ಆದ್ಯೋತ್ ಅಂಕಣದಲ್ಲಿ ಕೊಳಗಿ ನೆನಪು

ದಾರ್ಶನಿಕ ಸಾಹಿತಿ ಅನಂತಮೂರ್ತಿ
ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅನಂತಮೂರ್ತಿಯವರ ಸಂಪೂರ್ಣ ಪ್ರಭಾವಕ್ಕೆ ಒಳಗಾಗದವನು ಎನ್ನುವ ಬಗ್ಗೆ ಸಂಶಯವೇ ಇಲ್ಲ. ಆ ಪ್ರಭಾವಲಯದಿಂದ ತಪ್ಪಿಸಿಕೊಳ್ಳುವ ಸಾಕಷ್ಟು ಪ್ರಯತ್ನಗಳನ್ನು ನಿರಂತರ ಮಾಡುತ್ತ ಬಂದಿದ್ದರೂ ಅದಿನ್ನೂ ಸಾಧ್ಯವಾಗಿಲ್ಲ. ಬಹುತೇಕರಂತೆ ನಾನು ಕೂಡ ಅವರ ಕೆಲವು ನಿಲುವುಗಳನ್ನ, ಧೋರಣೆಯನ್ನ ಒಪ್ಪಿಕೊಂಡಿಲ್ಲ. ಅನಂತಮೂರ್ತಿಯವರ ಕೆಲವು ಅಭಿಪ್ರಾಯಗಳು ಸರಿಯಿಲ್ಲ ಎಂದೇ ಅನಿಸಿದೆ. ಹಲವು ಬಾರಿ ಅಪ್ಪ-ಅಮ್ಮನ ಧೋರಣೆಗಳನ್ನ ಒಪ್ಪದ ನಾವು ಅವರೊಬ್ಬ ಮಹತ್ವದ ಬರಹಗಾರ ಅನ್ನುವ ಕಾರಣಕ್ಕೆ ಅವರು ಹೇಳಿದ್ದೆಲ್ಲ ಸರಿ ಎನ್ನುವ ಎಡಬಿಡಂಗಿ ನಿಲುವು ನನ್ನದು ಖಂಡಿತ ಅಲ್ಲ, ಒಂದು ಮಾತಂತೂ ಸತ್ಯ. ಅನಂತಮೂರ್ತಿಯವರ ವೈಚಾರಿಕತೆ, ಅನಿಸಿಕೆ, ಅಭಿಪ್ರಾಯಗಳನ್ನು ನಾವು ಒಪ್ಪಬಹುದು, ಬಿಡಬಹುದು. ಅವರನ್ನು ತಿರಸ್ಕರಿಸೋಕೆ ಆಗೋದಿಲ್ಲ.

ಅವರು ಏನೂ ಅಲ್ಲ ಎನ್ನುವದನ್ನು ಯಾವ ದೃಷ್ಟಿಯಿಂದಲೂ ಒಪ್ಪೋದಿಕ್ಕೆ ಸಾಧ್ಯವಾಗೋದಿಲ್ಲ. ತಪ್ಪೋ, ಸರಿಯೋ ಗೊತ್ತಿಲ್ಲ, ಅನಂತಮೂರ್ತಿಯವರನ್ನ ಆರಾಧಿಸುವವರು, ಅಷ್ಟೇ ಅಬ್ಬರದಲ್ಲಿ ವಿರೋಧಿಸುವವರಲ್ಲಿ ಬಹುತೇಕರು ಅವರನ್ನು ಓದೇ ಇಲ್ಲ. ಎರಡೂ ಬಳಗದ ಬಹಳಷ್ಟು ಮಂದಿಗೆ ಅವರ ಕೃತಿಗಳು ಯಾವುದೆಂದೂ ಗೊತ್ತಿಲ್ಲ.
ಆದರೆ ನನಗೆ ಆತ್ಮವಿಶ್ವಾಸ ಮತ್ತು ಧೈರ್ಯ ಎರಡೂ ಆ ಬಗ್ಗೆ ಇದೆ. ಅವರ ಎಲ್ಲ ಪುಸ್ತಕಗಳನ್ನ, ಅವರು ಪ್ರಕಟಿಸುತ್ತಿದ್ದ ರುಜುವಾತು ಎನ್ನುವ ತ್ರೈಮಾಸಿಕ ಸಾಹಿತ್ಯ ಪತ್ರಿಕೆಯ ಎಲ್ಲ ಪ್ರತಿಗಳನ್ನ ( ಒಂದೆರಡು ಸಿಗದಿರಬಹುದು, ನಾನು ಚಂದಾದಾರನಾಗುವ ಮೊದಲು ಪ್ರಕಟಗೊಂಡದ್ದು) ಓದಿದ್ದೇನೆ ಮತ್ತು ಅವೆಲ್ಲ ನನ್ನ ಸಂಗ್ರಹದಲ್ಲಿದೆ.

