ನಿಷ್ಠುರ ವ್ಯಕ್ತಿತ್ವದ,ನಿರ್ವಂಚನೆಯ ಮನಸ್ಸಿನ ಗೆಳೆಯ ಕೆ.ಆರ್.ಪ್ರಕಾಶ
ಒಡ್ಡೋಲಗ ಹಿತ್ಲಕೈ- ಸಂಸ್ಕೃತಿ ಸಂಪದ ಸಿದ್ದಾಪುರ ,ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವುಗಳ ಸಹಯೋಗದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ, ಪ್ರಖ್ಯಾತ ರಂಗಕರ್ಮಿ ಕೆ.ಆರ್.ಪ್ರಕಾಶ್ ಅವರ ನೆನಪಿನಲ್ಲಿ ಆಯೋಜಿಸಿರುವ ನಾಟಕೋತ್ಸವದ ಪ್ರಯುಕ್ತ ನನ್ನ ನೆನಪು…
ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ
ಮದುವೆಗೋ,ಮಸಣಕೋ ಹೋಗೆಂದ ಕಡೆಗೋಗು
ತಲೆ ಕುಸಿಯೇ ನೆಲವಿಹುದು- ಮಂಕುತಿಮ್ಮ
ನಮ್ಮನ್ನೆಲ್ಲ ಅನಿರೀಕ್ಷಿತವಾಗಿ ಅಗಲಿಹೋದ ಗೆಳೆಯ ಕೆ.ಆರ್.ಪ್ರಕಾಶ್. ನಿಷ್ಠುರ ವ್ಯಕ್ತಿತ್ವ, ನಿರ್ವಂಚನೆಯ ಮನಸ್ಸು, ಅನಿಸಿದ್ದನ್ನ ನೇರವಾಗಿ ಹೇಳುವ ಮತ್ತು ಬರೆಯುವ ವ್ಯಕ್ತಿತ್ವವಿದ್ದ ಪ್ರಕಾಶ್ ಈಗ ಇಲ್ಲ ಎನ್ನುವದೇ ದೊಡ್ಡ ಕೊರತೆಯಾಗಿ ಕಾಡುತ್ತಿದೆ.
‘ಇಲ್ಲವಾದವರ ಬಗ್ಗೆ ಬರೆಯುವದು ಸುಲಭ; ತೀರಿಕೊಂಡವರೇನು ಪ್ರತ್ಯಕ್ಷರಾಗಿ ಬರೆದದ್ದು ಸರಿಯಿಲ್ಲ ಎಂದು ಜಗಳ ಮಾಡುತ್ತಾರಾ? ಸತ್ತವರ ಬಗ್ಗೆ ಬೇಕಾದಂತೆ ಬರೆಯಬಹುದು’ ಎನ್ನುವ ಕುಹಕದ ಮಾತುಗಳು ಅದ್ಯೋತ ಅಂಕಣದಲ್ಲಿ ನಾನು ಒಡನಾಡಿದ, ಈಗ ಇಲ್ಲವಾದ ಹಿರಿಯರ ಬಗ್ಗೆ ಬರೆಯುತ್ತಿದ್ದುದರ ಬಗ್ಗೆ ಅಲ್ಲಿ,ಇಲ್ಲಿ ಮಾತನಾಡುವದರ ಬಗ್ಗೆ ಕಿವಿಗೆ ಬೀಳುತ್ತಿತ್ತು. ಆ ಟೀಕೆ ಮಾಡುವವರು ವಿಮರ್ಶಕರು; ವಿಶ್ಲೇಷಕರು. ಅವರಿಗೆ ಎಲ್ಲ ಸ್ವಾತಂತ್ರವೂ ಇದೆ. ಆದರೆ ಬರೆಯುವ ನನಗೆ ಆತ್ಮಸಾಕ್ಷಿ ಅಂತ ಇರುತ್ತಲ್ಲ, ಈವರೆಗೂ ಅದನ್ನ ಉಳಿಸಿಕೊಂಡು, ಕಾಪಾಡಿಕೊಂಡು ಬಂದವನು ನಾನು. ಎಲ್ಲೇ ಬೇಕಾದರೂ ಹೇಳುವ ಸಾಮಥ್ರ್ಯ ಇದೆ ಎಂದರೆ ಅಹಂಕಾರದ ಮಾತಲ್ಲ. ಇದೇ ಗುಣ ಪ್ರಕಾಶ್‍ಗೂ ಇತ್ತು.
ಕಳೆದ ವರ್ಷ ಕೊರೊನಾ ವಕ್ಕರಿಸುವದಕ್ಕಿಂತ ಮುಂಚೆ ಗೆಳೆಯ, ಪ್ರಮುಖ ರಂಗಕರ್ಮಿ ಗಣಪತಿ ಹಿತ್ಲಕೈಯವರು, ವಿಜಯ ಹೆಗಡೆ ದೊಡ್ಮನೆಯವರು ಸಿದ್ದಾಪುರದ ಶಂಕರಮಠದಲ್ಲಿ ನಾಟಕೋತ್ಸವ ಆಯೋಜಿಸಿದಾಗ ಪ್ರಕಾಶ್ ಬಹುಷ: ಮೂರು ದಿನಗಳ ಕಾಲ ಇಲ್ಲೇ ಇದ್ದರು. ಹೊಸತಾಗಿ ರಚಿತವಾದ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯನಾಗಿ, ಅಕಾಡೆಮಿಯ ಮೊದಲ ಕಾರ್ಯಕ್ರಮವನ್ನ ನಮ್ಮ ಸಿದ್ದಾಪುರಕ್ಕೆ ಒದಗಿಸಿಕೊಟ್ಟ ಹಿರಿಮೆ ಅವರದ್ದು. ಅತ್ಯಂತ ಚೇತೋಹಾರಿಯಾದ, ಗುಣಮಟ್ಟದ ಕಾರ್ಯಕ್ರಮ ಅದಾಗಿತ್ತು. ತಾನು ಅಕಾಡೆಮಿಯ ಸದಸ್ಯ, ಹಲವಾರು ನಾಟಕಗಳನ್ನ, ಅದರಲ್ಲೂ ವೈವಿಧ್ಯಮಯವಾದ ನಾಟಕಗಳನ್ನ ನಿರ್ದೇಶಿಸಿ, ಪ್ರದರ್ಶನಗೊಳಿಸಿದ ಯಾವ ಹಮ್ಮು ಇಲ್ಲದೇ, ಕಾಣದೇ ನಾಲ್ಕಾರು ವರ್ಷಗಳಾದರೂ ಮೊದಲಿನ ಪ್ರೀತಿ, ಸಲಿಗೆ, ಅದೇ ವಕ್ರತುಂಡ ಮಾತುಗಳಲ್ಲಿ ಸ್ನೇಹವನ್ನ ಹಂಚಿಕೊಂಡಿದ್ದರು. ನನ್ನದೇ ಬೈಕಿನಲ್ಲಿ ಕೂತು ಪೇಟೆಯೆಲ್ಲ ಓಡಾಡಿದ್ದರು.
ಇಲ್ಲವಾದ ವ್ಯಕ್ತಿಯ ಬಗ್ಗೆ ಬರೆಯುವದು ಸುಲಭವಲ್ಲ. ಪತ್ರಕರ್ತರು ದಿನಾ ಕನಿಷ್ಠ ಎರಡಾದರೂ ನಿಧನ ವಾರ್ತೆ ಬರೆಯುತ್ತಾರೆ. ಸ್ವಲ್ಪ ಹತ್ತಿರದವನಾದರೆ, ಅದರಲ್ಲೂ ಏನಾದರೂ(?) ಆಗಿದ್ದರೆ ನಾಲ್ಕು ಪ್ಯಾರಾ ಜಾಸ್ತಿ. (ಗುರುತು,ಪರಿಚಯ ಇರಲಿ, ಇಲ್ಲದಿರಲಿ ನಿಧನರಾದ ಸುದ್ದಿ ಬಂದ ಯಾವುದೇ ವ್ಯಕ್ತಿಗೂ ಜಾತಿ,ಅಂತಸ್ತು,ಅಧಿಕಾರ ಗಮನಿಸದೇ ಮನಸ್ಸಿನಲ್ಲೇ ಅಂತಿಮ ನಮನ ಸಲ್ಲಿಸಿ, ನನ್ನ ಪತ್ರಿಕೆಗೆ ಸುದ್ದಿ ತಲುಪಿಸುತ್ತೇನೆ. ಇದ್ಯಾಕೆ ಇಲ್ಲಿ ಹೇಳಬೇಕು ಅಂತ ಓದುಗರು ಕೇಳಬಹುದು. ಇದು ನನಗೆ ಕೊಟ್ಟ ಅವಕಾಶ. ಇಲ್ಲಿ ಹೇಳದೇ ಬೇರೆಲ್ಲಿ ಹೇಳಲಿ?)
