ಆದ್ಯೋತ್ ಅಂಕಣದಲ್ಲಿ ಕೊಳಗಿ ನೆನಪು

ಕೋ..ಕಾರಂತ ಎಂಬ..
ಅವತ್ತು ಬೆಳಿಗ್ಗೆ ಹತ್ತು ಗಂಟೆಗೆ ಮೊದಲೇ ಆ ಪುರೋಹಿತರು ಮತ್ತು ನಾನು ಉಡುಪಿ-ಕುಂದಾಪುರ ನಡುವಿನ ಕೋಟದ ಹೆದ್ದಾರಿಗೆ ಬಂದು ಕುಂದಾಪುರದ ಕಡೆ ಹೋಗುವ ವಾಹನಕ್ಕಾಗಿ ಕಾಯುತ್ತ ನಿಂತೆವು.
ಆ ದಿನಗಳಲ್ಲಿ ಬಹುತೇಕ ಪ್ರಯಾಣಿಕರು ಬಸ್ ಅವಲಂಬಿಸಿರಲೇ ಇಲ್ಲ ಅಂತಾ ಈಗ ಅನಿಸುತ್ತದೆ. ಆ ದಿನಗಳಲ್ಲಿ ಗಮನಿಸಿದಂತೆ ಕುಂದಾಪುರ, ಉಡುಪಿ ನಡುವೆ, ಉಡುಪಿ, ಮಂಗಳೂರು ನಡುವೆ, ಮಂಗಳೂರು, ಪುತ್ತೂರು,ಸುಳ್ಯ ಮುಂತಾದ ದೊಡ್ಡ ಊರುಗಳ ನಡುವೆ ಟ್ಯಾಕ್ಸಿಗಳದ್ದೇ ದರ್ಬಾರ್. ಅದೂ ಅಂಬಾಸಡರ್ ಕಾರುಗಳು. ಒಂದರ ಹಿಂದೊಂದರಂತೆ ರೇಸ್ ಕಾರ್‍ಗಳಂತೆ ಬರುತ್ತಿದ್ದ ಅವುಗಳು ಲಾಂಗ್ ಸೀಟ್ ಜೊತೆಗೆ ಕಟ್ ಸೀಟುಗಳನ್ನು (ಅಂದರೆ ಮಧ್ಯ, ಮಧ್ಯದ ಊರುಗಳಲ್ಲಿ ಇಳಿಯುವ ಪ್ರಯಾಣಿಕರು) ತುಂಬಿಸಿಕೊಳ್ಳುತ್ತಿದ್ದರು. ಅಲ್ಲಿ, ಜಾತಿ, ಮತ, ಅಂತಸ್ತು, ಲಿಂಗ ಬೇಧಗಳಿರಲಿಲ್ಲ. ಹಾಗಂತ ಇಕ್ಕಟ್ಟಾಗೇನೂ ಇಡುಕುತ್ತಿರಲಿಲ್ಲ. ಮುಂದೆ ಚಾಲಕನನ್ನ ಬಿಟ್ಟರೆ ಎರಡು, ಹಿಂದೆ ಕನಿಷ್ಠ ನಾಲ್ಕು, ಇಲ್ವೇ ಐದು ಪ್ರಯಾಣಿಕರು. ಅವು ತುಂಬಾ ವೇಗವಾಗಿ ಓಡಲೇಬೇಕಿತ್ತು. ಇಲ್ಲವಾದರೆ ಖಾಸಗಿ ಬಸ್‍ಗಳಿಗೆ ಸ್ಪರ್ಧೆ ಕೊಡೋದು ಹೇಗೆ? ಓದುಗರಿಗೆ ಗೊತ್ತಿರಬಹುದು, ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಬಸ್‍ಗಳ ಅಬ್ಬರಾಟ! ಈ ಅಂಬಾಸಡರ್ ಕಾರುಗಳ ಚಾಲಕರು ಪರ್ಪೆಕ್ಟ ಡ್ರೈವರ್‍ಗಳೆನ್ನುವದರಲ್ಲಿ ಎರಡು ಮಾತೇ ಇಲ್ಲ. ಅಷ್ಟೊಂದು ವೇಗವಾಗಿ ಓಡಿಸಿದರೂ ಪ್ರಯಾಣಿಕರಿಗೆ ಗಾಭರಿಯಾಗದ ರೀತಿಯ ನೈಪುಣ್ಯ, ಕಾರು ಓಡಿಸುತ್ತಿದ್ದಂತೇ ಡ್ರೈವರ್, ಕಂಡಕ್ಟರ್ ಎರಡೂ ಪಾತ್ರವಹಿಸುತ್ತ ಪ್ರಯಾಣಿಕರಿಂದ ಹಣ ತೆಗೆದುಕೊಳ್ಳುವ, ಇಡೀ ನೋಟಾದರೆ ಅದಕ್ಕೆ ಚಿಲ್ಲರೆ ಕೊಡುವ ಕೌಶಲ್ಯ, ವೇಗವಾಗಿ ಓಡುವ ಕಾರನ್ನ ಅದೆಷ್ಟು ಮೃದುವಾಗಿ ನಿಲ್ಲಿಸಿ, ಇಳಿವರನ್ನು ಇಳಿಸಿ, ಏರುವವರಿದ್ದರೆ ಹತ್ತಿಸಿಕೊಂಡು ಮತ್ತೆ ಅಷ್ಟೇ ಮೃದುವಾಗಿ ಪಿಕಪ್ ತೆಗೆದುಕೊಳ್ಳುವ ಆ ಚಾಲಕರನ್ನ ಗಮನಿಸಲೆಂದೇ ನಾನು ಎಷ್ಟೋ ಬಾರಿ ಪುತ್ತೂರು-ಮಂಗಳೂರು , ಕುಂದಾಪುರ-ಉಡುಪಿ ನಡುವೆ ಇಂಥ ಟ್ಯಾಕ್ಸಿಗಳಲ್ಲಿ ಸಂಚರಿಸುತ್ತಿದ್ದೆ, ಅದು ಹುಚ್ಚೋ, ಮತ್ತೆನೋ ಗೊತ್ತಿಲ್ಲ. ವಿನಯಶೀಲರಾಗೇ ಇರುತ್ತಿದ್ದ ಆ ಟ್ಯಾಕ್ಸಿಗಳ ಚಾಲಕರು ಅಪಘಾತ ಮಾಡಿದ್ದರ ಬಗ್ಗೆ ಆಗೆಲ್ಲ ಕೇಳಿರಲೇ ಇಲ್ಲ. ಕೋಟದಲ್ಲಿದ್ದಾಗ ಮುಲ್ಕಿ, ಕುಂದಾಪುರ, ಕೋಟೇಶ್ವರ, ಸುರತ್ಕಲ್ ಮುಂತಾಗಿ ಹಲವೆಡೆ ತರಬೇತಿಯಲ್ಲಿದ್ದ ಗೆಳೆಯರು. ಗುರು ಧಾರೇಶ್ವರರ ಜೊತೆ ನಾನೂ ತಾಳಮದ್ದಲೆ, ಯಕ್ಷಗಾನಗಳಿಗೆ ಹೋಗುತ್ತಿದ್ದೆ. ಆಗೆಲ್ಲ ಇದೇ ಟ್ಯಾಕ್ಸಿಯೇ.
ಹೆದ್ದಾರಿಯಲ್ಲಿ ಕ್ಷಣಕ್ಕೊಂದರಂತೆ ಎರಡೂ ದಿಕ್ಕಿನಲ್ಲಿ ಸರಿದಾಡುತ್ತಿದ್ದ ಟ್ಯಾಕ್ಸಿ, ಬಸ್ಸುಗಳನ್ನ , ಅವುಗಳ ಹರಿದಾಟ, ಸರಿದಾಟಗಳನ್ನ ನೋಡುತ್ತ, ಯಾವುದಾದರೂ ಸೀಟುಗಳು ಲಭ್ಯವಿದ್ದ ಟ್ಯಾಕ್ಸಿ ನಮ್ಮೆದುರು ನಿಲ್ಲಬಹುದೇ? ಎಂದು ಕಾದೆವು.
ಸ್ವಲ್ಪ ಹೊತ್ತಿಗೆ ನಮ್ಮೆದುರು ಒಂದು ಟ್ಯಾಕ್ಸಿ ಗಕ್ಕನೆ ಬಂದು ನಿಂತಿತು. ಹಿಂದಿನ ಸೀಟಿನಲ್ಲಿ ಓರ್ವರೇ ಇದ್ದರು. ಮೊದಲು ಪುರೋಹಿತರನ್ನ ಒಳಗೆ ತೂರಿಸಿದೆ. ನಂತರ ನಾನು. ಈ ಟ್ಯಾಕ್ಸಿಗಳು ಒಂಥರಾ ಸ್ಟೇಶನ್‍ಗಳಲ್ಲಿ ಒಂದೇ ಒಂದು ನಿಮಿಷ ನಿಂತು ಹೊರಡುವ ಸುಪರ್ ಎಕ್ಸಪ್ರೆಸ್ ರೈಲುಗಳಿದ್ದಂತೆ. ನಾನು ತೂರಿಸಿದೆ ಅನ್ನುವದಕ್ಕಿಂತ ಅವರನ್ನು ಅನಾಮತ್ತಾಗಿ ಹೊತ್ತು ಒಳಗಿಟ್ಟೆ ಅಂದರೇ ಸರಿಯೇನೋ? ಯಾವ ತೊಂದರೆಯಿಲ್ಲದೇ ಕುಂದಾಪುರದ ಭಂಡಾರಕರ್ಸ ಕಾಲೇಜು ಎದುರಿನ ಸರ್ಕಲ್‍ನಲ್ಲಿ ಇಳಿದೆವು.
ಅಲ್ಲೇ ಎದುರುಗಡೆ ಸುತ್ತೆಲ್ಲ ಅಂಗಡಿಮಳಿಗೆಗಳು ಇರುವ, ನಡುವೆ ಮೋಹನ್‍ಭಾಗನ್ ಎನ್ನುವ ಹೆಸರಿನ ತೋಟ ಇದೆಯೆಂತಲೂ, ಅಲ್ಲಿ ಕೋ.ಲ.ಕಾರಂತರ ಮನೆ ಇರುವದಾಗಿಯೂ, ಕೇಳಿದರೆ ಯಾರೂ ತೋರಿಸುತ್ತಾರೆ ಅಂತ ಶಿವರಾಮ ಕಾರಂತರು ಗುರ್ತು ಹೇಳಿದ್ದರು. ಅಲ್ಲೇ ಒಬ್ಬರನ್ನು ಕೇಳಿದಾಗ ಸ್ವಲ್ಪ ದೂರ ನಮ್ಮ ಜೊತೆಗೇ ಬಂದು ಮುಖ್ಯ ರಸ್ತೆಯಿಂದ ಅಗಚಿಕೊಳ್ಳುವ ಮತ್ತೊಂದು ರಸ್ತೆಯಲ್ಲಿ ಅವರ ಮನೆ ಗೇಟು ಇರುವದನ್ನ ತೋರಿಸಿಕೊಟ್ಟು ಹೋದರು.
ನನಗೆ ಸಖೇದಾಶ್ಚರ್ಯ!. ನಾವೆಲ್ಲಿ ದಾರಿ ತಪ್ಪಿ ಬಂದೆವಾ? ಅಥವಾ ಶಿವರಾಮ ಕಾರಂತರು ಹೇಳಿದ್ದನ್ನ ನಾನು ತಪ್ಪಾಗಿ ಗ್ರಹಿಸಿದೇನಾ? ಅನುಮಾನ. ಸುತ್ತೆಲ್ಲ ಕಾಂಪ್ಲೆಕ್ಸಗಳಿರುವ ,ಅದರ ನಡುವೆ ಎರಡು ಎಕ್ರೆಗಳಷ್ಟು ವಿಸ್ತಾರವಾದ ತೋಟವಿದೆ ಅಂತ ಯಾರೂ ಊಹಿಸಲೂ ಶಕ್ಯವಿಲ್ಲ.