‘ಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎನ್ನುವ ಶೀರ್ಷಿಕೆಯನ್ನ ಬಂಡಾಯ ಸಾಹಿತ್ಯದ ಆಂದೋಲನಕ್ಕೆ ಕೊಟ್ಟ ( ಇದನ್ನ ನಾನು ಓದಿದ್ದು, ಪ್ರಾಯಶ: ಶೂದ್ರ ಶ್ರೀನಿವಾಸ್ ಅವರ ಬರಹದಲ್ಲಿ) ದಿ| ಡಾ| ಡಿ.ಆರ್.ನಾಗರಾಜ್ ಅನಂತಮೂರ್ತಿಯವರ ಜೊತೆಗಿನ ಸಾಹಿತ್ಯಿಕ, ವೈಚಾರಿಕ ಭಿನ್ನಾಭಿಪ್ರಾಯಗಳ ನಡುವೆಯೂ ತಮ್ಮ ‘ಶಕ್ತಿ ಶಾರದೆಯ ಮೇಳ’ ಎನ್ನುವ ಥಿಸೀಸ್ ಅಥವಾ ಡಾಕ್ಟರೇಟ್ ಪ್ರಬಂಧದ ಮೌಲ್ಯಮಾಪನಕ್ಕೆ ಆರಿಸಿಕೊಂಡದ್ದು ಅನಂತಮೂರ್ತಿಯವರನ್ನ- ಮತ್ತೊಬ್ಬರು ಚನ್ನವೀರ ಕಣವಿ. ಆಧುನಿಕ ಕನ್ನಡ ಸಾಹಿತ್ಯ ಕಂಡ ಅಪರೂಪದ, ಅದ್ವಿತೀಯ ವಿಮರ್ಶಕ, ಚಿಂತಕ ಡಿ.ಆರ್.ನಾಗರಾಜ್. ನನಗೆ ಅವರ ಬರಹಗಳೆಂದರೆ ಈಗಲೂ ಇಷ್ಟ. ಅವರ ನಾಲ್ಕಾರು ಪುಸ್ತಕಗಳು ನನ್ನ ಬಳಿ ಇವೆ. ಮನಸು ಹಗುರಾಗಬೇಕು ಎನ್ನುವ ಒತ್ತಡವಿದ್ದಾಗ ಅವನ್ನು ಓದ್ತೀನಿ. ನಾಗರಾಜ್ ಪಕ್ಕಾ ಮಾಕ್ರ್ಸವಾದಿ, ಆದರೆ ಅವರ ಬರಹಗಳನ್ನ ಓದಿದರೆ ಈ ಹೊಸಕಾಲದ ಬುದ್ದಿಜೀವಿಗಳ(?) ಅಬ್ಬರ, ಕಿರುಚಾಟ, ಬೇಕಾಗಿಯೇ ವಿರೋಧಿಸುವ ಅತೃಪ್ತ ನಡವಳಿಕೆ ಕಾಣೋದೇ ಇಲ್ಲ. ಅಂಥವರು ನಿಜವಾಗಿ ಬುದ್ದಿಜೀವಿಗಳು ಅಂತಾ ಕರೆಸಿಕೊಳ್ಳಬೇಕಿತ್ತು, ಡಿ.ಆರ್. ನಾಗರಾಜ್ ಅವರ ‘ಶಕ್ತಿ ಶಾರದೆಯ ಮೇಳ’ ಎನ್ನುವ ಬೃಹತ್ ಕೃತಿಯನ್ನು ಎರಡೂ ಬಳಗದವರು ಒಮ್ಮೆ ಓದಬೇಕು.

