು ಒಳ್ಳೆತನದ, ಸಂಭಾವಿತ, ಸಂಯಮದ ವ್ಯಕ್ತಿಗಳಲ್ಲಿ ಅವರು ಮುಖ್ಯರು. ಬೇರೆಯವರಿಗೆ ತನ್ನಿಂದ ಉಪಕಾರವಾಗುತ್ತದೆ ಎಂದರೆ ಮುಂದಕ್ಕೆ ಬರುವ ಅವರು ಸಿರಿವಂತರೇನಲ್ಲ. ಒಂದಿಷ್ಟು ತೋಟದಿಂದ ಬರುವ ಆದಾಯದಿಂದ ಬದುಕು ಸಾಗಿಸುತ್ತಿದ್ದ ಅವರ ಬಗ್ಗೆ ಇಡೀ ಹೆಗ್ಗೋಡಿನಲ್ಲಿ ಮಾತ್ರವಲ್ಲ ಸುತ್ತಮುತ್ತಲೆಲ್ಲ ಗೌರವ,ಪ್ರೀತಿ ಇತ್ತು. ವಿಸ್ಮಯದ ಸಂಗತಿಯೆಂದರೆ ಅವರು ಸುಬ್ಬಣ್ಣನವರ ಹತ್ತಿರದ ಸಂಬಂಧಿ. ಸುಬ್ಬಣ್ಣನವರ ತಾಯಿಗೆ ಇವರೆಂದರೆ ಇಷ್ಟವಾಗಿತ್ತಂತೆ. ಕೆಲವು ಕಾಲ ಶೇಷಗಿರಿಯಣ್ಣ ಸುಬ್ಬಣ್ಣನವರ ಮನೆಯ ಉಸ್ತುವಾರಿಯನ್ನೂ ನೋಡಿಕೊಳ್ಳುತ್ತಿದ್ದರಂತೆ. ಸುಬ್ಬಣ್ಣನವರ ತಾಯಿ ಆ ಕಾಲದಲ್ಲೇ ವಿಧವಾ ವಿವಾಹದ ಬಗ್ಗೆ ಹೋರಾಟ ಮಾಡುತ್ತಿದ್ದರಂತೆ. ಅವರಿಗೆ ಅಸೌಖ್ಯವಾದಾಗ ಅವರು ಬಯಸಿದ್ದ ಪುಸ್ತಕಗಳನ್ನು ಓದುವದು, ಅವರು ಹೇಳುವದನ್ನು ಬರೆಯುವ ಕೆಲಸ ಶೇಷಗಿರಿಯಣ್ಣ ಅವರದ್ದಾಗಿತ್ತಂತೆ. ಅನಂತಮೂರ್ತಿ ಹೆಗ್ಗೋಡಿಗೆ ಬಂದಾಗೆಲ್ಲ ಶೇಷಗಿರಿಯಣ್ಣನ ಮನೆಗೆ ಬಂದು ಕುಶಲ ವಿಚಾರಿಸಿ,ಕೊನೆಪಕ್ಷ ಕಾಫಿಯನ್ನಾದರೂ ಕುಡಿದು ಹೋಗುವ ರೂಢಿಯಿಟ್ಟುಕೊಂಡಿದ್ದರಂತೆ. ಒಮ್ಮೊಮ್ಮೆ ಆಗಿನ ಕಟ್ಟಿಗೆ ಒಲೆಯ ಪಕ್ಕವೇ ಕೂತು ಹರಟೆ ಹೊಡೆಯುವದೂ ಇತ್ತಂತೆ. ಇವನ್ನೆಲ್ಲ ಶೇಷಗಿರಿಯಣ್ಣ ಹೇಳುವಾಗ ಅನಂತಮೂರ್ತಿ ತನ್ನ ಬಾಲ್ಯದ ದಿನಗಳನ್ನು ಇಂಥ ಗಳಿಗೆಗಳಲ್ಲಿ ಮತ್ತೆ ಸಾಕ್ಷಾತ್ಕರಿಸಿಕೊಳ್ಳುತ್ತಿದ್ದರೆನೋ ಅನ್ನಿಸಿದ್ದಿದೆ.
