ಆದ್ಯೋತ್ ಅಂಕಣದಲ್ಲಿ ಕೊಳಗಿ ನೆನಪು

ಕೋ..ಕಾರಂತ ಎಂಬ..
ನಾವು ಮಾತನಾಡುತ್ತ ಕುಳಿತಂತೆ ಕಾರಂತರಿಗೆ ತ್ರಾಸಾಗುತ್ತಿರಬಹುದು ಎಂದು ಅನಿಸುತ್ತಿತ್ತು. ಆದರೆ ಅವರು ಮಾತು ನಿಲ್ಲಿಸಲು ಸಿದ್ಧರಿರದಂತೆ ಕಂಡರು. ಮೆಲುವಾಗಿ, ಆದರೆ ಸ್ಪಷ್ಟವಾಗಿ ಮಾತನಾಡುತ್ತಿದ್ದರು. ಅವರಿಗೆ ತೊಂದರೆ ಕೊಡುತ್ತಿರಬಹುದು ಎಂದು ನನಗನ್ನಿಸುತ್ತಿತ್ತು. ಹಾಗೇ ಮಾತನಾಡುತ್ತಿದ್ದಾಗ ‘ ನೀವು ಕಟ್ಟಾ ನಾಸ್ತಿಕರಂತೆ ಹೌದಾ?’ ಎಂದು ಕೇಳಿಬಿಟ್ಟೆ. ಅದು ಅಧಿಕಪ್ರಸಂಗವಾಯ್ತೇ? ಎಂದು ನಂತರ ಅನಿಸಿತು. ಕೇಳಿಯಾಗಿಬಿಟ್ಟಿದೆ, ಇನ್ನೇನು ಎಂದು ಗಟ್ಟಿಧೈರ್ಯ ಮಾಡಿದೆ. ಅದಕ್ಕೆ ಏನೂ ಹೇಳಲಿಲ್ಲ. ನಕ್ಕರು ಅಷ್ಟೇ! ನಾವು ಒಳಕ್ಕೆ ಬರುವಾಗ ಅವರ ಜಗಲಿಯಾಚೆಯ ಕೋಣೆಯೊಂದರಲ್ಲಿ ರಥದಾಕೃತಿಯ ಮುಚ್ಚುಗೆ ಇರುವ ದೊಡ್ಡ ಪೀಠವೊಂದರಲ್ಲಿ ಸಾಕಷ್ಟು ದೊಡ್ಡದೇ ಆದ ಸಾಯಿಬಾಬಾ ಅವರ ಫೋಟೊ ಕಂಡಿತ್ತು. ಅದಕ್ಕೆ ಹೂವಿನ ಮಾಲೆ ಮುಂತಾದ ಅಲಂಕಾರವೂ ಇದ್ದ ಕಾರಣ ಪೂಜೆ ನಡೆದ ಕುರುಹೂ ಕಾಣುತ್ತಿತ್ತು. ಅಲ್ಲದೇ ಕೋ.ಲ.ಕಾರಂತರು ನಾಸ್ತಿಕರಾದರೂ ಅವರ ಪತ್ನಿ ಸಾಯಿಬಾಬಾ ಅವರ ಭಕ್ತೆ ಎನ್ನುವ ಬಗ್ಗೆ ಕೇಳಿದ್ದೆ. ಅವೆಲ್ಲ ನೆನಪಾಗಿ ಮತ್ತೊಂದು ಅಧಿಕಪ್ರಸಂಗದ ಪ್ರಶ್ನೆ ಇಟ್ಟೆ. ‘ ನೀವು ನಾಸ್ತಿಕರು, ಆದರೆ ನಿಮ್ಮ ಪತ್ನಿ ಸಾಯಿಬಾಬಾರ ಭಕ್ತರು. ಇದೊಂಥರ ವಿಚಿತ್ರವಾಗಿ ಕಾಣ್ಸುತ್ತೆ’ ಎಂದೆ. ಮಂದವಾಗಿ ನಸುನಕ್ಕವರು ಬಾಗಿಸಿದ ಮುಖವನ್ನು ಮೇಲೆತ್ತಿ ನಿಧಾನವಾಗಿ ‘ ಮಗೂ, ಮನುಷ್ಯನಾದವರು ಅವರವರ ಪಾಡಿಗೆ ಸ್ವತಂತ್ರರು ಎನ್ನುವದು ನನ್ನ ಅನಿಸಿಕೆ. ಮತ್ತೊಬ್ಬನ ಸ್ವಾತಂತ್ರ್ಯವನ್ನ ಇಲ್ಲವಾಗಿಸುವ ಹಕ್ಕು ನನಗಿಲ್ಲ. ಅದು ಅವಳ ವೈಯುಕ್ತಿಕ ಸ್ವಾತಂತ್ರ್ಯ. ಅವಳಿಗೆ ಅದು ಇಷ್ಟ ಅಥವಾ ಮುಖ್ಯ. ನಾನು ದೇವರನ್ನ ನಂಬೋದಿಲ್ಲ, ಹಾಗಾಗಿ ನೀನೂ ನಂಬಬೇಡ ಎನ್ನಲು ಹಕ್ಕು ನನಗಿಲ್ಲ. ಅವಳಿಗೆ ಆ ನಂಬಿಕೆಯಲ್ಲಿ ತೃಪ್ತಿ ಸಿಗುತ್ತದೆ ಎನ್ನುವ ಕಾರಣಕ್ಕೇ ನಾನೇ ಅವೆಲ್ಲವನ್ನ ಒದಗಿಸಿಕೊಟ್ಟೆ..’ ಎಂದವರು ಸುಮ್ಮನಾದರು. ಎಷ್ಟೊಂದು ಅರ್ಥವತ್ತಾದ ಮಾತುಗಳು ಎನ್ನುವದು ಆ ನಂತರದಲ್ಲಿ ಆಗಾಗ ನೆನಪಿಸಿಕೊಳ್ಳುವಾಗ ಅನಿಸುತ್ತದೆ. ಸುತ್ತಲಿನ ಬಿಕ್ಕಟುಗಳಿಗೆ, ಅನಗತ್ಯ ಸಂಘರ್ಷಗಳಿಗೆ ಈ ಮಾತುಗಳಲ್ಲಿ ಪರಿಹಾರವಿದೆ ಅನ್ನಿಸುತ್ತದೆ.

ಆ ನಂತರವೂ ನನ್ನಲ್ಲಿ ಹಲವು ಮಾತುಗಳಿದ್ದವು. ಮುಖ್ಯವಾಗಿ ಅವರು ಕುಂದಾಪುರದಲ್ಲಿ ಅಣ್ಣಪ್ಪ ಕಾರಂತರೆನ್ನುವವರ ಜೊತೆ ನಿಂತು ದಲಿತ ಸಮುದಾಯದ ಕೊರಗ ಮಕ್ಕಳಿಗೆ ಶಾಲೆ ಮಾಡಿದ್ದು, ಅವರ ಹಾಸ್ಟೆಲಿನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದು, ಆ ಕಾರಣದಿಂದಲೇ ಜಾತಿಯವರಿಂದ, ಊರಿನವರಿಂದ ಅಘೋಷಿತ ಬಹಿಷ್ಕಾರ ಅನುಭವಿಸಬೇಕಾಗಿ ಬಂದದ್ದರ ಕೇಳಬೇಕೆಂದಿತ್ತು. ನಂತರ ಊರವರ ಸಹಕಾರದೊಂದಿಗೆ ಅವರೇ ಮುಂದೆ ನಿಂತು ಅಭಿವೃದ್ಧಿಪಡಿಸಿದ ಕಟ್ಟಿದ ಕೋಟದ ಹೈಸ್ಕೂಲಿನ ಆಡಳಿತ ಮಂಡಳಿ ಕಾರ್ಯದರ್ಶಿ ಹುದ್ದೆಯನ್ನು -ನಾಲ್ಕಾರು ವರ್ಷಗಳ ಹಿಂದೆ ವೃತ್ತಿಯಲ್ಲಿದ್ದಾಗ ದೇವರಿಲ್ಲ ಎಂದು ಮಕ್ಕಳಿಗೆ ಪಾಠ ಮಾಡುತ್ತಾರೆ ಎನ್ನುವ ಸಣ್ಣ ಆಪಾದನೆಯ ಮೂಲಕ ಅಮಾನವೀಯವಾಗಿ ಅವಮಾನಿಸಿ, ಆ ಮೂಲಕ ಹುದ್ದೆಯನ್ನು ತೊರೆಯುವಂತೆ ಮಾಡಿದ ಘಟನೆಗಳ ಬಗ್ಗೆ ಕೇಳಬೇಕು ಅನ್ನಿಸುತ್ತಿದ್ದರೂ ಸುಮ್ಮನಾದೆ. ಆ ಜೀವಕ್ಕೆ ಹಳೆಯ ನೆನಪುಗಳನ್ನು ಕೆದಕಿ ಘಾಸಿ ಮಾಡುವದು ಬೇಡ ಅನ್ನಿಸಿತ್ತು.( ವಿಸ್ಮಯ ಅಂದರೆ ಆಗ ಮುಂದೊಮ್ಮೆ ನಾನೂ ಈ ರೀತಿ ಅಘೋಷಿತ, ಅಗೋಚರ ಬಹಿಷ್ಕಾರ ಎದುರಿಸಬೇಕಾಗಿ ಬರಬಹುದು ಎನ್ನುವದು ಹೇಗೆ ಗೊತ್ತಾಗಬೇಕು? ತ್ರಿಕಾಲ ಜ್ಞಾನಿ ನಾನಲ್ಲವಲ್ಲ. ಕಾರಣ ಮತ್ತು ಕಾಲ ಬೇರೆಯಾಗಿದ್ದರೂ ನನ್ನ ಜಾತಿ ಮತ್ತು ಸಮಾಜದಿಂದ ನಾನು ಬಹಳಷ್ಟು ಮಾನಸಿಕ ಹಿಂಸೆಗೆ ಒಳಗಾದ ಸಂದರ್ಭ ನೆನಪಿಸಿಕೊಂಡರೆ.. )
ನಾವಿಬ್ಬರೂ ಮೌನವಾಗಿಬಿಟ್ಟೆವು. ಸ್ವಲ್ಪ ಹೊತ್ತಿನ ನಂತರ ‘ ಮಗೂ, ಯಾರೇ ಆಗಲಿ, ಯಾರೂ ತಾನು ಜೀವಂತವಿದ್ದಾಗ ದುಡಿದದ್ದನ್ನ ಬೇರೆಯವರ ಹೆಸರಿಗೆ ಮಾಡಬಾರದು. ಅದರಿಂದ ದೊರೆಯುವದು ಪ್ರತಿಕ್ಷಣದ ಹಿಂಸೆ’ ಎಂದರು. ಅವರ ಧ್ವನಿಯಲ್ಲಿ ಕಂಪನಗಳಿದ್ದವು. ಸುಧಾರಿಸಿಕೊಂಡು ‘ ನೋಡು, ಆಗಾಗ ತಮ್ಮ( ಶಿವರಾಮ ಕಾರಂತ)ಬಂದು ನೋಡಿಕೊಂಡು ಹೋಗುತ್ತಾನೆ. ಅವನ್ನ ಬಿಟ್ಟರೆ ನಿನ್ನಂಥ ಅಪರೂಪದವರೇ’ ಎಂದವರು ಸುಮ್ಮನಾದರು.
ನಾನು ಪಕ್ಕದಲ್ಲಿ ನಿದ್ದೆ ಹೋಗಿದ್ದ ಪುರೋಹಿತರನ್ನ ಮೃದುವಾಗಿ ತಟ್ಟಿ ಎಬ್ಬಿಸಿದೆ. ‘ ಕೂತಲ್ಲೇ ಜೊಂಪು ಬಂತ್..’ ಎಂದರು. ಕಾರಂತರು ತೋಟದ ಕೆಲಸದವನನ್ನ ಕರೆಯಿಸಿ ‘ ಇಕಾ, ಇವರಿಗೆ ತೋಟ ತೋರಿಸು’ ಎಂದವರು ‘ ತೋಟ ನೋಡಿ ಬಾ, ನಾವಿಬ್ರೂ ಒಂದಿಷ್ಟು ಮಾತಾಡ್ತೇವೆ’ ಎಂದರು.