ಓರ್ವ ಅಪ್ಪಟ ಎಡಪಂಥೀಯನಾಗಿ ಆ ಪಂಥದ ಕವಿಗಳನ್ನು ತನ್ನ ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳದೇ, ಭೂಮಿ, ಕಾಲ, ಕಾಮ, ಸಮಾಜ ಎನ್ನುವ ನೆಲೆಗಳನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಕುವೆಂಪು, ಬೇಂದ್ರೆ, ಪು.ತಿ.ನ., ವಿ.ಕ.ಗೋಕಾಕ ಮುಂತಾದ ದಾರ್ಶನಿಕ ಮನಸ್ಥಿತಿಯ ಕವಿಗಳ ಜೊತೆಗೆ ಗೋಪಾಲಕೃಷ್ಣ ಅಡಿಗ, ರಾಮಚಂದ್ರಶರ್ಮ, ಶಿವರುದ್ರಪ್ಪ, ಎಚ್.ಎಂ.ಚನ್ನಯ್ಯ,ಕಂಬಾರ ಗಂಗಾಧರ ಚಿತ್ತಾಲ ಇಂಥವರ ಕಾವ್ಯದ ಜೊತೆಗೂ ಚರ್ಚಿಸುತ್ತಾರೆ. ವಿಶೇಷತೆ ಏನೆಂದರೆ ಬ್ರಾಹ್ಮಣರಾದ ನಾವು ಪಿತೃ ಮತ್ತು ಮಾತೆಯ ಶ್ರಾದ್ಧದ ಆಚರಣೆಯಲ್ಲಿ ಅದರ ನಿರ್ವಹಣೆಗೆ ಬಂದ ವೈದಿಕರ ಮಂತ್ರದಲ್ಲಿ ‘ದ್ಯಾವಾ-ಪೃಥಿವಿ’ ಎನ್ನುವ ಶಬ್ದಗಳ ಉಚ್ಛಾರಣೆ ಬರುತ್ತದೆ. ಅಪ್ಪ, ಅಮ್ಮನನ್ನೇ ನಿಜವಾದ ದೇವರೆಂದು ತಿಳಿದ ನಾನು ಆ ಶ್ರಾದ್ಧವಿಧಿಯಲ್ಲಿ ಆ ಮಂತ್ರೋಚ್ಛಾರಣೆಯನ್ನ ಏಕಾಗ್ರಚಿತ್ತದಿಂದ ಕೇಳುವ ಕಾರಣಕ್ಕೆ ಹಲವು ವರ್ಷಗಳಿಂದ ಆ ಶಬ್ದ ನನ್ನನ್ನು ಸೆಳೆದಿತ್ತು, ಅದರ ತಾತ್ವಿಕ ಅರ್ಥ ನನಗೆ ತಿಳಿದದ್ದು ವೈದಿಕರಿಂದಲ್ಲ, ಅಪ್ಪಟ ನಾಸ್ತಿಕ ನಾಗರಾಜ್ ಅವರಿಂದ. ನಾನು ಪ್ರಾಯಶ: ದಿಕ್ಕುತಪ್ಪಿದೆ- ಏನೋ ಹೇಳಲು ಹೋಗಿ ಯಾವುದನ್ನೋ ಹೇಳುತ್ತಿದ್ದೀನಿ. ಅತ್ಯಂತ ಏಕಾಗ್ರತೆಯನ್ನು ಕೇಳುವ, ಓದಿದ ನಂತರ ಹೊಸ ದಿಕ್ಕನ್ನು ತೋರಿಸುವ ‘ಶಕ್ತಿ ಶಾರದೆಯ ಮೇಳ’ ವನ್ನು ಎಲ್ಲರೂ ಓದಬೇಕು.
ಡಿ.ಆರ್.ನಾಗರಾಜ್ ‘ಭಾರತೀಯ ಮನಸ್ಸು ಮತ್ತು ಭೂಮಿ’ ಎನ್ನುವ ಆ ಕೃತಿಯ ಒಂದು ಅಧ್ಯಾಯದಲ್ಲಿ ಋಗ್ವೇದದ ಮಂತ್ರವೊಂದನ್ನು ಉಲ್ಲೇಖಿಸುತ್ತಾರೆ; ಆಶಯ ನಮ್ಮೆಲ್ಲರನ್ನೂ ಕಾಪಾಡುವ ಪೃಥ್ವಿಯ ಆರಾಧನೆ. ಈ ತಾಯಿ ಪೃಥ್ವಿಯ ಜೊತೆಗೆ ತಂದೆಯಾದ ದ್ಯಾವಾ ದೈವವೂ ಉಂಟು. ಈ ಇಬ್ಬರೇ ಜಗದ ರಕ್ಷಕರು ಎನ್ನುವ ತಾತ್ಪರ್ಯದೊಂದಿಗೆ ಅವರು ಆರಂಭಿಸುತ್ತಾರೆ. ಅಪ್ಪಟ ನಾಸ್ತಿಕನಾಗಿದ್ದ ನಾನೂ ಇದನ್ನ ಓದಿದ ನಂತರ ಶ್ರಾದ್ಧವಿಧಿಗಳನ್ನು ಮಾಡಲು ಆರಂಭಿಸಿದೆ.(ನನಗೂ ,ಅಪ್ಪನಿಗೂ ಒಮ್ಮೆ ಚರ್ಚೆಯಾಗಿತ್ತು, ಆತ ಕೇಳಿದ್ದ. ನೀನು ನನ್ನ ಶ್ರಾದ್ಧ ಮಾಡ್ತಿಯೋ ಇಲ್ವೋ ಅಂತ. ಮಾಡೋದಿಲ್ಲ ಅಂದಿದ್ದೆ. ಅದಕ್ಕೆ ಆತ ಎಷ್ಟು ಸಮಾಧಾನದಿಂದ ಉತ್ತರ ಕೊಟ್ಟಿದ್ದ ಅಂದರೆ ಈಗಲೂ ಕಿವಿಯಲ್ಲಿ ಅವನು ಹೇಳಿದ ಮಾತು ಇದೆ. ಈಗ ನೀನು ಹೀಗೇ ಹೇಳ್ತಿಯಾ, ಕಡೆಗೆ ಗೊತ್ತಾಗ್ತಾ ಅಂತ. ಆ ಮಾತು ನಿಜವಾಗಿ ಬಿಟ್ಟಿತು)

