ಕೋ.ಲ.ಕಾರಂತ ..
ಪ್ರಸಿದ್ದ ಯಕ್ಷಗಾನ ಚಂಡೆವಾದಕ ಕೋಟದ ಶಿವಾನಂದ ಅವರ ಮನೆ ಹಿರೇಮಹಾಲಿಂಗೇಶ್ವರ ದೇವಾಲಯದ ಹಿಂಭಾಗ( ಸರಿಯಾದ ಹೆಸರು ಮರೆತಿದೆ. ಅದೇ ಅಂತಾ ಒಳಮನಸ್ಸು ಹೇಳುತ್ತಿದ್ದರೂ, ಅಲ್ಲವಾದರೆ ಕ್ಷಮಿಸಿ). ಅದೇ ದೇವಾಲಯದಲ್ಲಿ ಭಾಗವತಿಕೆ ತರಗತಿ ನಡೆಯುತ್ತಿದ್ದುದು. ಉಪ್ಪೂರು ಭಾಗವತರು, ಧಾರೇಶ್ವರ ಭಾಗವತರು ಗುರುಗಳಾಗಿದ್ದರು.ಆ ದೇವಾಲಯದ ಪಕ್ಕದಲ್ಲೇ ಸುತ್ತ ಹತ್ತಾರು ಪಾವಟಿಗೆಗಳಿದ್ದ ಕೊಳ. ಅದರ ಆಚೆ ಪಕ್ಕ ಕಾರಂತರ ಮೂಲಮನೆ. ಅವರ ಅಣ್ಣನ ಕುಟುಂಬ ಅಲ್ಲಿ ವಾಸಿಸುತ್ತಿತ್ತಂತೆ.
ಆ ಮನೆಯ ಎದುರಿನ ಜಗಲಿಯ ತುಂಬಾ ಬೆಕ್ಕುಗಳು, ಕನಿಷ್ಠ 20-25 ಬೆಕ್ಕುಗಳು. ಕಾರಂತರ ಈ ಅಣ್ಣನಿಗೆ ಬೆಕ್ಕುಗಳನ್ನು ಸಾಕುವ ಹವ್ಯಾಸ! ಈಗಲಾದರೆ ಅವರನ್ನು ಭೇಟಿ ಮಾಡಿ, ಮಾತನಾಡಿಸುತ್ತಿದ್ದೇನೆನೋ? ಈ ಬೆರಗಿನ ಬಗ್ಗೆ ಕಾರಂತರಲ್ಲಿ ಕೇಳಬೇಕೆಂದಿದ್ದರೂ ನೆನಪಾಗಿರಲೇ ಇಲ್ಲ. ಗೋಕರ್ಣದ ಓರ್ವ ನನ್ನ ವಯಸ್ಸಿನ ಹುಡುಗನನ್ನು ಧಾರೇಶ್ವರರು ತಮ್ಮೊಂದಿಗೆ ಕರೆತಂದಿದ್ದರು. ಆತ ಸಿಕ್ಕಾಪಟ್ಟೆ ಭಂಗಿ(ಗಾಂಜಾ) ಸೇದಲು ಕಲಿತಿದ್ದಾನೆ, ಅದನ್ನು ಬಿಡಿಸಬೇಕು. ಅದಕ್ಕೆ ಇಲ್ಲಿ ಕರೆದುಕೊಂಡು ಬಂದಿದೀನಿ ಅಂದಿದ್ದರು. ಆತನ ಹೆಸರು ಶಂಕರಲಿಂಗ ಅಂತಾ ನೆನಪು. (ಕೆಲಸದ ಒತ್ತಡದಲ್ಲಿ ಅಥವಾ ಪುಸ್ತಕವೊಂದರ ಅಧ್ಯಯನದ ಸಂದರ್ಭದಲ್ಲಿ ನನಗೆ ಹಳೆಯ ಹೆಸರುಗಳು, ಅನುಭವಗಳು ಚೂರು,ಚೂರು ಅಸ್ಪಷ್ಟವಾಗಿಬಿಡುತ್ತಿವೆ. ಎಲ್ಲ ಕಲಸಿಹೋದ ಥರ. ನಮ್ಮಲ್ಲಿ ಗಾದೆಯಿದೆಯಲ್ಲಾ ಮನಸ್ಸಲ್ಲಿ ಉಂಟು, ಬಾಯಿಗೆ ಬರೋದಿಲ್ಲ ಅಂತ, ಆ ಥರ) ಆತ ಬಹುಪಾಲು ಊಟ, ತಿಂಡಿಗಳ ತಯಾರಿಯ ಜವಾಬ್ದಾರಿ ವಹಿಸಿಕೊಂಡಿದ್ದ. ಬಿಡುವಾದಾಗ ತಾಳ ಹಿಡಿದು ತರಗತಿಗೆ ಹೋಗುತ್ತಿದ್ದ. ಹೊತ್ತು ಕಳೆಯಲು ಕುಳಿತ ನನಗೆ ಆ ಇಬ್ಬರು ಹಿರಿಯರ ಜೊತೆಗೆ ಇವನೂ ಜೊತೆಗಾರನಾಗಿದ್ದ. ಇಲ್ಲಿ ಬಂದ ನಂತರ ಭಂಗಿ ಸೇದುವದಕ್ಕೆ ಅದು ಸಿಗುತ್ತಲೇ ಇಲ್ಲದ ಕಾರಣಕ್ಕೆ ಸ್ವಲ್ಪ ಮಂಕಾಗಿದ್ದರೂ ಚುರುಕಾಗಿದ್ದ. ಎಷ್ಟೇಂದರೂ ಗೋಕರ್ಣದವನಲ್ಲವೇ!
ಅಲ್ಲಿ ಇರುವ ನಾಲ್ಕಾರು ದಿನದಲ್ಲಿ ನಾನೊಬ್ಬನೇ ತಿರುಗಾಡಲು ಹೋಗುತ್ತಿದ್ದೆ. ಈಗ ಕೋಟ ಮೊದಲಿನಂತಿಲ್ಲ; ಚತುಷ್ಪಥ ಹೆದ್ದಾರಿ ಆದ ನಂತರವಂತೂ ಗುರುತೇ ಸಿಗದಂತಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿದ್ದರೂ ಆಗ ಶಾಂತವಾದ, ನಿರುಮ್ಮಳವಾದ ಊರು ಅದಾಗಿತ್ತು. ದಿನಕ್ಕೊಮ್ಮೆ ಕಡಲು ನೋಡಲು ಹೋಗುತ್ತಿದ್ದೆ; ಕೋಟದ ಪಡುಕೆರೆ ಎನ್ನುವ ಕಡಲ ಅಂಚಿನಸ್ಥಳಕ್ಕೆ.
ಆ ನೆಲವೆಲ್ಲ ಕಾರಂತ ಸಹೋದರರು ನಡೆದಾಡಿದ ಜಾಗ. ಶಿವರಾಮ ಕಾರಂತರ ಪ್ರಖ್ಯಾತ ಕಾದಂಬರಿ ‘ ಮರಳಿ ಮಣ್ಣಿಗೆ’ ಸಂಭವಿಸಿದ, ಜೀವ ತಳೆದ ನೆಲ. ಸುಮ್ಮನೆ ಆ ಕಡಲ ದಂಡೆಯ ಅಂಚಿನ ಮರಳಿನಲ್ಲಿ ಆ ಕಾದಂಬರಿಯ ಬರಹಗಳನ್ನು ನೆನಪಿಸಿಕೊಳ್ಳುತ್ತ ಮೈಲುಗಟ್ಟಲೆ ನಡೆದು, ನಂತರ ಬಟ್ಟೆ ಬಿಚ್ಚಿ, ಕಡಲಿಗಿಳಿದು ಉಪ್ಪು ನೀರಲ್ಲಿ ಮೈ ತೋಯಿಸಿಕೊಳ್ಳುತ್ತಿದ್ದೆ. ಶಂಕರಲಿಂಗ, ಕೇಶವ, ಮಾಧವ ಮುಂತಾದವರು ಜೊತೆಗಿದ್ದಾಗ ಇನ್ನಷ್ಟು ಹೆಚ್ಚು ಸಮಯ ಕಡಲಿನಲ್ಲಿ. ಹಾಗೇ ಆ ದಿವಸ ಓಡಾಡಿ ಬಂದವನು ಎದುರಿಗಿದ್ದ ಆ ಹಿರಿಯರ ಬಳಿ ‘ ನಾಳೆ ಕೋ.ಲ.ಕಾರಂತರನ್ನ ನೋಡಲು ಹೋಗ್ತೆ’ ಎಂದೆ.