ಅದೊಂದು ಅಪರೂಪದ ತೋಟ. ಅಲ್ಲಿ ಫಲ, ಹೂ ಕೊಡುವ ಬಹುತೇಕ ಎಲ್ಲ ಸಸ್ಯಗಳು ಇದ್ದವು. ಕೇಳದ, ನೋಡದ ಗಿಡ,ಮರಗಳು. ಕಾರಂತರ ಬದುಕಿನ ಆಸಕ್ತಿಯೊಂದರ ಕಾರ್ಯಕ್ಷೇತ್ರ ಅದಾಗಿತ್ತು. ಸುಮಾರು ಮುಕ್ಕಾಲು ಗಂಟೆ ಕಾಲ ತೋಟ ಸುತ್ತಾಡಿ ಬಂದೆ.
ಮಧ್ಯಾಹ್ನವಾಗುತ್ತ ಬಂದಿತ್ತು. ಪುರೋಹಿತರು ಮಾತು ಮುಗಿಸಿ, ಹೊರಡಲು ಸಿದ್ಧರಾಗಿದ್ದರು. ನಾನು ಕಾರಂತರಿಗೆ ಮತ್ತೊಮ್ಮೆ ನಮಿಸಿ, ಪುರೋಹಿತರನ್ನ ನಿಧಾನವಾಗಿ ನಡೆಸಿಕೊಂಡು ಹೊರಬಂದೆ.(ಬದುಕಿನಲ್ಲಿ ಮತ್ತೆ ಇಲ್ಲಿಗೆ ಬರಲಾಗುತ್ತದೆಯೋ ಇಲ್ಲವೋ ಎನ್ನುವ ವಿಷಾದದಲ್ಲೇ ಮತ್ತೊಮ್ಮೆ ಕಾರಂತರನ್ನ, ಅವರ ತೋಟವನ್ನ ನೋಡಿದ ನೆನಪು ಈಗಲೂ ಅಚ್ಚಳಿಯದೇ ಉಳಿದಿದೆ.

rpt

ಸರ್ಕಲ್‍ಗೆ ಬಂದು ಪ್ರಾಯಶ: ಕೋ.ಲ.ಕಾರಂತರೇ ನೆಟ್ಟು, ಬೆಳೆಸಿದ ಮರವಾಗಿರಬಹದು, ಅದರ ನೆರಳಲ್ಲಿ ನಿಂತ ಸ್ವಲ್ಪ ಹೊತ್ತಿಗೇ ಟ್ಯಾಕ್ಸಿ ಸಿಕ್ಕಿತು. ಅದರಲ್ಲಿ ಕೋಟಕ್ಕೆ ಬಂದಿಳಿದೆವು. ಆ ಬಿಸಿಲಲ್ಲಿ ಸುಮಾರು ದೂರ ಪುರೋಹಿತರನ್ನ ನಡೆಸಿಕೊಂಡು ಹೋಗಬೇಕಿತ್ತು. ಕಾಲಿಗೆ ಪಾದರಕ್ಷೆಯನ್ನೂ ಹಾಕದ ಆ ನಿಷ್ಠಾವಂತ ಬ್ರಾಹ್ಮಣ ಕಾದ ನೆಲದಲ್ಲಿ ಹೆಜ್ಜೆ ಊರಿ ನಡೆಯಲು ಕಷ್ಟಪಡುತ್ತಿದ್ದರು. ಒಂದಷ್ಟು ದೂರ ಬಂದ ನಂತರ ಅವರು ಮೆಲುವಾಗಿ ‘ಮಗೂ’ ಅಂತ ಕರೆದರು. ‘ ಒಂದ್ ಮಾತ ಹೇಳ್ತೆ, ಯಾರಿಗೂ ಹೇಳ್ಲಿಕ್ಕಿಲ್ಲ, ಆಯ್ತಾ’ ಎಂದವರು ಭರವಸೆ ನೀಡುವ ಕೋರಿಕೆಯ ನೋಟ ಬೀರಿದರು. ನನಗೆ ಗೊಂದಲವಾಯ್ತು. ಏನು, ಎಂತದ್ದಕ್ಕೆ ಹಾಗೇ ಕೇಳ್ತಾರೆ ಗೊತ್ತಾಗಲಿಲ್ಲ. ‘ ಯಾರಿಗೂ ಹೇಳೋದಿಲ್ಲ, ಎಂತದ್ದು ಹೇಳಿ’ ಎಂದೆ.