ಗೇಟು ಸರಿಸಿಕೊಂಡು ನಿಧಾನಕ್ಕೆ ಪುರೋಹಿತರ ಬೆನ್ನಿಗೆ ನನ್ನ ಕೈ ಆಧರಿಸಿಕೊಂಡು ಅವರ ಮನೆಯ ಎದುರು ನಿಂತೆವು. ಅಷ್ಟೊತ್ತಿಗಾಗಲೇ ನಾವು ಬಂದಿರುವದು ಮನೆಯೊಳಗಿದ್ದವರಿಗೆ ಕಂಡಿರಬೇಕು; ‘ಒಳಕ್ಕೆ ಬನ್ನಿ’ ಎಂದು ಅಷ್ಟೇನೂ ಗಟ್ಟಿಯಾಗಿರದ ಸ್ವರವೊಂದು ನಮ್ಮನ್ನು ಆಹ್ವಾನಿಸಿತು. ನನ್ನದೇ ಬಲದ ಮೂಲಕ ಪುರೋಹಿತರನ್ನ ಮೆಟ್ಟಿಲುಗಳ ಮೇಲೆ ಹತ್ತಿಸಿ, ಒಳಕ್ಕೆ ಕರೆದುಕೊಂಡು ಹೋದೆ. ಅಲ್ಲಿನ ಹಜಾರದಲ್ಲಿ ಓರ್ವ ವೃದ್ಧರು ಆರಾಮಾಸನದ ಮೇಲೆ ಕೂತವರು ನಮ್ಮನ್ನು ಕಂಡು ಕೂತವರು ಏಳುವ ಪ್ರಯತ್ನ ಮಾಡಿದರು. ಅವರು ಕೋ.ಲ.ಕಾರಂತರು.
ಬಹು ದಿನಗಳಿಂದ ಒಮ್ಮೆಯಾದರೂ ಕಾಣಬೇಕೆಂದು ಕನಸಿದ್ದ, ಎಲೆ ಮರೆಯ ಕಾಯಿಯಂತಿದ್ದು ಅಸೀಮ ಸಾಹಸಗಳನ್ನ ಮಾಡಿದ್ದ ಚಿರ ಯುವ ಮನಸ್ಥಿತಿಯ ಕಾರಂತರು ನಮ್ಮ ಎದುರು ಇದ್ದರು. ನಮಗೆ ಕುಳಿತುಕೊಳ್ಳಲು ತಿಳಿಸಿದ ಅವರು ಮನೆಗೆಲಸದಾಕೆಗೆ ಆಸರಿಗೆ ತರಲು ಸೂಚಿಸಿದರು. ನಮ್ಮಲ್ಲಿ ಯಾರೇ ಮನೆಗೆ ಬಂದರೂ ಸ್ವಲ್ಪ ಹೊತ್ತಿನಲ್ಲೇ ‘ಆಸರಿಗೆ’ ಎಂದು ಕೇಳುವದು ರೂಢಿ. ಆಸರಿಗೆ ಅಂದರೆ ಬಾಯಾರಿಕೆ ನೀಗಿಕೊಳ್ಳಲಿಕ್ಕೆ ನೀರೋ, ಮಜ್ಜಿಗೆಯೋ? ಎನ್ನುವದು. ಮುಂಚಿತವಾಗಿ ತಿಳಿಸದೇ ಬಂದ ಕಾರಣಕ್ಕೆ ಅವರಿಗೆ ನಮ್ಮ ಗುರ್ತು ಆಗದಿದ್ದುದರ ಕುರುಹು ಅವರ ಮುಖಭಾವದಲ್ಲಿ ಕಾಣುತ್ತಿತ್ತು. ನಾನಂತೂ ಅಪರಿಚಿತ. ಪುರೋಹಿತರ ಬಗ್ಗೆ ಹಳೆ ಪರಿಚಯವಿರುವದಾದರೂ ಎಷ್ಟು ವರ್ಷಗಳ ಹಿಂದೆ ಅವರನ್ನ ನೋಡಿದ್ದರೋ? ಅಲ್ಲದೇ ಇಬ್ಬರಿಗೂ ಸಾಕಷ್ಟು ವಯಸ್ಸಾಗಿತ್ತಲ್ಲ. ಶಾರೀರಿಕ ಬದಲಾವಣೆ, ದೃಷ್ಟಿ ಮಂದವಾಗುವದು ಇಂಥ ಕಾರಣಗಳೂ ಇರುತ್ತಲ್ಲ. ನಾನು ನನ್ನ ಪ್ರವರವನ್ನ ಚುಟುಕಾಗಿ ಹೇಳಿ ಪುರೋಹಿತರ ಬಗ್ಗೆ ಕೆಲವು ಮಾತು ಹೇಳಿದ್ದೆನಷ್ಟೇ. ‘ ಛೇ, ಪರಿಚಯ ಹತ್ತಲೇ ಇಲ್ಲ ನೋಡಿ. ಪರಸ್ಪರ ನೋಡದೇ ಯಾವ ಕಾಲವಾಯ್ತೋ?’ ಎಂದು ಕುಳಿತಲ್ಲೇ ಎರಡೂ ಹಸ್ತ ಜೋಡಿಸಿ ಪುರೋಹಿತರಿಗೆ ನಮಿಸಿದರು.