ಮರುದಿನ ಬೆಳಿಗ್ಗೆ ನಾವೆಲ್ಲ ಏಳುವ ಮೊದಲೇ ಜಗಲಿಯಲ್ಲಿ ಕೋಲಾಹಲ. ಇದೇನು, ಅಪರೂಪಕ್ಕೆ ಅಮ್ಮ ಗಟ್ಟಿದ್ವನಿ ಮಾಡ್ತಿದಾರೆ ಅಂತ ಹೊರಬಂದು ನೋಡಿದರೆ ಪುರೋಹಿತರು ಆ ನಸುಕಿನಲ್ಲೇ ಹೊಸ ದಟ್ಟಿಯುಟ್ಟು, ಹೊಸ ಶಲ್ಯ ಹೊದೆದು ಸಿದ್ಧರಾಗಿ ಕೂತಿದಾರೆ. ( ದಕ್ಷಿಣ ಕನ್ನಡದ ಆ ಕಾಲದ ಬ್ರಾಹ್ಮಣರು ಪಂಚೆಯೊಂದನ್ನ ಅಡ್ಡಲಾಗಿ,ಲುಂಗಿ ರೀತಿಯಲ್ಲಿ ಉಟ್ಟು, ಶರ್ಟ ಹಾಕದೇ ಕೇವಲ ಮೈ ಮುಚ್ಚುವಂತೆ ಪಂಚೆ ಹೊದೆದುಕೊಳ್ಳುತ್ತಿದ್ದರು. ಎಲ್ಲಿಗೆ ಹೋಗಬೇಕಾದರೂ) ಅಮ್ಮ ‘ ನಿಮಗೆ ಅಷ್ಟು ದೂರ ಹೋಗುಕಾತ್ತಾ, ಬ್ಯಾಡನಿ, ಅಂವ ಹೋಗಬರ್ಲಿ’ ಎನ್ನುತ್ತಿದ್ದರು.
ಕೊನೆಗೆ ಗೊತ್ತಾಗಿದ್ದೇನು ಅಂದರೆ ನಾನು ಹಿಂದಿನ ದಿನ ಕೋ.ಲ.ಕಾರಂತರ ಹತ್ತಿರ ಹೋಗ್ತೇನೆ ಎಂದು ಘೋಷಣೆ ಮಾಡಿದ ಕ್ಷಣದಿಂದ ಈ ಪುರೋಹಿತರು ಗೆಲುವಾಗಿಬಿಟ್ಟಿದ್ದರಂತೆ. ಪತ್ನಿಯ ಬಳಿ ‘ ನಾನೂ ಮಾಣಿ ಒಟ್ಟಿಗೆ ಹ್ವಾತೆ, ಕಾರಂತರನ್ನ ಕಂಡ್ಕ ಬತ್ತೆ’ ಎಂದು ಪೂಸಿ ಮಾಡಲು ಶುರು ಮಾಡಿದ್ದರಂತೆ. ಅಮ್ಮನಿಗೆ ಇಷ್ಟೊಂದು ಜೀರ್ಣವಾದ, ಶಾರೀರಿಕವಾಗಿ ಅಶಕ್ತರಾದ ಅವರನ್ನು ಕಳಿಸಲು ಭಯ. ಏನಾದರೂ ಆಗಿಬಿಟ್ಟರೆ? ಎನ್ನುವ ಕಾಳಜಿ ಬೆರೆತ ಹಿಂಜರಿತ. ಅಮ್ಮ ಎಷ್ಟೇ ಗಟ್ಟಿಧ್ವನಿ ಮಾಡಿದರೂ ಆ ಹಿರಿಯರು ಮಾತ್ರ ‘ ನಾ ಹ್ವಾಪುದೇ’ ಅಂತ.
