ಆದ್ಯೋತ್ ಅಂಕಣದಲ್ಲಿ ಕೊಳಗಿ ನೆನಪು

ಬದುಕಿನಲ್ಲಿ ಹೊಸತನ್ನು ಅನ್ವೇಷಿಸುತ್ತಲೇ ಮರೆಯಾದ ಕೋ..ಕಾರಂತ
ನಾನು ಶಿವರಾಮ ಕಾರಂತರನ್ನು ಕಾಣಲೆಂದು ಹೋಗಿ ಅವರ ಮನೆಯಲ್ಲೇ ಉಳಿದಿದ್ದಾಗ ಅವರು ಒಂದು ಮಾತು ಹೇಳಿದ್ದರು; ‘ನನ್ನ ಅಣ್ಣ ಒಬ್ರು ಕುಂದಾಪುರದಲ್ಲಿರ್ತಾರೆ, ಅವರನ್ನೊಮ್ಮೆ ನೀವು ಭೇಟಿಯಾಗಿ’ ಅಂತ. ನಾನು ಕೇಳಿದ್ದೆ. ‘ಯಾರು ಕೋ.ಲ.ಕಾರಂತರಾ?’ ಅಂತ. ‘ ಅವರ ಬಗ್ಗೆ ನಿಮಗೆ ಗೊತ್ತಾ?’ ಅಂದರು. ‘ ಹೆಚ್ಚೇನೂ ಗೊತ್ತಿಲ್ಲ, ಅವರ ಬಗ್ಗೆ ವೈದೇಹಿ ಅವರು ನಿರೂಪಿಸಿದ ‘ ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು ಕೃತಿ’ ಓದಿದೀನಿ ಎಂದಾಗ ‘ ಓಹೋ, ಸಾಧ್ಯ ಮಾಡಿಕೊಂಡು ಅವರನ್ನ ನೋಡಿ’ ಅಂದಿದ್ದರು. ತಮ್ಮನೇ ಹೀಗಿರಬೇಕಾದ್ರೆ ಅಣ್ಣನಾದ ಅವರು ಹೇಗಿರಬಹುದು? ಎನ್ನುವದು ಆಗ ಇನ್ನೂ ಚಿಳ್ಳೆಪಿಳ್ಳೆಯಾಗಿದ್ದ ನನ್ನ ಮನಸ್ಸಿಗೆ ಬಂದಿತ್ತು. ಅಲ್ಲದೇ ಶಿವರಾಮ ಕಾರಂತರೇ ಅಷ್ಟೊಂದು ಒತ್ತಾಯ ಮಾಡ್ತಿರೋದರ ಬಗ್ಗೆಯೂ ಕುತೂಹಲ ಹುಟ್ಟಿತ್ತು. ಆಗಲೇ ಒಂದು ಮಾತು ಕಾರಂತರನ್ನ ಕೇಳಿದ್ದೆ. ‘ಯಾಕೆ ನಿಮಗೆ ನಮ್ಮ ಜಿಲ್ಲೆಯ ಮೇಲೆ ಅಷ್ಟೊಂದು ಅಕ್ಕರೆ, ಕುತೂಹಲ?’ ಎಂದು ಪ್ರಶ್ನಿಸಿದಾಗ ಗಟ್ಟಿಯಾಗಿ ನಕ್ಕಿದ್ದರು, ಕೆಲವು ಕ್ಷಣಗಳ ನಂತರ ‘ನಿಮ್ಮಲ್ಲಿಯವರ ಆತಿಥ್ಯ’ ಎಂದಿದ್ದರು.
