ಆದ್ಯೋತ್ ಅಂಕಣದಲ್ಲಿ ಕೊಳಗಿ ನೆನಪು

ಹೊಸ ದಿಕ್ಕಿನ ಹರಿಕಾರ ಪಿ.ಲಂಕೇಶ****
“ಎಲ್ಲಿದ್ದಿ ಇಲ್ಲಿತಂಕ, ಎಲ್ಲಿಂದ ಬಂದ್ಯವ್ವ, ನೀನಕಂಡು ನಾ ಯಾಕೆ ಮರುಗಿದೆನೋ
ನೂರಾರು ಗಾವುದ ಬಂದಿದ್ದೆ ಕಾಣವ್ವ, ಬಂದಿಲ್ಲ ಅನ್ಸಿತ್ತು ನೋಡಿದರೆ… ”
ಆ ದಿನ ಯಾವ ವಾರ ಎನ್ನುವದು ನೆನಪಿಲ್ಲ, ಲಂಕೇಶ್ ಪತ್ರಿಕೆ ಕಾರ್ಯಾಲಯ ಜೇನುಗೂಡಾಗಿತ್ತು. ಎಲ್ಲರೂ ಗಡಿಬಿಡಿಯಲ್ಲಿದ್ದರು. ಪ್ರಾಯಶ: ಎರಡು,ಮೂರು ದಿನದಲ್ಲಿ ಪತ್ರಿಕೆ ಪ್ರಿಂಟ್ ಗೆ ಹೋಗುವದಿತ್ತೇನೋ? ದಿನಪತ್ರಿಕೆ ಮತ್ತು ವಾರ ಪತ್ರಿಕೆಗಳಿಗಿರುವ ವ್ಯತ್ಯಾಸ ಆ ಹೊತ್ತಿಗಾಗಲೇ ನನಗೆ ಚೂರು ಚೂರೇ ಗೊತ್ತಾಗಿತ್ತು. ದಿನಪತ್ರಿಕೆಯದು ಪ್ರತಿ ದಿನದ ಯುದ್ಧ, ವಾರಪತ್ರಿಕೆಯದು ಸ್ವಲ್ಪ ವಿರಾಮವಿರುವ ಯುದ್ಧ. ಇಂದಿನ ದಿನದಲ್ಲಾದರೆ ಎಲ್ಲ ಲ್ಯಾಪ್ಟಾಪ್, ಸಿಸ್ಟಮ್ ಎದುರು ಮಾಡಬೇಕಾದ ಕೆಲಸವನ್ನ ಆಗ ಹಾಳೆಗಳ ಮೇಲೆ ಬರೆದೇ ಮಾಡಬೇಕಾಗಿತ್ತಲ್ಲ.

rpt

ಹೋಗುವಾಗ ನೇರ ಹೋಗಿದ್ದ ಲಂಕೇಶ್ ವಾಪಸ್ಸಾಗುವಾಗ ಅತ್ತಿತ್ತ ಇದ್ದ ಟೇಬಲ್‍ಗಳ ಎದುರು ನಿಂತು, ಉಪ ಸಂಪಾದಕರುಗಳ ಬಳಿ ಮಾತನಾಡಿ, ಏನೋ ಸೂಚನೆಗಳನ್ನ ಕೊಡುತ್ತ ಬರುತ್ತಿದ್ದರು. ಹಾಗೇ ಬರುವಾಗ ಕೊನೆಯಲ್ಲಿ ನಿಂತಿದ್ದ ನಾನು ಕಂಡಿದ್ದೆ. ನೇರ ನನ್ನನ್ನ ನೋಡಿದರು. ನಿಜಕ್ಕೂ ನನಗೆ ಭಯವಾಗತೊಡಗಿತ್ತು. ಬೈಸಿಕೊಳ್ಳಬೇಕಾಗುತ್ತೇನೋ? ಅಂತ. ಕೆಲಸದಲ್ಲಿ ಬ್ಯೂಸಿ ಇರುವಾಗ ಬರುವ ನನ್ನಂಥ ಅನಪೇಕ್ಷಿತರಿಗೆ ಜಾಡಿಸಿಕಳಿಸಿದ್ದನ್ನ ಅವರು ಪತ್ರಿಕೆಯಲ್ಲಿ ಬರೆದಿದ್ದು ಓದಿದ್ದೆ. ನನಗೂ ಅಂಥ ಪ್ರಥಮ ಚುಂಬನಂ ದಂತ ಭಗ್ನಂ ಎನ್ನುವ ಅನುಭವವಾಗುತ್ತೇನೋ? ಎಂದು ಗಾಭರಿಯಲ್ಲಿದ್ದೆ. ಹಾಗಾಗಲಿಲ್ಲ! ಗೇಟು ದೂಡುವಾಗಿನ ನನ್ನ ಮುಖ, ಸೆಕ್ಯೂರಿಟಿ ಮನುಷ್ಯ ಹೇಳಿದ್ದು ನೆನಪಾಗಿರಬೇಕೇನೋ? ‘ ಬನ್ನಿ’ ಎಂದಷ್ಟೇ ಹೇಳಿ ತಮ್ಮ ಛೇಂಬರಿನೊಳಕ್ಕೆ ಹೋದರು. ನಾನು ಹಿಂಬಾಲಿಸಿದೆ.

ಲಂಕೇಶರ ಆ ಕೊಠಡಿ ಕಣ್ಣು, ಮನಸ್ಸಿಗೆ ಹಿತವಾಗುವಂತಿತ್ತು. ಈಗ ಬರೆಯುವಾಗ ಸುಮಾರು 30 ವರ್ಷಗಳ ಹಿಂದಿನ ಆ ಸಂದರ್ಭವನ್ನ ಸಾಕ್ಷಾತ್ಕರಿಸಿಕೊಳ್ಳುತ್ತಲೇ ಇದ್ದೇನೆ. ವಿಶಾಲವಾದ ಮೇಜು, ಅದರ ಮೇಲೆ ಹಲವು ಪುಸ್ತಕಗಳು, ಬರೆದ, ಬರೆಯುತ್ತಿರುವ ಹಾಳೆಗಳು, ಅಕ್ಕ,ಪಕ್ಕ ಪುಸ್ತಕಗಳು ತುಂಬಿದ್ದ ಶೆಲ್ಪ, ಅಚ್ಚುಕಟ್ಟುತನ ಅಲ್ಲಿ ಎದ್ದು ಕಾಣುತ್ತಿತ್ತು. ಲಂಕೇಶ್ ತನ್ನ ಬಗ್ಗೆ ಬರೆದುಕೊಳ್ಳುತ್ತಿದ್ದಂತೇ ಸ್ವಲ್ಪ ಅಶಿಸ್ತಿನ ಮನುಷ್ಯನಾದರೂ ಅದು ಅಲ್ಲಿ ಕಾಣುತ್ತಿರಲಿಲ್ಲ. ಒಳ ಬಂದ ನನಗೆ ಕೂರಲು ಸೂಚಿಸಿದವರು ಸ್ವಲ್ಪ ಹೊತ್ತು ಏನೂ ಮಾತನಾಡಲಿಲ್ಲ. ನನಗೆ ಯಾವತ್ತಿನಂತೆ ಇಂಥ ಪ್ರಮುಖ ವ್ಯಕ್ತಿಗಳ ಮುಂದೆ ಇದ್ದಾಗ ಕಾಡುವ ಸಣ್ಣನೆಯ ಅಂಜಿಕೆ,ಹಿಂಜರಿಕೆ ಆಗತೊಡಗಿತು. ಸುಮ್ಮನೆ ಕೂತು ಆ ಕೊಠಡಿಯನ್ನ ಅವಲೋಕಿಸುತ್ತ ಅದನ್ನು ಕಡಿಮೆ ಮಾಡಿಕೊಳ್ಳುವ ಯತ್ನ ಮಾಡತೊಡಗಿದೆ. ಅವರು ಕೂತ ಸೀಟಿನ ಎಡಭಾಗದಲ್ಲಿ ಕಿಡಕಿಯಿತ್ತು. ಸ್ವಲ್ಪ ಮೊದಲು ಅಲ್ಲಿಂದಲೇ ನಾನು ಬಂದದ್ದನ್ನು ಗಮನಿಸಿದ್ದಾರೆ ಎನ್ನುವ ಸ್ಪಷ್ಟ ಚಿತ್ರಣ ದೊರೆಯಿತು. ಬೆಲ್ ಮಾಡಿ ಸಹಾಯಕನನ್ನ ಕರೆದವರು ‘ಕಾಫಿ ಕೊಡು’ ಎಂದವರು ಮೇಜಿನ ಮೇಲಿದ್ದ ಸಿಗರೇಟ್ ಪ್ಯಾಕ್ ತೆರೆದು, ಬಾಯಲ್ಲಿಟ್ಟು, ಬೆಂಕಿಕಡ್ಡಿ ಗೀರಿ ಹೊತ್ತಿಸಿದರು. ನಂತರ ಅವರ ಬ್ರ್ಯಾಂಡ್‍ಸ್ಟೈಲ್‍ನಲ್ಲಿ ಒಂದು ಜುರುಕಿ ಎಳೆದು ನನ್ನತ್ತ ತಿರುಗಿದರು.

ಅವರು ಕೇಳಿದ್ದಕ್ಕೆಲ್ಲ ಉತ್ತರಿಸುತ್ತ ಹೋದೆ. ಹೊಸಬನಾಗಿದ್ದರಿಂದ ನನ್ನ ಬಗ್ಗೆ ವಿವರಗಳನ್ನು ಕೇಳಿದಾಗ ಆ ಪ್ರವರವನ್ನ ಒಪ್ಪಿಸಿದೆ. ‘ನಿಮ್ದೂ ಸಿದ್ದಾಪುರವಾ? ಹೆಗಡೆ ಊರು’ ಎಂದವರು ಅಷ್ಟರಲ್ಲಿ ಬಂದ ಕಾಫಿ ಕುಡಿಯುತ್ತ ಒಂದೆರಡು ವರ್ಷದ ಹಿಂದೆ ಉತ್ತರಕನ್ನಡ ಜಿಲ್ಲೆಯಲ್ಲಿ ಒಂದೆರಡು ದಿನ ಓಡಾಡಿದ್ದನ್ನು ನೆನಪಿಸಿಕೊಂಡು ಮೆಚ್ಚುಗೆಯ ಮಾತನಾಡುತ್ತ ಹೋದರು. ಆಶ್ಚರ್ಯ ಎಂದರೆ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆಯವರ ಬಗ್ಗೆ ಯಾವುದೇ ತೆರನಾದ ಟೀಕೆಯ ಮಾತು ಅವರಿಂದ ಬರಲೇ ಇಲ್ಲ. ಅಷ್ಟರಲ್ಲಾಗಲೇ ಗಮನಿಸಿದ್ದೆ. ಲಂಕೇಶರ ದೇಹದ ಗಾತ್ರ, ಅವರ ಬರವಣಿಗೆಯಲ್ಲಿನ ತೀವ್ರತೆ, ಧಾಡಸೀತನ ಗಮನಿಸಿ ಅವರ ಧ್ವನಿ ಅಷ್ಟೇ ಗಡಸಾಗಿರಬಹುದೇನೋ ಅಂತ ನಾನೂ ಊಹಿಸಿಕೊಂಡಿದ್ದೆ. ಆದರೆ ಅವರ ಧ್ವನಿ ನಾನು ಅಂದುಕೊಂಡಿರುವಷ್ಟು ಪೆಡಸಾಗಿರಲಿಲ್ಲ. ಆದರೆ ಧ್ವನಿಯಲ್ಲಿ ಕಸುವಿತ್ತು, ಸ್ಪಷ್ಟತೆ ಇತ್ತು. ಅವರ ಕೊಠಡಿಯಲ್ಲಿದ್ದ ಪುಸ್ತಕಗಳು ನನ್ನಲ್ಲಿ ಆಶೆ ಹುಟ್ಟಿಸತೊಡಗಿದ್ದವು. ಮೇಜಿನ ಮೇಲೆ ಅರ್ಧ ಓದಿಟ್ಟಿದ್ದ ಹಲವು ಪುಸ್ತಕಗಳಿದ್ದವು. ಅವರು ಕೆಲಸದ ಒತ್ತಡದಲ್ಲಿದ್ದರೆಂದು ನನಗೆ ಗೊತ್ತಿದ್ದೂ, ಮತ್ತಷ್ಟು ಹೊತ್ತು ಕೂತಿರುವದು ಅಧಿಕ ಪ್ರಸಂಗತನ ಮಾತ್ರವಲ್ಲ ಅವರಲ್ಲೂ ಅಸಹನೆ ಹುಟ್ಟಿಸಬಹುದು ಎನ್ನುವ ಅನಿಸಿಕೆ ಬಂತು. ನಾನು ನಿಧಾನಕ್ಕೆ ಏಳುವ ಸನ್ನಾಹ ಮಾಡುವಷ್ಟರಲ್ಲಿ ಲಂಕೇಶ ಎದ್ದು ಆ ಕೊಠಡಿಯ ಒಂದು ಪಾಶ್ರ್ವದಲ್ಲಿದ್ದ ಗೋಡೆಯನ್ನು ತಳ್ಳಿದರು. ಅರೆರೇ! ಅವರು ತಳ್ಳಿದ್ದು ಆ ಗೋಡೆಯಲ್ಲಿ ಗುರ್ತು ಮಾಡಲು ಸಾಧ್ಯವೇ ಆಗದ ರೀತಿಯಲ್ಲಿ ಅಳವಡಿಸಿದ್ದ ಬಾಗಿಲಾಗಿತ್ತು, ಮತ್ತು ಆಚೆ ಮತ್ತೊಂದು ಕೊಠಡಿಯಿತ್ತು! ಚೂರು ಜರುಗಿ ನೋಡಿದವನಿಗೆ ಅಲ್ಲೊಂದು ಕಾಟ್ ಮೇಲೆ ಹಾಸಿದ್ದ ಬೆಡ್, ಅದರ ಮೇಲೆ ಹರವಿಕೊಂಡಿದ್ದ ಪುಸ್ತಕ ಕೂಡ ಕಂಡಿತು. ಪಟ್ಟನೆ ನೆನಪಾಯಿತು. ಕೆಲವೊಮ್ಮೆ ಲಂಕೇಶ್ ಅವರೇ ಬರೆದಿದ್ದರು. ತನಗೆ ಪುಸ್ತಕಗಳನ್ನು ಬೆನ್ನಿಗೆ ದಿಂಬು ಜೋಡಿಸಿಕೊಂಡು ಅರೆ ಮಲಗಿಕೊಂಡು ಓದಿದರೆ ಆರಾಮವೆನಿಸುತ್ತದೆ ಎನ್ನುವ ದಾಟಿಯಲ್ಲಿ ಬರೆದದ್ದು ಜ್ಞಾಪಕಕ್ಕೆ ಬಂತು( ಅವರನ್ನ ಅನುಕರಿಸಿದೆ ಅಂತಲ್ಲ, ನನಗೂ ಈಗಲೂ ಹಾಗೇ ಅರೆ ಮಲಗಿ,ಒರಗಿಕೊಂಡು ಓದುವದೆಂದರೆ ಸುಖ). ಆದರೆ ಹೀಗೂ ಇರಬಹುದಾ? ಎನ್ನುವ ಸಖೇದಾಶ್ಚರ್ಯ ಆದದ್ದಂತೂ ನಿಜ. ನನ್ನಂಥವರಿಗೆ ಆಗ ಅಪರಿಚಿತವಾದ, ಅಚ್ಚರಿ ಹುಟ್ಟಿಸುವ ಸಂಗತಿಗಳಾಗಿತ್ತು ಅಂಥವು.