ಕೆ.ಆರ್.ಪ್ರಕಾಶ್ ಬಗ್ಗೆ ಬರೆಯಲು ಕೂತಾಗ ನನಗೆ ತೊಡಕಾಗುತ್ತಿರುವದು ಬಹುವಚನ ಪದಪ್ರಯೋಗದ ಕಾರಣಕ್ಕೆ. ಆತ ನನಗೆ ಕಳೆದ 23 ವರ್ಷಗಳಿಂದ ಪರಿಚಿತ. 1998ರಲ್ಲಿ ನಾನು ‘ಕನ್ನಡ ಜನಾಂತರಂಗ’ ಪತ್ರಿಕೆಯ ವರದಿಗಾರಿಕೆಯ ಜೊತೆಗೆ ‘ಹಾಯ್ ಬೆಂಗಳೂರ್’ಗೆ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುವಾಗ ಪ್ರಕಾಶ್ ತೀರಾ ಪರಿಚಿತರಾದರು. ಅಷ್ಟರೊಳಗೆ ಆತ ಗ್ರಾಮೀಣ ಭಾಗದಲ್ಲಿ ಹೊಸ ಅಭಿರುಚಿಯ ಹಲವಾರು ನಾಟಕಗಳನ್ನ ನಿರ್ದೇಶಿಸಿ, ಪ್ರದರ್ಶನ ಮಾಡಿದ್ದರು. ನನ್ನ ಅಕ್ಕ ವನಜಾ ಕೂಡ ಮಕ್ಕಳ ನಾಟಕಗಳನ್ನ ನಿರ್ದೇಶಿಸುವಾಗ ಸಹಾಯ ಮಾಡಿದ್ದರಿಂದ ಅವರ ಹೆಸರು ಪರಿಚಿತವಾಗಿತ್ತು. ನನಗೆ ತೀರಾ ಪರಿಚಿತರಾಗುವಾಗ ಆತ ಸಂಯುಕ್ತ ಕರ್ನಾಟಕ ಪತ್ರಿಕೆಯ ಶಿರಸಿ ವರಿದಿಗಾರರಾಗಿದ್ದರು. ‘ಹಾಯ್ ಬೆಂಗಳೂರ್’ ಗೆ ಬೇಕಾದ ಸುದ್ದಿಗಳ ಬಗ್ಗೆ ನಾನು, ಆತ ಶಿರಸಿ ತಾಲೂಕಿನ ಹಲವು ಮೂಲೆಗಳನ್ನು ಅಲೆದಿದ್ದೇವೆ.
ಪ್ರಕಾಶ್ ನನಗೆ ಏಕ ವಚನದ ಗೆಳೆಯ, ನಾನು ನಿರಂತರವಾಗಿ, ನಿಶ್ಚಿತವಾಗಿ ಭೇಟಿಯಾಗದಿದ್ದರೂ ಕಂಡಾಕ್ಷಣ ಅದೇ ಏಕವಚನ ಪದ ಪ್ರಯೋಗದಲ್ಲೇ ಮಾತು ಆರಂಭ. ಅವರ ಜೊತೆ ವರ್ಷಕ್ಕೆ ನಾಲ್ಕಾರು ಬಾರಿ ಭೇಟಿ ಅಷ್ಟೇ. ಆದರೆ 2008ರಲ್ಲಿ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆ ನಡೆದಾಗ ನಾನು, ಅವರು ಎದುರುಬದುರಾದೆವು. ಕೆಲವೇ ಕೆಲವು ಮಾರ್ಗದರ್ಶಕರ, ಆತ್ಮೀಯರ ಒತ್ತಾಯದ ಮೇರೆಗೆ ನಾನು ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸಿದೆ. ಆ ನಂತರ ಪ್ರಕಾಶ್ ಕೂಡ ನಾಮಪತ್ರ ಸಲ್ಲಿಸಿದರು. ನಾಮಪತ್ರ ಹಿಂದಕ್ಕೆ ಪಡೆಯುವ ದಿನದ ಮೊದಲು ಶಿರಸಿ ಸಾರ್ಮಾಟ್ ಹೊಟೆಲ್ ಸಭಾಂಗಣದಲ್ಲಿ ಎಲ್ಲ ಪತ್ರಕರ್ತರ ಸಭೆ ನಡೆಯಿತು. ಅಂತಿಮವಾಗಿ ನಾಮಪತ್ರ ಸಲ್ಲಿಸಿದ ಇಬ್ಬರೂ ಪರಸ್ಪರ ಮಾತಾಡಿಕೊಳ್ಳಲಿ ಎನ್ನುವ ತೀರ್ಮಾನವಾಯಿತು. (ಚುನಾವಣಾಧಿಕಾರಿಯಾಗಿ ಆರ್.