ಶಿವರಾಮ ಕಾರಂತರ ಮನೆಗೆ ಹೋಗಿ ಉಳಿದು ಬಂದ ನಂತರದಲ್ಲಿ ನಾನು ತಾತ್ಕಾಲಿಕ ಟೆಂಟ್ ಹಾಕಿದ್ದ ಭಾಗವತರುಗಳ ಬಿಡಾರದಲ್ಲಿ ನನಗೆ ಪ್ರಾಮುಖ್ಯತೆ ಬಂದು ಬಿಟ್ಟಿತ್ತು. ಕಾರಂತರು ಪರ್ಲಾಂಗು ದೂರದಲ್ಲಿ ಬರುತ್ತಿದ್ದಾರೆಂದರೇ ಅಲ್ಲೇ ಎಲ್ಲಾದರೂ ಬಚ್ಚಿಟ್ಟುಕೊಳ್ಳುತ್ತಿದ್ದ ಕಲಿಕೆಯ ಹುಡುಗರಲ್ಲಿ ಇವನ್ಯಾರಪ್ಪಾ? ಅಂತ ನನ್ನ ದರ್ಶನ ಪಡೆಯಲು ಬಂದವರೂ ಇದ್ದರು. ಅವೆಲ್ಲಕ್ಕಿಂತ ಹೆಚ್ಚಾಗಿ ಭಾಗವತರಾದ ಧಾರೇಶ್ವರ ಅವರೂ, ಭಾಗವತಿಕೆ ಕಲಿಯಲೆಂದು ಬಂದ ಕೇಶವ ಹೆಗಡೆ, ಮಾಧವ ಭಟ್ ಮುಂತಾದವರು ಬಾಡಿಗೆ ಕೊಠಡಿ ಹಿಡಿದಿದ್ದ ಮನೆಯವರಿಗೆ ತುಂಬಾ ಖುಷಿಯಾಗಿತ್ತು.
ಆ ಮನೆ ಈಗಿನ ಪ್ರಸಿದ್ಧ ಚಂಡೆವಾದಕ ಶಿವಾನಂದ ಕೋಟ ಅವರದ್ದಾಗಿತ್ತು. ಆಗಿನ್ನೂ 6-7 ನೆಯ ತರಗತಿಗೆ ಹೋಗುತ್ತಿದ್ದ ಶಿವಾನಂದರ ತಂದೆಯವರಿಗೆ ವಯಸ್ಸಾಗಿತ್ತು. ತಾಯಿ ಸ್ವಲ್ಪ ಮಟ್ಟಿಗೆ ಚೆನ್ನಾಗಿದ್ದರು. ಅಂತ:ಕರಣವಿದ್ದ, ಸಾತ್ವಿಕರಾದ ಆ ದಂಪತಿಗಳಿಗೆ ನಾನು ಕಾರಂತರ ಮನೆಯಲ್ಲಿ ಉಳಿದು ಬಂದದ್ದು ಬಹುದೊಡ್ಡ ಸೋಜಿಗವಾಗಿತ್ತು. ವೈದಿಕರಾಗಿದ್ದ ಶಿವಾನಂದನ ತಂದೆ ‘ ಮಗಾ, ನಾನು ಕಾರಂತರ ಮನೆಯ ಪುರೋಹಿತ ಕಾಣ್, ಈಗ ಕೈಲಾತಿಲ್ಲೆ, ಬಿಟ್ಟಿದೆ. ಕಾರಂತರಿದ್ರಲಾ, ನೋಡುಕೆ ಹಾಂಗೆ, ಉಗ್ರ. ಮನಸ್ಸಲ್ಲಿ ಹಾಂಗಿಲ್ಯೆ. ಅವ್ರಿಗೆ ದೇವ್ರ,ದಿಂಡ್ರಲ್ಲಾ ಆತಿಲ್ಯೆ. ಆದ್ರ ಕಾಣ್, ಅಲ್ಲ್ ಎದುರಿತ್ತಲಾ, ಅವರ ಅಣ್ಣನ್ ಮನಿ, ಊರಲ್ಲಿದ್ರೆ ಅಲ್ಲಿಗೆ ವರ್ಷಕ್ಕ ಎರಡ್ಸಾರಿ ಬತ್ರ, ಅವ್ರ ಅಪ್ಪ,ಅಮ್ಮನ ದಿನಕ್ಕೆ. ಏಂತೂ ಮಾಡೂದಿಲ್ಲಾ, ಬಂದ್ರು, ಹ್ವಾದ್ರು. ಆಗಳಿಕೆ ನನ್ನ ಮಾತಾಸ್ಕಂಡ್ ಹ್ವಾತ್ರು. ಅಲ್ಲಿತ್ತ ನೋಡಿ ಜೇಬ್ಗೆ ಕೈ ಹಾಕಿ ಒಂದಿಷ್ಟು ದುಡ್ಡಿನ ನೋಟ್ ತೆಗ್ದ ನನ್ನ ಕೈಗಿಡಿಸಿ, ನಮಸ್ಕಾರ ಮಾಡಿ ಹ್ವಾತಿರ್ತ್ರು. ಅವ್ರ ಯಾರ್ನೂ ಹಾಂಗೆ ಮೆಚ್ಕಂತಿಲ್ಲೆ, ನಿನ್ನ ಮೆಚ್ಕಂಡ್ರಲಾ, ಆಗ್ಲಿ ಮಾರಾಯಾ’ ಎಂದು ತಮ್ಮ ವೃದ್ದಾಪ್ಯದ ಆಯಾಸದ ನಡುವೆಯೂ ಮುಖದಲ್ಲಿ ಮಂದಹಾಸ ಹೊಮ್ಮಿಸಿ, ಆಶೀರ್ವಾದ ರೂಪದಲ್ಲಿ ಮಾತನಾಡಿದ್ದರು. ಯಕ್ಷ-ಕಿನ್ನರರೆಲ್ಲ ತಮ್ಮ ಕಾರ್ಯಕ್ಕೆ ತೆರಳಿದ ನಂತರ ಅಲ್ಲಿ ಉಳಿವವರು ನಾವು ಮೂವರೇ. ಶಿವಾನಂದನ ಅಮ್ಮನೂ ಹಾಗೆಯೇ, ದಯಾಮಯಿ. ತಮ್ಮ ಬಡತನ,ಕಷ್ಟಗಳ ನಡುವೆಯೂ ಸಾತ್ವಿಕವಾದ, ಸಹಜವಾದ ಜೀವನವನ್ನ ನಡೆಸುತ್ತಿದ್ದ ಆ ಜನ ಕಾರಂತರ ಕಾದಂಬರಿಗಳ ಕೆಲವೊಂದು ವಿಶಿಷ್ಠ ಪಾತ್ರಗಳ ಜೀವಂತ ರೂಪಗಳಂತಿದ್ದರು. ಬದುಕಿನಲ್ಲಿ ಕಂಗೆಟ್ಟ ನಾನು, ಬದುಕಿನ ಕ್ರೂರ ಘಾಸಿಗಳನ್ನೆಲ್ಲ ಅನುಭವಿಸಿ, ಅದಕ್ಕೆ ಪ್ರತಿರೋಧವೆಂಬಂತೆ ಸ್ಥಿತಪ್ರಜ್ಞರಾಗಿ ಬದುಕುತ್ತಿರುವ ಆ ಹಿರಿಯ ಜೀವಗಳು ಎಷ್ಟೆಲ್ಲ ಪರಸ್ಪರ ಕಷ್ಟ,ಸುಖ,ತಳಮಳ,.. ಹಂಚಿಕೊಂಡಿದ್ದೇವೋ? ಹಠಾತ್ತನೆ ಬರುವ ದಪ್ಪ ಹನಿಗಳ, ಅಷ್ಟೇ ಕ್ಷಿಪ್ರವಾಗಿ ನಿಂತು ಹೋಗುವ ಬಿರುಸು ಮಳೆ, ಒಂದಿಷ್ಟು ಹೊತ್ತು ತಂಪಾಗಿ ಮತ್ತೆ ಕುಚ್ಚುವ ಸೆಖೆಯ ನಡುವೆ ನಮ್ಮ ಮಾತುಕಥೆಗಳು ಸಾಗುತ್ತಿದ್ದವು. ಆ ಸೆಖೆಗೆ ಸದಾ ಹಸಿದಿರುತ್ತಿದ್ದ ನಾನಂತೂ ಕುಚ್ಚಲಕ್ಕಿ ಗಂಜಿ, ಅದಕ್ಕೆ ತಕ್ಕನಾದ ಬದನೆಕಾಯಿ ಹುಳಿ, ಮತ್ತ್ಯಾವುದೋ ಮೇಲೋಗರಕ್ಕಾಗಿ ಮನಸ್ಸಿನಲ್ಲೇ ಹಾತೊರೆಯುತ್ತಿದ್ದೆ. ಆ ಹಿರಿಯ ಜೀವಗಳಿಗೆ ಗೊತ್ತು ಮಾಡದಂತೆ.