ಅಲ್ಲಿಂದ ಸ್ವಲ್ಪ ಹೊತ್ತಿನಲ್ಲಿ ಈಚೆಗೆ ಬಂದಾಗ ನಾನು ಹೊರಡಲು ಎದ್ದು ನಿಂತೆ. ಆವರೆಗೆ ಏನೆಂದೂ ಕೇಳಿರದಿದ್ದ ಲಂಕೇಶ್ ‘ ಏನು ಬಂದದ್ದು’ ಎಂದರು. ‘ ಒಂದು ಕತೆ ಬರೆದಿದ್ದೆ. ಪತ್ರಿಕೆಯಲ್ಲಿ ಪ್ರಕಟಣೆಗೆ ಕೊಡೋಣ ಅಂತ ಬಂದೆ’ ಎಂದು ಕ್ಷೀಣ ಸ್ವರದಲ್ಲಿ ಉತ್ತರಿಸಿದೆ. ಕನ್ನಡದ ಓರ್ವಅದ್ಭುತ,ಪ್ರಸಿದ್ಧ ಕಥೆಗಾರ ಮಾತ್ರವಲ್ಲ ಸಂಪಾದಕನಾಗಿರುವ ಅವರಿಂದ ಕಟುವಾದ ಮಾತುಗಳನ್ನು ಕೇಳಬೇಕಾದೀತು ಎನ್ನುವ ನನ್ನ ಧನಿಯನ್ನ ಉಡುಗಿಸಿತ್ತು. ಅಷ್ಟರಲ್ಲಿ ನಾನು ಬರೆದ ಮೂರ್ನಾಲ್ಕು ಕಥೆಗಳು ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟಗೊಂಡಿದ್ದರೂ ಕಥೆಗಾರನಾದ ವಿಶ್ವಾಸ ಬಂದಿರಲಿಲ್ಲ. ಯಾವುದೋ ಉಮೇದಿಯಿಂದ, ಕಥೆ ಕೊಡುವ ನೆಪದಲ್ಲಿ ಲಂಕೇಶರ ಭೇಟಿಯಾಗುವ ಹಂಚಿಕೆಯಿಂದ ಅವರಲ್ಲಿ ಬಂದಿದ್ದೆ. ‘ಕೊಡಿ’ ಎಂದು ತೆಗೆದುಕೊಂಡವರು ಒಮ್ಮೆ ಕಣ್ಣಾಡಿಸಿದರು. ಆಗ ಕಂಪ್ಯೂಟರ್ ಇರಲಿಲ್ಲವಲ್ಲ, ನಮ್ಮೂರಿನ ಟೈಪಿಸ್ಟ ಬಳಿ ಟೈಪರೈಟರ್‍ನಲ್ಲಿ ಬರೆಸಿದ್ದೆ. ಹತ್ತಾರು ಪೇಜುಗಳ ಕಥೆಯನ್ನ ಮಗುಚಿಹಾಕಿದವರು ‘ ಕಥೆಗೆ ಹೆಸರೇ ಕೊಟ್ಟಿಲ್ವಲ್ರೀ’ ಎಂದರು. ಆ ಧ್ವನಿಯಲ್ಲಿ ಗದರಿಕೆ ಇರಲಿಲ್ಲ, ಸಣ್ಣದಾದ ಕುಚೋದ್ಯವಿರುವಂತೆ ಭಾಸವಾಯಿತು. ‘ ಏನು ಹೆಸರು ಕೊಡೋದು ಹೊಳಿಲಿಲ್ಲ ಸರ್, ಹಾಗೇ ತಂದೆ’ ಎಂದು ಉಸುರಿದೆ. ‘ಇರ್ಲೀ ಬಿಡಿ’ ಎಂದು ತಮ್ಮ ಟೇಬಲ್ ಮೇಲೆ ಇಟ್ಟುಕೊಂಡರು. ನಾನು ವಂದನೆ ಹೇಳಿ ಹೊರ ಬಂದೆ.