ವಿ.ಭಾಗ್ವತ ಸಿರ್ಸಿಮಕ್ಕಿ ಅವರು ಇದ್ದ ನೆನಪು. ತಪ್ಪಿದ್ದರೆ ಕ್ಷಮಿಸಿ). ನಾವಿಬ್ಬರೂ ಮಾತನಾಡಿದೆವು; ಅವರ ಮನಸ್ಥಿತಿ ಅರ್ಥ ಆಗಿದ್ದು ಅಲ್ಲಿ, ಅವರು ಕೇವಲ ನಿಷ್ಠುರ, ನೇರವಂತಿಕೆಯ ಮನುಷ್ಯನಾಗಿರುವದರ ಜೊತೆಗೆ ನಮ್ಮ ಗ್ರಾಮೀಣ ವಾಡಿಕೆಯ ಮಾತಿನಲ್ಲಿ ಹೇಳುವದಾದರೆ ಒಣಶುಂಠ ಮನಸ್ಥಿತಿಯವರೂ ಆಗಿದ್ದರು. ನಾನು ಆಗ ಮನೆ ಕಟ್ಟಿಸುವ ಒತ್ತಡದಲ್ಲಿದ್ದೆ. ಮತ್ತೆ ನನಗೂ ಇಂಥ ಹುದ್ದೆ ಬೇಕು ಅಂತ ಹಂಬಲವೂ ಇರಲಿಲ್ಲ. ‘ ನಾನು ನಾಮಿನೇಷನ್ ಹಿಂದಕ್ಕೆ ತಗೀತೇನೆ, ನೀನೇ ಅವಿರೋಧವಾಗಿ ಆಯ್ಕೆ ಆಗು’ ಅಂತಾ ಬೇಡಿದರೂ, ‘ನಾನು ಹಿಂದಕ್ಕೆ ಪಡೆಯಲ್ಲ, ಸ್ಪರ್ಧೆ ಮಾಡ್ತೀನಿ. ನೀ ಗೆದ್ರೂ ನಾ ಗೆದ್ದಾಂಗೆ, ನಾ ಗೆದ್ರೂ ನೀ ಗೆದ್ದಾಂಗೆ’ ಎಂದು ಗುಟುರು ಹಾಕಿದ ಮನುಷ್ಯ ಆತ. ಆತನ ಮಾತಿಗೆ ನನಗೂ ಒಣ ಹಠ ಕೆರಳಿತು. ಚುನಾವಣೆ ನಡೆಯಿತು. ಚುನಾವಣೆ ದಿನ ನಾನು, ಅವರು ಒಟ್ಟಿಗೇ ಇದ್ದೆವು. ಮತ ಹಾಕಲು ಬಂದ ಪತ್ರಕರ್ತ ಸ್ನೇಹಿತರಿಗೆಲ್ಲ ಆಶ್ಚರ್ಯ. ಹಾವು-ಮುಂಗುಸಿಯಂತೆ ಇರಬೇಕಾದವರು ಹೀಗಿದಾರಲ್ಲಾ ಅಂತ. ಪ್ರಕಾಶ್‍ಗೆ ಮಧ್ಯಾಹ್ನ ಹಸಿವಾಯ್ತು, ಭಾನುವಾರ ಆದ್ದರಿಂದ ಹತ್ತಿರದ ಎಲ್ಲ ಹೊಟೇಲ್‍ಗಳು ಬಂದ್. ಅವನ ಗೆಳೆಯರ ಬಳಿ ಊಟ ತರಿಸಿದರು. ಜೊತೆಗೆ ನನಗೂ!. ನಾನು ಹೊರಗಡೆ ಇರುವಾಗ ಮಧ್ಯಾಹ್ನ ಊಟ ಮಾಡೋದು ಕಡಿಮೆ, ಹಾಗಾಗಿ ನಾನು ಬೇಡ ಅಂದೆ. ಆದರೆ ಪ್ರಕಾಶ್ ಕಕ್ಕುಲತೆ ಇದೆಯಲ್ಲ, ಅದು ದೊಡ್ಡದು.
ಚುನಾವಣೆಯಲ್ಲಿ ಗೆದ್ದವನು ನಾನು. ಎಣಿಕೆ ಅರ್ಧ ಆಗುತ್ತಿದ್ದಂತೆ ಸಟ್ಟನೆ ಎದ್ದು ನನಗೆ ವಿಶ್ ಮಾಡಿ ಎದ್ದು ಹೋದ ಅವರು ಫಲಿತಾಂಶ ಘೋಷಣೆಯಾದ ನಂತರ ನನಗೆ ಕರೆ ಮಾಡಿ ವಿಶ್ ಮಾಡಿದ್ದಲ್ಲದೇ, ಹೋಗುವಾಗ ತನ್ನ ಕಚೇರಿಗೆ ಬಂದುಹೋಗಿ ಎಂದರು. ನಾನು ಹೋಗಿ ಮಾತನಾಡಿ ಬಂದಿದ್ದೆ.
ಇವೆಲ್ಲವನ್ನ ಕಳೆದ ವರ್ಷ ಸಿದ್ದಾಪುರದ ಶಂಕರಮಠದ ಆವರಣದಲ್ಲಿ ಕುಳಿತು ಮಾತನಾಡುವಾಗ ಹಂಚಿಕೊಂಡಾಗ ‘ ಏ, ಮಾರಾಯಾ, ಅದೆಲ್ಲ ಬಿಡಾ, ಹಾಂಗೆ ಇರವಾ, ಅಷ್ಟೆಲ್ಲ ಆದ್ರೂ ನಾನು, ನೀನು ಹತ್ತಿರದ ದೋಸ್ತರೇ ಅಲ್ದನಾ?’ ಅಂತ ಕೇಳಿದ್ದರು.
ಪ್ರಕಾಶ್ ಓರ್ವ ರೆಸ್ಟಲೆಸ್ ಮನುಷ್ಯ; ನಿಜ ಮನುಷ್ಯ. ತನ್ನ ಬದುಕಿನ ಅವಧಿಯಲ್ಲಿ ಸಾಕಷ್ಟು ಸಾಹಸಗಳನ್ನ, ವಿಪರೀತ ಸಾಹಸಗಳನ್ನ ರಂಗಭೂಮಿ ಮತ್ತು ಪತ್ರಿಕೋದ್ಯಮದಲ್ಲಿ ಸಾಧಿಸಿದ ವ್ಯಕ್ತಿ ಆತ. ನಾನು ಆತ ಮಾಡಿದ ನಾಟಕಗಳ ಬಗ್ಗೆ, ಅವರ ಚಟುವಟಿಕೆಗಳ ಬಗ್ಗೆ ಬರೆಯುವ ಅವಶ್ಯಕತೆಯೇ ಇಲ್ಲ, ಎಲ್ಲರಿಗೂ ಗೊತ್ತಿರುವ ಸಂಗತಿ.
ಕಳೆದ ವರ್ಷ ನಾಟಕೋತ್ಸವ ಮುಗಿಸಿ ಹೋದ ಪ್ರಕಾಶ್ (2020ರ ಸೆಪ್ಟೆಂಬರ್‍ನಲ್ಲಿ ಅಂತ ನೆನಪು) ಫೋನ್ ಮಾಡಿದ್ರು. ತೀರಾ ಸುಸ್ತಾದಂತಿದ್ದ ಧ್ವನಿಯಲ್ಲೇ ಲವಲವಿಕೆಯಲ್ಲಿ ಮಾತನಾಡಿ ಕೊನೆಗೆ ‘ ನನಗೆ ನಾಳೆ ಆಫರೇಷನ್ ಇದ್ದು. ಗಂಟಲಿಗೆ ಆಗಿರೋದಕ್ಕೆ ಸುಮಾರು ಒಂದು ತಿಂಗಳು ಮಾತನಾಡಲು ಸಾಧ್ಯವಾಗೋದಿಲ್ಲ ಅಂತ ಡಾಕ್ಟರ್ ಹೇಳಿದಾರೆ. ಸರಿಯಾದ್ರೆ ಮತ್ತೆ ಮಾತಾಡ್ತೇನೆ. ಇಲ್ಲವಾದ್ರೆ ಇದೇ..’ ಎಂದು ಬಿಟ್ಟರು. ‘ ಇಲ್ಲ ಮಾರಾಯಾ, ನೀನು ಮತ್ತೆ ನನ್ನ ಜೊತೆ ಮಾತಾಡ್ತ್ಯಾ’ ಎಂದೆ. ನಕ್ಕ ಅಷ್ಟೇ. ಮತ್ತೆ ಮಾತನಾಡಲೇ ಇಲ್ಲ.