ಆ ನಂತರದಲ್ಲಿ ಪ್ರತಿ ವರ್ಷ ಅಕ್ಟೋಬರ್-ನವೆಂಬರ್ ಸುಮಾರಿಗೆ ನೀನಾಸಂನಲ್ಲಿ ನಡೆಯುವ ಸಂಸ್ಕೃತಿ
ಶಿಬಿರದಲ್ಲಿ ಅನಂತಮೂರ್ತಿ ಪಾಲ್ಗೊಳ್ಳುತ್ತಿದ್ದರು. ಕೇವಲ ಪಾಲ್ಗೊಳ್ಳುವದು ಮಾತ್ರವಲ್ಲ; ಅವರ ನೇತೃತ್ವದಲ್ಲೇ ಸಂಸ್ಕೃತಿ
ಶಿಬಿರ ನಡೆಯುತ್ತಿತ್ತು ಎಂದರೂ ತಪ್ಪಿಲ್ಲ. ಅವರಿಗೆ ಸಾಹಿತ್ಯದ ಬಗ್ಗೆ ಎಷ್ಟು ಆಸಕ್ತಿ ಎನ್ನುವದನ್ನ ಆ ಸಂದರ್ಭ ಮನದಟ್ಟು ಮಾಡಿಕೊಟ್ಟಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ನಡು ನಡುವೆ ಒಂದಿಷ್ಟು ನಿಮಿಷಗಳನ್ನ ಹೊರತುಪಡಿಸಿದರೆ ದಿನವೀಡಿ ಅನಂತಮೂರ್ತಿ ಶಿಬಿರದಲ್ಲೇ ಪಾಲ್ಗೊಂಡಿರುತ್ತಿದ್ದರು. ಅವರ ಮಾತುಗಳನ್ನು ಕೇಳಲು ಕಾತರರಾದವರಿಗೆ ಮತ್ತಷ್ಟು ಹೊಸ ಚಿಂತನೆಗಳನ್ನ ಬಿತ್ತುತ್ತಿದ್ದರು.
ಒಮ್ಮೆ ಹೀಗಾಯಿತು- ಅನಂತಮೂರ್ತಿ ಸಂಸ್ಕೃತಿ ಶಿಬಿರದ ದಿನಗಳಲ್ಲಿ ಅಲ್ಲದೇ ಬೇರೊಂದು ಸಂದರ್ಭದಲ್ಲಿ ಹೆಗ್ಗೋಡಿಗೆ ಬಂದಿದ್ದರು. ಅಚಾನಕ್ಕಾಗಿ ನಾನೂ ಅಲ್ಲಿಗೆ ಹೋಗಿದ್ದೆ. ಹೋಗುವಾಗ ಯಾತಕ್ಕೋ ಆಗಷ್ಟೇ ಬರೆದು ಮುಗಿಸಿದ್ದ ಇನ್ನೂ ಹೆಸರು ಇಡದ ಕತೆಯೊಂದನ್ನ( ನಂತರ ಅದಕ್ಕೆ ಅಧ್ಯಾಯ ಎನ್ನುವ ಹೆಸರು ಕೊಟ್ಟೆ) ಒಯ್ದಿದ್ದೆ.
ಅನಂತಮೂರ್ತಿ ಅವತ್ತು ಟಿ.ಪಿ.ಅಶೋಕ, ಸುಬ್ಬಣ್ಣ ಮತ್ತು ಒಂದಿಬ್ಬರ ಜೊತೆ ಯಾವುದೋ ವಿಷಯದ ಕುರಿತು ಚರ್ಚೆ ನಡೆಸುತ್ತಿದ್ದರು. ನಾನೂ ಅಲ್ಲೇ ಇದ್ದೆ. ನಂತರ ಪಕ್ಕದ ಗೆಸ್ಟ ರೂಮಿಗೆ ಹೋಗುವಾಗ ನನ್ನ ಗುರುತಿಸಿ ನಕ್ಕು ಹೆಗಲ ಮೇಲೆ ಕೈಯಿಟ್ಟುಕೊಂಡು ನಡೆದರು. ನನ್ನ ಕುರಿತಾಗಿ ಕೆಲವು ವಿವರಗಳನ್ನ ಕೇಳಿದರು. ಗೆಸ್ಟ ರೂಮಿನಲ್ಲಿ ಕೂತಾಗ ಮಾತಿನ ನಡುವೆ ನನ್ನ ಆ ಕತೆಯನ್ನ ಅವರ ಕೈಗಿಟ್ಟೆ. ‘ಓಹ್, ಬರ್ದಿದೀಯಾ?’ ಎನ್ನುತ್ತ ಪಡೆದುಕೊಂಡವರು ‘ತಕ್ಷಣ ಓದೋಕಾಗಲ್ಲ, ನಾಡಿದ್ದು ಹೇಳ್ತೀನಿ’ ಅಂದರು. ಅದಾಗಿ ಎರಡು ದಿನಗಳ ನಂತರ ಮತ್ತೆ ಹೆಗ್ಗೋಡಿಗೆ ಹೋದೆ, ಅನಂತಮೂರ್ತಿ ಏನು ಹೇಳುತ್ತಾರೆ ಅನ್ನುವ ಕುತೂಹಲದಿಂದ. ನನ್ನ ಕಂಡವರು ಎಂದಿನಂತೆ ಕಿರುನಗೆ ನಕ್ಕವರು ಏನೂ ಹೇಳಲಿಲ್ಲ, ನಂತರ ಮಧ್ಯಾಹ್ನ ಗೆಸ್ಟ ರೂಮಿನಲ್ಲಿ ಸಿಕ್ಕವರು ‘ಪ್ರಯತ್ನ ಚೆನ್ನಾಗಿದೆ. ಆದರೆ ಇನ್ನಷ್ಟು ವರ್ಕ ಬೇಕು. ಮತ್ತು ನೀವು ಹೆಚ್ಚು ಓದಬೇಕು’ ಎಂದವರು ಪಕ್ಕದಲ್ಲಿದ್ದ ಅಶೋಕ ಅವರನ್ನು ತೋರಿಸುತ್ತ ‘ಇವರ ಬಳಿ ತೋರಿಸಿ, ನಿಮಗೆ ಸೂಕ್ತವಾದ ಗೈಡ್ ಮಾಡ್ತಾರೆ’ ಎಂದಿದ್ದರು.
ಒಂದು ವಿಷಯ ಖಚಿತ: ಅಂಗೀರಸ ಮುನಿಯನ್ನ ಮೂಲಪುರುಷನನ್ನಾಗಿ ಪಡೆದು, ಆಂಗೀರಸ ಅಂಬರೀಷ ಯೌವನಾಶ್ವ ತ್ರಯಾರ್ಷೇಯಪ್ರವರಾನ್ವಿತನಾಗಿ, ಅಶ್ವಲಾಯನಸೂತ್ರನಾಗಿ, ಋಕ್ಷ್ವಾಖಾಧ್ಯಾಯಿಯಾಗಿ, ಒಬ್ಬ ಯೋಗಿಯನ್ನ ಚಿಕ್ಕಪ್ಪನನ್ನಾಗಿ ಪಡೆದು, ಊಟಕ್ಕೊಂದು ಚಮಚ ಒಳ್ಳೆಣ್ಣೆಯಿಲ್ಲದಿದ್ದರೂ ದೇವರಿಗೆ ತುಪ್ಪದ ದೀಪವನ್ನು ಹತ್ತಿಸಲು ಮರೆಯದವಳನ್ನು ತಾಯಿಯನ್ನಾಗಿ ಪಡೆದು ನಾನು ಈಗ ಬಿಳಿಯನೊಬ್ಬನ ಜೊತೆ ಹೊಸ ಅನುಭವಕ್ಕೆಂದು ರೋರಿಂಗ್ ಟ್ವೆಂಟೀಸನ್ನು ಹುಡುಕುತ್ತಿರೋದರ ಅಂತರಾರ್ಥ ನನಗೆ ಬೇರು ಇಲ್ಲ ಅಂತ . ಭಾರತದ ಅಸಂಖ್ಯಾತ ಯುವಕರಂತೆ ನನಗೆ ಬುಡಭದ್ರವಿಲ್ಲ ಅಂತ.. (ಕ್ಲಿಪ್ ಜಾಯಿಂಟ್ —-ನೀಳ್ಗತೆ-)
ಎಂದೆಂದೂ ಮುಗಿಯದ ಕತೆ ಎನ್ನುವ ಅನಂತಮೂರ್ತಿಯವರ ಪ್ರಕಟಗೊಂಡ ಮೊದಲ ಕತೆಯಿಂದ ಆರಂಭಗೊಂಡ ಅವರ ಸಾಹಿತ್ಯ ಯಾನ ಧೀರ್ಘವಾದದ್ದೇ. ಅವರ ಕತೆಗಳಲ್ಲಿ ಬಹುತೇಕ ಎಲ್ಲವೂ ಖುಷಿಕೊಟ್ಟಿದೆ. ಮತ್ತು ಅವರ ಸಂಕಲನಗಳಿಗೆ ಗೋಪಾಲಕೃಷ್ಣ ಅಡಿಗ, ರಾಜೀವ್ ತಾರಾನಾಥ್ ಅವರುಗಳ ಮುನ್ನುಡಿಗಳು ನನ್ನಂಥ ಕಿರಿಯನಿಗೆ ದಾರಿದೀಪವಾಗಿಯೂ ತೋರಿದೆ. ನಾನು ಹುಟ್ಟಿದ ಮೊದಲ ಇಸವಿಗಳಲ್ಲೇ ಬರೆದ ಪ್ರಶ್ನೆ, ಪ್ರಕೃತಿ, ಕಾರ್ತೀಕ, ಇವೆಲ್ಲಕ್ಕಿಂತ ಭಿನ್ನವಾಗಿ ಕಾಡಿದ ಘಟಶ್ರಾದ್ಧ, ನಾನು ಹುಟ್ಟಿದ ವರ್ಷದಲ್ಲೇ ಬರೆದ ಕ್ಲಿಪ್ ಜಾಯಿಂಟ್ ಕತೆಗಳನ್ನ- ನಮ್ಮಲ್ಲಿನ ರೂಢಿಗತ ಮಾತಿನಂತೆ ಬುದ್ದಿ ಬಂದ ಮೇಲೆ ಸುಮಾರು 20 ವರ್ಷಕ್ಕೂ ನಂತರದ ಮೇಲೆ ಓದಿದ್ದರೂ ಇವತ್ತಿನಂತೆ ಹೊಸದಾಗಿ ಕಂಡಿತ್ತು. ನಾನು ಇಸವಿಯ ಲೆಕ್ಕ ಹಾಕಿದ್ದು ಯಾಕೆಂದರೆ ಓರ್ವ ಪ್ರತಿಭಾವಂತ ಲೇಖಕನ ಶಕ್ತಿ ಮತ್ತು ಪ್ರಭಾವ ಎಷ್ಟು ಕಾಲವಾದರೂ ಮಾಸದೇ ಉಳಿಯುತ್ತದೆ ಎನ್ನುವದಕ್ಕಾಗಿ.
ಆ ನಂತರ ಬರೆದ ಮೌನಿ, ನವಿಲುಗಳು, ಆಕ್ರಮಣ,ರೂತ್ ಮತ್ತು ರಸುಲ್, ಬರ, ಆಕಾಶ ಮತ್ತು ಬೆಕ್ಕು ( ಇವು ಅನಂತಮೂರ್ತಿಯವರ ನನ್ನ ಇಷ್ಟದ ಕತೆಗಳು, ಉಳಿದಂತೆ ಉತ್ತಮವಾದ ಹಲವು ಕತೆಗಳೂ ಇದ್ದಾವೆ) ಇಂದಿಗೂ ಮತ್ತೆ, ಮತ್ತೆ ಓದಿಸಿಕೊಳ್ಳುತ್ತಿವೆ. ಇದೊಂದು ಹೊಸ ಕತೆ ಎಂದೇ ಅವನ್ನು ಓದುತ್ತೇನೆ. ಈ ರೂಢಿ ಅವರ ಕಾದಂಬರಿಗಳಾದ ಸಂಸ್ಕಾರ, ಭಾರತೀಪುರ, ಅವಸ್ಥೆ, ಭವ, ದಿವ್ಯ ಮುಂತಾದ ಕಾದಂಬರಿಗಳನ್ನ( ಪ್ರೀತಿ ಮೃತ್ಯು ಮತ್ತು ಭಯ ಎನ್ನುವ ಕಾದಂಬರಿಯನ್ನ ಓದಿಲ್ಲ) ಈಗಲೂ ಓದುವಾಗ ಇದ್ದೇ ಇದೆ. ಅವರ ಕವಿತಾ ಸಂಕಲನಗಳಲ್ಲಿ ಅಜ್ಜನ ಹೆಗಲ ಸುಕ್ಕುಗಳು ಎನ್ನುವದನ್ನ ಮಾತ್ರ ನಾನು ಓದಿದ್ದು. ಅದರಲ್ಲಿ ಇಷ್ಟಪಟ್ಟ ಕವಿತೆ ‘ಪಾಡು’ ಎನ್ನುವ ಕವಿತೆ( ಕೃಷ್ಣನನ್ನು ಸಾಂಕೇತಿಕವಾಗಿಟ್ಟುಕೊಂಡಿರಬಹುದು ಎಂದುಕೊಂಡರೂ, ಬಹುತೇಕರ ಪಾಡು ಇದು. ಪ್ರಾಯಶ: ಅನಂತಮೂರ್ತಿಯವರಿಗೂ ಈ ಅನುಭವವಾಗಿತ್ತೇನೋ?)
ತೊಡೆಯ ಮೇಲೊಬ್ಬಳು, ಹೃದಯದಲ್ಲೊಬ್ಬಳು
ಹೃದಯದಲ್ಲಿರುವವಳು ತೊಡೆ ಮೇಲೆ ಬರಳು
ತೊಡೆ ಮೇಲೆ ಕೂತವಳು ಹೃದಯ ಹೊಗಳು
ತೊಡೆ ಮೇಲೆ ಕೂತವಳು ಹೃದಯಕ್ಕೆ ಹಂಬಲಿಸಿ
ಪರಿಪರಿಯ ಹೂವಾಗಿ ಅರಳಿದವಳು ಮತ್ತೆ- ಬಾಡಿದವಳು
ಹೃದಯದಲ್ಲಿರುವವಳು ಒಂದಲ್ಲ ಒಂದು ದಿನ
ಬರಿದಾದ ತೊಡೆನಂಬಿ ಏರುವವಳೇ
ತಾನೂನು- ಬಾಡುವವಳೇ
ಆಗ
ತೊಡೆ ಮೇಲೆ ಇವಳಿರಲು ಹೃದಯಕ್ಕೆ ಹಂಬಲಿಸಿ
ಒಳಗೆ ಮೊಗ್ಗಾಗುವುದು ಇನ್ನೊಬ್ಬಳು ( ಅಜ್ಜನ ಹೆಗಲ ಸುಕ್ಕುಗಳು ಕವಿತಾ ಸಂಕಲನ)
(ಮುಂದುವರಿಯುವುದು)
—ಗಂಗಾಧರ ಕೊಳಗಿ
ಅನಂತ ಮೂರ್ತಿಯವರ ಜನ್ಮ ದಿನಕ್ಕೆ ಸೂಕ್ತವಾದ,ಚೆನ್ನಾದ ಲೇಖನ!