ಆಗ ಅವರು ಪತ್ರಿಕೆಯ ‘ಮರೆಯುವ ಮುನ್ನ’ ಅಂಕಣದಲ್ಲಿ ಬರೆದದ್ದು ನೆನಪಿಗೆ ಬಂತು. ‘ -ಒಬ್ಬಂಟಿಯಾಗಿದ್ದರೂ ಧೈರ್ಯದಿಂದ, ವಿನಯದಿಂದ ವರ್ತಿಸುವ, ಶಾಂತಿಕಾಲದಲ್ಲಿ ಕೂಡ ಮೌಲ್ಯಕ್ಕಾಗಿ ಹೋರಾಡುವ, ತನ್ನ ಸಾಮಾನ್ಯತೆ, ಅನಾಮಿಕತೆಯಲ್ಲಿ ಕೂಡ ಘನತೆಯನ್ನು ಕಂಡುಕೊಳ್ಳುವ ವ್ಯಕ್ತಿ ಪ್ರಜಾಪ್ರಭುತ್ವದ ಅಡಿಗಲ್ಲು’- ಎನ್ನುವ ಸಾಲುಗಳು.
ಆ ವಾರವಲ್ಲ, ಅದರ ಮರುವಾರದ ಲಂಕೇಶ ಪತ್ರಿಕೆಯಲ್ಲಿ ‘ ಧಿಗ್ಭ್ರಮೆ’ ಎನ್ನುವ ಶೀರ್ಷಿಕೆಯಲ್ಲಿ ನನ್ನ ಹೆಸರಿನಲ್ಲಿ ಕಥೆ ಪ್ರಕಟವಾಗಿದ್ದು ನೋಡಿ ನಾನೇ ಧಿಗ್ಭ್ರಾಂತನಾಗಿದ್ದೆ! ದಿಗಿಲು ಬಿದ್ದು ಕಥೆ ಓದಿದರೆ ನಾನು ಕೊಟ್ಟು ಬಂದ ಹೆಸರಿಲ್ಲದ ಕಥೆ ಅದಾಗಿತ್ತು. ಒಂದು ಕ್ಷಣ ನಾನು ಅಂತರಿಕ್ಷದಲ್ಲಿ ತೇಲುತ್ತಿರುವ ಅನುಭವಪಟ್ಟೆ. ಲಂಕೇಶ ಪತ್ರಿಕೆಯಲ್ಲಿ ಕಥೆ ಪ್ರಕಟವಾಗಬಹುದೆಂದು ಕನಸು ಮನಸಿನಲ್ಲೂ ಊಹಿಸಿರಲಿಲ್ಲ. ಅವರ ಭೇಟಿಗೆ ಒಂದು ನೆಪವಾಗಿ ಅದನ್ನು ಕೊಟ್ಟಿದ್ದೇನೆ ಹೊರತು ಪ್ರಕಟವಾಗುವ ಯಾವ ನಿರೀಕ್ಷೆಯೂ ನನಗಿರಲಿಲ್ಲ. ಎಲ್ಲಿಯ ನಾನು, ಎಲ್ಲಿಯ ಲಂಕೇಶ್ ಮತ್ತು ಲಂಕೇಶ್ ಪತ್ರಿಕೆ. ಅನಾಮಧೇಯನಾದ( ಈಗ ಪ್ರಸಿದ್ಧ ಎನ್ನುವ ಭ್ರಮೆ ನನಗಿದೆ ಅಂತಲ್ಲ) ಹಳ್ಳಿಗಾಡಿನ ಮೂಲೆಯ ನನ್ನ ಬರವಣಿಗೆಗೆ ಆ ಎತ್ತರದ ಪತ್ರಿಕೆಯಲ್ಲಿ ಅವಕಾಶ ದೊರಕಿತ್ತು. ನನ್ನಲ್ಲಿ ಇನ್ನಷ್ಟು ಬರೆಯುವ, ಬರೆಯುವದನ್ನು