ಹಾಗೇ ಮಾತನಾಡುತ್ತಿದ್ದ ವೇಳೆಯಲ್ಲಿ ಕಾರಂತರು ತಮ್ಮ ಅಣ್ಣ ಇನ್ನೊಬ್ಬ ಕಾರಂತರನ್ನು ಭೇಟಿ ಮಾಡಿ ಎಂದ ಬಗ್ಗೆ ಹೇಳಿದೆ. ಆ ಅಮ್ಮ ‘ ಅವ್ರಾ, ಪಾಪದವ್ರು, ಅಂತ ತೊಂದ್ರಿ ಯಾರ್ಗೂ ಬಪ್ಪುಕಾಗಾ’ ಎಂದಳು. ಆ ಕ್ಷಣದಲ್ಲಿ ಯಾತಕ್ಕೆ ಹಾಗೇ ಹೇಳಿದರೋ ಯೋಚಿಸಲಿಲ್ಲ. ಮತ್ತು ಅಷ್ಟೊಂದು ಸೂಕ್ಷ್ಮವಾಗಿ ಯೋಚಿಸುವ ಚತುರತೆಯೂ ನನಗಿಲ್ಲದ ಕಾರಣಕ್ಕೆ ಅಲ್ಲಿಗೆ ಬಿಟ್ಟೆ. ಆದರೆ ಆ ಪುರೋಹಿತರು ಕುಳಿತಲ್ಲಿಯೇ ಕನಲಿದ್ದು ನನ್ನ ದೃಷ್ಟಿಗೆ ಗೋಚರವಾಗಿತ್ತು. ಅವರು ತಮ್ಮ ಎಂದಿನ ಅಸ್ವಾಸ್ಥ ಸ್ಥಿತಿಯಿಂದ ಒಂದು ಕ್ಷಣ ಈಚೆ ಬಂದು ಗೆಲುವಾಗಿದ್ದರು.
ಈ ಹೊತ್ತಲ್ಲಿ ಈ ನೆನಪುಗಳನ್ನು ಮಾಡಿಕೊಳ್ಳುವ ಸಂದರ್ಭದಲ್ಲಿ ಮನುಷ್ಯನ ಒಳಗಿನ ಆಶಯ, ಧ್ವನಿ, ಅಂತರಾಳದ ಶಕ್ತಿ, ಅದಕ್ಕೆ ಸ್ಪೂರ್ತಿಯಾಗುವ ಸಾಧ್ಯತೆಗಳ ಬಗ್ಗೆ ಯೋಚನೆ ಬರುತ್ತಿದೆ.( ಅದಕ್ಕೆ ನನ್ನಂಥವರಿಗೆ ಎಡವಟ್ಟು ,ದ್ವಂದ್ವ, ತಿಕ್ಕಲು..ಮುಂತಾದ ಮನಸ್ಥಿತಿಯವರು ಅಂತಾ ಸಂಭಾವಿತರು(?) ಕರೆಯೋದು). ನಾವು ಮನುಷ್ಯನೊಬ್ಬನ ಆಪೇಕ್ಷೆಗಳ ಬಗ್ಗೆ, ಆಕಾಂಕ್ಷೆಗಳ ಬಗ್ಗೆ, ಒಟ್ಟಾರೆ ಆತನ ಜೀವನದ ಆಶಯದ ಬಗ್ಗೆ ನಮಗೆ ತಿಳಿದ ಹಾಗೇ ಹೇಳಿ ಬಿಡ್ತೀವಿ. ಆದರೆ ಕೆಲವೊಮ್ಮೆ ಅದು ಭಿನ್ನವಾಗಿರುತ್ತದೆ.