ನಿಧಾನಕ್ಕೆ ತಮ್ಮ ಪಂಚೆಯ ಸೊಂಟಪಟ್ಟಿಯಿಂದ ನೋಟುಗಳ ಪಿಂಡಿಯನ್ನ ಹೊರತೆಗೆದರು. ಅಚ್ಚರಿಯ ಜೊತೆಗೆ ಕಕ್ಕಾಬಿಕ್ಕಿಯಾದೆ. ನಾವು ಹೋಗುವಾಗ ಅವರ ಬಳಿ ಹಣವೇನೂ ಇರಲಿಲ್ಲ. ನನ್ನಿಂದ ಪ್ರಶ್ನೆ ಬರುವ ಮುಂಚೆಯೇ ‘ ಮಗೂ, ನೀನು ತೋಟ ನೋಡೋದಕ್ಕೆ ಹೋದ್ಯಲ್ಲಾ, ಆಗ ನಾವು ಮಾತಾಡ್ತ ಕೂತಿತ್ತಲ್ಲ, ಆಗ ಕಾರಂತರು ಕೊಟ್ಟದ್ದು. ನಮ್ಮ ಪುರೋಹಿತರಾಗಿದ್ದ ನೀವು ಮನೆಗೆ ಬಂದಿದ್ರೀ. ಇದು ನಾ ಕೋಡೋ ಗೌರವ ಅಂತಾ ಇಕಾ, ಇಷ್ಟೊಂದು ದುಡ್ಡು ಕೊಟ್ಟು ನಮಸ್ಕರಿಸಿಬಿಟ್ರಾ’ ಎಂದವರು ಸ್ವಲ್ಪ ತಡೆದು ‘ ಎಂತಾ ದೊಡ್ಡ ಮನಸ್ಸು ಅಲ್ದಾ, ನಾ ಕೊಟ್ಟದ್ದು ಯಾರ್ಗೂ ಹೇಳ್ಬೇಡಿ ಅಂದಿದ್ರೂ.’ ಎಂದರು. ಅವರೂ ನನ್ನಂತೆಯೇ ಧಿಗ್ಭ್ರಮೆಗೆ ಒಳಗಾಗಿದ್ದರು! ಏನಿಲ್ಲವೆಂದರೂ ಕನಿಷ್ಠ 2-3 ಸಾವಿರ ರೂ.ಇರಬಹುದಾದ ಆ ಹಣದ ಪಿಂಡಿಯನ್ನ ನನ್ನತ್ತ ಚಾಚಿ ‘ ಮಗಾ, ಕಾರಂತರನ್ನ ನೋಡ್ಬೇಕು ಅಂತ ತುಂಬಾ ಆಸೆಯಿತ್ತು. ನಿನ್ನಿಂದ ಅವ್ರನ್ನ ನೋಡೋಕಾಯ್ತು, ಇಲ್ದಿದ್ರೆ ನಾನೆಲ್ಲಿ ಕಾಣ್ತಿದ್ದೆ. ನೀನೇ ದುಡ್ಡು ಖರ್ಚು ಮಾಡಿ ಕರ್ಕೊಂಡೋದೆ. ತಗಾ, ಇದ್ರಲ್ಲಿ ಒಂದಿಷ್ಟು ಇಟ್ಕಾ’ ಅಂದರು. ನಾನು ‘ ನೀವೇ ಇಟ್ಕಳಿ, ಯಾವಾಗ್ಲಾದ್ರೂ ನೆರವಾಗುತ್ತದೆ. ನಾನೆಷ್ಟು ಖರ್ಚು ಮಾಡಿದ್ದೆ. ಏನೂ ಇಲ್ಲ’ ಎಂದು ನಿರಾಕರಿಸಿದೆ.
