ಅನಂತಮೂರ್ತಿ ಎಂಬ ದಾರ್ಶನಿಕ….
ರತ್ನಗಂಧಿಯ ಬೇಲಿ,ಅದರ ಎದುರು ನಿಶ್ಚಲನಾದ, ತನ್ಮಯನಾದ, ಬರಿ ಮೈಯಲ್ಲಿ ವಕ್ರವಾಗಿ ನಿಂತ ವೆಂಕಟ. ಎದುರಿನ ಹಸಿರು ಬೇಲಿ ಬಿಟ್ಟರೆ ಮತ್ತೇನೂ ಕಾಣದು. ನಾನು ಮೆತ್ತಗೆ ಸದ್ದು ಮಾಡದಂತೆ ಅವನತ್ತ ಚಲಿಸಿದೆ. ಅವನ ಬೆನ್ನ ಹಿಂದೆ ನಿಂತೆ.
ಆದರೂ ವೆಂಕಟನಿಗೆ ನನ್ನ ಬಗ್ಗೆ ಧ್ಯಾಸವಿಲ್ಲ. ಅರೆ,ಎಂದು ಕುತೂಹಲದಿಂದ ನಾನೂ ರತ್ನಗಂಧಿಯ ಬೇಲಿಯನ್ನು ದಿಟ್ಟಿಸಿದೆ. ಅಲ್ಲಲ್ಲಿ ಹಳದಿಯ ಗೊಂಚಲು,ಗೊಂಚಲು ಹೂವುಗಳು, ಹಸಿರೆಲೆಗಳು. ಎಲೆ ಎಲೆಯನ್ನೂ ನೋಡಿದೆ. ಅವನ ಕಣ್ಣುಗಳ ಗುರಿ ಯಾವುದಿರಬಹುದೆಂದು, ಕುತೂಹಲದಿಂದ ನನ್ನ ದೃಷ್ಟಿಯ ಅವಧಿಯಲ್ಲಿದುದನೆಲ್ಲ ಸೂಕ್ಷ್ಮವಾಗಿ ನೋಡುತ್ತ ಹೋದೆ. ಕಾಣಿಸಿದ್ದು : ಒಂದು ಸೂರ್ಯನ ಕುದುರೆ.
ನನ್ನ ಈ ನಿರುಪದ್ರವಿ ಗೆಳೆಯ ಆ ಉಬ್ಬಿದ ಡೊಂಕುಕಾಲಿನ,ಹಗುರಾದ ದೇಹದ, ದಟ್ಟ ಹಸಿರಿನ, ಜಾಮಿತಿಯ ಕೋನಗಳಂತೆ ಅಷ್ಟಾವಕ್ರ ರೂಪದ ಕೀಟವನ್ನು ಬೆರಗಾಗಿ ನೋಡುವದು ಕಂಡು ನನಗೆ ಕ್ಷಣ ಮೋಜೆನಿಸಿತು. ಕ್ಷಣ ಮಾತ್ರ. ಸೂರ್ಯನ ಕುದುರೆ ಡೊಂಕು ಕಾಲನ್ನೊತ್ತಿ ಚಿಮ್ಮಿದ್ದು, ಅದು ಚಿಮ್ಮುತ್ತಿದ್ದಂತೆಯೇ ತದೇಕ ಮಗ್ನನಾದ ವೆಂಕಟನ ಕಮಾನು ಕ್ರಾಪಿನ ತಲೆ ಸ್ಪಂದಿಸಿದ್ದು ನೋಡಿ ನನಗೆ ಖುಷಿಯಾಗುತ್ತಿದ್ದಂತೆ ವೆಂಕಟನೂ ತಿರುಗಿ,ನನ್ನ ನೋಡಿ ಅದೆಷ್ಟು ಮುಗ್ದ ಮಂದಹಾಸದಲ್ಲಿ “ ಸೂರ್ಯನ ಕುದುರೆ” ಎಂದ. ಸೂರ್ಯನ ಕುದುರೆಯನ್ನು ಕಂಡ ಅವನ ಬೆರಗಿನ ಕಣ್ಣುಗಳಲ್ಲಿ ನನ್ನ ಕಣ್ಣೂ ನೆಟ್ಟು ಬಾಯಿ ತೆರೆಯಿತು;
“ ಸೂರ್ಯನ ಕುದುರೆ’- ಎಂದೆ.