ವೃದ್ಯಾಪ್ಯ ಬಂದ ವ್ಯಕ್ತಿಯ ಅನಿಸಿಕೆ, ತಳಮಳ, ಸೆಳೆತ, ಖಿನ್ನತೆಗಳನ್ನ ಅರಿತುಕೊಳ್ಳಲು ಯಾರೇ ಆದರೂ (ಜಗತ್ ಪ್ರಸಿದ್ಧ ಮತ್ತು ನೋಬೆಲ್ ಪ್ರಶಸ್ತಿ ಪಡೆದ ನನ್ನ ಪ್ರೀತಿಯ ಲೇಖಕ) ‘ಗೇಬ್ರಿಯಲ್ ಗಾರ್ಸಿಯಾ ಮಾಕ್ರ್ವೆಜ್’ ನ ಕಾದಂಬರಿ, ಕಥೆಗಳನ್ನು ಓದಬೇಕು. ಅವರÀ ‘ಓಲ್ಡ ಮೆನ್ ಎಂಡ್ ದ ಸೀ’ ಕಾದಂಬರಿ ನನ್ನನ್ನು ತಟ್ಟಿದ ಬರಹಗಳಲ್ಲಿ ಒಂದು. ಸಾಧ್ಯವಾದ್ರೆ ಆತನ ‘ಲವ್ ಇನ್ ದಿ ಟೈಮ್ ಆಪ್ ಕಾಲೆರಾ’ ಓದಿ. ಮೂಲ ಪಠ್ಯದಲ್ಲೇ ತಾಜಾತನ ತಟ್ಟುತ್ತದೆ. ಇಲ್ಲವಾದರೆ ಯಾವುದೇ ಕಾರಣಕ್ಕೂ ಮೂಲ ಕಾದಂಬರಿಗೆ ಧಕ್ಕೆ ಬಾರದಂತೆ ಕನ್ನಡಕ್ಕೆ ಭಾವಾನುವಾದ ಮಾಡಿದ ರವಿ ಬೆಳಗೆರೆಯವರ ‘ಮಾಂಡೋವಿ’ ಓದಿ. ಅದರಲ್ಲಿ ತನ್ನ ಸುಧೀರ್ಘ ಬದುಕನ್ನು ಕಳೆದು ಬಂದ ವ್ಯಕ್ತಿ ತನ್ನ ಅಸಹಾಯಕತೆ, ಖಿನ್ನತೆ, ಅವಮಾನ ಎಲ್ಲವನ್ನೂ ಮರೆತು ಮತ್ತೆ ಪುಟಿದೇಳುವ ನಮ್ಮ ಹಿಂದಿನ ತಲೆಮಾರಿನ ಶಕ್ತಿ, ಸಾಮಥ್ರ್ಯ, ವಾಂಛೆ ಅರಿವಾಗುತ್ತದೆ. ಸೋಲುತ್ತ, ಸೋಲುತ್ತ, ಗೆಲ್ಲುತ್ತ ಬಂದ ಹಿರಿಯರ ಬಗ್ಗೆ ಬೇಡದಿದ್ದರೂ ಕಣ್ಣಲ್ಲಿ ಹನಿಗೂಡುತ್ತದೆ.
ಅವತ್ತು ಆ ಪುರೋಹಿತರಿಗೆ ಆದ ಒಳ ಸಂಭ್ರಮವನ್ನ ನನ್ನ ಒಳಮನಸ್ಸಿನಿಂದ ಕಂಡಾಗ ಆಗಿದ್ದೂ ಇಂಥದ್ದೇ ಒಂದು ಅನುಭವ- ಹಿರಿಯರ ಕುರಿತಾಗಿ.
ಮುಂದುವರಿಯುವದು..
ಗಂಗಾಧರ ಕೊಳಗಿ

About the author

Adyot

Leave a Comment