ಓರ್ವ ಅಬ್ರಾಹ್ಮಣನಾಗಿ ಹುಟ್ಟಿದ ಡಿ.ಆರ್.ನಾಗರಾಜ್ ಒಪ್ಪಿದ್ದನ್ನ ಲೋಕ ಸ್ವೀಕರಿಸಿದೆ. ಆದರೆ ಇನ್ನೊಂದು ಕ್ರಮದಲ್ಲಿ ಅದನ್ನು ಹೇಳಹೊರಟ ಅನಂತಮೂರ್ತಿಯವರು ತಿರಸ್ಕøತಗೊಳ್ಳುತ್ತಾರೆ. ಇದು ಓರ್ವ ಬ್ರಾಹ್ಮಣನಾಗಿ ಹುಟ್ಟಿದ ಕ್ರಾಂತಿಕಾರಿ ಲೇಖಕನ ಸ್ಥಿತಿ. ಇತ್ತ ಸ್ವಂತ ಸಮಾಜವೂ ಬೆಂಬಲಿಸಲ್ಲ, ಅತ್ತ ಮತ್ತೊಂದು ಸಮಾಜಕ್ಕೆ ಅಪನಂಬಿಕೆ. ಅನಂತಮೂರ್ತಿಯವರ ಜೀವನ ಚರಿತ್ರೆ ‘ ಸುರಗಿ’ ಓದಿದರೆ ಇವೆಲ್ಲ ಗೊತ್ತಾಗತ್ತೆ. ಸ್ವತ: ಮಠದಲ್ಲಿ ವೇದಾಧ್ಯಯನ ಮಾಡಿದ ಅನಂತಮೂರ್ತಿ ಹಳೆಯಕಾಲದ ಬ್ರಾಹ್ಮಣರ ಗೊಡ್ಡು ನಡವಳಿಕೆ, ಪದ್ಧತಿಗಳನ್ನ ವಿರೋಧಿಸಿದರೆ ಹೊರತು ಅದರ ಹಿಂದಿನ ಅಖಂಡವಾದ, ಸಹಿಷ್ಣುತೆಯ ಸಂಸ್ಕøತಿಯನ್ನಲ್ಲ. ಅವರನ್ನು ಮುರಿದು ತಿನ್ನಲು ಹುಟ್ಟಿದ ವೇದಿಕೆ, ಸಂಘಟನೆಗಳ ನಡುವೆಯೂ ತನ್ನತನವನ್ನ ಕಾಯ್ದುಕೊಂಡ, ಸ್ವಂತಿಕೆಯನ್ನ ಉಳಿಸಿಕೊಂಡ ಧೀಮಂತಿಕೆ ಅವರದ್ದು.
ಜಾತ್ಯಾತೀತರೆನ್ನುವ ಹಲವು ಅನಂತಮೂರ್ತಿಯವರ ಸಮಕಾಲೀನ ಬರಹಗಾರರು ಪ್ರಭಾವಶಾಲಿಯಾದ ತಮ್ಮದೇ ಜಾತಿಯ ಹೆಣ್ಣುಮಗಳನ್ನು ಮದುವೆಯಾಗಿ,ಹೊರಗೆ ಜಾತಿವಿರೋಧಿಯಾಗಿ ಖಡ್ಗವನ್ನ ಝಳಪಿಸುತ್ತಾ ಹೋರಾಟ ನಡೆಸುವ ಹೊತ್ತಲ್ಲಿ ಅನ್ಯಧರ್ಮೀಯ ಹೆಣ್ಣುಮಗಳನ್ನು ಪ್ರೇಮಿಸಿ ಮದುವೆಯಾಗಿ ಎಲ್ಲರ ಕೆಂಗಣ್ಣಿಗೆ ಗುರಿಯಾದವರು ಅನಂತಮೂರ್ತಿ.(ಆ ಸಾಲಿನಲ್ಲಿ ತೇಜಸ್ವಿ ಮಾತ್ರ ವಿಭಿನ್ನ)
ನನ್ನ ಅನಿಸಿಕೆ, ಅಭಿಪ್ರಾಯವನ್ನು ಒಪ್ಪಬಹುದು, ಬಿಡಬಹುದು, ಒಂದೊಮ್ಮೆ ಯಾರಾದರೂ ಚರ್ಚೆಗೆ ಬಂದರೂ ಸಿದ್ಧನಾಗಿಯೇ ಇದ್ದೇನೆ. ಆದರೆ ಒಂದು ಷರತ್ತು; ಅವರ ಕೃತಿಗಳನ್ನ ಓದಿಕೊಂಡಿರಬೇಕು, ಕೊನೆ ಪಕ್ಷ ಅವರು ಬರೆದ ಪುಸ್ತಕಗಳ ಎಲ್ಲ ಹೆಸರು ನೆನಪಿಟ್ಟುಕೊಂಡಿರಬೇಕು.( ಹೊಸಕಾಲದವರು ಯಾರೂ ಬರೋದಿಲ್ಲ ಅಂತ ಗೊತ್ತು, ಬಂದರೆ ಖುಷಿ)