ಕಲಿಯುವ ಹುರುಪನ್ನು, ವಿಶ್ವಾಸವನ್ನು ಆ ಮೂಲಕ ತುಂಬಿದರು ಎಂದೇ ನಾನು ಭಾವಿಸಿದ್ದೇನೆ. ಕಸದ ಬುಟ್ಟಿ ಅವರ ಸೀಟಿನ ಪಕ್ಕದಲ್ಲೇ ಇತ್ತು. ಹೊಸಕಿ ಹಾಕಲು ಕ್ಷಣ ಮಾತ್ರ ಸಾಕಿತ್ತು. ನನ್ನ ಕಥೆ ಪ್ರಕಟಿಸಿದ ಕಾರಣಕ್ಕೆ ಇಷ್ಟೊಂದು ಪ್ರಶಂಸಿಸುತ್ತಿಲ್ಲ. ಅವರಲ್ಲಿ ಕಿರಿಯರನ್ನ ಪೋಷಿಸುವ, ಬೆಳೆಸುವ, ಧೈರ್ಯ ತುಂಬುವ ವಿಶಾಲ ಮನಸ್ಸಿತ್ತು. ತಮ್ಮ ಮುಂದಿನ ತಲೆಮಾರಿನ ಒಳಿತಿನ ಆಶಯ ಅವರಲ್ಲಿತ್ತು ಎಂದು ಈಗ ಅನ್ನಿಸುತ್ತದೆ. ಈಗಲೂ ನನ್ನ ಕಥೆಯೊಂದಕ್ಕೆ ಸಂಪಾದಕರಿಂದಲೇ ಹೆಸರು ಕೊಡಿಸಿಕೊಂಡೆ ಎನ್ನುವ ಹೆಮ್ಮೆಯಂತೂ ಇದೆ. ಜೊತೆಗೆ ಒಂದಿಷ್ಟು ಹಣದ ಚೆಕ್ ಕೂಡ ಪಡೆದುಕೊಂಡೆ( ಹೆಸರನ್ನು ಲಂಕೇಶ ಕೊಟ್ಟರೋ, ಪತ್ರಿಕೆಯ ಸಹ ಸಂಪಾದಕರಾಗಿದ್ದ ಸತ್ಯಮೂರ್ತಿ ಆನಂದೂರು ಕೊಟ್ಟರೋ ಗೊತ್ತಿಲ್ಲ. ನನ್ನ ಕಥಾ ಸಂಕಲನ ಮನಸ್ಸು ಆಕಾಶದ ನೀಹಾರಿಕೆಯಲ್ಲಿ ಈ ಕಥೆ ಇದೆ)
ಆ ನಂತರದಲ್ಲೂ ನಾಲ್ಕಾರು ಬಾರಿ ಅವರನ್ನು ಮುಖತಃ
ಭೇಟಿಯಾಗಿದ್ದೆ. ನನ್ನ ನಿರಂತರ ಪತ್ರಗಳಿಗೆ ಅವರಿಂದ ಅಪರೂಪಕ್ಕಾದರು ಉತ್ತರ ಬರುತ್ತಿತ್ತು. ಅಷ್ಟರಲ್ಲಾಗಲೇ ಅವರು ಕರ್ನಾಟಕದಲ್ಲಿ ಪ್ರಗತಿ ರಂಗ ಎನ್ನುವ ರಾಜಕೀಯ ಆಶಯದ ಸಂಘಟನೆಯನ್ನು ಕಟ್ಟಲು ಮುಂದಾಗಿದ್ದರು.
(ಮುಂದುವರಿದ ಭಾಗ 9-8-2020 ಕ್ಕೆ)

ಗಂಗಾಧರ ಕೊಳಗಿ

About the author

Adyot

Leave a Comment