ನಾನು ಪ್ರಕಾಶ್ ಬಗ್ಗೆ ಹೊಗಳಿ ಬರೆಯಲಾರೆ. ಇಲ್ಲವಾದವರ ಬಗ್ಗೆ ನೈಜತೆಯನ್ನ ಹೇಳುವದು ಬಿಟ್ಟರೆ ‘ಇಂದ್ರ,ಚಂದ್ರ’ ಅಂದರೆ ಅವರಿಗೂ ಅಲ್ಲಿಯೇ ಬೇಸರವಾಗಬಹುದು.
ಓರ್ವ ಪ್ರತಿಭಾವಂತ, ನೇರ,ನಿಷ್ಠುರ ನಡೆ ನುಡಿಯ, ಮೂಡಿಯಾದ ವ್ಯಕ್ತಿತ್ವದ, ಅನಿಸಿದ್ದನ್ನ ರಪ್ಪನೆ ರಾಚುವಂತೆ ಹೇಳುವ ಎದೆಗಾರಿಕೆಯ ಗೆಳೆಯ ಇಲ್ಲವಾಗಿದ್ದು ನನಗೂ ಕಳೆದ ನವೆಂಬರ್ 18ರಿಂದಲೂ ಘಾಸಿಗೊಳಿಸುತ್ತಲೇ ಇದೆ. ಶಂಕರಮಠ ಮತ್ತು ನನ್ನ ಕಚೇರಿಯಲ್ಲಿ ಕುಳಿತು ಮಾತನಾಡಿದ್ದು ಧ್ವನಿಸುತ್ತಲೇ ಇದೆ. ನನ್ನ ಬೈಕ್ ಹಿಂಬದಿ ಪ್ರಕಾಶ್ ಕೂತಿದಾನೆ ಅನಿಸುತ್ತಲೇ ಇದೆ.- ಇವೆಲ್ಲವುದರ ಅರ್ಥ ಕೆ.ಆರ್.ಪ್ರಕಾಶ್ ನಮ್ಮೊಳಗೆ ಇದ್ದಾರೆ ಅಂತಲೇ ಅಲ್ಲವೇ?
ಗೆಳೆಯ ಗಣಪತಿ ಹಿತ್ಲಕೈ ನಿಜವಾಗಿಯೂ ಸ್ತುತ್ಯಾರ್ಹ ಕಾರ್ಯ ಮಾಡುತ್ತಿದ್ದಾರೆ. ಜೀವನವನ್ನೇ ರಂಗಭೂಮಿಗೆ ಕೊಟ್ಟ ಕೆ.ಆರ್.ಪ್ರಕಾಶ್ ನೆನಪಿನಲ್ಲಿ ಮಾ.23,24,25ರಂದು ರಾಜ್ಯಮಟ್ಟದ ನಾಟಕೋತ್ಸವ ಆಯೋಜಿಸಿದ್ದಾರೆ. ನಮ್ಮ ಗೆಳೆಯ ಮತ್ತು ರಂಗಭೂಮಿಗೆ ಹೆಚ್ಚಿನ ಕೊಡುಗೆ ಕೊಟ್ಟ ರಂಗಭೂಮಿಯ ಶ್ರಮಿಕನಿಗೆ ನಾವೆಲ್ಲ ಒಡ್ಡೋಲಗದ ಜೊತೆಗೂಡಿ ನಮನ ಸಲ್ಲಿಸೋಣ.
…………….
ಗಂಗಾಧರ ಕೊಳಗಿ
(ಕೋ.ಲ.ಕಾರಂತರ ಬರಹ ಮುಂದಿನ ವಾರ)