ನೂರು ರೂಪಾಯಿ ದೇಣಿಗೆ, ದಾನ ಕೊಟ್ಟು ಐನೂರು ರೂಪಾಯಿ ಪ್ರಚಾರ ಪಡೆಯುವ ಈ ಕಾಲದಲ್ಲಿ ಈಗಲೂ ಆ ಘಟನೆ ನೆನಪಾಗುತ್ತಿರುತ್ತದೆ. ತಾನು ಕೊಟ್ಟದ್ದು ಇನ್ನೊಬ್ಬರಿಗೆ ಗೊತ್ತಾಗಬಾರದು ಎನ್ನುವ ಕಾರಂತರಂತ ಮೌಲ್ಯವುಳ್ಳ ಮನಸ್ಸು, ಪಡೆದದ್ದರ ಕುರಿತು ತನ್ನೊಳಗೆ ಇಟ್ಟಕೊಳ್ಳಲಾಗದೇ ಬೇರೊಬ್ಬರಲ್ಲಿ ಹಂಚಿಕೊಳ್ಳುವ ಪುರೋಹಿತರಂಥ ಕಾರುಣ್ಯಭರಿತ ಮನಸ್ಸುಗಳು ಈಗ ವಿರಳವಾಗಿದೆಯಲ್ಲ ಎನ್ನುವ ಸಂಕಟವೂ ಆಗುತ್ತದೆ.
ಬಹುತೇಕ ಈ ಎಲ್ಲ ವೃದ್ದ ಜೀವಗಳನ್ನ ನೋಡಿ, ಅವರ ಮನಸ್ಸನ್ನ ಅರಿತು, ಅವರೇ ತಾವಾಗಿ ಶಿವರಾಮ ಕಾರಂತರು ‘ ಬೆಟ್ಟದ ಜೀವ’ ಎನ್ನುವ ಅಪೂರ್ವ ಕಾದಂಬರಿಯನ್ನ ಬರೆದರೇನೋ? ಅನ್ನಿಸುತ್ತದೆ.
ನಾನು ಕೋ.ಲ.ಕಾರಂತರನ್ನ ಭೇಟಿಯಾದಾಗಲೇ ಅವರಿಗೆ ಸುಮಾರು 88 ವರ್ಷ. ಶಿವರಾಮ ಕಾರಂತರಿಗೆ ಅದಕ್ಕಿಂತ 5 ವರ್ಷ ಕಡಿಮೆಯಿದ್ದೀತು. ಓರ್ವ ವೃದ್ದನನ್ನ ಮತ್ತೊರ್ವ ವೃದ್ದ ಭೇಟಿಯಾಗಿ, ಏಕಾಕಿತನವನ್ನ, ಒಬ್ಬಂಟಿತನದ ಸಂಕಟವನ್ನ ಪರಸ್ಪರ ಕಡಿಮೆ ಮಾಡಿಕೊಳ್ಳುವ ಅನಿವಾರ್ಯತೆ ಆಗಿನಿಂದ ಈಗ, ಬಹುಷ: ಮುಂದೆಯೂ ವಿಸ್ತರಿಸಿಕೊಳ್ಳುತ್ತದೆಯೇನೋ. ಶಿವರಾಮ ಕಾರಂತರು ಅಣ್ಣ ಒಂದಿಷ್ಟು ಸಮಯವಾದರೂ ನನ್ನಂಥ ಕಿರಿಯನ ಜೊತೆ ಕಳೆದು ಹಗುರವಾಗಲಿ ಎಂದು ಆಶಿಸಿ, ನನಗೆ ಅವರಲ್ಲಿ ಹೋಗಲು ಸೂಚಿಸಿದ್ದರೇನೋ. ನನ್ನ ದುರ್ದೈವ, ಮತ್ತೆ ಅವರನ್ನ ಕಾಣಲಾಗಲಿಲ್ಲ.
ನೆನಪಿನ ದಾರಿಯಲ್ಲಿ ದೊರೆತ ಹಿರಿಯರು:
ಬದುಕಿನ ಈವರೆಗಿನ ದಾರಿಯಲ್ಲಿ ಕೋ.ಲ.ಕಾರಂತರು, ಶಿವರಾಮ ಕಾರಂತರು, ಪುರೋಹಿತರು ಮುಂತಾದ ಹಿರಿಯ ಜೀವಗಳು ಒಂದಿಷ್ಟು ಕಾಲ ದೊರೆತರಲ್ಲ, ಅದು ನನ್ನ ಭಾಗ್ಯ. ಅದರಂತೆ ಈವರೆಗೆ ನೆನಪುಗಳಲ್ಲಿ ಬರಹವಾಗಿ ಮೂಡಿಬಂದ ಕೆ.ವಿ.ಸುಬ್ಬಣ್ಣ, ಪೂರ್ಣಚಂದ್ರ ತೇಜಸ್ವಿ, ಲಂಕೇಶ್, ಅನಂತಮೂರ್ತಿ, ರವಿ ಬೆಳಗೆರೆ ಮುಂತಾದವರು ಬದುಕಿದ್ದಾಗ ದಯಪಾಲಿಸಿದಂತೆ ಈ ಬರವಣಿಗೆಯ ಮೂಲಕ ಕರಗಿಹೋದಂತಿರುವ ಜೀವನಾಸಕ್ತಿಯನ್ನ, ಚೈತನ್ಯವನ್ನ ಮರುಪ್ರಾಪ್ತಿಸಿದ್ದಾರೆ.