ಆ ಕ್ಷಣದಲ್ಲಿ ಎಲ್ಲರ ಕಣ್ಣಿನಲ್ಲಿ ನಾನು ಅಪರಾಧಿ ಸ್ಥಾನದಲ್ಲಿದ್ದೆ. ನಾನು ಹೇಳದೇ ಹಾಗೇ ಕೋ.ಲ.ಕಾರಂತರನ್ನ ಕಂಡು ಬಂದಿದ್ದರೆ ಈ ಪ್ರಸಂಗ ಇರುತ್ತಿರಲಿಲ್ಲ. ಹಾಗಂತ ಪುರೋಹಿತರ ಪತ್ನಿ ಅಮ್ಮನ ಕಾಳಜಿಯನ್ನ ಕಡೆಗಣಿಸುವಂತಿರಲಿಲ್ಲ. ಒಂದೆರಡು ದಿನಕ್ಕೆ ಬಂದು ಹೋಗುವ ನಾನು ಪುರೋಹಿತರ ಆರೋಗ್ಯದ ಬಗ್ಗೆ ಆವಾಂತರ ಸೃಷ್ಟಿಸಿ ಹೋದರೆ. ಅವರನ್ನ ನೋಡಿಕೊಳ್ಳುವವರು ಆಕೆಯೇ ತಾನೇ. ಒಂದು ಕಡೆ ಪುರೋಹಿತರ ಕೊನೆಗಾಲದ ಆಶಯ, ಇನ್ನೊಂದೆಡೆ ಅಮ್ಮನ ಕಳಕಳಿ.. ಅಷ್ಟರಲ್ಲಾಗಲೇ ತರಗತಿಗೆ ಹೋಗುವ ಗುರುಗಳು, ಶಿಷ್ಯರೂ ಹೋಗಿಯಾಯ್ತು.
ನಾನು ಹೋಗುವದಂತೂ ಸಿದ್ಧವೇ. ಅಮ್ಮನಿಗೆ ಹೇಳಿದೆ ‘ ನಾನು ಇವರನ್ನ ಕರೆದುಕೊಂಡು ಹೋಗುತ್ತೇನೆ. ಅವರಿಗ್ಯಾಕೋ ಹುರುಪು ಬಂದಿದೆ. ತಡೆಯಬೇಡಿ. ಹಳೆಯ ಪರಿಚಿತರನ್ನ, ಗೆಳೆಯರನ್ನ ಕಾಣುವ ಹಂಬಲ ಅವರದ್ದು. ಕೊನೆಗಾಲದಲ್ಲಿ ಅದನ್ನೂ ಅನುಭವಿಸಲಿ. ಅವರನ್ನ ಕ್ಷೇಮವಾಗಿ, ಸುರಕ್ಷಿತವಾಗಿ ಕರೆದುಕೊಂಡು ಹೋಗಿ, ವಾಪಸ್ ಕರೆದುಕೊಂಡು ಬರುವ ಜವಾಬ್ದಾರಿ ನನ್ನದು. ಅವರಿಗೆ ಏನೂ ತೊಂದರೆಯಾಗುವದಿಲ್ಲ ಎನ್ನುವ ವಿಶ್ವಾಸ ನನಗಿದೆ. ಮತ್ತೆ ಬಂದ ನಂತರ ಇನ್ನಷ್ಟು ಗೆಲುವಾಗದಿದ್ದರೆ ಕೇಳಿ’ ಅಂದೆ. ಅಮ್ಮ ‘ನಿಂಗೆ ಕಷ್ಟವಾಗುತ್ತಲ್ಲ’ ಅಂದರು. ‘ ಇಂಥ ಕಷ್ಟಗಳು ನನಗೆ ಬೇಕು’ ಎಂದಷ್ಟೇ ಹೇಳಿ ಮನಸ್ಸಿನೊಳಗಿದ್ದ ದೊಡ್ಡ.ದೊಡ್ಡ ಮಾತುಗಳನ್ನ ಆಡದೇ ನುಂಗಿಕೊಂಡೆ. ನಾನು ಹೊರಟದ್ದೇ ಆ ಪುರೋಹಿತರು ‘ ಮಾಣಿ, ಹೊರಡುದೇಯಾ’ ಅಂತ ನನ್ನನ್ನ ಪ್ರಶ್ನಿಸಿ ಪತ್ನಿಗೆ ‘ಬರ್ತೆ’ ಅಂತಂದು ನಿಧಾನ ಹೆಜ್ಜೆ ಇಡುತ್ತ ನನ್ನೊಟ್ಟಿಗೆ ಹೆದ್ದಾರಿ ಅಂಚಿಗೆ ಬಂದರು.
(ಮುಂದುವರಿಯುವುದು)
ಗಂಗಾಧರ ಕೊಳಗಿ