ಕನ್ನಡದ ಅತ್ಯುತ್ತಮ ಸಣ್ಣ ಕಥಗಳಲ್ಲಿ ಒಂದು ಮತ್ತು ಭಾರತೀಯ ಸಾಹಿತ್ಯದಲ್ಲಿ ಒಂದು ಪ್ರಮುಖ ಎಂದು ವಿಮರ್ಶಕರೇ ಗುರುತಿಸಿದ ಈ ಕಥೆ ಅನಂತಮೂರ್ತಿಯವರ ಹಲವು ಮುಖ್ಯ ಕಥೆಗಳಲ್ಲಿ ಒಂದು. ಇಲ್ಲಿ ಬಳಸಿದ ಭಾಷೆ, ಸಂಕೇತ, ಶಬ್ದ, ಶಬ್ದಗಳಲ್ಲಿ ಹುದುಗಿಕೊಂಡ ಭಾವ ಮುಂತಾದವುಗಳ ಜೊತೆ ತನ್ನ ತಾತ್ವಿಕ ಮತ್ತು ಸೃಜನಶೀಲ ಕಾಳಜಿಗಳನ್ನು ತೆರೆದಿಟ್ಟ ಕಥೆ ಕೂಡ.ಆಧುನೀಕರಣದ ಪ್ರಕ್ರಿಯೆಯ ಕುರಿತು ಒಂದು ವಿಮರ್ಶೆಯಂತಿರುವ ಸೂರ್ಯನ ಕುದುರೆ ದೇಸಿ ವ್ಯಕ್ತಿತ್ವ ಮತ್ತು ಆಧುನಿಕ ಮನುಷ್ಯನ ನಡುವಣ ಮುಖಾಮುಖಿಯನ್ನು ದರ್ಶಿಸುವ ಕಥೆ ಕೂಡ. ವೈಯುಕ್ತಿಕವಾಗಿ ಕಾಡುತ್ತಿರುವದು ಕೂಡ. ಕ್ಲಿಪ್ ಜಾಯಿಂಟ್‍ನಲ್ಲಿ ಎರಡು ಭಿನ್ನ ದೇಶಗಳ ಸಂಸ್ಕತಿಗಳ ಮುಖಾಮುಖಿ, ಘಟಶ್ರಾದ್ಧದಲ್ಲಿ ಸಮುದಾಯವೊಂದರ ಒಳಗಿನ ಒಳಿತು, ಕೆಡುಕುಗಳ ಮುಖಾಮುಖಿ, ಮೌನಿಯಲ್ಲಿ ಎರಡು ದೇಸಿ ಮನಸ್ಥಿತಿಗಳ ನಡುವಿನ ಮುಖಾಮುಖಿ, ಕಾರ್ತೀಕದಲ್ಲಿ ಪತಿ,ಪತ್ನಿಯ ನಡುವಿನ ಯೋಚನಾ ಕ್ರಮದ ಮುಖಾಮುಖಿ.. ಹೀಗೇ ತಮ್ಮೆಲ್ಲ ಬರಹಗಳಲ್ಲಿ ಒದಕ್ಕೊಂದು ಒಡ್ಡಿಕೊಂಡು, ಸಂಘರ್ಷಿಸುವ, ಆ ಮೂಲಕ ಕಡೆದು,ಕಡೆದು ಹೊಸದೊಂದನ್ನ ಅನ್ವೇಷಿಸುವ ಪರಿ ಅನಂತಮೂರ್ತಿಯವರದ್ದೆಂದು ನನ್ನ ಭಾವನೆ.