ನನ್ನನ್ನು ಬಹುವಾಗಿ ಕಾಡಿಸಿದ ಅನಂತಮೂರ್ತಿಯವರ ಹಲವು ಕತೆಗಳಲ್ಲಿ ‘ ಸೂರ್ಯನ ಕುದುರೆ’ ಕೂಡ ಮುಖ್ಯವಾದದ್ದೇ. ದೇಶಿ ವ್ಯಕ್ತಿತ್ವ ಮತ್ತು ಆಧುನಿಕ ಅಭಿವೃದ್ಧಿಯ ದರ್ಶನವನ್ನು ಒದಗಿಸುವ ಈ ಕತೆ ‘ಕ್ಲಿಪ್ ಜಾಯಿಂಟ್’ನಂತೆ ನನ್ನದೇ. ಬಾಲ್ಯಮಿತ್ರರಾದ ವೆಂಕಟ ಮತ್ತು ಹೆಸರಿಲ್ಲದ ನಿರೂಪಕನಿಗೆ ಅಕಸ್ಮಾತಾಗಿ ಸಂಭವಿಸುವ ಭೇಟಿಯಿಂದ ಆರಂಭಗೊಳ್ಳುವ ಕಥಾನಕ ಒಂದು ಸರ್ವಶ್ರೇಷ್ಠ ಕತೆಗಳಲ್ಲಿ ಒಂದು ಎನ್ನುವದು ನನ್ನಂಥ ಸಾಮಾನ್ಯನ ತಿಳುವಳಿಕೆ.
ಅದೃಷ್ಠ ಅರಿಯಿಲ್ಲ, ಅನಂತಮೂರ್ತಿಯವರ ಕತೆಗಳ ಬಗ್ಗೆ ಡಾಕ್ಟರೇಟ್ ಮಾಡುವ ಎಲ್ಲ ಸಾಮಥ್ರ್ಯ, ಅಧ್ಯಯನ, .. ಎಲ್ಲವೂ ಇದ್ದು ಅದು ಸಾಧ್ಯವಾಗಿಲ್ಲ. ಯಾರಾದರೂ ಒಂದೆರಡು ತಿಂಗಳು ಧನ ಸಹಾಯ ಒದಗಿಸಿದರೆ(ಹೊಟ್ಟೆ ಪಾಡಿಗೆ) ಅವರ ಸಾಹಿತ್ಯದ ಕುರಿತಾಗಿ ಹೊಸ ರೀತಿಯಲ್ಲಿ ಬರೆಯಬಲ್ಲೆ ಎನ್ನುವ ಆತ್ಮವಿಶ್ವಾಸವಿದೆ.
(ಮುಂದುವರಿಯವುದು)
ಗಂಗಾಧರ ಕೊಳಗಿ

About the author

Adyot

Leave a Comment