ಆಸರಿಗೆ ಕುಡಿದ ನಂತರ ಪುರೋಹಿತರ ಬಳಿ ‘ಇವರ ಜೊತೆ ಸ್ವಲ್ಪ ಮಾತನಾಡುತ್ತೇನೆ, ನೀವು ವಿರಾಮ ಮಾಡಿ’ ಎಂದವರು ನನ್ನ ಜೊತೆ ಮಾತಿಗೆ ಶುರುವಿಟ್ಟರು. ಈಗ ಅವನ್ನ ನೆನಪಿಸಿಕೊಂಡು ಬರೆಯುವಾಗ ಅಂದಿನ ಅವರ ಮುಖಭಾವ ಅಚ್ಚೊತ್ತಿದಂತಿದೆ. ಇನ್ನೂ ಚಿಕ್ಕ ಪ್ರಾಯದ ನಾನು ಅವರನ್ನು ಕಾಣಲೆಂದು ಬಂದದ್ದು ಅವರಿಗೆ ಆಶ್ಚರ್ಯ, ಅನುಮಾನ, ಸಂತೋಷ..ಎಲ್ಲವೂ ಮಿಕ್ಸ ಆದಂತಿದ್ದ ಅವರು ‘ಶಿರಸಿ-ಸಿದ್ದಾಪುರದವರಲ್ವಾ?’ ಎಂದು ವಿಶೇಷ ಪ್ರೀತಿಯಿಂದಲೇ ಮಾತನಾಡಿದರು. ಬಹುತೇಕ ನಮ್ಮಲ್ಲಿನ ಎಲ್ಲರಿಗಾದಂತೆ ನನಗೂ ಈ ಅನುಭವವಾಗಿದೆ. ಹೊರ ಜಿಲ್ಲೆಯ ಅಪರಿಚಿತರು ಸಿಕ್ಕಾಗ ‘ನಾನು ಸಿದ್ದಾಪುರದವನು’ ಎಂದಾಗ ‘ಯಾವುದು? ಶಿರಸಿ – ಸಿದ್ದಾಪುರವಾ?’ ಎಂದು ಕೇಳಿಯೇ ಕೇಳುತ್ತಾರೆ. ಶಿರಸಿಗೂ,ಸಿದ್ದಾಪುರ ಅವಳಿಗಳು ಎನ್ನುವ ರೀತಿಯಲ್ಲಿ.
ನಾವಿಬ್ಬರೂ ಸುಮಾರು ಒಂದೂವರೆ ತಾಸಿಗೂ ಹೆಚ್ಚು ಕಾಲ ಮಾತನಾಡಿದೆವು.