ಒಮ್ಮೆ ದ.ರಾ.ಬೇಂದ್ರೆಯವರನ್ನು ಭೇಟಿಯಾದಾಗ ತಮ್ಮ ಕೈಯಲ್ಲಿ ಸದಾ ಇರುವ ಕೊಡೆಯನ್ನು ನೆಲಕ್ಕೂರಿ, ಅನಂತಮೂರ್ತಿಯವರನ್ನ ನೇರವಾಗಿ ದಿಟ್ಟಿಸುತ್ತ ಕೇಳಿದ್ದರಂತೆ: ‘ ನಾನು ನಿಮ್ಮ ಸಂಸ್ಕಾರ ಓದಿದೆ. ನೀನು ಅಸ್ವಸ್ಥ ಇದೀಯೇನಪಾ’ ಅಂತಾ. ಬಹುತೇಕ ಎಲ್ಲ ಬರಹಗಾರರು ಅಸ್ವಸ್ಥ ಮನಸ್ಥಿತಿಯಾಗಿದ್ದಾಗಲೇ ಉತ್ತಮ ಕೃತಿ ಹುಟ್ಟುತ್ತದೆಯೇ? ನಮ್ಮಂತವರನ್ನು ಲೋಕ ನೋಡುವ ಬಗೆಯೂ ಈ ರೀತಿ ಇರಬಹುದೇ?- ಹಲವು ಬಾರಿ ಯೋಚನೆ ಬರುತ್ತದೆ.
ಬಹುತೇಕ ತಮ್ಮೆಲ್ಲ ಬರಹಗಳಲ್ಲಿ ವ್ಯಕ್ತಿಗಳ, ಮನಸ್ಸುಗಳ,ಸಂಸ್ಕತಿಗಳ ನಡುವಿನ ಸಂಘರ್ಷವನ್ನ ವೈಚಾರಿಕ ನೆಲೆಯಲ್ಲಿ ನೋಡಿದ ಅನಂತಮೂರ್ತಿ ತಮ್ಮ ರಾಜಕೀಯ ದೃಷ್ಟಿಕೋನವನ್ನ ಬಳಸಿಕೊಂಡು ಬರೆದದ್ದು ಒಂದು ಕಾದಂಬರಿ ಹಾಗೂ ಒಂದು ನೀಳ್ಗತೆ. ಅವಸ್ಥೆ ಎನ್ನುವ ಕಾದಂಬರಿ ಸಮಾಜವಾದಿ ಹೋರಾಟಗಾರರಾದ ಶಾಂತವೇರಿ ಗೋಪಾಲಗೌಡರ ಬದುಕಿನ ಅನುಭವವೇ ಅನ್ನುವಷ್ಟು ವಾಸ್ತವವಾಗಿದ್ದರೆ, ಬರ ಎನ್ನುವ ಕಥೆ ಕೂಡ ಅಷ್ಟೇ. ತಮ್ಮ ರಾಜಕೀಯ ಅಭಿಪ್ರಾಯಗಳನ್ನು ಗೊಡ್ಡು ಸಿದ್ಧಾಂತದ ಅಥವಾ ಒಣ ವೈಚಾರಿಕತೆಯ ನೆಲೆಯಲ್ಲಿ ನೋಡದೇ ಮಾನವೀಯ ಗುಣಗಳನ್ನು ಉಳಿಸಿಕೊಂಡ ಆಧುನಿಕ ದೃಷ್ಟಿಕೋನದಲ್ಲಿ ಮಂಡಿಸುತ್ತಾರೆ. ಯಾರು ಏನೇ ಹೇಳಿದರೂ ಅನಂತಮೂರ್ತಿ ವಿಕೃತ ವೈಚಾರಿಕತೆಯ ಅಥವಾ ಸೈದ್ದಾಂತಿಕ ತಳಹದಿಯ ಮೇಲೇ ತಿಕ್ಕಾಟ ನಡೆಸುವ ಮನಸ್ಥಿತಿಯವರಂತೂ ಆಗಿರಲಿಲ್ಲ ಎನ್ನುವದು