ನಾನು ಇಂಥ ಧೀಮಂತರನ್ನ ಕಂಡಿದ್ದೆನೇ? ಅವರ ಜೊತೆ ಸಾಂಗತ್ಯ ಹೊಂದಿದ್ದೆನೇ? ಎನ್ನುವ ಅನುಮಾನ ಒಮ್ಮೊಮ್ಮೆ ನನಗೂ ಆಗುತ್ತದೆ. ( ಬಹುತೇಕ ಓದುಗರಿಗೂ ಹಾಗೆ ಅನಿಸಿರಲೂ ಸಾಕು) ಅದು ಕಾಲದ ಜೊತೆ ಹರಿದುಹೋದ ಕ್ಷಣಗಳು. ಆದರೆ ಇಲ್ಲವಾದ ಆ ಹಿರಿಯರ ಜೊತೆಗಿನ ಒಡನಾಟದ ಬಗ್ಗೆ ಒಂದು ಶಬ್ದವನ್ನೂ ಕಲ್ಪಿಸಿಕೊಂಡು ಬರೆದಿಲ್ಲ. ಕಲ್ಪಿಸಿಕೊಂಡು ಬರೆದು ದೊಡ್ಡವನಾಗುವ ಸಣ್ಣತನಕ್ಕೆ ಒಳಗಾಗಿಲ್ಲ ಎನ್ನುವದು ಆತ್ಮವಿಶ್ವಾಸದಿಂದ ಹೇಳುವ ಮಾತು. ಮನಸ್ಸಿನ ಗರ್ಭದಲ್ಲಿ ಹುದುಗಿದ ಹಳೆಯ ನೆನಪುಗಳನ್ನ ಕೊಕ್ಕೆ ಹಾಕಿ ಎಳೆದು, ಮರು ನಿರೂಪಿಸುವ ಕೆಲಸ ತುಂಬಾ ಹಿಂಸೆ ಕೊಡುತ್ತದೆ. ನೋವು, ವಿಷಾದ, ಸಂಕಟ, ಸುಖ, ಖುಷಿ ಎಲ್ಲರದ ಸಮ್ಮಿಶ್ರಣವಾಗಿ ಹೊರಬರುತ್ತದೆ.
ಈಗ ಗೋಪಾಲಕೃಷ್ಣ ಅಡಿಗರ ‘ಭೂತ’ ಎನ್ನುವ ಕವಿತೆಯೊಂದರ ಸಾಲು ನೆನಪಾಗುತ್ತಿದೆ.
ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣ;
ಭತ್ತಗೋಧುವೆ ಹಣ್ಣು ಬಿಟ್ಟ ವೃಂದಾವನ,
ಗುಡಿ ಗೋಪುರಗಳ ಬಂಗಾರ ಶಿಖರ
######
ಗಂಗಾಧರ ಕೊಳಗಿ

( ಕಳೆದ 32 ವಾರಗಳಿಂದ ಆದ್ಯೋತ್ ಅಂಕಣದಲ್ಲಿ ಕೊಳಗಿ ನೆನಪು ಬರಹದ ಮೂಲಕ ತಮ್ಮ ನೆನಪುಗಳೊಂದಿಗೆ ಹಲವು ಹಿರಿಯ ಸಾಹಿತಿಗಳ ಬದುಕಿನ ಒಂದು ಮಜಲನ್ನು ತೆರೆಯುವ ಮೂಲಕ ಆದ್ಯೋತ್ ಓದುಗರಿಗೆ ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ ಗಂಗಾಧರ ಕೊಳಗಿಯವರಿಗೆ ಆದ್ಯೋತ್ ಬಳಗದಿಂದ ಧನ್ಯವಾದಗಳು)

About the author

Adyot

Leave a Comment