ನನಗೆ ಮತ್ತೊಮ್ಮೆ ಅವರನ್ನ ಕಾಣಲಾಗುತ್ತದೆಯೋ ಇಲ್ಲವೋ? ಸಿಕ್ಕಾಗ ಮನ:ಪೂರ್ತಿ ಮಾತನಾಡುವ ಎನ್ನುವ ತುಡಿತ, ಅವರಿಗೆ ತಾನು ಎಷ್ಟೋ ವರ್ಷದ ಹಿಂದೆ ಅಲೆದಾಡಿದ ದೂರದ ಊರಿನ ಓರ್ವ ಹುಡುಗ ತನ್ನ ಕಾಣಲು ಬಂದು, ಹಿಂದಿನ ಅನುಭವದ ಪುನರಾಗಮನ ಮಾಡುತ್ತಿದ್ದಾನಲ್ಲ ಎನ್ನುವ ಒಳ ಸಂತೋಷವಿರಬಹುದು- ತಮ್ಮ ವೃದ್ದಾಪ್ಯ, ಅದರ ಸಂಕಟ, ಸುಸ್ತುಗಳ ನಡುವೆ ಬಡತನದ ಮಗುವೊಂದು ಎಲ್ಲೋ ನೆಂಟರ ಮನೆಗೆ ಹೋದಾಗ ಅಪರೂಪಕ್ಕೆ ಸಿಗುವ ಆಟಿಕೆಯೊಂದನ್ನ ಹಿಡಿದುಕೊಂಡು ಮನಸೋಇಶ್ಚೆ ಆಡುತ್ತಲ್ಲ, ಯಾರೂ ಹೋಗದ ಕುಗ್ರಾಮದ ಮೂಲೆಗೆ ಹೋದಾಗ ಅಲ್ಲಿನ ಮನೆಯೊಂದರ ವಯಸ್ಕ ಮಹಿಳೆ ಪುಲ್‍ಸ್ಟಾಪ್ ಇಲ್ಲದಂತೆ ಮಾತನಾಡುತ್ತಾರಲ್ಲ, ಈಗ ಬಿಟ್ಟರೆ ಮತ್ತೆ ಸಿಗದು ಎನ್ನುವ ಪೂರ್ವಪ್ರಜ್ಞೆಯಲ್ಲಿ ( ಇಂಥ ಅನುಭವವನ್ನು ನನಗಾಗಿದೆ ಮತ್ತು ಬೇರೆಯವರಿಗೂ ಕೊಟ್ಟಿದ್ದೇನೆ) ವರ್ತಿಸುವ ರೀತಿಯಲ್ಲಿ ಕೋ.ಲ.ಕಾರಂತರು ಕಂಡಿದ್ದರು.
ಅವರಿಗೆ ಖುಷಿ ಅಂದರೆ ಶಿವರಾಮ ಕಾರಂತರು ತನ್ನನ್ನ ಭೇಟಿ ಮಾಡಿ ಎಂದು ಸೂಚಿಸಿದ್ದು, ತಮ್ಮ ಕುಟುಂಬದ ಪುರೋಹಿತರನ್ನ ತಮ್ಮಲ್ಲಿಗೆ ಕರಕೊಂಡು ಬಂದದ್ದು, ಅಪರೂಪಕ್ಕೆ ಯಾರೋ ಹುಡುಕಿಕೊಂಡು ಬಂದದ್ದು ..ಎಲ್ಲವೂ ಅವರಲ್ಲಿ ಹೊಸ ಚೈತನ್ಯ ಹುಟ್ಟಿಸಿರಬೇಕು? ಗೊತ್ತಿಲ್ಲ. ನಾವು ಅವರನ್ನು ಕಂಡಾಗ ಇದ್ದ ಉದಾಸ ಈಗ ಇರಲಿಲ್ಲ. ಅವರ ಜೊತೆ ಮಾತನಾಡುತ್ತಲೇ ಪಕ್ಕದಲ್ಲಿ ಕೂತಿದ್ದ ಪುರೋಹಿತರನ್ನ ನೋಡಿದರೆ ಅವರು ಆ ಆರಾಮ ಖುರ್ಚಿಯಲ್ಲಿ ಸುಖವಾಗಿ ನಿದ್ದೆ ಮಾಡುತ್ತಿದ್ದರು.
…………………………………………………
ಗಂಗಾಧರ ಕೊಳಗಿ
( ಈ ಅಂಕಣದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಲು ಬಯಸುವವರು ಈ ಕೆಳಗಿನ ನಂ.ಗೆ ಮೆಸೆಜ್ ಕಳುಹಿಸಬಹುದು ಯಾವುದೇ ಕಾರಣಕ್ಕೂ ಕಾಲ್ ಮಾಡಬೇಡಿ ಮೊ.ನಂ.8105440217 )

About the author

Adyot

Leave a Comment

Use the form on right side to Send your query related to Advertisement, to Send News and to Share Your Feedback!

Ad/Send News/Feedback

Copyright © 2025. Adyot News | All Rights Reserved