ನನ್ನ ಅನಿಸಿಕೆ. ಅಂಥ ಒಣ ಮತ್ತು ಭ್ರಮಿತ ಮನಸ್ಸು ಅವರದ್ದಾಗಿದ್ದರೆ ಗೋಪಾಲಕೃಷ್ಣ ಅಡಿಗರ ‘ಶ್ರೀ ರಾಮ ನವಮಿಯ ದಿವಸ’ ಎನ್ನುವ ಪ್ರಸಿದ್ಧ ಕವಿತೆಯ ಕುರಿತು ಅದ್ಭುತವಾದ ಒಳನೋಟವನ್ನು ಕೊಡಲು ಸಾಧ್ಯವಾಗುತ್ತಿರಲಿಲ್ಲ. ವಿಮರ್ಶಕ ನೆಲೆಯಲ್ಲಿ ಅದನ್ನು ನೋಡದೇ ಹೇಗೆ ಪದ್ಯವೊಂದನ್ನು ಗ್ರಹಿಸಿಕೊಳ್ಳಬಹುದು ಎನ್ನುವದನ್ನು ಅನಂತಮೂರ್ತಿ ನಮಗೆ ತಿಳಿಸಿಕೊಡುತ್ತಾರೆ.
ಮತ್ತೊಂದು ವಿಸ್ಮಯದ ಸಂಗತಿಯೆಂದರೆ ಅನಂತಮೂರ್ತಿಯವರ ಬಹುತೇಕ ಎಲ್ಲ ಕಾದಂಬರಿ, ಕಥೆಗಳಲ್ಲಿ ಅನುಭಾವಿ ವ್ಯಕ್ತಿತ್ವವೊಂದರ ಹಾಜರಾತಿ ಇದ್ದೇ ಇರುವುದು. ಲೋಕದ ಕಣ್ಣಿಗೆ ಬೋಳೆಯಾದ ಸ್ವಲ್ಪ ಅಸ್ವಸ್ಥ ಮನಸ್ಥಿತಿಯ ಈ ವ್ಯಕ್ತಿಗಳು ತಮ್ಮ ಒಳಗಿನ ಲೋಕದಲ್ಲಿ ಪಡೆದುಕೊಂಡ ವಿಶಿಷ್ಠ ವ್ಯಕ್ತಿತ್ವದ ಕುರಿತು ಅನಂತಮೂರ್ತಿಯವರಿಗೆ ಕುತೂಹಲ, ಆಕರ್ಷಣೆ ಇರುವ ಕಾರಣಕ್ಕೇನೋ? ನಮ್ಮ ಸುತ್ತ ಇರಬಹುದಾದ ಅಂಥ ಅವದೂತ ವ್ಯಕ್ತಿತ್ವ ಮತ್ತು ಮನಸ್ಸಿನ ವ್ಯಕ್ತಿಗಳನ್ನ ಅವರ ಬರಹಗಳಲ್ಲಿ ಕಾಣುವಾಗ ಬೆರಗಾಗುತ್ತದೆ. ಭಾರತೀಪುರ ಕಾದಂಬರಿಯ ಅಡಿಗರು ಮತ್ತು ಶ್ರೀಪಾದರಾಯರು, ಅವಸ್ಥೆ ಕಾದಂಬರಿಯ ಮಹೇಶ್ವರಯ್ಯ, ಸಂಸ್ಕಾರದ ಪುಟ್ಟ, ಸಣ್ಣ ಕಥೆಗಳಾದ ಸೂರ್ಯನ ಕುದುರೆಯ ಹಡೆ ವೆಂಕಟ, ಆಕಾಶ ಮತ್ತು ಬೆಕ್ಕು ನ ನಾಯರ್.. ಮುಂತಾದ ವ್ಯಕ್ತಿಗಳು ಸೃಷ್ಟಿಸುವ ಆಧ್ಯಾತ್ಮಿಕ ವಾತಾವರಣ ಅನಂತಮೂರ್ತಿಯವರ ಮೇಲೆ ಬಾಲ್ಯದಲ್ಲಿನ ಪರಿಣಾಮಗಳು ಕಾರಣವಾಗಿವೆಯೇ? – ಅನಂತಮೂರ್ತಿ ಅಭಿಪ್ರಾಯ ಕೇಳಿದಾಗ ಬೇರೊಂದು ಅನಿಸುತ್ತದೆ. ಅವರನ್ನೋದು ‘ ನನಗೂ, ಸಾಮಾನ್ಯ ಮನುಷ್ಯರಿಗೂ ಒಂದು ಸಂಬಂಧ ಇದೆ. ಯಾಕೆಂದ್ರೆ ನನ್ನ ಪ್ರಜ್ಞೆ ಕೇವಲ ನನ್ನ ಪ್ರಜ್ಞೆ ಅಲ್ಲ’ ಅಂತ. ತಮ್ಮ ಮೇಲಿರುವ ದ್ವಂದ್ವ ಧೋರಣೆ ಆರೋಪಕ್ಕೆ ಹೇಳೋದು ಹೀಗೆ- ‘ ನನ್ನನ್ನ ನಾನು ಸುಳ್ಳು ಮಾಡ್ಕೋಬಾರದು ಅಷ್ಟೇ. ಈ ದ್ವಂದ್ವ ಅನ್ನೋದು ಅದು ಸೃಷ್ಠಿ ಆದದ್ದಲ್ಲ.ಒಳ್ಳೆಯ ವೈಚಾರಿಕನಾದರೆ ನಿಮ್ಮ ಎದುರಾಳಿಅದಕ್ಕೆ ವಿರುದ್ಧವಾಗಿ ಮಾತನಾಡುವವನು ನಿಮ್ಮ ಮನಸ್ಸಿನಲ್ಲಿರಬೇಕು. ಹಿಂದೆ ಶಾಸ್ತ್ರ ಬರೆಯುವವರು ಕೂಡ ಪೂರ್ವ ಪಕ್ಷ, ಉತ್ತರ ಪಕ್ಷ ಅಂತ ಇಟ್ಕೋಳ್ಳೋರು.ನಮ್ಮ ಯಾವುದೇ ಶಾಸ್ತ್ರ ಗ್ರಂಥಕ್ಕೆ ಹೋದ್ರೆ ಅಲ್ಲಿ ದೇವರೇ ಇಲ್ಲ ಅಂತಾ ತಿಳಿತಾ ಇದ್ದಂಥವರನ್ನು ಮೊದಲು ಕೋಟ್ ಮಾಡಿ ಅದಕ್ಕೆ ಉತ್ತರವಾಗಿ ಇವರು ಬರೀತಾರೆ. ಶಾಸ್ತ್ರಕ್ಕೇ ಪೂರ್ವಪಕ್ಷ ಬೇಕಾದ್ರೆ ಸಾಹಿತ್ಯಕ್ಕಂತೂ ಅದು ಎರಡು ಪಕ್ಷನೂ ಒಟ್ಟಿಗೇ ಇದ್ದು ಸಾಧಿಸುವಂಥದ್ದು ಎನ್ನುತ್ತಾರೆ.
ಭಾಷೆಯ ಕುರಿತಾದ ಅವರ ಶ್ರಮ ಮತ್ತು ಸಾಧನೆ ಅಗಾಧವೇ. ಅವರು ಬಳಸುವ ಪದಪುಂಜಗಳು ಒಂದು ವಿಶಿಷ್ಠ ಪ್ರಭೆಯಲ್ಲಿ ಹೊಳೆಯುವಂತವು. ಸೃಜನಶೀಲ, ಸಂವೇದನಾಶೀಲ, ಬೆರಗು, ಮಗುವಿನ ಕುತೂಹಲದಿಂದ ಅರಿವು ಪಡೆಯುವ ಕ್ರಮ ಇವೆಲ್ಲ ಅನಂತಮೂರ್ತಿಯವರನ್ನ ಇನ್ನಷ್ಟು ಉಜ್ವಲವಾಗಿಸುತ್ತದೆ.
ಕೊನೆಯಲ್ಲಿ ಒಂದು ಸಂಗತಿಯನ್ನ ಹೇಳಿ ಮುಗಿಸುತ್ತೇನೆ. ತುಂಬಾ ಹಿಂದೆ ಪ್ರಸಿದ್ಧ ತಪಸ್ವಿ ರಮಣ ಮಹರ್ಷಿಗಳ ಬಗ್ಗೆ ಕೇಳಿದ್ದೆ. ಅವರ ಬಗ್ಗೆ ನನಗೂ ಕುತೂಹಲವಿತ್ತು. ಆ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದು ಅನಂತಮೂರ್ತಿ ತಮ್ಮ ಹಲವು ಲೇಖನ, ಬರಹಗಳಲ್ಲಿ ರಮಣರ ಬಗ್ಗೆ ವ್ಯಕ್ತಪಡಿಸುತ್ತಿದ್ದ ವಿಚಾರಗಳಲ್ಲಿ. ಅಂಥ ಅನುಭಾವಿ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಹಂಬಲ ತೀವ್ರವಾಗಿ ನನ್ನೊಳಗಿತ್ತು. ರಮಣರನ್ನು ಹುಡುಕಿಕೊಂಡು ಬಂದ ಪಾಲ್ ಬ್ರೌಂಟನ್ ಎನ್ನುವ ಪಾಶ್ಚಿಮಾತ್ಯ ವೈಚಾರಿಕನ ಮತ್ತು ಹಿರಿಯ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ರಮಣರ ಕುರಿತಾದ ಗ್ರಂಥಗಳ ಓದು ಆ ಕುರಿತಾದ ತವಕವನ್ನು ಸ್ವಲ್ಪಮಟ್ಟಿಗೆ ನಿವಾರಿಸಿದವು. ( ಈ ಗ್ರಂಥಗಳನ್ನು ಓದಿಗೆ ಒದಗಿಸಿದ ಜಿ.ಕೆ.ಭಟ್ಟ ಕಶಿಗೆಯವರಿಗೆ ಕೃತಜ್ಞತೆ) ತನ್ನೊಳಗೊಂದು ಪ್ರಖರವಾದ ವಿಶಿಷ್ಠ ನೋಟವನ್ನ ಕೊನೆವರೆಗೂ ಉಳಿಸಿಕೊಂಡ, ಹೊರಜಗತ್ತಿನ ಕಾಣ್ಕೆಗಳನ್ನು ಸದಾ ಪಡೆದುಕೊಳ್ಳಲು ಕಾತರಿಸಿದ ಅನಂತಮೂರ್ತಿ ತಮ್ಮ ಕೃತಿಗಳ ಮೂಲಕ ಈಗಲೂ ಜೀವಂತವಾಗಿದ್ದಾರೆ.
ಅವರಿಂದ ನಾನು ತುಂಬಾ ಪಡೆದುಕೊಂಡಿದ್ದೇನೆ ಎನ್ನಲು ಹೆಮ್ಮೆ ಮತ್ತು ಸಂತೋಷವಾಗುತ್ತದೆ. ಅವುಗಳಲ್ಲಿ ಎಷ್ಟು ಉಳಿಸಿಕೊಂಡಿದ್ದೇನೆ? ಎನ್ನುವ ಬಗ್ಗೆ ಅನುಮಾನ ಇಟ್ಟುಕೊಂಡೇ ಅವರ ಕುರಿತಾದ ಬರಹವನ್ನು ಮುಗಿಸುತ್ತಿದ್ದೇನೆ. ಅವರು ಸದಾ ನನ್ನೊಳಗೆ ಇರುತ್ತಾರೆ ಎನ್ನುವ ನಂಬಿಕೆಯೊಂದಿಗೆ…
###
ಗಂಗಾಧರ ಕೊಳಗಿ